Samsung Galaxy A26 5G: ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ A26 5G ಭಾರತದಲ್ಲಿ ಬಿಡುಗಡೆ: ಇಲ್ಲಿದೆ ಬೆಲೆ ವಿವರ ಮತ್ತು ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಬಜೆಟ್ ದರದ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸ ಗ್ಯಾಲಕ್ಸಿ A26 5G ಅನ್ನು ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಎಕ್ಸಿನೋಸ್ 1380 ಪ್ರೊಸೆಸರ್, 6.7 ಇಂಚಿನ ಫುಲ್‌ಎಚ್‌ಡಿ+ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳಿವೆ.

ದೇಶದ ಜನಪ್ರಿಯ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ A26 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬಜೆಟ್ ದರದಲ್ಲಿ ಗ್ರಾಹಕರಿಗೆ ಕೈಗೆಟುಕುವ ಮತ್ತು ವೈಶಿಷ್ಟ್ಯಗಳಿಂದ ಕೂಡಿದ ಆಯ್ಕೆಯನ್ನು ಒದಗಿಸುವ ಗುರಿ ಹೊಂದಿದೆ. ಆಕರ್ಷಕ ವಿನ್ಯಾಸ ಮತ್ತು ಸುಧಾರಿತ ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ ಇದರ ವಿಶೇಷ. ಭಾರತದಲ್ಲಿ 24,999 ರೂ.ಗಳ ಆರಂಭಿಕ ಬೆಲೆಯೊಂದಿಗೆ, ಹೈ- ಎಂಡ್ ಮಾದರಿಗಳಲ್ಲಿ ಲಭ್ಯವಿರುವ ಫೀಚರ್‌ಗಳನ್ನು ಮಧ್ಯಮ ವರ್ಗದ ಗ್ರಾಹಕರಿಗೆ ನೀಡಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A26 5G ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಗ್ಯಾಲಕ್ಸಿ A26 5G 6.7 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್ ಜತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಅನ್ನು ಹೊಂದಿದೆ. ಆಕರ್ಷಕ ಡಿಸ್‌ಪ್ಲೇ ಮೂಲಕ ಮನರಂಜನೆ, ಕ್ಯಾಮೆರಾ ಮತ್ತು ಉತ್ತಮ ಗೇಮಿಂಗ್ ಅನುಭವವನ್ನು ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ನೀಡಲಿದೆ. ಗ್ಯಾಲಕ್ಸಿ A26 5G ಸ್ಮಾರ್ಟ್‌ಫೋನ್‌ನಲ್ಲಿ ವಾಟರ್ ಡ್ರಾಪ್ ಶೈಲಿಯ ಇನ್ಫಿನಿಟಿ-ಯು ನಾಚ್ ಅನ್ನು ಹೊಂದಿದ್ದು, ಸ್ಪಷ್ಟ ಮತ್ತು ಸುಂದರ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಗ್ಯಾಲಕ್ಸಿ A26 5G ಎಕ್ಸಿನೋಸ್ 1380 ಪ್ರೊಸೆಸರ್ ಮೂಲಕ ನಿಯಂತ್ರಿಸಲ್ಪಡುತ್ತದೆ, ಗ್ಯಾಲಕ್ಸಿ ಎ 35 ಫೋನ್‌ನಲ್ಲಿ ಕಂಡುಬರುವ ಚಿಪ್ ಈ ಫೋನ್‌ನಲ್ಲೂ ಅಳವಡಿಸಲಾಗಿದೆ. ಫೋನ್ 8 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್ ಅನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಮೈಕ್ರೋ ಎಸ್ಡಿ ಕಾರ್ಡ್ ಮೂಲಕ 2 ಟಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ಹೆಚ್ಚುವರಿ ಅಪ್ಲಿಕೇಶನ್‌ಗಳು, ಫೋಟೋ ಮತ್ತು ವೀಡಿಯೊ ಶೇಖರಿಸಿಟ್ಟುಕೊಳ್ಳಬಹುದು. 5,000 ಎಂಎಎಚ್ ಬ್ಯಾಟರಿ ಮತ್ತು 25 ವ್ಯಾಟ್ ಚಾರ್ಜಿಂಗ್ ಅನ್ನು ಹೊಸ ಗ್ಯಾಲಕ್ಸಿ A26 5G ಬೆಂಬಲಿಸುತ್ತದೆ, ಜತೆಗೆ ಬಳಕೆದಾರರಿಗೆ ವೇಗದ ಚಾರ್ಜಿಂಗ್ ಮಾಡಲು ಮತ್ತು ದಿನವಿಡೀ ಫೋನ್ ಬಳಸಲು ಅನುವು ಮಾಡಿಕೊಡುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A26 5G ಕ್ಯಾಮೆರಾ ಹೇಗಿದೆ?
ಫೋಟೊಗ್ರಫಿಗಾಗಿ, ಹೊಸ ಗ್ಯಾಲಕ್ಸಿ A26 5G ಸ್ಮಾರ್ಟ್‌ಫೋನ್ ಸುಧಾರಿತ ಹಿಂಭಾಗದ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ವಿವಿಧ ರೀತಿಯ ಫೋಟೊಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎ 26 ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7 ಓಎಸ್ ಸಾಫ್ಟ್‌ವೇರ್ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಆರು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಮತ್ತು ಬೆಂಬಲ ನೀಡುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A26 5G ಸ್ಮಾರ್ಟ್‌ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್, ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಕಾಂಟ್ಯಾಕ್ಟ್‌ಲೆಸ್ ಪಾವತಿಗಳಿಗಾಗಿ ಎನ್ಎಫ್‌ಸಿ ಬೆಂಬಲವನ್ನು ಹೊಂದಿದೆ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ ಐಪಿ 67 ರೇಟಿಂಗ್ ಅನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ A26 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆವೃತ್ತಿಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. 8 ಜಿಬಿ + 128 ಜಿಬಿ 24,999 ರೂ.ಗೆ ಮತ್ತು 8 ಜಿಬಿ + 256 ಜಿಬಿ 27,999 ರೂ. ಗೆ ಲಭ್ಯವಿದೆ. ಅವ್ಸಮ್ ಬ್ಲ್ಯಾಕ್, ಮಿಂಟ್, ವೈಟ್ ಮತ್ತು ಪೀಚ್ ಎಂಬ ನಾಲ್ಕು ಬಣ್ಣಗಳ ಆಯ್ಕೆ ಇದೆ. ಇದನ್ನು ಫ್ಲಿಫ್‌ಕಾರ್ಟ್, ಸ್ಯಾಮ್‌ಸಂಗ್ ಅಧಿಕೃತ ವೆಬ್ಸೈಟ್ ಮತ್ತು ರಿಟೇಲ್ ಮಳಿಗೆಗಳ ಮೂಲಕ ಖರೀದಿಸಬಹುದು. HDFC ಮತ್ತು SBI ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು ಆರಂಭಿಕ ಕೊಡುಗೆಯಾಗಿ 2,000 ರೂ.ಗಳ ಇನ್ಸ್‌ಟಂಟ್ ಡಿಸ್ಕೌಂಟ್ ಪಡೆಯಬಹುದು.
