ಕನ್ನಡ ಸುದ್ದಿ  /  Lifestyle  /  Saturday Motivation Honesty Is Most Important Thing For Every Work In Life Motivational Story In Kannada Rsm

Saturday Motivation: ಜೀವನಕ್ಕೊಂದು ಸ್ಫೂರ್ತಿ ಮಾತು; ಪ್ರಾಮಾಣಿಕತೆ ಮರೆತು ಕೊನೆಗೆ ಪಶ್ಚಾತಾಪ ಪಟ್ಟ ಬಡಗಿಯ ಕಥೆಯನ್ನೊಮ್ಮೆ ಓದಿ

Saturday Motivation: ಜೀವನದಲ್ಲಿ ನಿಷ್ಠೆ, ನಂಬಿಕೆ ಇದ್ದರೆ ಅದು ಪ್ರತಿಫಲವಾಗಿ ನಮಗೆ ಹತ್ತರಷ್ಟು ವಾಪಸ್‌ ದೊರೆಯುತ್ತದೆ. ಆದರೆ ಪ್ರಾಮಾಣಿಕತೆ ಇಲ್ಲದಿದ್ದರೆ ಖಂಡಿತ ನಮ್ಮ ಜೀವನ ಸುಂದರವಾಗಿರುವುದಿಲ್ಲ. ಕೊನೆಗೆ ನಮಗೆ ಪಶ್ಚಾತಾಪವೊಂದೇ ಉಳಿಯುತ್ತದೆ ಎಂಬುದಕ್ಕೆ ಈ ಕಥೆ ಉದಾಹರಣೆ.

ಜೀವನಕ್ಕೊಂದು ಸ್ಫೂರ್ತಿಮಾತು
ಜೀವನಕ್ಕೊಂದು ಸ್ಫೂರ್ತಿಮಾತು (PC: Unsplash)

Saturday Motivation: ಜೀವನದಲ್ಲಿ ಪ್ರತಿಯೊಬ್ಬರಿಗೂ ಪ್ರಾಮಾಣಿಕತೆ ಇರಬೇಕು. ಅದು ಸಣ್ಣ ಕೆಲಸವಾಗಲೀ, ದೊಡ್ಡ ಕೆಲಸವಾಗಲೀ ನಿಷ್ಠೇ, ಪ್ರಾಮಾಣಿಕತೆಯು ಎಂದೆಂದಿಗೂ ನಮ್ಮನ್ನು ಕಾಪಾಡುತ್ತದೆ. ನೀವು ಕೊಟ್ಟಿದ್ದು ಹತ್ತರಷ್ಟು ವಾಪಸ್‌ ನಿಮಗೆ ಬರಲಿದೆ. ಪ್ರಾಮಾಣಿಕತೆಗೆ ಸಂಬಂಧಿಸಿದಂತೆ ಒಂದು ಕಥೆಯನ್ನು ಉದಾಹರಣೆಯನ್ನಾಗಿ ನೋಡಬಹುದು. ಬಡಗಿಯೊಬ್ಬ ಪ್ರಾಮಾಣಿಕತೆ ಬಿಟ್ಟಿದ್ದರಿಂದ ಎಷ್ಟು ಪಶ್ಚಾತಾಪ ಪಡಬೇಕಾಯ್ತು ಎಂಬುದನ್ನು ನೀವೂ ತಿಳಿದುಕೊಳ್ಳಿ.

ರಾಮಾಪುರ ಎಂಬ ಗ್ರಾಮದಲ್ಲಿ ಒಬ್ಬ ಬಡಗಿ ಇದ್ದ. ಆತ ತನಗೆ ಬುದ್ಧಿ ಬಂದಾಗಿನಿಂದ ಮರಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಒಬ್ಬ ಕಾಂಟ್ರಾಕ್ಟರ್‌ ಬಳಿ ತನ್ನ ಜೀವನದ ಬಹುತೇಕ ಸಮಯ ಕೆಲಸ ಮಾಡಿದ. 60 ವರ್ಷದ ನಂತರ ಇನ್ನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎನಿಸಿ ಮರಗೆಲಸದಿಂದ ನಿವೃತ್ತನಾಗಲು ಬಯಸಿದ. ಪತ್ನಿ ಹಾಗೂ ಕುಟುಂಬದೊಂದಿಗೆ ಮುಂದಿನ ಜೀವನವನ್ನು ಕಳೆಯಲು ಬಡಗಿ ನಿರ್ಧರಿಸಿದ. ಈ ವಿಚಾರವನ್ನು ಆತ ಇಷ್ಟು ದಿನಗಳ ಕಾಲ ತಾನು ಕೆಲಸ ಮಾಡುತ್ತಿದ್ದ ಕಾಂಟ್ರಾಕ್ಟರ್‌ ಬಳಿ ಪ್ರಸ್ತಾಪಿಸುತ್ತಾನೆ. ಆ ವಿಚಾ ಕೇಳಿ ಕಾಂಟ್ರಾಕ್ಟರ್‌ ಬಹಳ ಬೇಸರ ವ್ಯಕ್ತಪಡಿಸುತ್ತಾನೆ. ಇಷ್ಟು ದಿನಗಳ ಕಾಲ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಇನ್ನು ಕೆಲಸ ಮಾಡುವುದಿಲ್ಲವಲ್ಲಾ ಎಂಬುದು ಆತನಿಗೆ ಬೇಸರ ಕಾಡತೊಡಗಿತು. ಆದರೆ ಬಡಗಿಯ ವಯಸ್ಸಿನ ದೃಷ್ಟಿಯಿಂದ ನಂತರ ಆತನ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾನೆ.

ಕಾಂಟ್ರಾಕ್ಟರ್‌ ಏನೋ ಯೋಚನೆ ಮಾಡಿ ಬಡಗಿ ಬಳಿ ಬಂದು ಕೊನೆಯ ಬಾರಿಗೆ ನನಗೊಂದು ಮನೆ ಕಟ್ಟಿ ಕೊಡು ಎಂದು ಮನವಿ ಮಾಡಿಕೊಳ್ಳುತ್ತಾನೆ. ಇದಕ್ಕೆ ಬಡಗಿ ಕೂಡಾ ಒಪ್ಪಿಕೊಳ್ಳುತ್ತಾನೆ. ಕೆಲವು ದಿನಗಳ ನಂತರ ಬಡಗಿ ತಾನು ಕೊನೆಯ ಬಾರಿ ಕಟ್ಟಿದ ಮನೆಯನ್ನು ಕಾಂಟ್ರಾಕ್ಟರ್‌ಗೆ ಒಪ್ಪಿಸುತ್ತಾನೆ. ಆದರೆ ಈ ಬಾರಿ ಬಡಗಿ ಎಂದಿನಂತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿರಲಿಲ್ಲ. ಮನೆ ಕಟ್ಟಲು ಆತ ಅತ್ಯಂತ ಕಳಪೆ ವಸ್ತುಗಳನ್ನು ಬಳಸಿದ್ದ. ಬಹಳ ಕಡಿಮೆ ಹಣಕ್ಕೆ ಆ ಮನೆಯನ್ನು ಪೂರ್ತಿ ಮಾಡಿದ್ದನು.

ನಂತರ ಕಾಂಟ್ರಾಕ್ಟರ್‌ ಮನೆಯೆಲ್ಲಾ ಒಮ್ಮೆ ನೋಡಿ ಬಡಗಿ ಮುಂದೆ ನಿಂತು, ಕೀಲಿ ಕೈಯನ್ನು ಆತನ ಕೈಗೆ ಇಟ್ಟು, ಇದು ನಿನ್ನ ಮನೆ. ಇದು ನಾನು ನಿನಗೆ ನೀಡುತ್ತಿರುವ ವಿಶೇಷ ಬಹುಮಾನ. ಇಷ್ಟು ದಿನಗಳ ಕಾಲ ನೀನು ನನ್ನ ಬಳಿ ನಂಬಿಕೆಯಿಟ್ಟು ಕೆಲಸ ಮಾಡಿದೆ. ಆ ನಂಬಿಕೆಗೆ, ಪ್ರಾಮಾಣಿಕತೆಗೆ ನಿನಗೆ ಏನು ನೀಡಿದರೂ ಕಡಿಮೆಯೇ. ಆದ್ದರಿಂದ ನಿನ್ನ ಜೀವನದ ಅಂತಿಮ ದಿನಗಳಲ್ಲಿ ನೆಮ್ಮದಿಯಾಗಿ ಬದುಕಲಿ ಎಂದು ಈ ಮನೆಯನ್ನು ನೀಡಿದ್ದೇನೆ ಎಂದು ಅಲ್ಲಿಂದ ಹೊರಟುಹೋಗುತ್ತಾನೆ.

ಆ ಮನೆ ನನಗಾಗಿಯೇ ಎಂದು ತಿಳಿದ ಆ ಬಡಗಿ ಬಹಳ ಬೇಸರ ವ್ಯಕ್ತಪಡಿಸುತ್ತಾನೆ. ಕಾಂಟ್ರಾಕ್ಟರ್‌ಗೆ ನನ್ನ ಮೇಲೆ ಎಷ್ಟೊಂದು ನಂಬಿಕೆ. ಇಷ್ಟು ದಿನಗಳ ಕಾಲ ಪ್ರಾಮಾಣಿಕತೆಯಿಂದ ಇದ್ದ ನಾನು, ಈ ರೀತಿ ಮಾಡಬಾರದಿತ್ತು. ಆ ಕ್ರಾಂಟ್ರಾಕ್ಟರ್‌ ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ಮೋಸ ಮಾಡಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾನೆ. ಕಾಂಟ್ರಾಕ್ಟರ್‌ ಕಟ್ಟಿಕೊಟ್ಟ ಮನೆಯಲ್ಲೇ ಬಡಗಿ ಕೊನೆಯ ದಿನಗಳನ್ನು ಕಳೆಯುತ್ತಾನೆ. ತಾನು ಮಾಡಿದ ಮೋಸಕ್ಕೆ ಸರಿಯಾದ ಶಿಕ್ಷೆ ಆಗಿದೆ ಎಂದು ನೊಂದುಕೊಳ್ಳುತ್ತಲೇ ಜೀವಿಸುತ್ತಾನೆ.

ವಿಭಾಗ