ಸಾವಿನಿಂದ ತಪ್ಪಿಸಿಕೊಳ್ಳಲು ದೇಹದ ಸಂರಕ್ಷಣೆ; ಏನಿದು ಕ್ರಿಯೋಪ್ರಿಸರ್ವೇಷನ್‌, ಸಾವನ್ನು ಮುಂದೂಡುವುದಾದರೂ ಹೇಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  ಸಾವಿನಿಂದ ತಪ್ಪಿಸಿಕೊಳ್ಳಲು ದೇಹದ ಸಂರಕ್ಷಣೆ; ಏನಿದು ಕ್ರಿಯೋಪ್ರಿಸರ್ವೇಷನ್‌, ಸಾವನ್ನು ಮುಂದೂಡುವುದಾದರೂ ಹೇಗೆ?

ಸಾವಿನಿಂದ ತಪ್ಪಿಸಿಕೊಳ್ಳಲು ದೇಹದ ಸಂರಕ್ಷಣೆ; ಏನಿದು ಕ್ರಿಯೋಪ್ರಿಸರ್ವೇಷನ್‌, ಸಾವನ್ನು ಮುಂದೂಡುವುದಾದರೂ ಹೇಗೆ?

ಭವಿಷ್ಯದಲ್ಲಿ ಆರೋಗ್ಯವಾಗಿ ಬದುಕುವ ಭರವಸೆಯೊಂದಿಗೆ ಮಾನವನ ದೇಹವನ್ನು ಅತಿ ಕಡಿಮೆ ತಾಪಮಾನದಲ್ಲಿ ಸಂರಕ್ಷಿಸಿಡುವ ತಂತ್ರಜ್ಞಾನ ಅಮೆರಿಕದಲ್ಲಿ ಬಳಕೆಯಲ್ಲಿದೆ. ಈಗಾಗಲೇ ಹಲವಾರು ಜನ ಫ್ರೀಸಿಂಗ್‌ನಲ್ಲಿದ್ದಾರೆ. ದೇಹವನ್ನು ಘನೀಕರಿಸಿಡುವ ಕ್ರಿಯೋಪ್ರಿಸರ್ವೇಷನ್‌ ತಂತ್ರಜ್ಞಾನದ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

ಏನಿದು ಕ್ರಿಯೋಪ್ರಿಸರ್ವೇಷನ್‌, ಸಾವನ್ನು ಮುಂದೂಡುವುದಾದರೂ ಹೇಗೆ?
ಏನಿದು ಕ್ರಿಯೋಪ್ರಿಸರ್ವೇಷನ್‌, ಸಾವನ್ನು ಮುಂದೂಡುವುದಾದರೂ ಹೇಗೆ? (Tomorrow Biostasis GmbH)

ಸಾವು ಮತ್ತು ಸಮಯ ಇವೆರಡನ್ನೂ ಮುಂದೂಡಬಹುದಾಗಿದ್ದರೆ ಹೇಗಿರುತ್ತದೆ? ನೂರಾರು ವರ್ಷಗಳವರೆಗೆ ನಿದ್ದೆಯಲ್ಲಿದ್ದು, ಎಲ್ಲಾ ರೋಗಗಳನ್ನು ಗುಣಪಡಿಸುವ ಔಷಧ, ತಂತ್ರಜ್ಞಾನಗಳಿರುವ ಭವಿಷ್ಯದಲ್ಲಿ ಎಚ್ಚರಗೊಳ್ಳುವಂತಾಗಿದ್ದರೆ? ಮರುಜೀವ ಪಡೆಯುವಂತಾಗಿದ್ದರೆ? ಈ ರೀತಿಯ ಪ್ರಶ್ನೆಗಳು ಅದೆಷ್ಟೋ ಜನರ ತಲೆಯಲ್ಲಿ ಉದ್ಭವಿಸಿರಬಹುದು. ಅದರಲ್ಲೂ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗ ಗುಣಪಡಿಸುವ ಔಷಧಗಳನ್ನು ಕಂಡು ಹಿಡಿದ ಕಾಲದಲ್ಲಿ ಎಚ್ಚರಗೊಂಡು, ಔಷಧಿ ತೆಗೆದುಕೊಂಡು ಮತ್ತೆ ಮೊದಲಿನಂತೆ ನವಚೈನತ್ಯದಿಂದ ಜೀವಿಸಬಹುದಲ್ಲವೇ. ಅದೇ ರೀತಿ ವಯಸ್ಸಾಗುವಿಕೆಯನ್ನು ತಡೆಯಲು ಅಥವಾ ನೂರಾರು ವರ್ಷ ಬಾಳಿ ಬದುಕುವ ಸಲುವಾಗಿ ಒಂದಿಷ್ಟು ವರ್ಷ ನಿದ್ದೆ ಮಾಡುವಂತಾಗಿದ್ದರೂ ನಡೆಯುತ್ತದೆ. ಹೊಸ ಕಾಲದಲ್ಲಿ ಮತ್ತೆ ಚಿರಯುವಕರಂತೆ ಜೀವಿಸಬಹುದು. ಹೀಗೆಲ್ಲಾ ಆಗಬಹುದೇ? ಹೌದು ಎನ್ನುತ್ತಿದೆ ಅಲ್ಕೋರ್‌ ಲೈಫ್‌ ಎಕ್ಸ್‌ಟೆನ್ಷನ್‌ ಫೌಂಡೇಶನ್‌.

ಯುಎಸ್‌ ಮೂಲದ ಈ ಕಂಪನಿಯು ಭವಿಷ್ಯದಲ್ಲಿ ಜೀವಿಸುವ ಭರವಸೆಯಿಂದ ಅತಿ ಕಡಿಮೆ ತಾಪಮಾನದಲ್ಲಿ ದೇಹವನ್ನು ಸಂರಕ್ಷಿಸುವ ಕ್ರಯೋನಿಕ್ಸ್‌ ಅನ್ನು ಮುನ್ನಡೆಸುವ ಕಂಪನಿಯಾಗಿದೆ.

ಕ್ರಿಯೋಪ್ರಿಸರ್ವೇಷನ್‌ ಎಂದರೇನು?

ಕ್ರಿಯೋಪ್ರಿಸರ್ವೇಷನ್‌ ಎಂದರೆ ಭವಿಷ್ಯದ ದಿನಗಳಿಗಾಗಿ ಮಾನವನ ದೇಹಗಳನ್ನು ಘನೀಕರಿಸಿ ಇಡುವಂತಹ ಕಲ್ಪನೆಯಾಗಿದೆ. ಅಂದರೆ ದೇಹವನ್ನು ಫ್ರೀಸಿಂಗ್‌ ಮಾಡುವುದು. ಈ ವಿಶಿಷ್ಟ ವಿಜ್ಞಾನವನ್ನು ಕ್ರಯೋನಿಕ್ಸ್‌ ಎಂದು ಕರೆಯಲಾಗುತ್ತದೆ. ಅತ್ಯಂತ ಕಡಿಮೆ ತಾಪಮಾನದಲ್ಲಿ ದೇಹವನ್ನು ಸಂರಕ್ಷಿಸಿಡುವ ಪ್ರಕ್ರಿಯೆ ಇದಾಗಿದೆ. ಸಮರ್ಪಕ ಔಷಧಗಳಿಲ್ಲದ ರೋಗದಿಂದ ಬಳಲುತ್ತಿರುವ ರೋಗಿಯು ಭವಿಷ್ಯದಲ್ಲಿ ಆ ರೋಗಕ್ಕೆ ಔಷಧ ದೊರೆಯುವವರೆಗೆ ಆ ರೋಗಿಯ ದೇಹವನ್ನು ಘನೀಕರಿಸಿ ಇರಿಸಿಕೊಳ್ಳುವಂತಹ ವಿಜ್ಞಾನ ಇದಾಗಿದೆ. ಇದರಲ್ಲಿ ದೇಹದ ಜೀವಕೋಶಗಳು ಮತ್ತು ಅಂಗಾಂಶಗಳು ಹಾನಿಯಾಗದಂತೆ ಕ್ರಯೋಪ್ರೊಟೆಕ್ಟರ್‌ ದ್ರಾವಣದಲ್ಲಿ ಇರಿಸಲಾಗುತ್ತದೆ. ದೇಹವನ್ನು –196 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ತಂಪಾಗಿರಿಸಲಾಗುತ್ತದೆ. ದ್ರವ ಸಾರಜನಕ ತುಂಬಿದ ನಿರ್ವಾತ ನಿರೋಧಕ ಲೋಹದ ಕಂಟೇನರ್‌ (ಕೊಳವೆ)ನಲ್ಲಿ ದೇಹವನ್ನು ಇಡಲಾಗುತ್ತದೆ.

ಕ್ರಿಯೋಪ್ರಿಸರ್ವೇಷನ್‌ಗೆ ತಗಲುವ ವೆಚ್ಚವೆಷ್ಟು?

ದೇಹವನ್ನು ಘನೀಕರಿಸಿ ಇಡುವ ಕ್ರಿಯೋಪ್ರಿಸರ್ವೇಷನ್‌ ತಂತ್ರಜ್ಞಾನವು ಸದ್ಯ ಬಲು ದುಬಾರಿಯಾಗಿದೆ. ಅಗರ್ಭ ಶ್ರೀಮಂತಿಕೆ ಇರುವ ಬಿಲಿಯನೇರ್‌ಗಳಿಗಾಗಿ ವಿಕಸನಗೊಂಡ ಪರಿಕಲ್ಪನೆ ಇದಾಗಿದೆ ಎಂದು ಯುಎಸ್‌ ಮೂಲದ ಕ್ರಯೋನಿಕ್ಸ್ ಸೌಲಭ್ಯ ಒದಗಿಸುತ್ತಿರುವ ಅಲ್ಕೋರ್ ಲೈಫ್ ಎಕ್ಸ್‌ಟೆನ್ಶನ್ ಫೌಂಡೇಶನ್‌ಗೆ ಸಂಬಂಧಿಸಿದ ವಕೀಲರಾದ ಮಾರ್ಕ್‌ ಹೌಸ್‌ ಹೇಳುತ್ತಾರೆ. ‌

ಈ ಸೌಲಭ್ಯವು ಸದ್ಯ 1,400 ಜನರಿಗಾಗಿ ಮಾತ್ರ ಲಭ್ಯವಿದೆ. ಈಗಾಗಾಲೇ 230 ಜನರನ್ನು ಘನೀಕರಿಸಿ ಇಡಲಾಗಿದೆ. ಜಾಗತಿಕವಾಗಿ ಸುಮಾರು 500 ವ್ಯಕ್ತಿಗಳನ್ನು ಹೀಗೆ ಸಂರಕ್ಷಿಸಿಡಲಾಗಿದೆ. ಇವರಲ್ಲಿ ಹೆಚ್ಚಿನವರು ಯುನೈಟೆಡ್‌ ಸ್ಟೇಟ್ಸ್‌ನವರು. ಅಲ್ಕೋರ್‌ನಲ್ಲಿ ಸಂಪೂರ್ಣ ದೇಹವನ್ನು ಕ್ರಿಯೋಪ್ರಿಸರ್ವೇಷನ್‌ ಮಾಡಲು ತಗುಲುವ ವೆಚ್ಚ ಬರೋಬ್ಬರಿ 220,000 ಡಾಲರ್‌. ಅಂದರೆ ಸುಮಾರು 1.8 ಕೋಟಿ ರೂಪಾಯಿ. ಇದರಲ್ಲಿ ಇನ್ನೊಂದು ಆಯ್ಕೆ ಇದೆ. ಮೆದುಳನ್ನು ಮಾತ್ರ ಘನೀಕರಿಸುವುದಕ್ಕೆ 80,000 ಡಾಲರ್‌ (ಸುಮಾರು 67 ಲಕ್ಷ ರೂ.) ಇದಕ್ಕೆ ನ್ಯೂರೋಕ್ರಿಯೋಪ್ರಿಸರ್ವೇಷನ್‌ ಎಂದು ಕರೆಯುತ್ತಾರೆ.

ಕ್ರಯೋನಿಕ್ಸ್‌ ಸುತ್ತ ಎದ್ದಿರುವ ಪ್ರಶ್ನೆಗಳು

ಕ್ರಿಯೋಪ್ರಿಸರ್ವೇಷನ್‌ ಮತ್ತು ರಿವೈವಲ್‌ ಟ್ರಸ್ಟ್‌ ಪರಿಕಲ್ಪನೆಯು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ದೇಹವನ್ನು ಕ್ರಯೋನಿಕ್ಸ್‌ ಆಗಿ ಸಂರಕ್ಷಿಸಿದಾಗ ಅವರು ಮರಣ ಹೊಂದಿದ್ದಾರೆ ಎಂದು ಪರಿಗಣಿಸಲಾಗುತ್ತದೆಯೇ? ಭವಿಷ್ಯದಲ್ಲಿ ಮರುಜೀವ ಪಡೆದುಕೊಂಡ ನಂತರ ಕಾನೂನುಬದ್ಧವಾಗಿ ಅವರು ಅದೇ ವ್ಯಕ್ತಿಗಳಾಗಿರುತ್ತಾರೆಯೇ? ಹೀಗೆ ಕ್ರಯೋನಿಕ್ಸ್‌ ಸುತ್ತ ಮುಂತಾದ ಪ್ರಶ್ನೆಗಳು ಎದ್ದಿವೆ.

Whats_app_banner