Sagara-Soraba ಊರುಬದಿ: ಮಲೆನಾಡಿನ ಹಳ್ಳಿ ಮನೆಗಳಲ್ಲಿ ಕೊಟ್ಟೆ ಕಡುಬು, ಕಜ್ಜಾಯ ಸವಿದಿದ್ದೀರಾ? ಇದು ಕೇವಲ ತಿನಿಸಲ್ಲ, ಎಮೋಷನ್
Urubadi -Malnad Life -Kotte Kadubu, Koli Kajjaya : 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ. ಮಲೆನಾಡಿನ ಬದುಕು ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಪ್ರಕಟವಾಗಲಿದೆ. ಈ ವಾರದ ಊರುಬದಿ ಅಂಕಣದಲ್ಲಿ ಕೊಟ್ಟೆ ಕಡುಬು, ಕಜ್ಜಾಯ ನಿಮ್ಮ ಮುಂದಿದೆ.
ಮಲೆನಾಡು ಎಂದಕೂಡಲೇ ತಕ್ಷಣವೇ ನಮ್ಮ ಕಣ್ಮುಂದೆ ಬರುವುದು ಹಚ್ಚ ಹಸಿರಿನಿಂದ ಕೂಡಿದ ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಗದ್ದೆ-ತೋಟ ಇತ್ಯಾದಿ. ಆದರೆ ಮಲೆನಾಡಿನ ತಿಂಡಿ ಬಗ್ಗೆ ಯಾರಾದ್ರು ಕೇಳಿದ್ರೆ ಅಕ್ಕಿರೊಟ್ಟಿ, ಅಕ್ಕಿ ಕಡುಬು ಫೇಮಸ್. ಇವೆರಡು ತಿಂಡಿಗಳು ಮಲೆನಾಡಿನ ಹಳ್ಳಿ ಮನೆಗಳಲ್ಲಿ ವಾರದಲ್ಲಿ ಒಮ್ಮೆಯಾದರೂ ಬೆಳಗಿನ ಉಪಹಾರಕ್ಕೆ ಮಾಡೇ ಮಾಡುತ್ತಾರೆ. ಆದರೆ ಮಲೆನಾಡಿನ ಹಳ್ಳಿಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಮಾಡುವ ತಿನಿಸುಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವುದೆಂದರೆ ಕೊಟ್ಟೆ ಕಡುಬು ಮತ್ತು ಕಜ್ಜಾಯ (ಕೋಳಿ ಕಜ್ಜಾಯ/ಕೋಡುಬಳೆ). ನನ್ನ ಈ ವಾರದ ಅಂಕಣ ಎಷ್ಟು ಬಾರಿ ಸವಿದರೂ ಬೇಸರ ಎನಿಸದ ಮಲೆನಾಡಿನ ಈ ತಿನಿಸುಗಳ ಬಗ್ಗೆ..
ಮಲೆನಾಡು ಮತ್ತು ಕರಾವಳಿ ಭಾಗದವರಿಗೆ ಹಲಸಿನ ಎಲೆಯ ಕೊಟ್ಟೆ ಕಡುಬು ಪರಿಚಯ ಇರುತ್ತೆ, ಅದರ ರುಚಿಯನ್ನೂ ಸವಿದಿರ್ತೀರ. ಆದರೆ ನಾನಿಲ್ಲಿ ಹೇಳ್ತಾ ಇರೋದು ಅಕ್ಕಿಯಿಂದ ತಯಾರಿಸುವ ಬಾಳೆ ಎಲೆಯ ಕೊಟ್ಟೆ ಕಡುಬು. ಮಲೆನಾಡಿನಲ್ಲಿ ಅದರಲ್ಲಿಯೂ ಹೆಚ್ಚಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲೂಕಿನ ಹಳ್ಳಿಗಳಲ್ಲಿ ಕೊಟ್ಟೆ ಕಡುಬು ಮತ್ತು ಕಜ್ಜಾಯವನ್ನ ಮಾಡ್ತಾರೆ. ಇವನ್ನ ಪ್ರತಿನಿತ್ಯ ಬೆಳಗ್ಗೆ ಉಪಹಾರಕ್ಕೆಂದೇ ಇವನ್ನು ಮಾಡುವುದಿಲ್ಲ. ಆದ್ರಿ ಮಳೆ ಹಬ್ಬ (ಆರಿದ್ರಾ ಮಳೆ), ಭೂಮಿ ಹುಣ್ಣಿಮೆ, ದೀಪಾವಳಿ, ನಾಗರ ಪಂಚಮಿ, ಮಾರಿ ಹಬ್ಬ, ಹಿರಿಯರಿಗೆ (ಮೃತಪಟ್ಟವರಿಗೆ) ಎಡೆ ಹಾಕಲು, ಕೊಡೆ ಹಬ್ಬ -- ಈ ಹಬ್ಬಗಳಲ್ಲಿ ಕೊಟ್ಟೆ ಕಡುಬು ಫಿಕ್ಸ್. ಇನ್ನು ಕೆಲವೇ ದಿನಗಳಲ್ಲಿ ಆದ್ರಿ ಮಳೆ ಹಬ್ಬ ಬರತ್ತೆ. ಈ ಹಬ್ಬದಲ್ಲಿ ಹಲಸಿನ ಹಣ್ಣಿನ ಕೊಟ್ಟೆ ಕಡುಬನ್ನು ಜಾಸ್ತಿ ಮಾಡ್ತಾರೆ. ಆದರೆ ನಾನು ಹೇಳ್ತಾ ಇರೋದು ಅಕ್ಕಿಯಿಂದ ತಯಾರಿಸುವ ಬಾಳೆ ಎಲೆಯ ಕೊಟ್ಟೆ ಕಡುಬು. ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೂಡ ಬಾಳೆ ಎಲೆಯ ಕೊಟ್ಟೆ ಕಡುಬು ಮಾಡ್ತಾರೆ.
ಯುಗಾದಿ ಮತ್ತು ಚೌತಿ ಹಬ್ಬದಲ್ಲಿ ಕಜ್ಜಾಯ ಮಾಡೇ ಮಾಡ್ತಾರೆ. ಚೌತಿ ಹಬ್ಬದ ವೇಳೆ ಗೌರಿ ಹಬ್ಬವನ್ನ ಮಾಡ್ತಾರೆ. ಗೌರಿಯನ್ನು ಮನೆಗೆ ತರುವ ದಿನ ಮತ್ತು ಗೌರಿಯನ್ನು ಬಿಡುವ ದಿನ ಕಜ್ಜಾಯ ಮಾಡ್ತಾರೆ. ಇದಲ್ಲದೆ ಮನೆಗೆ ಸಂಬಂಧಿಕರು ಬಂದ್ರೆ ಕೂಡ ಹೆಚ್ಚಾಗಿ ಕಜ್ಜಾಯ ಮತ್ತು ಕೋಳಿ ಸಾರು (ಸಾಂಬಾರು) ಮಾಡ್ತಾರೆ. ಕೊಟ್ಟೆ ಕಡುಬಿಗೆ ಕುರಿ ಸಾರು ಕಾಂಬಿನೇಷನ್ ಆದ್ರೆ, ಕಜ್ಜಾಯಕ್ಕೆ ಕೋಳಿ ಸಾರು ಜೋಡಿ. ಇದಕ್ಕೆ ಕೋಳಿ ಕಜ್ಜಾಯ ಅಂತಾನೂ ಹೇಳ್ತಾರೆ. ಸಸ್ಯಹಾರಿಗಳು ಕೊಟ್ಟೆ ಕಡುಬನ್ನು ತೆಂಗಿನ ಕಾಯಿ ಚಟ್ನಿ ಜೊತೆ ಮತ್ತು ಕಜ್ಜಾಯವನ್ನು ತರಕಾರಿ ಸಾಂಬಾರಿನ ಜೊತೆ ತಿನ್ನಬಹುದು. ಆದ್ರೆ ನೀವೇನೇ ಹೇಳಿ, ಕೊಟ್ಟೆ ಕಡುಬು-ಕುರಿ ಸಾರು ಮತ್ತು ಕಜ್ಜಾಯ-ಕೋಳಿ ಸಾರು ಈ ಕಾಂಬಿನೇಷನ್ನ ಹೇಗಿರತ್ತೆ ಅಂತ ನಮ್ಮ ಹಳ್ಳಿ ಹೈಕ್ಳನ್ನ ಕೇಳಬೇಕು.
ಪ್ರತಿ ಮೂರು ವರ್ಷಕ್ಕೊಮ್ಮೆ ಸಾಗರದಲ್ಲಿ ಮಾರಿಜಾತ್ರೆ ನಡೆಯುತ್ತೆ. ರಾಜ್ಯದ ಹಾಗೂ ನೆರೆ ರಾಜ್ಯಗಳ ವಿವಿಧ ಭಾಗಗಳಿಂದ ಸಾಗರದ ಮಾರಮ್ಮನ ನೋಡಲು ಜನರು ಬರುತ್ತಾರೆ. 9 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಈ ಜಾತ್ರೆಯ ವೇಳೆ ಸಾಗರದ ಕೆಲ ವರ್ಗದ ಬಹುತೇಕರ ಮನೆಗಳಲ್ಲಿ ಬಾಡೂಟ ಏರ್ಪಡಿಸಲಾಗುತ್ತದೆ. ವಿವಿಧ ಪ್ರದೇಶಗಳಿಂದ ಸ್ನೇಹಿಯರು- ಸಂಬಂಧಿಕರು ಬರುತ್ತಾರೆ. ಸಾಮಾನ್ಯವಾಗಿ ಬಾಡೂಟ ಏರ್ಪಡಿಸಿದ ಎಲ್ಲರ ಮನೆಗಳಲ್ಲಿ ಅಂದು ಕುರಿಸಾರು-ಕೊಟ್ಟೆ ಕಡುಬು ಮಾಡಿರುತ್ತಾರೆ.
"ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಊರುಗಳಿಂದ ನಮ್ಮನೆ ಮಾರಿಹಬ್ಬಕ್ಕೆ ನೆಂಟ್ರು-ಫ್ರೆಂಡ್ಸು ಬರ್ತಾರೆ. ಈ ವರ್ಷ ಫೆಬ್ರವರಿಯಲ್ಲಿ ನಡೆದ ಮಾರಿಹಬ್ಬಕ್ಕೂ ಬಂದಿದ್ರು. ಅವ್ರೂರಲ್ಲೆಲ್ಲ ಕೊಟ್ಟೆ ಕಡುಬು ಮಾಡಲ್ಲ. ಇಲ್ಲಿಗೆ ಬಂದು ತಿನ್ನುವಾಗ ತುಂಬಾ ಚೆನ್ನಾಗಿದೆ ಅಂತ ನೂರು ಸಲ ಹೇಳ್ತಾರೆ. ನಾವು ಕೂಡ ಸ್ವಲ್ಪ ಜಾಸ್ತಿನೇ ಕಡುವು ಮಾಡಿರ್ತೀವಿ. ಬೇರೆ ಊರಿಂದ ನಮ್ಮ ಮನೆಗೆ ಬಂದವರಿಗೆ, ಯಾರ್ದಾರು ಮನೆಲಿ ಹಬ್ಬ ಮಾಡಿಲ್ಲ ಅಂದ್ರೆ ಅವ್ರಿಗೆ ಕೊಟ್ಟೆ ಕಡುಬು-ಕುರಿ ಸಾರು ಕೊಟ್ಟು ಕಳಿಸ್ತೀವಿ. ಕೊಟ್ಟೆ ಕಡುಬನ್ನ 2-3 ದಿನ ಇಟ್ರು ಏನೂ ಆಗಲ್ಲ. ಅವರೆಲ್ಲ ಅವರೂರಿಗೆ ಹೋಗಿ ಅವರ ಮನೆಯವರಿಗೂ ತಿನ್ನಿಸ್ತಾರೆ. ಅಷ್ಟೇ ಯಾಕೆ, ನಾನು ಮೊನ್ನೆಯಷ್ಟೆ ಬೇಸಿಗೆ ರಜೆಯಲ್ಲಿ ಆಗುಂಬೆಗೆ ಹೋಗಿದ್ದೆ. ಅಲ್ಲಿ ನಮ್ಮ ಬಾವ ಕೂಡ ನನ್ನತ್ರ ಕೋಳಿ ಕಜ್ಜಾಯ ಮಾಡಿಸ್ಕೊಂಡು ತಿಂದ್ರು.." ಅಂತಾರೆ ಸಾಗರದ ಶಿರವಾಳ ಗ್ರಾಮದ ರೂಪಾ ಹೀಗಂತಾರೆ.
ಇದು ಕೇವಲ ತಿನಿಸಲ್ಲ, ಎಮೋಷನ್
ಬಾಳೆ ಎಲೆಯ ಕೊಟ್ಟೆ ಕಡುಬು ಮತ್ತು ಕಜ್ಜಾಯ ಎಂದರೆ ಮಲೆನಾಡಿನ ಹಳ್ಳಿಗರಿಗೆ ಕೇವಲ ತಿನಿಸು ಮಾತ್ರವಲ್ಲ, ಅದೊಂದು ಎಮೋಷನ್. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಇಲ್ಲೇ ಉದ್ಯೋಗ ಮಾಡುತ್ತ ತಮ್ಮ ತಮ್ಮ ಹಳ್ಳಿಯ ಮನೆಗಳಲ್ಲಿರುವವರಿಗೆ ಇದು ತುಂಬಾ ಸ್ಪೆಷಲ್ ಅನ್ನಿಸದೆ ಇರಬಹುದು. ಆದರೆ, ಉನ್ನತ ವ್ಯಾಸಂಗಕ್ಕೆಂದು ಅಥವಾ ಉದ್ಯೋಗಕ್ಕೆಂದು ದೂರದ ಪಟ್ಟಣಗಳಿಗೆ ಹೋಗಿ ನೆಲೆಸಿರುವವರಿಗೆ ಹಬ್ಬಗಳು ಬಂದಾಗ ಮನೆಗೆ ಹೋಗಿ ಸಂಭ್ರಮಿಸಲು ರಜೆಗಳು ಸಿಗುವುದಿಲ್ಲ. ಆಗ ಕುಟುಂಬಸ್ಥರ ಜೊತೆಗೆ ನಾವು ಮಿಸ್ ಮಾಡಿಕೊಳ್ಳುವ ಮತ್ತೊಂದು ಅಂಶವೆಂದರೆ ಅದು ಕೊಟ್ಟೆ ಕಡುಬು-ಕಜ್ಜಾಯ. ಅಪರೂಪಕ್ಕೆ ಹಬ್ಬಕ್ಕೆ ಮನೆಗೆ ಬಂದು ಅವುಗಳನ್ನು ತಿನ್ನುವಾಗ ಮನದಲ್ಲಾಗುವ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾವು ಮತ್ತೆ ಪಟ್ಟಣಗಳಿಗೆ ವಾಪಾಸು ಹೋಗುವಾಗ ಕಜ್ಜಾಯ ಮಾಡಿ ಕೊಟ್ಟುಕಳಿಸ್ತಾರೆ.
ಇಡೀ ಊರಿಗೂರೆ ಮಾರಿ ಹಬ್ಬ ಮಾಡುವಾಗ ಒಬ್ಬರನನ್ನು ನಾಲ್ಕೈದು ಮನೆಗಳಲ್ಲಿ ಹಬ್ಬಕ್ಕೆ ಕರೆದಿರ್ತಾರೆ. ಮೊದಲೇ ಹೇಳಿದಂತೆ ಎಲ್ಲಾ ಮನೆಗಳಲ್ಲೂ ಅದೇ ಕುರಿಸಾರು -ಅದೇ ಕೊಟ್ಟೆ ಕಡುಬು. ಆದ್ರೆ, ನಾಲ್ಕೈದು ಮನೆಗಳಿಗೆ ಹೋಗುವ ವ್ಯಕ್ತಿಗಳು ಯಾರೂ ಕೂಡ ಎಲ್ಲೂ ಬೇಡ ಅನ್ನಲ್ಲ. ಎಲ್ಲ ಕಡೆನೂ ಚೂರಾದ್ರು ಕಡುಬು ತಿಂದೇ ಬರೋದು. ಎಲ್ರೂ ಮನೇಲೂ ಬರೀ ಇದೇ ಊಟ ಅಂತ ಅವ್ರಿಗೆ ಬೇಜಾರು ಕೂಡ ಅನ್ಸಲ್ಲ. ಅಷ್ಟು ಇಷ್ಟ ಪಡ್ತಾರೆ.
ಈಗೆನಿದ್ರು ಸೋಷಿಯಲ್ ಮೀಡಿಯಾ ಹವಾ. ನಮ್ಮ ಹಳ್ಳಿ ಮಕ್ಳು ಕೂಡ ಯಾವ್ದಕ್ಕೂ ಕಮ್ಮಿ ಇಲ್ಲ. ಸಿಟಿಯವರು ದೊಡ್ಡ ದೊಡ್ಡ ರೆಸ್ಟಾರೆಂಟ್ಗಳಲ್ಲಿ ಕುಳಿತು ಪೋಸ್ ಕೊಡ್ತಾ ಅಲ್ಲಿ ತಿನ್ನೋ ಚೈನೀಸ್ ಫುಡ್ನ ತಿನ್ನೋದನ್ನ ಸ್ಟೇಟಸ್ ಹಾಕ್ಕೊಂಡ್ರೆ, ನಮ್ಮ ಮಲೆನಾಡಿನ ಹಳ್ಳಿ ಹೈಕ್ಳು ಹಬ್ಬಗಳ ಟೈಮಲ್ಲಿ ಮಾಡೋ ಕೊಟ್ಟೆಕಡುಬು-ಕೋಳಿ ಕಜ್ಜಾಯದ ಫೋಟೋ ಪೋಸ್ಟ್ ಮಾಡಿ ಖುಷಿ ಪಡ್ತಾರೆ.
ಇನ್ನೊಂದು ಏನಂದ್ರೆ, ನಮ್ಮ ಹಳ್ಳಿಗಳಲ್ಲಿ ಅವರೆಷ್ಟೇ ಕಡುಬಡವರಾಗಿರಲಿ, ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ತಗೊಂಡಿಲ್ಲ ಅಂದ್ರೂ, ಅಷ್ಟೆ ಕಷ್ಟ ಆದ್ರೂ ಕೂಡ ಯಾವ್ಯಾವ ಹಬ್ಬಕ್ಕೆ ಕಡುಬು-ಕಜ್ಜಾಯ ಮಾಡಬೇಕು ಅದನ್ನ ಮಾಡೇ ಮಾಡ್ತಾರೆ. ಮಾಡಿ, ಇಡಕಲು (ಕುಡಿಯುವ ನೀರು ತುಂಬಿದ ಪಾತ್ರೆ) ಕೆಳಗೆ ಇಟ್ಟು ಪೂಜೆ ಮಾಡಿ, ನಂತರ ಊಟ ಮಾಡಿ ಖುಷಿ ಪಡ್ತಾರೆ.
ಮಲ್ನಾಡ್ ಕೋಳಿ ಕಜ್ಜಾಯಕ್ಕೆ ಕೋಡುಬಳೆ ಅಂತಾನೂ ಕರೀತಾರೆ. ಬಳೆ ಆಕೃತಿಯಲ್ಲಿರುವ ಈ ಕಜ್ಜಾಯವನ್ನ ಚಿಕ್ಕವರಿರುವಾಗ ನಾವು ನಮ್ಮ ಕೈಗಳಿಗೆ ಹಾಕ್ಕೊಂಡ್ ಖುಷಿ ಪಡ್ತಾ ಇದ್ವಿ. ಈಗಲೂ ಚಿಕ್ಕ ಮಕ್ಕಳು ಅದೇ ಕೆಲಸವನ್ನ ಮಾಡ್ತಾರೆ. ಅಮ್ಮ-ಅಜ್ಜಿಯರೆಲ್ಲ ಕಜ್ಜಾಯ ಮಾಡ್ತಾ ಇದ್ರೆ ನಾವೂ ಹೆಲ್ಪ್ ಮಾಡ್ತೀವಿ ಅಂತ ಹೋಗಿ ಬಳೆ ಆಕೃತಿಯಲ್ಲಿ ಅದನ್ನು ಜೋಡಿಸುವ ಕೆಲಸ ಮಾಡ್ತಿದ್ವಿ. ಇಷ್ಟೆಲ್ಲ ಹೇಳಿದ ಮೇಲೆ ಬಾಳೆಎಲೆ ಕೊಟ್ಟೆ ಕಡುಬು ಮತ್ತು ಕಜ್ಜಾಯ ಹೇಗೆ ಮಾಡ್ತಾರೆ ಅಂತ ಹೇಳಿಲ್ಲ ಅಂದ್ರೆ ಆಗತ್ತಾ?
ಕೊಟ್ಟೆ ಕಡುಬು ಮಾಡುವ ವಿಧಾನ
3 ಕೆಜಿ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಣೆಸಬೇಕು. ಕಾಲು ಕೆಜಿ ಉದ್ದನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಒಣಗಿದ ಅಕ್ಕಿಯನ್ನು ಚಿರೋಟಿ ರವೆ ಹಾಗೆ ನೀರು ಹಾಕದೆ ರುಬ್ಬಬೇಕು. ಅಕ್ಕಿಯನ್ನು ರವೆ ಮಾಡುವ ವೇಳೆ ಅದಕ್ಕೆ ಹುರಿದ 2 ಚಮಚ ಮೆಂತೆ ಹಾಕಿ ರವೆ ಮಾಡಬೇಕು. ನೆನೆಸಿಟ್ಟ ಉದ್ದನ್ನು ತುಂಬಾ ನುಣ್ಣಗೆ ಅರೆಯಬೇಕು. ರವೆ ಮಾಡಿದ 3 ಕೆಜಿ ಅಕ್ಕಿಯಲ್ಲಿ ಒಂದು ಕೆಜಿ ಅಕ್ಕಿಯನ್ನು ಬಿಸಿ ನೀರಿಗೆ ಹಾಕಿ ತೆಳು ಗಂಜಿ ಮಾಡಬೇಕು. (ನಾನಿಲ್ಲಿ ಮೂರು ಕೆಜಿ ಅಕ್ಕಿಯನ್ನ ಉದಾಹರಣೆ ಆಗಿ ಕೊಟ್ಟಿದ್ದೀನಿ. ನೀವು ಅಷ್ಟು ಅಕ್ಕಿಯನ್ನು ರವೆ ಮಾಡಲು ತಗೋಳ್ತಿರೋ ಅದರ 1/3 ಪ್ರಮಾಣವನ್ನ ಗಂಜಿ ಮಾಡಲು ಬಳಸಿ).
ಗಂಜಿಯನ್ನು ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ಬಿಸಿ ಆರಿದ ಮೇಲೆ ಈ ಮೂರೂ ಮಿಶ್ರಣವನ್ನು (ಅಕ್ಕಿ ರವೆ, ಉದ್ದಿನ ಪೇಸ್ಟ್, ಅಕ್ಕಿ ಗಂಜಿ) ಕೈಯಲ್ಲಿ ಚೆನ್ನಾಗಿ ಕಲಸಬೇಕು. ಕಲಸುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಕಲಸಿದ ಹಿಟ್ಟನ್ನು 1 ರಿಂದ 2 ಗಂಟೆ ಮುಚ್ಚಿಡಬೇಕು.
ಇನ್ನೊಂದೆಡೆ ಬಾಳೆ ಎಲೆಗಳನ್ನು ಬೆಂಕಿಯಲ್ಲಿ/ಕೆಂಡದಲ್ಲಿ ಬಾಡಿಸಬೇಕು. ಕುಡಿ ಬಾಳೆಎಲೆಯಲ್ಲಿ ಆಗಲ್ಲ. ಬಾಡಿಸಿದ ಅಗಲ ಅಲೆಯ ಒಂದು ಭಾಗವನ್ನು ಕೊಯ್ದು, ಅದರ ದಂಟನ್ನು ತೆಗೆದು , ಎಲೆಯನ್ನು ರೋಲ್ ಮಾಡಬೇಕು. (ತೀರ ಚಿಕ್ಕದಾದ ರೋಲ್ ಅಲ್ಲ,). ಆ ರೋಲ್ನ ಒಂದು ಬದಿಯಲ್ಲಿ (ಬಾಟಮ್) ಎಲೆಯನ್ನು ಕೊಟ್ಟೆಯಂತೆ ಸುತ್ತಿ ಬಾಳೆ ನಾರಿನಿಂದ ಗಟ್ಟಿಯಾಗಿ ಕಟ್ಟಬೇಕು. ಈಗ ಎಲೆಯ ರೋಲ್ನ ಒಂದು ಭಾಗ ಕವರ್ ಆಗಿದ್ದು, ಇನ್ನೊಂದು ಭಾಗ ತೆರೆದಿದೆ, ತೆರೆದ ಭಾಗದೊಳಗೆ ಉದ್ದು-ಅಕ್ಕಿ ಮಿಶ್ರಿತ ಹಿಟ್ಟನ್ನು ಮುಕ್ಕಾಲು ಭಾಗ ತುಂಬಿ. ಉಳಿದ ಎಲೆಯನ್ನು ಮೊದಲು ಮಾಡಿದಂತೆ ಬಾಳೆ ನಾರಿನಿಂದ ಬಿಗಿಯಾಗಿ ಕಟ್ಟಿ. ಈಗ ರೋಲ್ನ ಎರಡೂ ಭಾಗ ಕವರ್ ಆಗಿದೆ. ಕೊಟ್ಟೆ ಕಟ್ಟಿದ ಈ ಕಡುಬನ್ನು ದೊಡ್ಡ ಇಡ್ಲಿ ಪಾತ್ರೆಯೊಳಗೆ ಇಟ್ಟು ಆವಿಯಲ್ಲಿ ಬೇಯಿಸಿ. ಒಂದರಿಂದ ಒಂದೂವರೆ ಗಂಟೆ ಬೇಯಿಸಬೇಕು. ನಂತರ ಬಾಳೆ ಎಲೆಯನ್ನು ಬಿಡಿಸಿ ಕಡುಬನ್ನು ತುಂಡು ತುಂಡಾಗಿ ಕತ್ತರಿಸಿ ಕುರಿ ಸಾಂಬಾರಿನೊಂದಿಗೆ ಸವಿಯಿರಿ. ಕೋಳಿ ಸಾಂಬಾರಯು ಆದ್ರೂ ಓಕೆ. ಸಸ್ಯಹಾರಿಗಳು ತೆಂಗಿನ ಕಾಯಿ ಚಟ್ನಿಯೊಂದಿಗೆ ಕಡುಬನ್ನು ತಿನ್ನಬಹುದು.
ಈಗೆಲ್ಲ ಪೇಟೆ ಬದಿ ಅಕ್ಕಿ ಮತ್ತು ಉದ್ದನ್ನು ನೆನೆಸಿ ರುಬ್ಬಿ ಇಡ್ಲಿ ಮಾಡುವ ರೀತಿ ಕೊಟ್ಟೆ ಕಡುಬು ಮಾಡ್ತಾರೆ. ಆದ್ರೆ ಇದಕ್ಕೂ ಮತ್ತು ಹಳ್ಳಿಗಳಲ್ಲಿ ನಾನು ಮೇಲೆ ಹೇಳಿದಂತೆ ಮಾಡುವ ಕೊಟ್ಟೆ ಕಡುಬಿಗೂ ರುಚಿಯಲ್ಲಿ ತುಂಬಾ ವ್ಯತ್ಯಾಸವಿದೆ.
ಕಜ್ಜಾಯ ಮಾಡುವ ವಿಧಾನ
ಒಂದು ಕಪ್ ಅನ್ನ, ಎರಡು ಕಪ್ ಅಕ್ಕಿ ಹಿಟ್ಟು ತಗೋಳಿ. 4 ಕಪ್ ನೀರನ್ನು ಪಾತ್ರೆಯಲ್ಲಿ ಬಿಸಿಗಿಡಿ. ನೀರು ಸ್ವಲ್ಪ ಬಿಸಿಯಾಗುತ್ತಿದ್ದಂತೆಯೇ ಅದಕ್ಕೆ ಅನ್ನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚುಳ ಮುಚ್ಚಿ. ಅನ್ನದ ಜೊತೆ ಈ ನೀರು ಚೆನ್ನಾಗಿ ಕುದಿಯಬೇಕು. ಅನ್ನ ಮತ್ತಷ್ಟು ಬೇಯಬೇಕು. ನಂತರ ಅದಕ್ಕೆ ಅಕ್ಕಿ ಹಿಟ್ಟು ಹಾಕಿ, ಆದರೆ ತಕ್ಷಣವೇ ಅದನ್ನು ಕಲಕಬೇಡಿ. ಮುಚ್ಚುಳ ಮುಚ್ಚಿ 3 ನಿಮಿಷಗಳ ಕಾಲ ಹಾಗೆಯೇ ಬಿಡಿ.
3 ನಿಮಿಷಗಳ ನಂತರ ಹಿಟ್ಟು, ನೀರು, ಅನ್ನವನ್ನು ಮಿಶ್ರಣ ಮಾಡಿ ನಂತರ ಮುಚ್ಚುಳ ಮುಚ್ಚಿ, 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ನಂತರ ಪಾತ್ರೆಯನ್ನು ಕೆಳಗಿಳಿಸಿ. ಈ ಮಿಶ್ರಣ ಸ್ವಲ್ಪ ಬಿಸಿಯಿರುವಾಗಲೇ ಚೆನ್ನಾಗಿ ನಾದಿಕೊಳ್ಳಬೇಕು. ಕೈಗೆ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ನಾದಿ. ಈ ಮಿಶ್ರಣವನ್ನು ತುಂಬಾ ಚೆನ್ನಾಗಿ ನಾದಿಕೊಳ್ಳಬೇಕು, ಅದರಲ್ಲಿ ಇಡಿ ಅನ್ನ, ಅಕ್ಕಿ ಇರಬಾರದು ಹಾಗೆ. ಏಕೆಂದರೆ ಅದನ್ನು ಎಣ್ಣೆಗೆ ಹಾಕಿದಾಗ ಸಿಡಿಯುತ್ತದೆ. ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.
ನಂತರ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು, ಅಂದಾಜು ನಿಮ್ಮ ತೋರುಬೆರಳಿನಷ್ಟು ದಪ್ಪ ಬರುವಂತೆ ಬೆರಳಿನ ಶೇಪಿನಲ್ಲಿ ನಾದಿರಿ. ನಂತರ ಅದರ ಎರಡೂ ತುದಿಗಳನ್ನು ಬಳೆ ಆಕೃತಿಯಲ್ಲಿ ಜಾಯಿಂಟ್ ಮಾಡಿ. ಇದನ್ನು ಚೆನ್ನಾಗಿ ಕೂಡಿಸಬೇಕು, ಇಲ್ಲವಾದಲ್ಲಿ ಎಣ್ಣೆಗೆ ಬಿಟ್ಟಾಗ ಅದು ಜಾಯಿಂಟ್ ಬಿಟ್ಟುಕೊಳ್ಳತ್ತೆ. ಹೀಗೆ ಎಲ್ಲವನ್ನು ಬಳೆ ಆಕೃತಿಯಲ್ಲಿ ಮಾಡಿಕೊಂಡು, ನಂತರ ಎಣ್ಣೆ ಬಾಣಲಿಯಲ್ಲಿ ಎಷ್ಟು ಹಿಡಿಯತ್ತೋ ಅಷ್ಟು ಬಿಡಿ. ಒಂದಕ್ಕೊಂದು ಅಂಟಿಕೊಳ್ಳದಂತೆ ಸ್ವಲ್ಪ ದೂರ ದೂರ ಚೆನ್ನಾಗಿ ಕಾದ ಎಣ್ಣೆಗೆ ಬಿಡಿ. 10 ನಿಮಿಷಗಳ ಕಾಲ ಕರಿದು ಬಳಿಕ ತೆಗೆಯಿರಿ. ತೆಗೆಯಲು ಒಂದು ಮರದ ಸ್ಟಿಕ್ ಇದ್ದರೆ ಎಲ್ಲವನ್ನು ಒಟ್ಟಿಗೆ ಬಾಣಲೆಯಿಂದ ತೆಗೆಯಲು ಸುಲಭವಾಗುತ್ತದೆ. ಕೋಳಿ ಸಾರು ಇದಕ್ಕೆ ಹೇಳಿ ಮಾಡಿಸಿದ ಜೋಡಿ. ಹೀಗಾಗಿ ಇದಕ್ಕೆ ಕೋಳಿ ಕಜ್ಜಾಯ ಎಂದೂ ಕರೆಯಲಾಗುತ್ತದೆ.
ಕಳೆದ ಶನಿವಾರ ಮಲೆನಾಡು ಗಿಡ್ಡ ಎಂಬ ಗೋವಿನ ತಳಿಯ ಬಗ್ಗೆ ಅಂಕಣ ಬರೆದಿದ್ದೆ. ಈ ವಾರ ಕೊಟ್ಟೆ ಕಡುಬು-ಕಜ್ಜಾಯದೊಂದಿಗೆ ಬಂದೆ. ಮುಂದಿನ ಶನಿವಾರವೂ ಮಲೆನಾಡಿನ ಸಂಸ್ಕೃತಿ ಬಿಂಬಿಸುವ ಅಂಕಣದೊಂದಿಗೆ ಬರುವೆ.
ಮೇಘನಾ ಬಿ. ಸಾಗರ
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ht.kannada@htdigital.inಗೆ ಮೇಲ್ ಮಾಡಿ
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.