Saturday Motivation: ನಿರಂತರ ಕಲಿಕೆ ಎಂದರೇನು, ಪ್ರಯೋಜನಗಳೇನು? ಜಿಮ್‌ಗೆ ನಿರಂತರವಾಗಿ ಹೋಗದಿದ್ರೆ ಸಿಕ್ಸ್‌ಪ್ಯಾಕ್ ಮಾಯ!
Saturday Motivation: ಕಲಿಕೆಗೆ ಅಂತ್ಯವಿಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಆದರೆ, ಸಾಕಷ್ಟು ಜನರು ಕೈತುಂಬಾ ವೇತನ ನೀಡುವ ಉದ್ಯೋಗ ದೊರಕಿದ ಬಳಿಕ ಕಲಿಕೆ ನಿಲ್ಲಿಸಿಬಿಡುತ್ತಾರೆ. ದಿನಕಳೆದಂತೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಔಟ್‌ಡೇಟೆಡ್ ಆಗಿಬಿಡುತ್ತಾರೆ. ನಿರಂತರ ಕಲಿಕೆ ಎಂದರೇನು? ಅದರ ಪ್ರಯೋಜನಗಳೇನು? ಎಲ್ಲಿ ಕಲಿಯಬಹುದು? ಇತ್ಯಾದಿ ಇವರ ಇಲ್ಲಿದೆ.
Saturday Motivation: ವಿದ್ಯಾರ್ಥಿಗಳು ಕಾಲೇಜು ಮುಗಿಸಿದ ನಂತರ ನಿರಾಳವಾಗಿ ಬಿಡುತ್ತಾರೆ. ಇನ್ನು ಓದುವ ಕಷ್ಟವಿಲ್ಲ ಎಂದುಕೊಳ್ಳುತ್ತಾರೆ. ಕ್ಯಾಂಪಸ್ ಇಂಟರ್‌ವ್ಯೂ ಅಥವಾ ಉದ್ಯೋಗ ಸಂದರ್ಶನಗಳಲ್ಲಿ ಪಾಸ್ ಆಗಿ ಉದ್ಯೋಗವೊಂದನ್ನು ಪಡೆಯುತ್ತಾರೆ. ಉದ್ಯೋಗ ದೊರಕಿದ ಬಳಿಕ ಬೈಕ್, ಕಾರು, ಐಫೋನ್, ಮದುವೆ ಮಕ್ಕಳು ಎಲ್ಲವೂ ಆಗುತ್ತದೆ. ಕೈಯಲ್ಲಿ ಒಂದಿಷ್ಟು ಹಣವೂ ಇರುತ್ತದೆ, ಸಾಲವೂ ಇರುತ್ತದೆ, ಇಎಂಐಯೂ ಇರುತ್ತದೆ. ದಿನಕಳೆದಂತೆ ಕಂಪನಿಗೆ ಹೊಸ ಉದ್ಯೋಗಿಗಳು ಬರುತ್ತಾರೆ. ಜೂನಿಯರ್‌ಗಳಿಗೆ ಗೊತ್ತಿರುವುದು ಸೀನಿಯರ್‌ಗಳಿಗೆ ಗೊತ್ತಿರುವುದಿಲ್ಲ. ಸೀನಿಯರ್‌ಗಳು ಟೈಪ್ ರೈಟರ್ ಕಾಲದಲ್ಲಿದ್ದಾರೆ, ಜೂನಿಯರ್‌ಗಳು ಟಚ್ ಸ್ಕ್ರೀನ್ ಕಾಲದಲ್ಲಿರುತ್ತಾರೆ. ಮುಂದೊಂದು ದಿನ ಉದ್ಯೋಗ ಕಡಿತವಾದಗ ಔಟ್‌ಡೇಟೆಡ್ ಆಗಿರುವವರಿಗೆ ಸುಲಭವಾಗಿ ಹೊಸ ಉದ್ಯೋಗ ದೊರಕುವುದಿಲ್ಲ. ಆದರೆ, ಕೆಲವು ಸೀನಿಯರ್‌ಗಳು ಜೂನಿಯರ್‌ಗಳು ನಾಚುವಂತೆ ಎಲ್ಲವನ್ನೂ ತಿಳಿದಿರುತ್ತಾರೆ. ಅವರಿಗೆ ಟಚ್ ಸ್ಕ್ರೀನ್ ಮಾತ್ರವಲ್ಲ, ಎಐಗೆ ಪ್ರಾಂಪ್ಟ್ ಕೊಟ್ಟು ಪಿಪಿಟಿ ಮಾಡಲೂ ಗೊತ್ತು. ಇನ್ನು ಹತ್ತು ವರ್ಷದ ನಂತರ ಏನಾಗಬಹುದು ಎಂಬ ಯೋಚನೆಯೂ ಇರುತ್ತದೆ, ಅದಕ್ಕೆ ಬೇಕಾದ ಸ್ಕಿಲ್ ಸೆಟ್‌ಗಳನ್ನೂ ಕಲಿಯುತ್ತಿರುತ್ತಾರೆ. ಕಲಿಕೆಗೆ ಅಂತ್ಯವಿಲ್ಲ, ಅದೊಂದು ನಿರಂತರ ಪ್ರಕ್ರಿಯೆ ಎಂದು ತಿಳಿದವರು ಮತ್ತು ನಿರಂತರ ಕಲಿಕೆಗೆ ಗಮನ ನೀಡುವವರು ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ?
ನಿರಂತರ ಕಲಿಕೆಗೆ ಜಿಮ್ ಸೂಕ್ತ ಉದಾಹರಣೆಯಾಗಬಹುದು. ಸಾಕಷ್ಟು ಜನರು ಒಂದಿಷ್ಟು ದಿನ ಜಿಮ್‌ಗೆ ಹೋಗುತ್ತಾರೆ. ಕಷ್ಟಪಟ್ಟು ಬೈಸೆಪ್ಸ್, ಟ್ರೈಸೆಪ್ಸ್ ಎಂದು ದೇಹಕ್ಕೊಂದು ಸುಂದರ ಆಕಾರ ದೊರಕಿಸಿಕೊಳ್ಳುತ್ತಾರೆ. ಕೆಲವರು ಕಷ್ಟಪಟ್ಟು ಸಿಕ್ಸ್‌ಪ್ಯಾಕ್ ಹೊಂದುತ್ತಾರೆ. ಆದರೆ, ಒಂದೆರಡು ತಿಂಗಳು ಜಿಮ್‌ಗೆ ಹೋಗದೆ ಇದ್ದರೆ ಆಕರ್ಷಕ ಮೈಕಟ್ಟು ಆಕಾರ ಕಳೆದುಕೊಳ್ಳುತ್ತದೆ. ಸಿಕ್ಸ್ ಪ್ಯಾಕ್ ಬದಲಿಗೆ ದೊಡ್ಡ ಹೊಟ್ಟೆ ಕಾಣಿಸಿಕೊಳ್ಳಬಹುದು. ನಿರಂತರವಾಗಿ ಜಿಮ್‌ಗೆ ಹೋಗುತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದೇ ರೀತಿ ಕಾಲೇಜು ಜೀವನದಲ್ಲಿ ರಾಂಕ್ ಪಡೆದವರು ಉದ್ಯೋಗ ಪಡೆದ ಬಳಿಕ ನಿರಂತರ ಕಲಿಕೆ ಮರೆತರೆ ಔಟ್‌ಡೇಟೆಡ್ ಆಗಬಹುದು. ಇದರರ್ಥ ಕಾಲೇಜು ಬಿಟ್ಟ ಬಳಿಕವೂ ಎಂಟು ಹತ್ತು ಗಂಟೆ ದಿನಕ್ಕೆ ಓದಬೇಕೆಂದು ಅಲ್ಲ. ನಾವು ಉದ್ಯೋಗ ಮಾಡುವ ಕ್ಷೇತ್ರದಲ್ಲಿ ಏನಾಗುತ್ತಿದೆ. ಹೊಸ ತಂತ್ರಜ್ಞಾನಗಳು ಏನು ಬರುತ್ತಿದೆ. ಅದಕ್ಕೆ ಬೇಕಾದ ಕೌಶಲಗಳು ನನ್ನಲ್ಲಿವೆಯೇ, ಆ ಕೌಶಲಗಳನ್ನು ಪಡೆಯುವುದು ಹೇಗೆ? ಎಂದು ಯೋಚಿಸಿ ಮುಂದುವರೆಯಬೇಕು. ಇಲ್ಲವಾದರೆ ವರ್ಷಗಳು ಕಳೆದಂತೆ ತುಂಬಾ ಹಿಂದೆ ಉಳಿದುಬಿಡುತ್ತೇವೆ.
ಕೋಡಿಂಗ್ ಕಲಿತರೆ ಸಾಕೇ?
ಕಂಪ್ಯೂಟರ್ ಸೈನ್ಸ್ ಓದಿ ಟೆಕ್ ಜಗತ್ತಿನಲ್ಲಿ ಉದ್ಯೋಗ ಪಡೆಯಬಹುದು. ಎಚ್‌ಟಿಎಂಎಲ್, ಸಿಎಸ್‌ಎಸ್, ಜಾವಾ ಸ್ಕ್ರಿಪ್ಟ್ ಗೊತ್ತಿದೆ, ಎಲ್ಲಿ ಬೇಕಾದರೂ ಬದುಕಬಲ್ಲೆ ಎಂದುಕೊಂಡು ಹಾಯಾಗಿ ಕೆಲಸ ಮಾಡುತ್ತ ಇರಬಹುದು. ಆ ಕಂಪನಿಯ ಅಗತ್ಯಕ್ಕೆ ಎಂದು ಯಾವುದಾದರೂ ಪ್ರೋಗ್ರಾಮಿಂಗ್ ಭಾಷೆಯನ್ನೂ ಕಲಿತಿರಬಹುದು. ಅದಕ್ಕೆ ತಕ್ಕಂತಹ ಉದ್ಯೋಗ ಮಾಡಿಕೊಂಡು ಹಾಯಾಗಿ ಇರಬಹುದು. ಇದೇ ಸಂದರ್ಭದಲ್ಲಿ ವೆಬ್ ಜಗತ್ತಿನಲ್ಲಿ ಬೇರೆ ಏನೋ ನಡೆಯುತ್ತಿರಬಹುದು. ಅದರ ಅರಿವಿರಬೇಕು. ಹೊಸತನ್ನು ಕಲಿಯುತ್ತಿರಬೇಕು. ಇಲ್ಲವಾದರೆ, ಎಐ ಕೋಡ್ ಬರೆಯುತ್ತದೆ, ನಿನ್ನ ಅಗತ್ಯವಿಲ್ಲ ಎಂದು ಕಂಪನಿ ಮುಂದೊಂದು ದಿನ ನಿಮ್ಮನ್ನು ಮನೆಗೆ ಕಳುಹಿಸಬಹುದು.
ನಿರಂತರ ಕಲಿಕೆ ಎಂದರೇನು?
ಕಲಿಯುವುದನ್ನು ನಿಲ್ಲಿಸದೆ ಇರುವುದು. ಪ್ರತಿನಿತ್ಯ ಹೊಸತು ಕಲಿಯುವುದು. ಹಿಂದೆ ಕಲಿತಿರುವುದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಜ್ಞಾನ ಪಡೆಯುವುದು. ಉದ್ಯೋಗ ಕ್ಷೇತ್ರದಲ್ಲಿಯಾದರೆ ತಮ್ಮ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ಸ್ಕಿಲ್ ಸೆಟ್ ಸಂಪಾದಿಸುತ್ತ ಹೋಗುವುದು. ಉದ್ಯೋಗ ಕ್ಷೇತ್ರಕ್ಕೆ ಪ್ರತ್ಯಕ್ಷವಾಗಿ ಸಂಬಂಧಪಟ್ಟಿರದೆ ಇರುವ ವಿಷಯಗಳನ್ನೂ ಕಲಿಯಬಹುದು.
- ನಾವು ಈಗಾಗಲೇ ಕಲಿತಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿ ಜ್ಞಾನ ಪಡೆಯುವುದು ಖುಷಿ ನೀಡುವ ಪ್ರಕ್ರಿಯೆಯಾಗಲಿ. ಸದಾ ಕುತೂಹಲದಿಂದ ಈ ಜಗತ್ತನ್ನು ನೋಡಿ. ಆಗ ಕಲಿಯುವ ಆಸಕ್ತಿ ಹೆಚ್ಚುತ್ತದೆ.
- ಬದಲಾವಣೆಗೆ ತೆರೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಿ. ನಾನು ಟೈಪ್ ರೈಟರ್‌ನಲ್ಲಿಯೇ ಟೈಪ್ ಮಾಡ್ತಿನಿ, ಕಂಪ್ಯೂಟರ್ ಕೀಲಿಮಣೆ ನನಗೆ ಬೇಡ ಎಂದುಕೊಳ್ಳಬೇಡಿ.
- ಕಲಿಕೆ ಎಂದರೆ ಸದಾ ಓದುತ್ತ ಇರಬೇಕೆಂದಲ್ಲ. ಸೆಮಿನಾರ್‌ಗಳಲ್ಲಿ ಭಾಗವಹಿಸಬಹುದು. ಗೊತ್ತಿರುವವರ ಬಳಿಕ ಚರ್ಚೆ ಮಾಡಬಹುದು. ಇನ್ನೊಬ್ಬರ ಬಳಿ ಕೇಳಿ ತಿಳಿದುಕೊಳ್ಳಬಹುದು. ಯೂಟ್ಯೂಬ್ ನೋಡಬಹುದು, ಪಾಡ್‌ಕಾಸ್ಟ್ ಕೇಳುತ್ತ ಇರಬಹುದು. ಕೆಲವೊಮ್ಮೆ ಇತರರ ಜತೆ ಮಾತನಾಡುವಾಗಲೂ ಸಾಕಷ್ಟು ಜ್ಞಾನ ದೊರಕುತ್ತದೆ.
- ನಿಮ್ಮ ಜ್ಞಾನವನ್ನು ಇತರರ ಜತೆ ಹಂಚಿಕೊಳ್ಳಿ. ನಿರಂತರ ಕಲಿಕೆಗೆ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು "ಜ್ಞಾನ ಹಂಚಿಕೆ". ನಿಮಗೆ ಗೊತ್ತಿದೆ, ಅದು ಇತರರಿಗೆ ಗೊತ್ತಿರಬಾರದು ಎಂದುಕೊಳ್ಳಬೇಡಿ. ಕೇಳುವವರು ಇದ್ದರೆ, ಕಲಿಯುವ ಆಸಕ್ತಿ ಇರುವವರಿದ್ದರೆ ಇತರರಿಗೂ ನಿಮಗೆ ಗೊತ್ತಿರುವುದನ್ನು ಹೇಳಿಕೊಡಿ.
ನಿರಂತರ ಕಲಿಕೆಯ ಪ್ರಯೋಜನಗಳೇನು?
- ನಿರಂತರ ಕಲಿಕೆಯಿಂದ ನಮ್ಮ ಜ್ಞಾನ ಉತ್ತಮಗೊಳ್ಳುತ್ತದೆ.
- ಉದ್ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಕಾಣಲು ನೆರವಾಗುತ್ತದೆ.
- ಉದ್ಯೋಗ ಕ್ಷೇತ್ರದಲ್ಲಿ ನಾವು ಔಟ್‌ಡೇಟೆಡ್ ಆಗುವುದನ್ನು ತಪ್ಪಿಸುತ್ತದೆ.
- ಉದ್ಯೋಗ ಕಡಿತದಂತಹ ಸಮಯದಲ್ಲಿ ಯಾವುದಾದರೂ ಉದ್ಯೋಗ ಪಡೆಯಲು ನೆರವಾಗುತ್ತದೆ.
- ನಿಮ್ಮ ಕಾನ್ಫಿಡೆನ್ಸ್ ಹೆಚ್ಚಿಸುತ್ತದೆ.
- ನಿಮ್ಮ ಯೋಚನ ಕ್ರಮದಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ.
ಇದನ್ನೂ ಓದಿ: Banking Courses: ದ್ವಿತೀಯ ಪಿಯುಸಿ ಬಳಿಕ ಕಾಮರ್ಸ್ ಸ್ಟುಡೆಂಟ್ ಕಲಿಯಬಹುದಾದ 23 ಬ್ಯಾಂಕಿಂಗ್ ಕೋರ್ಸ್‌ಗಳು
ಎಲ್ಲಿ ಕಲಿಯಬಹುದು?
ಈಗ ಎಲ್ಲಿ ಕಲಿಯಬಹುದು ಎಂಬ ಪ್ರಶ್ನೆಗೆ ಉತ್ತರ ಎಲ್ಲರಲ್ಲಿಯೂ ಇರಬಹುದು. ಕೈಯಲ್ಲಿರುವ ಮೊಬೈಲ್‌ನಲ್ಲಿ ಸದಾ ಗೇಮ್ಸ್ ಆಡುವ ಬದಲು ಕೆಲವು ಗಂಟೆಗಳನ್ನು ಅದೇ ಮೊಬೈಲ್‌ನಲ್ಲಿ ಕಲಿಕೆಗೆ ನೀಡಬಹುದು. ಇದೇ ರೀತಿ ಮೊಬೈಲ್‌ನಲ್ಲಿ ಸದಾ ಸಿನಿಮಾ, ಒಟಿಟಿ ಸಿನಿಮಾ, ವೆಬ್ ಸರಣಿಯಲ್ಲೇ ಮುಳುಗುವ ಬದಲು ಕೆಲವು ಗಂಟೆಗಳನ್ನು ಯಾವುದಾದರೂ ಕೋರ್ಸ್‌ಗಳನ್ನು ಕಲಿಯಲು ನೀಡಬಹುದು.
- ಯೂಟ್ಯೂಬ್‌ನಲ್ಲಿ ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಕೋರ್ಸ್‌ಗಳು, ವಿಡಿಯೋಗಳು ಇವೆ. ಅವುಗಳನ್ನು ನೋಡಿ.
- ಆನ್‌ಲೈನ್ ಕೋರ್ಸ್‌ಗಳಿಗೆ ಸೇರಿ. ಸಾಕಷ್ಟು ಕೋರ್ಸ್‌ಗಳು ಉಚಿತವಾಗಿ ದೊರಕುತ್ತವೆ. ಪ್ರೀಮಿಯಂ ಕೋರ್ಸ್‌ಗಳಿಗೆ ಹಣ ನೀಡುವುದರಿಂದ ನಷ್ಟವೇನು ಇಲ್ಲ.
- ಗೂಗಲ್‌ನಲ್ಲಿ ಹುಡುಕಿ. ಏನೇ ಸಂದೇಹ ಬಂದರೂ ಗೂಗಲ್‌ನಲ್ಲಿ ಹುಡುಕಿ ಉತ್ತರ ಪಡೆಯಿರಿ. ವಿಕಿಪೀಡಿಯಾದಲ್ಲಿಯೂ ಮಾಹಿತಿ ಪಡೆಯಬಹುದು.
- ನಿಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸೆಮಿನಾರ್‌ಗಳಿದ್ದರೆ ಭಾಗವಹಿಸಿ. ಆನ್‌ಲೈನ್ ಸೆಮಿನಾರ್, ಗೋಷ್ಠಿಗಳಲ್ಲಿಯೂ ಭಾಗವಹಿಸಿ. ಪುಸ್ತಕಗಳನ್ನು ಓದಿ ಕಲಿಯಿರಿ.
- ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಆಫೀಸ್‌ನಲ್ಲಿ ಗೊತ್ತಿರುವವರ ಪಕ್ಕದಲ್ಲಿ ಹೋಗಿ ಕುಳಿತು "ನನಗೂ ಹೇಳಿಕೊಡಿ" ಎಂದು ಕೇಳಿ.
ನಿರಂತರ ಕಲಿಕೆಯ ಉದ್ದೇಶ- ಹಣ ಗಳಿಕೆಯಲ್ಲ. ನೀವು ಏನಾದರೂ ಕೋರ್ಸ್ ಕಲಿಯುತ್ತಿರುವಾಗ "ಅದಕ್ಕೆ ಏನು ಕೆಲಸ ಸಿಗುತ್ತದೆ, ಎಷ್ಟು ಸಂಬಳದ ಕೆಲಸ ದೊರಕುತ್ತದೆ" ಎಂದು ಪ್ರಶ್ನಿಸುವವರು ಇರಬಹುದು. ಆದರೆ, ನಿರಂತರ ಕಲಿಕೆಯ ಉದ್ದೇಶ ಹಣ ಗಳಿಕೆ, ಉದ್ಯೋಗ ಗಳಿಕೆ ಆಗಿರಬಾರದು. ಅವೆಲ್ಲ ಅವಷ್ಟಕ್ಕೆ ಬರಬಹುದು. ಕಲಿಕೆ ಎನ್ನುವುದು ನಿಮ್ಮ ಭವಿಷ್ಯಕ್ಕೆ ಮಾಡುವ ಹೂಡಿಕೆ ಎಂದುಕೊಳ್ಳಬಹುದು. ನೀವು ಲೀಡರ್ ಆಗಬೇಕಾದರೆ ರೀಡರ್ ಆಗಬೇಕು. ನಿರಂತರ ಕಲಿಕೆ ಒಂದು ಅಭ್ಯಾಸವಾಗಬೇಕು. ನೀವು ಎಕ್ಸ್‌ಪರ್ಟ್ ಆಗಲು ಯತ್ನಿಸಬೇಕು.
- ಲೇಖನ: ಪ್ರವೀಣ್ ಚಂದ್ರ ಪುತ್ತೂರು