ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ ಪ್ರವಾಸ ಹೊರಟಿದ್ದೀರಾ? ಕಲಬುರಗಿಯ ಈ ಸ್ಥಳಗಳನ್ನು ಮಕ್ಕಳಿಗೆ ತಪ್ಪದೇ ತೋರಿಸಿ
ತೊಗರಿಯ ಕಣಜ ಖ್ಯಾತಿಯ ಕಲಬುರಗಿ ಶೈಕ್ಷಣಿಕ ಪ್ರವಾಸಕ್ಕೆ ಬೆಸ್ಟ್ ಎನಿಸಿರುವ ಸ್ಥಳಗಳಲ್ಲಿ ಒಂದು. ಇಲ್ಲಿನ ಕೋಟೆ, ಮಸೀದಿ, ಗುಂಬಜ್, ಪುರಾತನ ದೇಗುಲ ಮುಂತಾದ ಐತಿಹಾಸಿಕ ಸ್ಥಳಗಳು ಮಕ್ಕಳಿಗೆ ಹಿಂದಿನ ಕಾಲದಲ್ಲಿ ಆಳಿದ ರಾಜರುಗಳ ಚಿತ್ರಣ ಕಟ್ಟಿಕೊಡುತ್ತದೆ. ಶಾಲಾ ಪ್ರವಾಸದಲ್ಲಿ ಕಲಬುರಗಿಗೆ ಭೇಟಿ ನೀಡಬೇಕೆಂದಿದ್ದರೆ ಮಕ್ಕಳು ನೋಡಲೇಬೇಕಾದ ಸ್ಥಳಗಳ ಪಟ್ಟಿ ಇಲ್ಲಿದೆ.
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕಲಬುರಗಿ ಐತಿಹಾಸಿಕವಾಗಿ ಪ್ರಸಿದ್ಧಿಯನ್ನು ಪಡೆದ ಜಿಲ್ಲೆ. ಸೂರ್ಯ ನಗರಿ ಎಂದು ಕರೆಯಲ್ಪಡುವ ಈ ಜಿಲ್ಲೆ ಕರ್ನಾಟಕದ ಎರಡನೆ ಅತಿ ದೊಡ್ಡ ಜಿಲ್ಲೆಯಾಗಿದೆ. ಇತಿಹಾಸದಲ್ಲಿ ರಾಷ್ಟ್ರಕೂಟರು, ಚಾಲಕ್ಯರು, ಮೊಘಲರು, ಬಹುಮನಿ ಸುಲ್ತಾನರು ಮತ್ತು ಹೈದರಾಬಾದ್ ನಿಜಾಮರಿಂದ ಆಳಲ್ಪಟ್ಟಿದೆ. ದಖನ್ ಪ್ರಸ್ತಭೂಮಿಯ ಮೇಲಿರುವ ಈ ಜಿಲ್ಲೆ ತೊಗರಿಯ ಕಣಜ ಎಂದು ಪ್ರಸಿದ್ಧವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಮುಂದುವರಿದ ಜಿಲ್ಲೆ ಎಂದು ಗುರುತಿಸಲ್ಪಟ್ಟಿರುವ ಈ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ನವೆಂಬರ್ – ಡಿಸೆಂಬರ್ ಬಂತೆಂದರೆ ಸಾಕು ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸದ ಮಾತು ಕೇಳಿಬರುತ್ತದೆ. ಶಾಲಾ ಮಕ್ಕಳ ಪ್ರವಾಸಕ್ಕೆ ಹೊಸ ಸ್ಥಳಗಳನ್ನು ಹುಡುಕುತ್ತಿದ್ದರೆ ಕಲಬುರಗಿ ಜಿಲ್ಲೆ ಉತ್ತಮವಾಗಿದೆ. ಶಾಲಾ ಪಠ್ಯದಲ್ಲಿ ಬರುವ ಇತಿಹಾಸದ ಪಾಠಗಳನ್ನು ಮಕ್ಕಳಿಗೆ ಅರ್ಥ ಮಾಡಿಸಲು ಹೇಳಿ ಮಾಡಿಸಿದಂತಿದೆ. ರಾಜ–ಮಹಾರಾಜರು ಕಟ್ಟಿಸಿದ ಕೋಟೆ, ದೇಗುಲ, ಗುಂಬಜ್, ದರ್ಗಾಗಳನ್ನು ಒಂದೇ ಸ್ಥಳದಲ್ಲಿ ಮಕ್ಕಳಿಗೆ ತೋರಿಸಬಹುದಾಗಿದೆ. ಕಲಬುರಗಿ ಜಿಲ್ಲೆಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗಬೇಕೆಂದು ನೀವು ಯೋಚಿಸುತ್ತಿದ್ದರೆ ಪ್ರವಾಸ ಯೋಜನೆಯನ್ನು ನಾವು ಕೊಡುತ್ತಿದ್ದೇವೆ. ಶೈಕ್ಷಣಿಕ ಪ್ರವಾಸಕ್ಕೆ ಅತ್ಯುತ್ತಮವಾಗಿರುವ ಸ್ಥಳಗಳ ಪಟ್ಟಿ ಇಲ್ಲಿದೆ.
ಶರಣ ಬಸವೇಶ್ವರ ದೇವಸ್ಥಾನ: ಪ್ರವಾಸದ ಆರಂಭವನ್ನು ಕಲಬುರಗಿಯ ಮಧ್ಯದಲ್ಲಿರುವ 12 ನೇ ಶತಮಾನದಲ್ಲಿ ಸ್ಥಾಪಿಸಲಾದ ಶರಣ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಪ್ರಾರಂಭಿಸಬಹುದು. ಇಲ್ಲಿ ಶರಣ ಬಸವೇಶ್ವರ ಸಮಾಧಿ ಇದೆ. ಈ ದೇವಸ್ಥಾನವನ್ನು ಮಕ್ಕಳಿಗೆ ತೋರಿಸುವುದರಿಂದ ಅವರಿಗೆ ಹಿಂದೂ ಮತ್ತು ಮೊಘಲ್ ವಾಸ್ತುಶಿಲ್ಪಗಳ ಪರಿಚಯ ಮಾಡಿಸಿಕೊಡಬಹುದಾಗಿದೆ.
ಹಫ್ತ್ ಗುಂಬಜ್: ಶರಣ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಬಂದೇ ನವಾಜ್ ದರ್ಗಾಕ್ಕೆ ಹೋಗುವ ದಾರಿಯಲ್ಲಿರುವ ಸಾತ್ ಗುಂಬಜ್‌ಗೆ ಭೇಟಿ ಕೊಡಿ. ಇಲ್ಲಿ 7 ಗುಂಬಜ್‌ಗಳಿವೆ. ಅವು ಬಹುಮನಿ ಸುಲ್ತಾನರು ಮತ್ತು ಅವರ ದಂಡನಾಯಕರ ಸಮಾಧಿಗಳಾಗಿವೆ. ವಿಜಯಪುರದ ಗೋಲ್‌ಗುಂಬಜ್ ಮಾದರಿಯಲ್ಲೇ ಇರುವ ಈ ಗುಂಬಜ್ ಅನ್ನು ಮಕ್ಕಳಿಗೆ ತೋರಿಸಬಹುದು.
ಬಂದೇ ನವಾಜ್ ದರ್ಗಾ: ಹಫ್ತ್ ಗುಂಬಜ್‌ನಿಂದ ನೇರವಾಗಿ ಭಾರತದ ಮಹಾನ್ ಸೂಫಿ ಸಂತರಲ್ಲಿ ಒಬ್ಬರಾದ ಹಜ್ರತ್ ಖ್ವಾಜಾ ಬಂದಾ ನವಾಜ್ ಗೆಸು ದರಜ್ ಅವರ ದರ್ಗಾವನ್ನು ತೋರಿಸಲು ಕರೆದುಕೊಂಡು ಹೋಗಬಹುದು. ಭವ್ಯವಾದ ಬಂದೇ ನವಾಜ್ ದರ್ಗಾವು ಇಂಡೋ–ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಬಹುಮನಿ ವಾಸ್ತುಶಿಲ್ಪಕಲೆಯನ್ನು ಹೊಂದಿರುವ ದರ್ಗಾದ ಗೋಡೆಯ ಮೇಲಿನ ವರ್ಣಚಿತ್ರಗಳು ಮತ್ತು ಗುಮ್ಮಟಗಳು ಅತ್ಯಾಕರ್ಷಕವಾಗಿವೆ.
ಬುದ್ಧ ವಿಹಾರ: ಬಂದೇ ನವಾಜ್ ದರ್ಗಾದಿಂದ ನೇರವಾಗಿ ಬುದ್ಧ ವಿಹಾರಕ್ಕೆ ಬೇಟಿ ಕೊಡಬಹುದು. ಇದು ಏಷ್ಯಾದ 2 ನೇ ಅತಿ ದೊಡ್ಡ ಬುದ್ಧ ವಿಹಾರವಾಗಿದೆ. ಚಿನ್ನದ ಲೇಪನ ಹೊಂದಿರುವ ಪಂಚಲೋಹದ ಬುದ್ಧನ ಮೂರ್ತಿ ದಕ್ಷಿಣ ಭಾರತದಲ್ಲೇ ಅತಿದೊಡ್ಡದಾಗಿದೆ. ವಿಶಾಲವಾದ ಪ್ರಶಾಂತ ಜಾಗದಲ್ಲಿ ನಿರ್ಮಿತವಾದ ಬುದ್ಧ ವಿಹಾರದ ಮೊದಲನೆ ಮಹಡಿಯಲ್ಲಿ ಬುದ್ಧನ ಜೀವನದ ವಿವಿಧ ಕಥೆಗಳನ್ನಾಧರಿಸಿ ಚಿತ್ರಿಸಲಾದ ಉಬ್ಬ ಶಿಲ್ಪಗಳನ್ನು ಮಕ್ಕಳಿಗೆ ತೋರಿಸಬಹುದು. ಕೆಳ ಮಹಡಿಯಲ್ಲಿರುವ ಧ್ಯಾನ ಮಂದಿರದಲ್ಲಿ ಮಕ್ಕಳ ಜೊತೆ ಕುಳಿತು ಧ್ಯಾನ ಮಾಡಬಹುದು. ಬುದ್ಧ ವಿಹಾರಕ್ಕೆ ಹೋಗುವ ದಾರಿಯ ಎರಡೂ ಕಡೆಗಳಲ್ಲಿ ಬುದ್ಧನ ಸಂದೇಶಗಳಿರುವ ಫಲಕಗಳನ್ನು ತೋರಿಸಬಹುದು.
ಕಲಬುರಗಿ ಕೋಟೆ: ಕಲಬುರಗಿ ಶೈಕ್ಷಣಿಕ ಪ್ರವಾಸದಲ್ಲಿ ಇಲ್ಲಿನ ಕೋಟೆ ಮರೆತರೆ ಹೇಗೆ? ಈ ಪ್ರಮುಖ ಐತಿಹಾಸಿಕ ಸ್ಥಳವನ್ನು ಸ್ವಲ್ಪ ಹೆಚ್ಚಿನ ಸಮಯ ತಗಲುತ್ತದೆ. ರಾಜಾ ಗುಲ್ಚಂದ್ ನಿರ್ಮಿಸಿದ್ದ ಈ ಕೋಟೆ ಬಹುಮನಿ ಸುಲ್ತಾನರಿಂದ ಪುನರ್ ನಿರ್ಮಾಣಗೊಂಡಿದೆ. ಪರ್ಷಿಯನ್ ವಾಸ್ತುಶಿಲ್ಪದಿಂದ ನಿರ್ಮಿಸಲ್ಪಟ್ಟ ಕೋಟೆಯ ಒಳಭಾಗದಲ್ಲಿ ಅರಮನೆಗಳು, ಮಸೀದಿಗಳು, ಸಮಾಧಿಗಳನ್ನು ನೋಡಬಹುದಾಗಿದೆ. ದೇಶದಲ್ಲೇ ಅತ್ಯಂತ ಉದ್ದದ ತೋಪು, ಬಾರಾ ಗಜಾ ತೋಪು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು . ಹಿಂದಿನ ಕಾಲದ ಯುದ್ಧದಲ್ಲಿ ಬಳಕೆಯಾಗುತ್ತಿದ್ದ ತೋಪುಗಳ ಚಿತ್ರಣವನ್ನು ಮಕ್ಕಳಿಗೆ ಇಲ್ಲಿ ಕಟ್ಟಿಕೊಡಬಹುದಾಗಿದೆ.
ಜಾಮಿಯಾ ಮಸೀದಿ: ಕೋಟೆಯ ಒಳಭಾಗದಲ್ಲಿರುವ ಜುಮ್ಮಾ ಮಸೀದಿಯನ್ನು ಮಕ್ಕಳಿಗೆ ಖಂಡಿತ ತೋರಿಸಬಹುದು. ಇದರ ವಿನ್ಯಾಸ ಸ್ಪೇನ್‌ನ ಕಾರ್ಡೊಬಾದ ಮಸೀದಿಗೆ ಹೋಲುತ್ತದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಬಹುಮನಿ ಸುಲ್ತಾನರ ಬಹುದೊಡ್ಡ ಕೊಡುಗೆಯಾಗಿರುವ ಈ ಮಸೀದಿ ಬೃಹತ್ ಕಮಾನುಗಳಿಂದ ಚಿತ್ತಾಕರ್ಷಕವಾಗಿದೆ. ಇಲ್ಲಿ ಕಾವಲುಗಾರರ ಕೊಠಡಿ, ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ ಕೋಣೆ ಮುಂತಾದವುಗಳನ್ನು ಮಕ್ಕಳಿಗೆ ತೋರಿಸಬಹುದು.