ಕನ್ನಡ ಸುದ್ದಿ  /  ಜೀವನಶೈಲಿ  /  Antarctic Treaty: ಭಾರತದಲ್ಲಿ ಅಂಟಾರ್ಟಿಕಾ ಒಪ್ಪಂದದ ಸಭೆ: ಹವಾಮಾನ ಸಂಶೋಧನೆಯ ಹೊಸ ಮೈಲಿಗಲ್ಲು

Antarctic Treaty: ಭಾರತದಲ್ಲಿ ಅಂಟಾರ್ಟಿಕಾ ಒಪ್ಪಂದದ ಸಭೆ: ಹವಾಮಾನ ಸಂಶೋಧನೆಯ ಹೊಸ ಮೈಲಿಗಲ್ಲು

46ನೇ ಎಟಿಸಿಎಂ ಕೇರಳದ ಕೊಚ್ಚಿಯಲ್ಲಿ ಮೇ 20ರಿಂದ 30ರ ತನಕ ನಡೆದಿದೆ. ಈ ಸಂಸತ್ತಿನಲ್ಲಿ, ಅಂಟಾರ್ಕ್‍ಟಿಕ್ ಟ್ರೀಟಿಯ 56 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾರಂಭವನ್ನು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಆ್ಯಂಡ್ ಓಶನ್ ರಿಸರ್ಚ್ (ಎನ್‌ಸಿಪಿಒಆರ್) ಆಯೋಜಿಸುತ್ತಿದೆ. (ಬರಹ: ಗಿರೀಶ್ ಲಿಂಗಣ್ಣ)

ಭಾರತದಲ್ಲಿ ಅಂಟಾರ್ಟಿಕಾ ಒಪ್ಪಂದದ ಸಭೆ: ಹವಾಮಾನ ಸಂಶೋಧನೆಯ ಹೊಸ ಮೈಲಿಗಲ್ಲು, ಗಿರೀಶ್‌ ಲಿಂಗಣ್ಣ (ಬಲಚಿತ್ರ)
ಭಾರತದಲ್ಲಿ ಅಂಟಾರ್ಟಿಕಾ ಒಪ್ಪಂದದ ಸಭೆ: ಹವಾಮಾನ ಸಂಶೋಧನೆಯ ಹೊಸ ಮೈಲಿಗಲ್ಲು, ಗಿರೀಶ್‌ ಲಿಂಗಣ್ಣ (ಬಲಚಿತ್ರ)

ಮೇ 21ರಂದು 46ನೇ ಅಂಟಾರ್ಕ್‌ಟಿಕ್ ಟ್ರೀಟಿ ಕನ್ಸಲ್ಟೇಟಿವ್ ಮೀಟಿಂಗ್ (ಎಟಿಸಿಎಂ) ನಲ್ಲಿ ಭಾರತ ಅಂಟಾರ್ಕ್‍ಟಿಕದ ವೈಜ್ಞಾನಿಕ ಸಮಗ್ರತೆಯನ್ನು ರಕ್ಷಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿತು. ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳೂ ಸಹ ಮಂಜುಗಡ್ಡೆ ಕರಗುವುದರ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಅಧ್ಯಯನ ನಡೆಸುವ ಮತ್ತು ಅಂಟಾರ್ಕ್‌ಟಿಕ ಖಂಡದಲ್ಲಿ ಪ್ರವಾಸೋದ್ಯಮವನ್ನು ನಿಯಂತ್ರಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಶೈಲೇಶ್ ನಾಯಕ್ ಅವರು ಅಂಟಾರ್ಕ್‍ಟಿಕ್ ಮಂಜುಗಡ್ಡೆಯನ್ನು ಕರಗುವಂತೆ ಮಾಡಿ, ಸಮುದ್ರ ಮಟ್ಟ ಏರುವಂತೆ ಮಾಡುವಲ್ಲಿ ಹವಾಮಾನ ಬದಲಾವಣೆಯ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.

ʼಅಂಟಾರ್ಕ್‍ಟಿಕ ಸಂಸತ್ತು ಹವಾಮಾನ ಬದಲಾವಣೆ ಮತ್ತು ಅಂಟಾರ್ಕ್‌ಟಿಕ್‌ಗೆ ಸಂಬಂಧಿಸಿದ ಗುರಿಗಳನ್ನು ಸಾಧಿಸುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಚರಿಸಲಿದೆ. ಅಂಟಾರ್ಕ್‍ಟಿಕ ಖಂಡ ಶಾಂತಿ ಮತ್ತು ವಿಜ್ಞಾನಕ್ಕೆ ಸೀಮಿತವಾದ ನೈಸರ್ಗಿಕ ಸಂಪನ್ಮೂಲವಾಗಿ ಉಳಿಯಲಿದೆ ಎಂದು ಖಾತ್ರಿಪಡಿಸಲು ಅಂಟಾರ್ಕ್‍ಟಿಕ್ ಟ್ರೀಟಿ ಸಿಸ್ಟಮ್ ಕಾರ್ಯಾಚರಿಸುತ್ತದೆʼ ಎಂದು ಶೈಲೇಶ್ ನಾಯಕ್ ಹೇಳಿದ್ದಾರೆ.

46ನೇ ಎಟಿಸಿಎಂ ಅನ್ನು ಭಾರತ ಮೇ 20ರಿಂದ 30ರ ತನಕ ಕೇರಳದ ಕೊಚ್ಚಿಯಲ್ಲಿ ಆಯೋಜಿಸಿದೆ. ಈ ಸಂಸತ್ತಿನಲ್ಲಿ, ಅಂಟಾರ್ಕ್‍ಟಿಕ್ ಟ್ರೀಟಿಯ 56 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾರಂಭವನ್ನು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಆ್ಯಂಡ್ ಓಶನ್ ರಿಸರ್ಚ್ (ಎನ್‌ಸಿಪಿಒಆರ್) ಆಯೋಜಿಸುತ್ತಿದೆ.

ಭಾರತ ಈ ಹಿಂದೆ 2007ರಲ್ಲಿ ನವದೆಹಲಿಯಲ್ಲಿ ನಡೆದ ಅಂಟಾರ್ಕ್‍ಟಿಕ್ ಟ್ರೀಟಿಯ ಅಧ್ಯಕ್ಷತೆ ವಹಿಸಿತ್ತು.

ಅಂಟಾರ್ಕ್‍ಟಿಕ್ ಟ್ರೀಟಿಗೆ ಯಾಕಿಷ್ಟು ಮಹತ್ವ?

ಮೂಲ‌ ಅಂಟಾರ್ಕ್‍ಟಿಕ್ ಒಪ್ಪಂದಕ್ಕೆ 1959ರಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ 12 ದೇಶಗಳು ಸಹಿ ಹಾಕಿದವು. ಈ ಸಂದರ್ಭದಲ್ಲಿ, ಆ ದೇಶಗಳ ವಿಜ್ಞಾನಿಗಳು 1957-58ನೇ ಸಾಲಿನಲ್ಲಿ ಅಂಟಾರ್ಕ್‍ಟಿಕದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೆಲ್ಜಿಯಂ, ಚಿಲಿ, ಫ್ರಾನ್ಸ್, ಜಪಾನ್, ನ್ಯೂಜಿಲ್ಯಾಂಡ್, ನಾರ್ವೆ, ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್‌ಡಮ್ ಹಾಗೂ ಈ ಹಿಂದಿನ ಯುಎಸ್ಎಸ್ಆರ್‌ಗಳು ಇದರ ಪ್ರಮುಖ ಸದಸ್ಯರಾಗಿದ್ದವು. ಈ ಒಪ್ಪಂದ 1961ರಲ್ಲಿ ಜಾರಿಗೆ ಬಂದ ಬಳಿಕ, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಇದರ ಸದಸ್ಯರಾದವು. ಇಂದು ಟ್ರೀಟಿ 56 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

ಒಪ್ಪಂದದ ಮೂರು ಮುಖ್ಯ ನಿಯಮಗಳು

ಅಂಟಾರ್ಕ್‍ಟಿಕ ಖಂಡದ ಪರಿಸರವನ್ನು ಸಂರಕ್ಷಿಸಲು ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಮುಂದುವರಿಸಲು ಈ ಒಪ್ಪಂದ ಮೂರು ಮುಖ್ಯ ನಿಯಮಗಳನ್ನು ಜಾರಿಗೆ ತಂದಿತು. ಅವೆಂದರೆ:

1. ಅಂಟಾರ್ಕ್‍ಟಿಕ ಖಂಡವನ್ನು ಕೇವಲ ಶಾಂತಿಯುತ ಉದ್ದೇಶಗಳಿಗೆ ಮಾತ್ರವೇ ಬಳಸಬೇಕು.

2. ವೈಜ್ಞಾನಿಕ ಅನ್ವೇಷಣೆಗಳು ಮತ್ತು ಸಹಕಾರಗಳು ಅನಿಯಂತ್ರಿತವಾಗಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು.

3. ವೈಜ್ಞಾನಿಕ ಅನ್ವೇಷಣೆಗಳು ಮತ್ತು ಅವುಗಳ ಫಲಿತಾಂಶಗಳನ್ನು ಹಂಚಿಕೊಳ್ಳಬೇಕು, ಮತ್ತು ಅವುಗಳು ಉಚಿತವಾಗಿ ಲಭ್ಯವಾಗಬೇಕು.

ಭಾರತದಲ್ಲಿ ಅಂಟಾರ್ಟಿಕಾ ಒಪ್ಪಂದದ ಸಭೆ: ಹವಾಮಾನ ಸಂಶೋಧನೆಯ ಹೊಸ ಮೈಲಿಗಲ್ಲು
ಭಾರತದಲ್ಲಿ ಅಂಟಾರ್ಟಿಕಾ ಒಪ್ಪಂದದ ಸಭೆ: ಹವಾಮಾನ ಸಂಶೋಧನೆಯ ಹೊಸ ಮೈಲಿಗಲ್ಲು (PC: National Geographic)

ಅಂಟಾರ್ಕ್‍ಟಿಕ ಖಂಡದಲ್ಲಿ ಭಾರತದ ಉಪಸ್ಥಿತಿ

ಮಂಗಳವಾರದಂದು ನಡೆದ ಸಮಾವೇಶದ ಆರಂಭಿಕ ಅವಧಿಯಲ್ಲಿ ಮಾತನಾಡಿದ ಭೂ ವಿಜ್ಞಾನ ಸಚಿವರಾದ ಕಿರಣ್ ರಿಜಿಜು ಅವರು ಭಾರತ ಅಂಟಾರ್ಕ್‍ಟಿಕ ಖಂಡದಲ್ಲಿ ಮೈತ್ರಿ-2 ಎಂಬ ಹೆಸರಿನ ತನ್ನ ಮೂರನೇ ಸಂಶೋಧನಾ ಕೇಂದ್ರವನ್ನು ಆರಂಭಿಸುವ ಯೋಜನೆ ಹೊಂದಿರುವುದಾಗಿ ವಿವರಿಸಿದರು.

ʼ1956ರಲ್ಲಿ ಭಾರತ ಅಂಟಾರ್ಕ್‍ಟಿಕ ಖಂಡವನ್ನು ಶಾಂತಿಯುತ ಉದ್ದೇಶಗಳಿಗೆ ಮಾತ್ರವೇ ಬಳಸಿಕೊಳ್ಳುವುದಾಗಿ ವಿಶ್ವಸಂಸ್ಥೆಯ 11ನೇ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ, ಅಂಟಾರ್ಕ್‍ಟಿಕದಲ್ಲಿ ಭಾರತದ ಪಾಲ್ಗೊಳ್ಳುವಿಕೆ ಆರಂಭಗೊಂಡಿತು. ಅಂಟಾರ್ಕ್‍ಟಿಕ ಖಂಡದ ಕುರಿತಂತೆ ಭಾರತದ ಬದ್ಧತೆಯನ್ನು ನಾವು ಅರ್ಥೈಸಿಕೊಂಡಿದ್ದು, ನಾವು ಜವಾಬ್ದಾರಿಯುತ ಮತ್ತು ನಿಯಂತ್ರಿತ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತೇವೆ. ಮುಂದಿನ ದಿನಗಳಲ್ಲಿ, ಭಾರತ ತನ್ನ ನೂತನ ಸಂಶೋಧನಾ ಕೇಂದ್ರವಾದ ಮೈತ್ರಿ-2 ಅನ್ನು ಆರಂಭಿಸಲಿದೆ ಎಂದು ಘೋಷಿಸಲು ನಾವು ಉತ್ಸುಕರಾಗಿದ್ದೇವೆʼ ಎಂದು ಕಿರಣ್ ರಿಜಿಜು ಹೇಳಿದರು.

ಕಳೆದ ವರ್ಷ ರಾಜ್ಯಸಭೆಯಲ್ಲಿ ಮಾತನಾಡಿದ್ದ ಕಿರಣ್ ರಿಜಿಜು ಅವರು, ಭಾರತದ ನೂತನ ಸಂಶೋಧನಾ ಕೇಂದ್ರ ಪ್ರಸ್ತುತ ಕಾರ್ಯಾಚರಿಸುತ್ತಿರುವ ಮೈತ್ರಿ ಕೇಂದ್ರದಿಂದ ಕೇವಲ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರಲಿದೆ ಎಂದಿದ್ದರು.

ಭಾರತ ಈಗ ಅಂಟಾರ್ಕ್‍ಟಿಕಾದಲ್ಲಿ ಮೈತ್ರಿ ಮತ್ತು ಭಾರತಿ ಎಂಬ ಎರಡು ಸಂಶೋಧನಾ ಕೇಂದ್ರಗಳನ್ನು ಕಾರ್ಯಾಚರಿಸುತ್ತಿದೆ. ಮೈತ್ರಿ ಕೇಂದ್ರ 1989ರಿಂದಲೇ ಸಂಶೋಧಕರಿಗೆ ಆಶ್ರಯ ನೀಡುತ್ತಿದ್ದರೆ, ಭಾರತಿ ಕೇಂದ್ರ 2013ರಿಂದ ಕಾರ್ಯಾಚರಣೆ ಆರಂಭಿಸಿತು. ಎರಡೂ ಕೇಂದ್ರಗಳು ವಾತಾವರಣ, ಜೈವಿಕ, ಭೂವೈಜ್ಞಾನಿಕ, ಮತ್ತು ಪರಿಸರೀಯ ವಿಜ್ಞಾನದಲ್ಲಿ ಸಂಶೋಧನೆಗಳನ್ನು ನಡೆಸುತ್ತಿವೆ. ಆ ಮೂಲಕ ಧ್ರುವ ಪ್ರದೇಶಗಳ ಚಟುವಟಿಕೆಗಳು, ಪ್ರಕ್ರಿಯೆಗಳು ಮತ್ತು ವಿದ್ಯಮಾನಗಳನ್ನು ಅರ್ಥೈಸಿಕೊಳ್ಳಲು ನೆರವಾಗುತ್ತಿವೆ.

ಅಂಟಾರ್ಕ್‍ಟಿಕ ಕುರಿತು ಎಲ್ಲರೂ ತಿಳಿದಿರಬೇಕಾದ ವಿಚಾರಗಳು

ಅಂಟಾರ್ಕ್‍ಟಿಕ ಒಂದು ವಿಶಿಷ್ಟವಾದ, ಮತ್ತು ಅತ್ಯಂತ ಮುಖ್ಯವಾದ ಖಂಡವಾಗಿದ್ದು, ಅದರ ಕುರಿತು ಎಲ್ಲರೂ ಜ್ಞಾನ ಹೊಂದಿರಬೇಕು. ಇದು ಭೂಮಿಯ ದಕ್ಷಿಣದ ಅತ್ಯಂತ ತುತ್ತತುದಿಯ ಭಾಗವಾಗಿದ್ದು, ಸಂಪೂರ್ಣವಾಗಿ ಮಂಜಿನ ಪದರದಿಂದ ಆವೃತವಾಗಿದೆ. ಈ ಮಂಜಿನ ಪದರ ಅತ್ಯಂತ ದಪ್ಪವಾಗಿದ್ದು, ಸರಾಸರಿ 1 ಮೈಲಿ (1.6 ಕಿಲೋಮೀಟರ್) ಆಳ ಹೊಂದಿದೆ. ಅಂಟಾರ್ಕ್‍ಟಿಕ ಖಂಡದ ಶೇ 98 ಭೂಭಾಗವನ್ನು ಮಂಜಿನ ಪದರ ಆವರಿಸಿದೆ.

ಭೂಮಿಯ ಮೇಲಿರುವ ಶೇ 90 ಮಂಜುಗಡ್ಡೆ ಮತ್ತು ಭೂಮಿಯ ಶೇ 70 ಶುದ್ಧ ನೀರು ಅಂಟಾರ್ಕ್‍ಟಿಕಾ ಖಂಡದಲ್ಲಿದೆ. ಒಂದು ವೇಳೆ, ಅಂಟಾರ್ಕ್‍ಟಿಕಾದ ಎಲ್ಲ ನೀರ್ಗಲ್ಲುಗಳು ಕರಗಿದರೆ, ಅದರಿಂದ ಭೂಮಿಯಾದ್ಯಂತ ಸಮುದ್ರಗಳ ನೀರಿನ ಮಟ್ಟ 200 ಅಡಿಗಳಷ್ಟು (60 ಮೀಟರ್) ಹೆಚ್ಚಳವಾಗಲಿದೆ. ಕರಾವಳಿ ಪ್ರದೇಶದ ನಗರಗಳು ಮತ್ತು ಸಮುದಾಯಗಳ ಮೇಲೆ ಇದು ಗಂಭೀರ ಪರಿಣಾಮಗಳನ್ನು ಬೀರಲಿದೆ.

ದಕ್ಷಿಣ ಅಮೆರಿಕದ ದೇಶಗಳಾದ ಚಿಲಿ ಮತ್ತು ಅರ್ಜೆಂಟೀನಾಗಳು ಅಂಟಾರ್ಕ್‍ಟಿಕಾ ಖಂಡಕ್ಕೆ ಅತ್ಯಂತ ಸನಿಹದಲ್ಲಿರುವ ರಾಷ್ಟ್ರಗಳಾಗಿವೆ. ಉದಾಹರಣೆಗೆ, ಅರ್ಜೆಂಟೀನಾದ ಅತ್ಯಂತ ದಕ್ಷಿಣದ ನಗರವಾದ ಉಶುವಾಯಿಯಾ ಅಂಟಾರ್ಕ್‍ಟಿಕಾದ ಉತ್ತರ ತುದಿಯಿಂದ ಕೇವಲ 774 ಮೈಲಿ (1238 ಕಿಲೋಮೀಟರ್) ದೂರದಲ್ಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳು ಅಂಟಾರ್ಕ್‍ಟಿಕಾಗೆ ಸನಿಹದಲ್ಲಿರುವ ಇತರ ದೇಶಗಳಾಗಿದ್ದು, ಮಂಜಿನ ಖಂಡದ ಕುರಿತ ಅಧ್ಯಯನ ನಡೆಸಲು ಅಪಾರ ಆಸಕ್ತಿ ಹೊಂದಿವೆ.

ಅಂಟಾರ್ಕ್‍ಟಿಕಾ ಖಂಡ ವಾಸ್ತವವಾಗಿ ನಾವು ಊಹಿಸುವುದಕ್ಕಿಂತಲೂ ಸಾಕಷ್ಟು ದೊಡ್ಡದಾಗಿದೆ. ಅಂಟಾರ್ಕ್‍ಟಿಕಾದ ದ್ವೀಪಗಳು ಮತ್ತು ನೀರ್ಗಲ್ಲುಗಳನ್ನು ಸೇರಿಸಿದರೆ, ಅಂಟಾರ್ಕ್‍ಟಿಕಾ ಅಮೆರಿಕದಿಂದ 1.5 ಪಟ್ಟು, ಆಸ್ಟ್ರೇಲಿಯಾದಿಂದ 2 ಪಟ್ಟು, ಯುನೈಟೆಡ್ ಕಿಂಗ್‌ಡಮ್‌ನಿಂದ 58 ಪಟ್ಟು ದೊಡ್ಡದಾಗಿದೆ. ಅಂಟಾರ್ಕ್‍ಟಿಕಾ 5.5 ಮಿಲಿಯನ್ ಚದರ ಮೈಲಿ (14 ಚದರ ಕಿಲೋಮೀಟರ್) ವ್ಯಾಪ್ತಿ ಹೊಂದಿದೆ.

ಅಂಟಾರ್ಕ್‍ಟಿಕಾ ಖಂಡ ವೈಜ್ಞಾನಿಕ ಸಂಶೋಧನೆಗಳಿಗೆ ಸೂಕ್ತ ತಾಣವಾಗಿದೆ. ಜಗತ್ತಿನಾದ್ಯಂತ ವಿವಿಧ ದೇಶಗಳ ವಿಜ್ಞಾನಿಗಳು ಇಲ್ಲಿಗೆ ಆಗಮಿಸಿ, ಹವಾಮಾನ ಬದಲಾವಣೆ, ಜೀವಸಂಕುಲ, ಮತ್ತು ವಿಶಿಷ್ಟ ಹವಾಮಾನದ ಕುರಿತು ಅಧ್ಯಯನ ನಡೆಸುತ್ತಾರೆ. ಹಲವಾರು ದೇಶಗಳು ಸಹಿ ಹಾಕಿರುವ ಅಂಟಾರ್ಕ್‍ಟಿಕಾ ಒಪ್ಪಂದ, ಅಂಟಾರ್ಕ್‍ಟಿಕಾ ಖಂಡವನ್ನು ಕೇವಲ ಶಾಂತಿಯುತ ಉದ್ದೇಶಗಳಿಗೆ ಮತ್ತು ವೈಜ್ಞಾನಿಕ ಅನ್ವೇಷಣೆಗಳಿಗೆ ಮಾತ್ರವೇ ಬಳಸಿ, ಖಂಡವನ್ನು ಅದರ ನೈಸರ್ಗಿಕ ಸ್ಥಿತಿಯಲ್ಲೇ ಕಾಪಾಡಿಕೊಳ್ಳಲಾಗುತ್ತದೆ ಎಂದು ಖಾತ್ರಿಪಡಿಸುತ್ತದೆ. ಅಂಟಾರ್ಕ್‍ಟಿಕಾ ಖಂಡದ ಹಗಲಿನಲ್ಲಿ ಅಸಾಧಾರಣ ಬದಲಾವಣೆಗಳು ಕಂಡುಬರುತ್ತವೆ. ಬೇಸಿಗೆ ಕಾಲದಲ್ಲಿ ನಿರಂತರ 24 ಗಂಟೆಗಳ ಹಗಲು ಇದ್ದರೆ, ಚಳಿಗಾಲದಲ್ಲಿ ನಿರಂತರವಾಗಿ 24 ಗಂಟೆಗಳ ರಾತ್ರಿ ಇರುತ್ತದೆ. ಇದು ಜೀವಿಸುವ ಪರಿಸ್ಥಿತಿ ಮತ್ತು ಸಂಶೋಧನಾ ಚಟುವಟಿಕೆಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ.

ಒಟ್ಟಾರೆಯಾಗಿ, ಅಂಟಾರ್ಕ್‍ಟಿಕಾ ಖಂಡ ಅತ್ಯಂತ ವಿಶಾಲವಾದ, ಮಂಜುಗಡ್ಡೆಯ ಖಂಡವಾಗಿದ್ದು, ಜಾಗತಿಕ ವಾತಾವರಣ ಮತ್ತು ಶುದ್ಧ ನೀರಿನ ಪೂರೈಕೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದು ವೈಜ್ಞಾನಿಕ ಅನ್ವೇಷಣೆ, ಅಂತಾರಾಷ್ಟ್ರೀಯ ಸಹಕಾರದ ತಾಣವಾಗಿದ್ದು, ಇದನ್ನು ಯಥಾರೂಪದಲ್ಲಿ ಉಳಿಸಿಕೊಳ್ಳಲು, ಶಾಂತಿಯುತ ಮತ್ತು ವೈಜ್ಞಾನಿಕ ಸಂಶೋಧನೆಗಳಿಗಾಗಿ ಮಾತ್ರವೇ ಬಳಸಿಕೊಳ್ಳುವಂತೆ ಮಾಡಲು ರೂಪಿಸಿರುವ ಒಪ್ಪಂದಗಳಿಂದ ರಕ್ಷಿಸಲ್ಪಟ್ಟಿದೆ.

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)