Mysore Silk Sarees: ಮೈಸೂರು ಸಿಲ್ಕ್ ಸೀರೆಗಳಿಗೆ ಹೆಚ್ಚುತ್ತಿದೆ ಬೇಡಿಕೆ; ಪೂರೈಸಲು ಕೆಎಸ್‌ಐಸಿ ಹೈರಾಣ, ಹೆಚ್ಚಳ ಕಂಡ ಬೆಲೆ
ಭಾರತೀಯ ಹೆಣ್ಣುಮಕ್ಕಳಿಗೂ ಸೀರೆಗೂ ಅವಿನಾಭಾವ ಸಂಬಂಧ. ಅದರಲ್ಲೂ ಮೈಸೂರು ಸಿಲ್ಕ್ ಸೀರೆ ಎಂದರೆ ಹೆಣ್ಣುಮಕ್ಕಳಿಗೆ ವಿಶೇಷ ಪ್ರೀತಿ. ಇತ್ತೀಚೆಗಷ್ಟೇ IG– ಟ್ಯಾಗ್ ಪಡೆದಿರುವ ಈ ಸೀರೆಯ ಬೇಡಿಕೆ ಈಗ ಗಗನಕ್ಕೇರಿದ್ದು, ಪೂರೈಕೆ ಕಷ್ಟವಾಗಿದೆ. ಮಾತ್ರವಲ್ಲ ಸೀರೆಯ ಬೆಲೆಯೂ ದುಬಾರಿಯಾಗಿದೆ. ಇದಕ್ಕೆ ಕಾರಣವೇನು, ಈ ಬಗ್ಗೆ ಕೆಎಸ್‌ಐಸಿ ಏನು ಹೇಳುತ್ತೆ ಎಂಬ ವಿವರ ಇಲ್ಲಿದೆ.
ಸೀರೆ ಎಂದರೆ ಇಷ್ಟವಿಲ್ಲ ಎನ್ನುವ ಹೆಣ್ಣುಮಕ್ಕಳು ಕಡಿಮೆ ಅಂತಲೇ ಹೇಳಬಹುದು. ಭಿನ್ನ ವಿಭಿನ್ನ ಬಣ್ಣ, ವಿನ್ಯಾಸದ ಸೀರೆಗಳು ಹೆಣ್ಣುಮಕ್ಕಳ ಅಂದ ಹೆಚ್ಚಿಸುವುದು ಸುಳ್ಳಲ್ಲ. ಅದರಲ್ಲೂ ರಾಜ್ಯದ ಮೈಸೂರು ಸಿಲ್ಕ್ ಸೀರೆ ಹಿಂದಿನಿಂದಲೂ ವಿಶೇಷ ಪ್ರಾಧಾನ್ಯ ಹೊಂದಿದೆ. ವಿಶಿಷ್ಟ ಹೊಳಪು ಮತ್ತು ವಿನ್ಯಾಸಕ್ಕಾಗಿ ಇದು ಮಹಿಳೆಯರಿಗೆ ಅಚ್ಚುಮೆಚ್ಚಾಗಿದೆ. IG–ಟ್ಯಾಗ್ ಪಡೆದ ಮೈಸೂರು ಸಿಲ್ಕ್ ಸೀರೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಸಿಕ್ಕಿತ್ತು. ಇದರಿಂದ ಮೈಸೂರು ಸಿಲ್ಕ್ ಸೀರೆ ಮಾರಾಟವೂ ಗಗನಕ್ಕೇರಿತ್ತು. ಆದರೀಗ ಸೀರೆ ಪೂರೈಕೆಯಲ್ಲಿ ಕೊರತೆ ಎದುರಾಗಿದೆ.
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ (KSIC) ಒದಗಿಸಿದ ಮಾಹಿತಿಯ ಪ್ರಕಾರ, 2021-22 ಮತ್ತು 2022-23 ರ ನಡುವೆ, ಮೈಸೂರು ಸಿಲ್ಕ್ ಸೀರೆಗಳ ಮಾರಾಟವು 41.08 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.
ಕೆಎಸ್‌ಐಸಿ ಇತ್ತೀಚಿಗೆ ಸೀರೆಗಳ ಬೆಲೆಯನ್ನು ಏರಿಕೆ ಮಾಡಿದೆ. ಆದರೂ ಬೇಡಿಕೆ ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.
ಚಿನ್ನ, ಬೆಳ್ಳಿ ಬೆಲೆಯ ಜೊತೆ ಲಿಂಕ್
ʼಸೀರೆಗಳಲ್ಲಿ ಬಳಸುವ ಚಿನ್ನ ಮತ್ತು ಬೆಳ್ಳಿಯ ಪ್ರಮಾಣವನ್ನು ಅವಲಂಬಿಸಿ ನಾವು ಬೆಲೆಯನ್ನು ಶೇ 11-15 ಹೆಚ್ಚಿಸಿದ್ದೇವೆ. ಈ ಲೋಹಗಳ ಬೆಲೆ ಹೆಚ್ಚಳವು ಸೀರೆಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕೆಲವು ಸೀರೆಗಳ ಮೇಲೆ 1,500 ರಿಂದ 1,600 ರವರೆಗೆ ಹೆಚ್ಚಾದರೆ ಇನ್ನೂ ಕೆಲವು ಸೀರೆಗಳ ಬೆಲೆ 5,000 - 6,000ರೂವರೆಗೆ ಹೆಚ್ಚಾಗಿದೆʼ ಎಂದು ಕೆಎಸ್‌ಐಸಿಯ ವ್ಯವಸ್ಥಾಪಕ ನಿರ್ದೇಶಕಿ ಜೆಹೆರಾ ನಸೀಮ್ ದಿ ಹಿಂದೂಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬೆಲೆ ಏರಿಕೆಯಾದರೂ ಸೀರೆ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಬೆಲೆ ಏರಿಕೆಯಾದ ಮೇ 25 ರಂದು ನಾವು 1.8 ಕೋಟಿ ರೂಪಾಯಿಯಷ್ಟು ಸೀರೆಗಳು ಮಾರಾಟವಾಗಿದ್ದವು ಎಂದು ಅವರು ಹೇಳಿದ್ದಾರೆ.
ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡುವ ಹೆಚ್ಚಿನ ಮಳಿಗೆಗಳಲ್ಲಿ ಮಹಿಳೆಯರು ಶನಿವಾರದಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಹೊಸ ಸ್ಟಾಕ್‌ಗಳು ಬಂದ ಕೂಡಲೇ ಖರೀದಿ ಮಾಡುತ್ತಾರೆ ಎಂದು ಕೆಎಸ್‌ಐಸಿ ಅಧಿಕಾರಿಗಳು ಹೇಳುತ್ತಾರೆ. ಶನಿವಾರದಂದು ಹೆಚ್ಚು ಸೀರೆಗಳು ಮಾರಾಟವಾಗುವುದರಿಂದ, ಇತರ ದಿನಗಳಲ್ಲಿ ಅಂಗಡಿಗಳಿಗೆ ಬರುವವರು ಬರಿಗೈಯಲ್ಲಿ ಹಿಂತಿರುಗಬೇಕಾಗಿದೆ. ವಾರಗಟ್ಟಲೇ ಸೀರೆಗಳಿಗೆ ಆರ್ಡರ್ ಮಾಡುವವರೂ ನಮ್ಮಲ್ಲಿದ್ದಾರೆ ಎಂದು ನಸೀಮ್ ಹೇಳುತ್ತಾರೆ.
ಹೆಚ್ಚು ಬೇಡಿಕೆ ಇರುವ ಸೀರೆಗಳು
ಎಲ್‌ಪಿ ಸೀರೆ ಅಥವಾ ಕಾಂಟ್ರ್ಯಾಸ್ಟ್ ಬಣ್ಣದಲ್ಲಿ ಡೈ ಮಾಡಿರುವ ಸೀರೆಗಳಿಗೆ ಹೆಚ್ಚು ಬೇಡಿಕೆ ಇದೆ. ಕೆಎಸ್‌ಐಸಿ ಆನ್‌ಲೈನ್ ಪೋರ್ಟಲ್ ಮೂಲಕ ಅಮೆರಿಕಾ ಹಾಗೂ ಆಸ್ಟೇಲಿಯಾದಂತಹ ದೇಶಗಳಿಂದಲೂ ಸೀರೆ ಬೇಡಿಕೆ ಬರುತ್ತಿದೆ.
ಮಹಿಳೆಯರು ಕೇಳುವ ಬಣ್ಣ, ವಿನ್ಯಾಸದ ಸೀರೆಗಳನ್ನು ಒದಗಿಸುವುದು ಕಷ್ಟವಾಗಿದೆ. ಎಷ್ಟೋ ಬಾರಿ ಅವರು ಇಷ್ಟಪಡುವಂತಹ ಸೀರೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಾರೆ ಸೀರೆ ಮಳಿಗೆಯವರು.
ಉತ್ಪಾದನೆ ಹೆಚ್ಚಿದಷ್ಟೂ ಬೇಡಿಕೆಯೂ ಹೆಚ್ಚಿದೆ
2020-21ರಲ್ಲಿ ಕೆಎಸ್‌ಐಸಿಯಿಂದ ಸುಮಾರು 3.32 ಲಕ್ಷ ಮೀಟರ್ ಬಟ್ಟೆಯನ್ನು ಉತ್ಪಾದಿಸಲಾಗಿತ್ತು ಮತ್ತು 2022-23ರಲ್ಲಿ ಅದು 5.41 ಲಕ್ಷ ಮೀಟರ್‌ಗೆ ಏರಿತು. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ನಿಗಮವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ನಾವು ಒಮ್ಮೆಗೆ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದರೆ ಮಗ್ಗಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಥ್ರೆಡ್ ಉತ್ಪಾದನೆಯನ್ನು ಹೆಚ್ಚಿಸುವ ಸ್ವಯಂಚಾಲಿತ ರೀಲಿಂಗ್ ಯಂತ್ರಗಳನ್ನು ಸಹ ಸಂಗ್ರಹಿಸುತ್ತಿದ್ದೇವೆ. ನಮ್ಮ ಮಗ್ಗಗಳಲ್ಲಿ ಎಲೆಕ್ಟ್ರಾನಿಕ್ ಜಾಕ್ವಾರ್ಡ್‌ಗಳನ್ನು ಅಳವಡಿಸಲಾಗುವುದು, ಇದು ನೇಯ್ಗೆ ದೋಷಗಳನ್ನು ಕಡಿಮೆ ಮಾಡುತ್ತದೆ. ನಾವು ಹೆಚ್ಚಿನ ಮಾನವಶಕ್ತಿಯನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ, ಅದು ಬಹಳ ಅವಶ್ಯಕವಾಗಿದೆ ಎಂದು ನಸೀಮ್ ಹೇಳುತ್ತಾರೆ.
ಪ್ರಿಂಟೆಡ್ ಸಿಲ್ಕ್‌ಗೂ ಬೇಡಿಕೆ
ಈ ನಡುವೆ ಪ್ರಿಂಟೆಡ್ ಸಿಲ್ಕ್ ಸೀರೆಗೂ ಬೇಡಿಕೆ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ ಪ್ರಿಂಟೆಡ್ ಸಿಲ್ಕ್ ಸೀರೆಗಳ ಮಾರಾಟವು ಶೇ15 ರಿಂದ 20 ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಮದುವೆಯ ಸೀಸನ್‌ನಲ್ಲಿ ಪುರುಷರ ಶಲ್ಯ, ಕುರ್ತಾ ಹಾಗೂ ಧೋತಿಗಳು ಕೂಡ ಹೆಚ್ಚು ಮಾರಾಟವಾಗುತ್ತಿವೆ.
ಪೂರೈಕೆ ಕೊರತೆಗೆ ಇದು ಪ್ರಮುಖ ಕಾರಣ
ಮಾಸ್ಟರ್ ವೀವರ್ಸ್ ಅಥವಾ ಪ್ರಮುಖ ನೇಕಾರರ ಸಂಖ್ಯೆ ಕಡಿಮೆ ಇರುವುದು ಜಾರ್ಜೆಟ್ ಸೀರೆಗಳ ಪೂರೈಕೆಯಲ್ಲಿನ ಕೊರತೆಗೆ ಕಾರಣವಾಗಿದೆ ಎಂದು ಕೆಎಸ್‌ಐಸಿ ಒಪ್ಪಿಕೊಳ್ಳುತ್ತದೆ.
ರೇಷ್ಮೆ ನೇಯ್ಗೆ ಕಾರ್ಖಾನೆ ಘಟಕ ಮತ್ತು ಸಂಯೋಜಿತ ರೇಷ್ಮೆ ನೇಯ್ಗೆ ಘಟಕವನ್ನು ಒಳಗೊಂಡಿರುವ ಕೆಎಸ್‌ಐಸಿಯ ಮೈಸೂರು ಘಟಕದಲ್ಲಿ ನೇಕಾರರ ಕೊರತೆಯಿಂದಾಗಿ ಒಟ್ಟು 159 ಸ್ಥಾಪಿಸಲಾದ ಮಗ್ಗಗಳಲ್ಲಿ 152 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ತಿ.ನರಸೀಪುರದಲ್ಲಿ 60 ಮಗ್ಗಗಳ ಪೈಕಿ 55 ಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದರೆ ಚನ್ನಪಟ್ಟಣದ ರೇಷ್ಮೆ ನೇಯ್ಗೆ ಘಟಕದಲ್ಲಿ ಅಳವಡಿಸಲಾಗಿರುವ 30 ಮಗ್ಗಗಳಲ್ಲಿ 26 ಕಾರ್ಯನಿರ್ವಹಿಸುತ್ತಿವೆ. ಒಟ್ಟು 16 ಮಗ್ಗಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಎಸ್‌ಐಸಿಯಿಂದ ಮಾಹಿತಿ ತೋರಿಸುತ್ತದೆ.