Moon Illusion: ಎಲ್ಲ ದೇಶಗಳಲ್ಲೂ ಚಂದ್ರ ಒಂದೇ ಥರ ಕಾಣ್ತಾನಾ? ಇದರಲ್ಲೇನು ಸೋಜಿಗ; ಉತ್ತರಿಸಿದ್ದಾರೆ ವೈಎನ್ ಮಧು
ಕನ್ನಡ ಸುದ್ದಿ  /  ಜೀವನಶೈಲಿ  /  Moon Illusion: ಎಲ್ಲ ದೇಶಗಳಲ್ಲೂ ಚಂದ್ರ ಒಂದೇ ಥರ ಕಾಣ್ತಾನಾ? ಇದರಲ್ಲೇನು ಸೋಜಿಗ; ಉತ್ತರಿಸಿದ್ದಾರೆ ವೈಎನ್ ಮಧು

Moon Illusion: ಎಲ್ಲ ದೇಶಗಳಲ್ಲೂ ಚಂದ್ರ ಒಂದೇ ಥರ ಕಾಣ್ತಾನಾ? ಇದರಲ್ಲೇನು ಸೋಜಿಗ; ಉತ್ತರಿಸಿದ್ದಾರೆ ವೈಎನ್ ಮಧು

Facts about moon: ನಮಗೆ ಚಂದಿರನ ಬಗೆಗಿರುವ ಭ್ರಮೆ (ಮೂನ್ ಇಲ್ಯೂಶನ್) ಬಗ್ಗೆ ಲೇಖಕ ವೈಎನ್ ಮಧು ಅವರ ಬರಹ ಇಲ್ಲಿದೆ. ಫೇಸ್‌ಬುಕ್‌ನಲ್ಲಿದ್ದ ಅವರ ಮೌಲಿಕ ಬರಹ ಹೆಚ್ಚು ಜನರನ್ನು ತಲುಪಲಿ ಎನ್ನುವ ಕಾರಣಕ್ಕೆ ಮರುಪ್ರಕಟಿಸಲಾಗಿದೆ.

ಬೆಟ್ಟದ ಹಿಂದಿರುವ ಚಂದ್ರ (facebook/Madhu YN)
ಬೆಟ್ಟದ ಹಿಂದಿರುವ ಚಂದ್ರ (facebook/Madhu YN)

ನೀವು ಅಲ್ಲಿ ಇಲ್ಲಿ ಚಂದ್ರನ ಫೋಟೋಗಳನ್ನು ನೋಡಿರ್ತೀರಿ. ಬೆಟ್ಟದ ಹಿಂದೆಯೋ ಸಮುದ್ರದ ಹಿನ್ನೆಲೆಯಲ್ಲಿಯೋ ಬೃಹತ್ ಗಾತ್ರದ ಚಂದ್ರ ಇರುವುದನ್ನು. ಅಂದ್ಕೊಂಡಿರ್ತೀರಿ ಬಹುಶಃ ಇಂತಹ ಫೋಟೊಗಳನ್ನು ಯುರೋಪ್ ಕೆನಡಾ ಮುಂತಾದ ದೇಶಗಳಲ್ಲಿ ತೆಗೆದಿರ್ತಾರೆ ಯಾಕಂದರೆ ಆ ದೇಶಗಳು ಉತ್ತರ ಧೃವಕ್ಕೆ ಹತ್ತಿರದಲ್ಲಿವೆ ಎಂದು. ಉತ್ತರ ಅಥವಾ ದಕ್ಷಿಣ ಧೃವಗಳ ಕಡೆ ಹೋದಂತೆಲ್ಲಾ ಚಂದ್ರನ ಗಾತ್ರ ನೋಡಲು ದಪ್ಪದಾಗುತ್ತಾ ಹೋಗುತ್ತದೆ ಎಂದು.

ಇದು ತಪ್ಪು ಗ್ರಹಿಕೆ. ಚಂದ್ರ ನಮ್ಮ ದೇಶಗಳಲ್ಲಿ ಎಷ್ಟು ಗಾತ್ರ ಕಾಣ್ತಾನೋ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಅಷ್ಟೇ ಗಾತ್ರ ಕಾಣುತ್ತಾನೆ. ಹಾಗಾದರೆ ಈ ಫೋಟೋಗಳು ತೋರಿಸುತ್ತಿರುವುದೇನು? ಉತ್ತರ- ಕ್ಯಾಮರಾ ಚಮತ್ಕಾರ! ವೃತ್ತಿಪರ ಫೊಟೊಗ್ರಾಫರುಗಳು ಮುನ್ನಲೆಯ ಗಾತ್ರ ತಗ್ಗಿಸಿ ಹಿನ್ನೆಲೆಯನ್ನು ಜೂಮ್ ಮಾಡಿ ಅಂತಹ ಫೋಟೋ ಸೆರೆಹಿಡಿಯುತ್ತಾರೆ. ಆದರೆ ಬರಹದ ಹೆಡ್ಡಿಂಗಲ್ಲಿರುವ ಮೂನ್ ಇಲ್ಯೂಶನ್ ಅಂದರೆ ಇದಲ್ಲ. ನಾವೆಲ್ಲ ಇದನ್ನು ಗಮನಿಸಿಯೇ ಇರ್ತೇವೆ. ಸೂರ್ಯ ಚಂದ್ರರು ಹುಟ್ಟುವಾಗ ಮತ್ತು ಮುಳುಗುವಾಗ ದೊಡ್ಡ ಗಾತ್ರದಲ್ಲಿ ಕಾಣಿಸ್ತಾರೆ. ನೆತ್ತಿ ಮೇಲಿದ್ದಾಗ ಪುಟ್ಟದಾಗಿ ಕಾಣಿಸ್ತಾರೆ. ಅಲ್ವ. ಎಂತಹ ನಿಚ್ಛಳ ಸತ್ಯ ಇದು ಅನ್ಸುತ್ತೆ. ಆದರೂ ಹೇಳಲೇಬೇಕು ಇದು ನಮ್ಮ ಭ್ರಮೆ ಎಂದು!

ಬೇಕಿದ್ದರೆ ಈ ಪ್ರಶ್ನೆ ಮನಸಿನಲ್ಲಿಟ್ಟುಕೊಂಡು ಒಂದು ರಾತ್ರಿ ಕೂತು ಚಂದ್ರನನ್ನು ಅಳತೆ ಮಾಡಿ ನೋಡಿ. ಹೇಗೆ ಅಳೆಯುವುದು ? ಒಂದು ಊದಗಳಪಿ ಅಥವಾ ಪೈಪು ತಗೊಳ್ಳಿ. ಅದರ ಮೂಲಕ ಚಂದ್ರನನ್ನು ಬೇರೆ ಬೇರೆ ಸಮಯಗಳಲ್ಲಿ ನೋಡಿ. ಹಾಗೆ ನೋಡಿದಾಗ ಆತ ನಿಜವಾಗಿ ದಪ್ಪ ಅಥವಾ ಸಣ್ಣ ಆಗಿದ್ದರೆ ಗಳಪಿಯೊಳಗೆ ಆತನ ಗಾತ್ರ ಹಿಗ್ಗಿರಬೇಕು ಅಥವಾ ಕುಗ್ಗಿರಬೇಕು. ಆಗಿರಲ್ಲ ಎಂಬುದೇ ವೈಜ್ಞಾನಿಕ ಸತ್ಯ. ಇದನ್ನೇ ಮೂನ್ ಇಲ್ಯೂಶನ್ ಎಂದು ಕರೆಯುತ್ತಾರೆ. ಚಂದ್ರನ ಬಗೆಗಿರುವ ಭ್ರಮೆ ಎಂದು. ಮತ್ತು ಇದಕ್ಕೆ ಕಾರಣ ಏನಂದಿರಾ? ಜಗತ್ತಿನ ಯಾವ ವಿಜ್ಞಾನಿಗಳಿಗೂ ಗೊತ್ತಿಲ್ಲ! ಇದಕ್ಕಾಗಿ ಇರಬಹುದು ಎಂಬ ಊಹೆಗಳಿವೆ ಹೊರತು ಇದೇ ಕಾರಣ ಎಂದು ಯಾರಲ್ಲಿಯೂ ಖಚಿತ‌ ಉತ್ತರವಿಲ್ಲ. ವಿಜ್ಞಾನಿಗಳಲ್ಲೇ ಎರಡು ಗುಂಪುಗಳಿವೆ. ಒಂದು ಹೇಳತ್ತೆ ಇದು ದೃಷ್ಟಿಯ ಭ್ರಮೆ ಎಂದು ಇನ್ನೊಂದು‌ ಹೇಳತ್ತೆ ಇಲ್ಲ ಇದು ಬೌದ್ಧಿಕ ಅಥವಾ ಮಾನಸಿಕ ಭ್ರಮೆಯೆಂದು.

ದೃಷ್ಟಿಯ ಭ್ರಮೆ ಎಂದರೆ- ಇಂದ್ರಿಯವಾಗಿ ನಮ್ಮ ಕಣ್ಣು ಮೋಸ ಹೋಗುವುದು. ತಾಳ್ಮೆಯಿಂದ ಕೇಳಿ. ನಮಗೆ ಆಕಾಶ ಅಂದರೆ ಒಂದು ರೀತಿ ಮನೆಯ ಸೂರಿನಂತೆ ಎಂಬ ಭಾವನೆ. ಹಾಗಾಗಿ ದಿಗಂತದ ಆಕಾಶ ಕೋಣೆಯ ಮೂಲೆ ಇದ್ದ ಹಾಗೆ ದೂರ ಅನ್ಸುತ್ತೆ. ನೆತ್ತಿ ಮೇಲಿನ ಆಕಾಶ ಹತ್ತಿರ ಅನ್ಸುತ್ತೆ. ಅನ್ಸತ್ತಷ್ಟೇ, ಭೌತಿಕವಾಗಿ ಆಕಾಶ ಅದರ ಪಾಡಿಗೆ ಅದು ಭೂಮಿ ಮೇಲಿನ ಎಲ್ಲಾ ಬಿಂದುಗಳಿಂದಲೂ ಸಮಾನ ಅಂತರ ಕಾಯ್ದುಕೊಂಡು ಲಕ್ಷಾಂತರ ಕಿಲೋಮೀಟರ್ ದೂರ ಇರತ್ತೆ. ಎವರೆಸ್ಟ್ ಮೇಲೆ ನಿಂತರೆ ಎಂಟು ಕಿಲೋಮೀಟರು ಹತ್ತಿರವಾಗಬಹುದೇನೊ ಆದರೆ ಅದು ನಗಣ್ಯ. ಹೀಗಿರುವಾಗ ದೂರ ಇರುವ ವಸ್ತುಗಳು ಚಿಕ್ಕದಾಗಿ ಕಂಡು ಹತ್ತಿರವಿರುವ ವಸ್ತುಗಳು ದೊಡ್ಡದಾಗಿ ಕಾಣ್ಬೇಕಲ್ವ? ದೂರದ ಬೆಟ್ಟಗಳು ಇದ್ದ ಹಾಗೆ? ಇಲ್ಲಿ ಉಲ್ಟಾ ಆಯ್ತಲ ದಿಗಂತ ದೂರ ಇದೆ ಅನಿಸಿಯೂ ಅಲ್ಲಿನ ಚಂದ್ರ ದೊಡ್ಡದಾಗಿ ಕಾಣ್ತಾನೆ!

ಇದು ಹೇಗೆಂದರೆ ನಮ್ಮ ಕಣ್ಣಿಗೆ ಚಂದ್ರನ ಗಾತ್ರ ನೆತ್ತಿ ಮೇಲೆ ಇದ್ದಾಗ ಎಷ್ಟಿತ್ತೊ ದಿಗಂತದಲ್ಲೂ ಅಷ್ಟೇ ಇತ್ತು ಅಂತ ನಿಜ ಗೊತ್ತಾಗ್ಬಿಟಿದೆ ಅಂದ್ಕೊಳ್ಳಿ. ಹಂಗೆ ಗೊತ್ತಾದ ಮೇಲೆ ಅದಕ್ಕೆ ಇನ್ನೊಂದು ವಿಷಯ ಸಹ ಗೊತ್ತಿದೆ. ದಿಗಂತ ದೂರ ಇದೆ ಎಂದು. ಮತ್ತು ದೂರ ಇರುವ ವಸ್ತುಗಳು ಚಿಕ್ಕದಾಗಿ ಕಾಣ್ಬೇಕು ಎಂದು. ಆದರೆ ಈ ಕಳ್ಳ ಚಂದಿರ ದೂರ ಇದ್ದೂ ಅಷ್ಟೇ ಗಾತ್ರ ಇದಾನೆ. ಆಗ ಕಣ್ಣು ಅಂದ್ಕೊಳ್ತತ್ತೆ ಓಹೋ ಇದು ಅಷ್ಟ್ ದೂರ ಹೋದ್ರೂ ಇನ್ನು ಅಷ್ಟೇ ಗಾತ್ರ ಕಾಣಿಸ್ತದಲ್ಲ ಇನ್ನು ನಿಜ ನಿಜವಾಗಿ ಇನ್ನೆಷ್ಟು ಗಾತ್ರ ಇರಬಹುದು ಅಂತ. ಆಗ ಕಣ್ಣು ಭ್ರಮೆಗೆ ಬೀಳತ್ತೆ ದೂರದಲ್ಲಿ ಕಾಣ್ತಿರುವ ಚಂದ್ರ ಬಹಳ ದೊಡ್ದಾಗಿದಾನೆ ಎಂದು!

ಇನ್ನೊಂದು ಕಾರಣ ಹೇಳ್ತಾರೆ ಬಹುಶಃ ದಿಗಂತದ ಚಂದ್ರನ ಬಳಿ ಬೆಟ್ಟಗುಡ್ಡ ಮರಗಿಡ ಕಾಣ್ಸೋದರಿಂದ ನಮಗೆ ಗಾತ್ರ ಹೋಲಿಕೆಗೆ ಸಿಕ್ಕಿ ನೆತ್ತಿ ಮೇಲಿನ ಚಂದ್ರನ ಅಡ್ಡ ಏನೂ ಇಲ್ದೇ ಇರೋದರಿಂದ ಗಾತ್ರ ಹೋಲಿಕೆಗೆ ಸಿಗದೆ ದಿಗಂತದ ಚಂದ್ರ ದೊಡ್ಡದೆನಿಸುತ್ತದೆ ಎಂದು. ಈ ವಾದಕ್ಕೆ ಬಲ ಇಲ್ಲ ಯಾಕಂದರೆ ಗಗನಯಾತ್ರಿಗಳಿಗೂ ಅಂತರಿಕ್ಷದಲ್ಲಿ ಇದೇ ಭ್ರಮೆ ಕಾಡತ್ತೆ! ಯಾವ ಬೆಟ್ಟಗುಡ್ಡ ಅಡ್ಡ ಇರದೇನೆ. ಇದನ್ನು ಕೆಲವರು ಬೌದ್ಧಿಕ ಭ್ರಮೆ ಅನ್ನೋರೂ ಇದಾರೆ. ಅಂದರೆ ಇಲ್ಲ ಕಣ್ಣಲ್ಲ ಮೋಸ‌ಹೋಗಿದ್ದು ಬುದ್ಧಿ ಅಂತ. ಕಣ್ಣು ಸರಿಯಾಗಿಯೇ ನೋಡಿ ಮೆದುಳಿಗೆ ಮಾಹಿತಿಯನ್ನ ಕೊಡುತ್ತೆ ಮೆದುಳು ಪರಪಟ್ ಮಾಡ್ಕೊಳುತ್ತೆ ಎಂದು. ಓಪನ್‌ ಹೀಮರ್ ಈ ಸಾಲಿಗೆ ಬರ್ತಾನೆ. ನಮಗೆ ದಿಗಂತದಲ್ಲಿರುವುದೆಲ್ಲವೂ ದೊಡ್ಡದೇ ನೆತ್ತಿ ಮೇಲಿನದೆಲ್ಲವೂ ಚಿಕ್ಕದೇ ಎಂದು ಮೆದುಳಿಗೆ ಟ್ರೈನಿಂಗ್ ಆಗಿ ಆಗಿ ಚಂದ್ರ ಸಹ ಹಾಗೆ ಕಾಣ್ತಾನೆ ಎಂದು.

ಮಜ ಏನಂದರೆ ಇದನ್ನು ಯಾರು ಯೋಚಿಸಿದರೂ ಅರೆ ಇದು ಹೇಗೆ, ಇದು ಯಾಕೆ, ಇದು ಹೀಗಿರಬಹುದಾ ಎಂದು ಅವರವರದೇ ಥಿಯರಿ ಹುಟ್ಕೊಳುತ್ತೆ. ಇದು ಕಣ್ಣಿನ ಭ್ರಮೆಯಾ ಮೆದುಳಿನ ಭ್ರಮೆಯಾ ಎರಡೂ ಮಿಕ್ಸಾ ಅನ್ನೋದೇ ಇನ್ನೊಂದು ಪಜಲ್ ಆಗತ್ತೆ. ವೃತ್ತಿಪರ ಫೋಟೋಗ್ರಫರುಗಳು ದಿಗಂತದ ಚಂದ್ರನನ್ನು ಇನ್ನಷ್ಟು ಹಿಗ್ಗಸಿ ನಮ್ಮ ಭ್ರಮೆಯನ್ನು ನೂರ್ಪಟ್ಟು ಹೆಚ್ಚಿಸುತ್ತಾರೆ. Art is an exaggeration ಅಂತಾರಲ್ಲ ಹಾಗೆ.

ಕೊನೆಯದಾಗಿ ಮೂನ್ ಇಲ್ಯೂಶನ್ ಇದ್ದ ಹಾಗೆ ಸನ್ ಇಲ್ಯೂಶನ್ ಸಹ ಇದೆ. ಇದೇ ಕಾರಣಗಳು ಇದೇ ಥಿಯರಿಗಳು. ಆದರೆ ಸೂರ್ಯನ ವಿಷಯದಲ್ಲಿ ಇನ್ನೊಂದು ಅಂಶ ಸೇರಿಕೊಳ್ಳುತ್ತದೆ. ಸೂರ್ಯ ದಿಗಂತದಲ್ಲಿ ಪ್ರಶಾಂತವಾಗಿಯೂ ನೆತ್ತಿ ಮೇಲೆ ಪ್ರಖರವಾಗಿಯೂ ಇದ್ದು ಪ್ರಶಾಂತತೆಯಲ್ಲಿ ನುಣುಪಾಗಿ ಕಾಣ್ತಾನೆ ಪ್ರಖರ ರೂಪದಲ್ಲಿ ಆತನ ಅಂಚು ಕಣ್ಣಿಗೆ ಗೋಚರಿಸಲ್ಲ. ಆದಾಗ್ಯೂ, ಈ ಗ್ರಹಣ ನೋಡುವ ಕನ್ನಡಕ ಹಾಕಿ ನೋಡಿದಾಗ ನೆತ್ತಿ ಮೇಲೆಯೂ ದಿಗಂತ ಗಾತ್ರದಷ್ಟೇ ಇರುತ್ತಾನೆ ಎಂಬುದು ಗೋಚರಿಸುತ್ತದೆ.

ಪೂರಕವಾಗಿ ಇನ್ನೊಂದು ಮಾಹಿತಿ. ಸೂರ್ಯ ಯಾಕೆ ದಿಗಂತದಲ್ಲಿ ಕೆಂಪಾಗಿ ಕಾಣ್ತಾನೆ ಅಂತ. ಸೂರ್ಯನ ಕಿರಣಗಳು ಭೂಮಿಯ ವಾತಾವರಣವನ್ನು ಹಿಮ್ಮೆಟ್ಟಿ ನಮ್ಮನ್ನು ತಲುಪುತ್ತವೆ. ಹೀಗಿರುವಾಗ ಆತ ದಿಗಂತದಲ್ಲಿದ್ದಾಗ ಆತನ ಕಿರಣಗಳು ಹಿಮ್ಮೆಟ್ಟಬೇಕಾದ ವಾತಾವರಣದ ಗಾತ್ರ ದೊಡ್ಡದಾಗುತ್ತದೆ. (ಆಕಾಶ ಅಷ್ಟೇ ದೂರ, ಸೂರ್ಯ ಅಷ್ಟೇ ದೂರ....ಛೇದಿಸಬೇಕಾದ ವಾತಾವರಣದ ಗಾತ್ರ ದಲ್ಲಿ ಏರುಪೇರು). ಹಂಗಾದಾಗ ಆತನ‌ ಕಿರಣಗಳು ವಾತಾವರಣದಲ್ಲಿ ಕದರಿಕೊಂಡು ವೀಕ್ ಆಗುತ್ತವೆ. ಹಂಗೆ ಪ್ರಖರ ಸೂರ್ಯ ವೀಕ್‌ ಆದದ್ದು ನಮಗೆ ತಂಪೆನಿಸುತ್ತದೆ ಅಷ್ಟೇ. ಇದನ್ನೇ ರೇಲಿಗ್ ಸ್ಕ್ಯಾಟರಿಂಗ್ ಅಂತ ಕರಿತಾರೆ.

Whats_app_banner