ಇದು ಪ್ಲಾಸ್ಟಿಕ್ ಪ್ರಪಂಚ: ನಮ್ಮ ಬದುಕಿನ ಬಹುವ್ಯಾಪಿ, ಬಹುರೂಪಿ ಪ್ಲಾಸ್ಟಿಕ್ ಬಗ್ಗೆ ತಿಳಿದಿರಬೇಕಾದ ವೈಜ್ಞಾನಿಕ ಮಾಹಿತಿ ಇದು -ಜ್ಞಾನ ವಿಜ್ಞಾನ
ಎಚ್.ಎ.ಪುರುಷೋತ್ತಮ ರಾವ್ ಬರಹ: ದಿನಬಳಕೆಯ ವಸ್ತುಗಳಾದ ಬಟ್ಟೆಯ ಗುಂಡಿ, ಬಾಚಣಿಕೆಯಿಂದ ಹಿಡಿದು ವ್ಯೋಮಯಾನದ ಸೂಕ್ಷ್ಮ ಸಾಮಗ್ರಿಗಳವರೆಗೆ ಜನಜೀವನದಲ್ಲಿ ಇದು ಸೇರಿ ಹೋಗಿರುವ ಪ್ಲಾಸ್ಟಿಕ್‌ನ ಆವಿಷ್ಕಾರ ಹೇಗಾಯಿತು? ಪ್ಲಾಸ್ಟಿಕ್‌ನಲ್ಲಿ ಎಷ್ಟು ವಿಧಗಳಿವೆ? -ಇಲ್ಲಿದೆ ವಿವರ
ಮಾನವ ಇತಿಹಾಸದಲ್ಲಿ “ಹಳೇ ಶಿಲಾಯುಗ” “ಹೊಸ ಶಿಲಾಯುಗ”ಗಳು ಇವೆಲ್ಲ ಪ್ರಮುಖ ಘಟ್ಟಗಳು. ಈ ವಿಂಗಡಣೆಗೆ ಬಳಕೆಯೇ ಆಧಾರ. ನಂತರದಲ್ಲಿ “ಕಬ್ಬಿಣದ ಯುಗ” “ಉಕ್ಕಿನ ಯುಗ” ಹೀಗೆ ಅನೇಕ ಹೆಸರಿನಿಂದ ಕರೆಯಲ್ಪಟ್ಟ ಯುಗಗಳೂ ಇವೆ. ಇಂದು ನಾಗರಿಕ ಬದುಕಿನ ಮೂಲೆ ಮೂಲೆಗಳಲ್ಲೂ ಸೇರಿಹೋಗಿರುವ ಪ್ಲಾಸ್ಟಿಕ್ ನಿಜಕ್ಕೂ ಮಾನವ ನಿರ್ಮಿತ ಅದ್ಭುತವೇ ಸರಿ. ಪ್ಲಾಸ್ಟಿಕ್ ಪದವು “ಪ್ಲಾಸ್ಟಿಕೋಸ್" ಎಂಬ ಗ್ರೀಕ್ ಶಬ್ದದಿಂದ ಬಂದಿದೆ. ಇದರ ಅರ್ಥ "ಎರಕ ಹುಯ್ಯಲು ಸಾಧ್ಯವಾದುದು” ಎಂದು. ಇದು ಮೊದಲು ಬಳಕೆಗೆ ಬಂದ ಪ್ರಸಂಗವೂ ಕುತೂಹಲಕಾರಿ.
ಅಮೇರಿಕಾದ ಅಂತರ್ಯುದ್ದದ ಪರಿಣಾಮವಾಗಿ ದಂತದ ಬೆಲೆಯು ವಿಪರೀತವಾಗಿ ಹೆಚ್ಚಿದಾಗ ನ್ಯೂಯಾರ್ಕಿನ ಕಂಪನಿಯೊಂದು ಬಿಲಿಯರ್ಡ್ಸ್ ಚೆಂಡುಗಳ ತಯಾರಿಕೆಗೆ ದಂತಕ್ಕೆ ಬದಲಾಗಿ ಪರ್ಯಾಯ ವಸ್ತುವನ್ನು ಕಂಡು ಹಿಡಿದವರಿಗೆ ಬಹುಮಾನ ಘೋಷಿಸಿತು. ಪರಿಣಾಮವಾಗಿ 1868 ರಲ್ಲಿ ಜಾನ್ ವೆಸ್ಲಿ ಹಯಾಟ್ ಸೆಲ್ಯುಲೋಸ್ ನೈಟ್ರೇಟ್‌ನಿಂದ ಒಂದು ಚೆಂಡು ತಯಾರಿಸಿದ. ಇದಕ್ಕೆ ಕರ್ಪೂರ ಸೇರಿಸಿ ಎರಕ ಹೊಯ್ಯಲು ಸುಲಭವಾಗುತ್ತದೆಂದೂ ಕಂಡುಕೊಂಡ. ಇದೇ ಮಾನವ ನಿರ್ಮಿತ ಮೊದಲ ಪ್ಲಾಸ್ಟಿಕ್ ಎನಿಸಿಕೊಂಡಿದೆ. ಮತ್ತೆ ಹಲವು ದಾಖಲೆಗಳು ಪ್ಲಾಸ್ಟಿಕ್ 1835ಕ್ಕಿಂತ ಹಿಂದೆಯೇ ತಿಳಿದಿತ್ತು ಎಂದಿದೆ. ಇದೇನೇ ಇದ್ದರೂ 1907ರಲ್ಲಿ ಬೇಕ್ ಲ್ಯಾಂಡ್ ಸಂಪೂರ್ಣ ಸಂಶ್ಲೇಷಿತ ಪ್ಲಾಸ್ಟಿಕ್ ತಯಾರಿಸಿದ ನಂತರವೇ ಈ ದಿಶೆಯಲ್ಲಿ ನೂತನ ಆವಿಷ್ಕಾರಗಳು ಉಂಟಾಗಲು ಸಾದ್ಯವಾಯಿತು.
ಪ್ಲಾಸ್ಟಿಕ್ ಎನ್ನುವುದು ರಾಸಾಯನಿಕವಾಗಿ ಒಂದು ಕಾರ್ಬನಿಕ್ ವಸ್ತು. ಇದರ ಮೂಲ ನೈಸರ್ಗಿಕ ಪದಾರ್ಥಗಳೇ ಆಗಿದ್ದರೂ ವಾಸ್ತವವಾಗಿ ಇದು ಸಂಶ್ಲೇಷಿತ ಪದಾರ್ಥವೇ ಆಗಿದೆ. ರಾಳ ಅಥವಾ ರೆಸಿನ್‌ಗಳಿಗಿಂತ ಅಧಿಕ ಅಣು ತೂಕ ಮತ್ತು ಗಡಸುತನವನ್ನು ಹೊಂದಿದೆ. ಇದರಲ್ಲಿನ ಅಣುಗಳು ಪಾಲಿಮರ್‌ಗಳೆಂಬ ಬೃಹತ್ ಅಣುಗಳು. ಇವು ಮಾನೋಮರ್‌ಗಳೆಂಬ ಸಣ್ಣಸಣ್ಣ ಕಾರ್ಬನ್ ಅಣುಗಳೊಂದಿಗೆ ಸೇರಿ ಆದ ದೊಡ್ಡ ಅಣುಗಳು.
ಪ್ಲಾಸ್ಟಿಕ್ ಬಳಕೆ ಈಗ ಸರ್ವವ್ಯಾಪಿ
ಪ್ರಕೃತಿ ದತ್ತವಾಗಿ ಹತ್ತಿ, ನಾರುಗಳಲ್ಲಿ ದೊರೆಯುವ ಸೆಲ್ಯುಲೋಸ್‌ಗಳನ್ನೂ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವುದುಂಟು. ಆದರೂ ಸಾಮಾನ್ಯವಾಗಿ ಪ್ಲಾಸ್ಟಿಕ್ ಅನ್ನು ಸರಳ ಕಾರ್ಬನ್ ಸಂಯುಕ್ತಗಳಿಂದಲೇ ತಯಾರಾಗುತ್ತಿದೆ. ರೆಸಿನ್‌ನಿಂದ ತಯಾರಾಗುವ ಪ್ಲಾಸ್ಟಿಕ್‌ನಲ್ಲಿ ತಯಾರಿಕೆಯ ಹಂತದಲ್ಲಿಯೇ ಹಲವು ವಸ್ತುಗಳನ್ನು ಸೇರಿಸಿದಾಗ ಅದಕ್ಕೆ ವಿಶಿಷ್ಟಗುಣಗಳು ಬರುತ್ತವೆ. ಉದಾಹರಣೆಗೆ ಆಸ್ ಬೆಸ್ಟಾರ್ (ಕಲ್ನಾರು) ಸೇರಿಸಿದರೆ ಪ್ಲಾಸ್ಟಿಕ್ ಅಗ್ನಿನಿರೋಧಕವಾಗುತ್ತದೆ. ಮೈಕಾ ಸೇರಿಸಿದರೆ “ಗಟ್ಟಿತನ” ಬರುತ್ತದೆ.
ಇಂದು ಪ್ಲಾಸ್ಟಿಕ್‌ನ ಬಳಕೆ ವ್ಯಾಪಕವಾಗಿದೆ. ಬಹುಶಃ ಪ್ಲಾಸ್ಟಿಕ್ ಇಲ್ಲದ ಮನೆಯೇ ಇಲ್ಲ ಎನ್ನಬಹುದಾಗಿದೆ. ದಿನಬಳಕೆಯ ವಸ್ತುಗಳಾದ ಬಟ್ಟೆಯ ಗುಂಡಿ, ಬಾಚಣಿಕೆಯಿಂದ ಹಿಡಿದು ವ್ಯೋಮಯಾನದ ಸೂಕ್ಷ್ಮ ಸಾಮಗ್ರಿಗಳವರೆಗೆ ಜನ ಜೀವನದಲ್ಲಿ ಇದು ಸೇರಿ ಹೋಗಿದೆ. ಗಾಜಿನ ಬದಲಿಗೆ ಅಷ್ಟೇ ಪಾರದರ್ಶಕವಾದ ಹಾಗೂ ಇನ್ನೂ ಹೆಚ್ಚು ಬಲಯುತವಾದ ಪ್ಲಾಸ್ಟಿಕ್ ಅನ್ನೂ ತಯಾರಿಸಲಾಗಿದೆ. ಕೆಲ ಕಾರುಗಳ ಮೇಲ್ಬಾಗಕ್ಕೆ ಬಳಸುವ “ಪರ್ಸ್ ಪೆಕ್ಸ್” ಇಂತಹ ಗಟ್ಟಿ, ಪಾರದರ್ಶಕ ಹಾಗೂ ಹಗುರವಾದ ಪ್ಲಾಸ್ಟಿಕ್ ಆಗಿದೆ.
ವಿಮಾನದ ಅನೇಕ ಲೋಹಗಳನ್ನು ಈಗ ಪ್ಲಾಸ್ಟಿಕ್ ಸ್ಥಳಾಂತರಿಸಿದೆ. ಕೈಗಾರಿಕೆಗಳಲ್ಲಿ ಆಮ್ಲ ನಿರೋಧಕ ಪ್ಲಾಸ್ಟಿಕ್ ಬಳಕೆಯಲ್ಲಿದೆ. ಪ್ರಭಾವಿ ಮಾಧ್ಯಮ ಸಿನಿಮಾ ತಯಾರಾಗಲು ಬಳಸುತ್ತಿದ್ದ ”ಸೆಲ್ಯುಲಾಯಿಡ ಫಿಲ್ಮ್“ಗಳನ್ನೂ ಪ್ಲಾಸ್ಟಿಕ್ ಮೂಲಕವೇ ನಿರ್ಮಿಸಲಾಗುತ್ತಿತ್ತು. ಹಾಲು ತರುವ ಪ್ಲಾಸ್ಟಿಕ್ ಕ್ಯಾನ್, ಆಹಾರ ಸಂಗ್ರಹಣೆಗೂ ಪ್ಲಾಸ್ಟಿಕ್ ಬಳಕೆ ಹಬ್ಬಿದೆ. ಕನ್ನಡಕ, ಸೂಟ್‌ಕೇಸ್, ಚಾಪೆ, ಪಾದರಕ್ಷೆ, ರೇಡಿಯೊ, ಟೆಲಿವಿಷನ್, ಕುರ್ಚಿ, ಟೆಲಿಫೋನ್ ಸೆಟ್, ಮೊಬೈಲ್, ಶಸ್ತ್ರಕ್ರಿಯಾ ಸಲಕರಣೆಗಳು ಮಾತ್ರವಲ್ಲದೆ ಹೃದಯದ ರಕ್ತನಾಳ, ಘಾಸಿಯಾದ ಶ್ವಾಸನಾಳ, ಧ್ವನಿಪೆಟ್ಟಿಗೆ, ಗರ್ಭಕೋಶ ಮುಂತಾದ ಸೂಕ್ಷ್ಮಾಂಗಗಳ ಕೃತಕ ಮರುಸ್ಥಾಪನಾ ಘಟಕಗಳಾಗಿಯೂ ಪ್ರಸ್ತುತ ಬಳಕೆಯಲ್ಲಿದೆ.
ಪ್ಲಾಸ್ಟಿಕ್‌ನಲ್ಲಿ ಎರಡು ಮುಖ್ಯ ವಿಧಗಳು
ಸಾಮಾನ್ಯವಾಗಿ ಪ್ಲಾಸ್ಟಿಕ್‌ಗಳನ್ನು ಎರಡು ವಿಶಿಷ್ಟ ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಕೆಲ ಪ್ಲಾಸ್ಟಿಕ್‌ಗಳನ್ನು ಕಾಯಿಸಿದಾಗ ಮೆತ್ತಗಾಗಿ ಎರಕ ಹೊಯ್ಯಲು ಸಾದ್ಯವಾಗುತ್ತದೆ. ಇದನ್ನು ಅನೇಕ ಬಾರಿ ಕಾಯಿಸಿದಾಗಲೂ ಅವು ಮೆತ್ತಗಾಗುತ್ತವೆ. ಇಂತಹವುಗಳನ್ನು ಥರ್ಮೋ ಪ್ಲಾಸ್ಟಿಕ್‌ಗಳು ಎನ್ನುತ್ತಾರೆ. ಮತ್ತೆ ಕೆಲವು ಪ್ಲಾಸ್ಟಿಕ್‌ಗಳನ್ನು ಕಾಯಿಸಿದಾಗ ಒಮ್ಮೆ ಮೆತ್ತಗಾಗುತ್ತವೆ, ಮತ್ತೆ ಗಟ್ಟಿಯಾದ ನಂತರ ಮತ್ತೆ ಮೆತ್ತಗಾಗುವುದೇ ಇಲ್ಲ, ಕರಗುವುದೂ ಇಲ್ಲ, ಎರಕ ಹೊಯ್ಯಲೂ ಸಾಧ್ಯವಿಲ್ಲ. ಇಂತಹವುಗಳನ್ನು ಥರ್ಮೋ ಸೆಟ್ಟಿಂಗ್ ಪ್ಲಾಸ್ಟಿಕ್‌ಗಳು ಎನ್ನುತ್ತಾರೆ.
ಇಂದು ವಿಜ್ಞಾನಿಗಳು ಇಚ್ಚಿತ ಅಣು ತೂಕದ ಪ್ಲಾಸ್ಟಿಕ್ ಅನ್ನು ಸಂಶ್ಲೇಷಿಸುತ್ತಿದ್ದಾರೆ. ಬೇಕಾದ ಅಣುಗಳುಳ್ಳ, ಜಲನಿರೋಧಕ, ಶಾಖ ನಿರೋಧಕ, ಪಾರದರ್ಶಕ ಪ್ಲಾಸ್ಟಿಕ್‌ಗಳನ್ನು ತಯಾರಿಸುತ್ತಿದ್ದಾನೆ. ಉದಾಹರಣೆಗೆ ಟೆಫಜಾಲ್ ಎಂಬ ಪ್ಲಾಸ್ಟಿಕ್‌ನಲ್ಲಿ ಗಡಸುತನ, ರಾಸಾಯನಿಕ ಜಡತ್ವಗಳ ಗುಣಗಳಿವೆ. ಫ್ಯಾಂಬ್ಲಿನ್ ಮತ್ತು ಫ್ಲೂರಿನರ್ಟ್ ಎಂಬ ಆಕ್ಸಿಜನ್‌ಯುಕ್ತ ಪಾಲಿ ಪ್ಲೋರೋ ಕಾರ್ಬನ್ನಿನ ಪಾಲಿಮರ್‌ಗಳನ್ನು ಸಹ ತಯಾರಿಸಲಾಗಿದ್ದು ಇವುಗಳ ಮೇಲೆ ಆಕ್ಸಿಜನ್ , ಕ್ಲೋರಿನ್, ಆಮ್ಲ ಯಾವುದೂ ವರ್ತಿಸುವುದಿಲ್ಲ. ಇದರ ಬೇಗನೆ ಹರಡಿಕೊಳ್ಳುವ ಗುಣದಿಂದಾಗಿ ಐತಿಹಾಸಿಕ ಕಟ್ಟಡಗಳಿಗೆ ಇದರ ಲೇಪನ ಕೊಟ್ಟು ಆಮ್ಲ ಮಳೆಯಿಂದ ರಕ್ಷಿಸಲಾಗುತ್ತಿದೆ. ಉಕ್ಕಿನಷ್ಟೇ ಬಲವಾದ ಕೆಪ್ಲರ್ ಎಂಬ ಪ್ಲಾಸ್ಟಿಕ್ ಅನ್ನೂ ತಯಾರಿಸಲಾಗಿದೆ. ಹೀಗೆ ಪ್ಲಾಸ್ಟಿಕ್ ತನ್ನ ವಿಶಿಷ್ಟ ಗುಣಗಳಿಂದಾಗಿ ಮಾನವ ಬದುಕಿನ ಒಂದು ಅತ್ಯವಶ್ಯಕ ವಸ್ತುವಾಗಿಬಿಟ್ಟಿದೆ.
ಎಚ್‌ಎ ಪುರುಷೋತ್ತಮ ರಾವ್ ಪರಿಚಯ
ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974.