Saturday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಧೂಳಿನ ಕಣಕ್ಕೂ ಕಣ್ಣಿಗೆ ನೋವು ಕೊಡುವ ಶಕ್ತಿ ಇದೆ, ಯಾರನ್ನೂ ನಿಕೃಷ್ಟವಾಗಿ ಕಾಣಬೇಡಿ
Saturday Motivation: ಇಂದು ನೀವು ನಿಕೃಷ್ಟವಾಗಿ ಕಂಡ ವ್ಯಕ್ತಿಯೇ ನಾಳೆ ನೀವು ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರಬಹುದು. ಇಂದು ನೀವು ಕೀಳಾಗಿ ಕಂಡ ವ್ಯಕ್ತಿ ನಾಳೆ ಉನ್ನತ ಹುದ್ದೆಗೆ ಏರಬಹುದು. ನಾವು ಯಾರಿಗೂ ಸರಿ ಸಮಾನರಲ್ಲ, ನಮ್ಮ ಜೀವನ ನಮಗೆ, ಮತ್ತೊಬ್ಬರ ಜೀವನ ಮತ್ತೊಬ್ಬರಿಗೆ. ಆದ್ದರಿಂದ ಜೀವನದಲ್ಲಿ ಯಾರಿಗೂ ಉದ್ದೇಶಪೂರ್ವಕವಾಗಿ ನೋವು ಕೊಡಬಾರದು.
ಜೀವನಕ್ಕೊಂದು ಸ್ಫೂರ್ತಿಮಾತು: ಮನುಷ್ಯನಿಗೆ ಅಹಂ ಅನ್ನೋದು ಹುಟ್ಟಿನಿಂದ ಬರುವುದಿಲ್ಲ. ಸುತ್ತಮುತ್ತಲಿನ ವಾತಾವರಣ, ಘಟನೆಗಳು ಮನುಷ್ಯನಲ್ಲಿ ನಾನು, ನನ್ನದು ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ. ಇಂಥದ್ದೊಂದು ಭಾವನೆ, ಮತ್ತೊಬ್ಬರನ್ನು ಕೀಳಾಗೆ ನೋಡುವ ಸಂದರ್ಭಕ್ಕೆ ಕೂಡಾ ಕಾರಣವಾಗಬಹುದು. ಆದರೆ ಜೀವನದಲ್ಲಿ ಯಾರನ್ನು ಕೂಡಾ ನಿಕೃಷ್ಟವಾಗಿ ಕಾಣಬಾರದು.
ಆಂಗ್ಲ ಭಾಷೆಯಲ್ಲಿ Don't judge a book by its cover ಎಂಬ ಅರ್ಥಪೂರ್ಣ ವಾಕ್ಯವೊಂದು ಪ್ರಚಲಿತದಲ್ಲಿದೆ. ಯಾವುದೇ ವಿಚಾರವನ್ನಾಗಲೀ, ಯಾವ ವ್ಯಕ್ತಿಯನ್ನೇ ಆಗಲಿ ಕೀಳಾಗಿ ನೋಡಬಾರದು ಅನ್ನೋದು ಈ ಮಾತಿನ ಉದ್ದೇಶ. ಪ್ರತಿ ಬಲಶಾಲಿ ವ್ಯಕ್ತಿಗೆ ದೌರ್ಬಲ್ಯವಿರುತ್ತದೆ ಹಾಗೇ ಪ್ರತಿ ದುರ್ಬಲ ವ್ಯಕ್ತಿಗೆ ಬಲವಿರುತ್ತದೆ. ಆ ಶಕ್ತಿ ತಿಳಿಯುವವರೆಗೂ ಅವರು ದುರ್ಬಲರಾಗಿ ಕಾಣುತ್ತಾರೆ. ಹಾಗಾಗಿ ಯಾರನ್ನೂ ಕೀಳಾಗಿ ಕಾಣಬಾರದು. ಯಾರಲ್ಲಿ ಯಾವ ಶಕ್ತಿ ಅಡಗಿದೆಯೋ ಯಾರಿಗೆ ಗೊತ್ತು? 5 ರೂ. ಕೊಟ್ಟು ಖರೀದಿಸಿದ ಪೆನ್ ಆದರೂ ಅದಕ್ಕೆ 5 ಕೋಟಿ ರೂ. ಚೆಕ್ ಗೆ ಸಹಿ ಹಾಕುವ ಶಕ್ತಿ ಇರುತ್ತದೆ.
ಒಂದು ಮರದಿಂದ ಲಕ್ಷಗಟ್ಟಲೆ ಬೆಂಕಿಕಡ್ಡಿಗಳನ್ನು ಮಾಡಬಹುದು. ಆದರೆ ಲಕ್ಷಾಂತರ ಮರಗಳನ್ನು ಸುಡಲು ಒಂದೇ ಬೆಂಕಿಕಡ್ಡಿ ಸಾಕು. ಸಂದರ್ಭಗಳು ಎಂದಿಗೂ ಒಂದೇ ಆಗಿರುವುದಿಲ್ಲ. ಇತರರನ್ನು ಕಡಿಮೆ ಅಂದಾಜು ಮಾಡುವುದು, ಅವರನ್ನು ಕೀಳಾಗಿ ನೋಡುವುದು ಮತ್ತು ಅವರ ಭಾವನೆಗಳನ್ನು ನೋಯಿಸುವುದು ಭವಿಷ್ಯದಲ್ಲಿ ನಿಮಗೆ ದೊಡ್ಡ ನಷ್ಟವನ್ನು ಉಂಟು ಮಾಡಬಹುದು. ನೀವು ಯಾರನ್ನಾದರೂ ಹಂಗಿಸಿದರೆ ಆ ಮಾತು ನಿಮಗೆ ಸಾಮಾನ್ಯ ಎನಿಸಬಹುದು. ಆದರೆ ಅದನ್ನು ಅನುಭವಿಸಿದವರಿಗೆ ಆ ನೋವು, ಕಷ್ಟ ಏನೆಂದು ಗೊತ್ತು. ಆ ವ್ಯಕ್ತಿ ನಿಮಗೆ ಎದುರು ಮಾತನಾಡದೆ ಹೋಗಬಹುದು. ಆದರೆ ಇಂದು ನೀವು ಕೀಳಾಗಿ ಕಾಣುವ ವ್ಯಕ್ತಿ ಭವಿಷ್ಯದಲ್ಲಿ ನಿಮಗೆ ಸಹಾಯ ಮಾಡುವ ವ್ಯಕ್ತಿಯಾಗಿರಬಹುದು. ಇಂದು ನೀವು ಕಾಲಿಟ್ಟ ಕಲ್ಲು ನಾಳೆ ಬಂಡೆಯಾಗಿ ಮಾರ್ಪಟ್ಟು ದೇವಸ್ಥಾನದಲ್ಲಿ ದೇವರಾಗಬಹುದು. ಮನುಷ್ಯನ ಜೀವನವೂ ಹಾಗೆಯೇ.
ನೀವು ಎಲ್ಲರೊಂದಿಗೆ ಕೀಳಾಗಿ ಮಾತನಾಡಿದರೆ ನಿಮ್ಮ ಸುತ್ತಲೂ ಯಾರೂ ಇರುವುದಿಲ್ಲ ಮತ್ತು ಏಕಾಂಗಿಯಾಗುತ್ತೀರಿ. ನೀವು ಯಾರೊಬ್ಬರ ಬಗ್ಗೆ ಲಘುವಾಗಿ ಮಾತನಾಡಿದರೆ, ನಿಮ್ಮ ಮನಸ್ಸಿನಲ್ಲಿ ಅವರಿಗೆ ಬೆಲೆ ಇಲ್ಲ ಎಂದು ಅರ್ಥ. ನೀವು ಅದಕ್ಕೆ ಬೆಲೆ ಕೊಡದಿದ್ದರೂ ಪರವಾಗಿಲ್ಲ, ಅವರ ಭಾವನೆಗಳನ್ನು ನೋಯಿಸಬೇಡಿ. ಆ ಗಾಯ ವಾಸಿಯಾಗಲು ಬಹಳ ಸಮಯ ಹಿಡಿಯುತ್ತದೆ. ಇಂದು ನಾನು ಎಲ್ಲರಿಗಿಂತ ಆರಾಮಾಗಿದ್ದೇನೆ ಎಂದು ಸಂಭ್ರಮಿಸಿ ಇತರರನ್ನು ಕೀಳಾಗಿ ಮಾತನಾಡಿಸಿದರೆ, ನಾಳೆ ನೀವು ಯಾವ ತೊಂದರೆ ಎದುರಿಸಬೇಕೋ ಗೊತ್ತಿಲ್ಲ. ಆ ಕಷ್ಟದಲ್ಲಿ ನಿಮಗೆ ಇತರರಿಂದ ಸಹಾಯ ಬೇಕಾಗಬಹುದು. ನಂತರ ನೀವು ಹೋಗಿ ಅವರ ಸಹಾಯವನ್ನು ಪಡೆಯಬೇಕಾಗಬಹುದು. ಜೀವನದಲ್ಲಿ ಏನು ಬೇಕಾದರೂ ಆಗಬಹುದು. ಆದ್ದರಿಂದ ತಕ್ಷಣ ಇತರರನ್ನು ಕೀಳಾಗಿ ಮಾತನಾಡುವುದನ್ನು ನಿಲ್ಲಿಸಿ.