ನನಗೆ ದುಡಿಮೆ ಇಲ್ಲ, ಹೀಗಾಗಿ ಮನೆಯಲ್ಲಿ ಗೌರವವಿಲ್ಲ ಎನ್ನುವುದು ಈ ಗೃಹಿಣಿಯ ಅಳಲು; ಮಧ್ಯವಯಸ್ಸಿನ ಮಹಿಳೆಯರ ಸಂಕಟಕ್ಕೆ ಇಲ್ಲಿದೆ ಸಾಂತ್ವನ
ಕನ್ನಡ ಸುದ್ದಿ  /  ಜೀವನಶೈಲಿ  /  ನನಗೆ ದುಡಿಮೆ ಇಲ್ಲ, ಹೀಗಾಗಿ ಮನೆಯಲ್ಲಿ ಗೌರವವಿಲ್ಲ ಎನ್ನುವುದು ಈ ಗೃಹಿಣಿಯ ಅಳಲು; ಮಧ್ಯವಯಸ್ಸಿನ ಮಹಿಳೆಯರ ಸಂಕಟಕ್ಕೆ ಇಲ್ಲಿದೆ ಸಾಂತ್ವನ

ನನಗೆ ದುಡಿಮೆ ಇಲ್ಲ, ಹೀಗಾಗಿ ಮನೆಯಲ್ಲಿ ಗೌರವವಿಲ್ಲ ಎನ್ನುವುದು ಈ ಗೃಹಿಣಿಯ ಅಳಲು; ಮಧ್ಯವಯಸ್ಸಿನ ಮಹಿಳೆಯರ ಸಂಕಟಕ್ಕೆ ಇಲ್ಲಿದೆ ಸಾಂತ್ವನ

ಭವ್ಯಾ ವಿಶ್ವನಾಥ್: ನನ್ನ ಅಗತ್ಯ ಯಾರಿಗೂ ಇಲ್ಲ, ನಾನು ಯಾರಿಗೂ ಬೇಕಿಲ್ಲ ಎಂದು ಕುಗ್ಗಿರುವ ಮಹಿಳೆಗೆ ಸಾಂತ್ವನವಷ್ಟೇ ಸಾಲದು. ಅವರ ಸಾಮರ್ಥ್ಯಗಳ ಮೇಲೆ ಬೆಳಕು ಚೆಲ್ಲುವ, ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡುವ ಪ್ರಯತ್ನವೂ ಈ ಬರಹದಲ್ಲಿದೆ. -women's day 2024

ನೊಂದ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕಿದೆ. ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ.
ನೊಂದ ಮಹಿಳೆಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕಿದೆ. ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ.

ಪ್ರಶ್ನೆ: ನನಗೀಗ 45 ವರ್ಷ ವಯಸ್ಸು. ಸುಮ್ಮನೇ ಮನೆಯಲ್ಲಿ ಕೂತು ಬೇಸರವಾಗುತ್ತದೆ. ಆರ್ಥಿಕವಾಗಿ ಅಥವಾ ಆರೋಗ್ಯದ ಯಾವುದೇ ಸಮಸ್ಯೆ ಇಲ್ಲ. ಆದರೆ ಜೀವನದಲ್ಲಿ ಸಂತೋಷವಿಲ್ಲ, ಉತ್ಸಾಹವಿಲ್ಲ. ಮಕ್ಕಳು ದೊಡ್ಡವರಾದರು, ಮಕ್ಕಳು ಚೆನ್ನಾಗಿ ಓದುತ್ತಾರೆ, ಸ್ವತಂತ್ರರಾಗಿದ್ದಾರೆ. ಗಂಡ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಆದರೆ ಸದಾ ಅವರ ಕೆಲಸದಲ್ಲಿ ಬ್ಯುಸಿ. ನನ್ನ ಜವಾಬ್ಧಾರಿಗಳು ಕಡಿಮೆಯಾದವು. ನಾನು ದುಡಿಯುವುದಿಲ್ಲ ಹಾಗಾಗಿ ನನಗೆ ಬೆಲೆಯಿಲ್ಲ ಎನ್ನುವ ಭಾವನೆ ಕಾಡುತ್ತದೆ. ಟಿವಿ, ಫೋನ್‌ಗೆ ಅಡಿಕ್ಟ್ ಆಗಿದ್ದೇನೆ. ಅದೇ ನನ್ನ ದಿನಚರಿ ಆಗಿದೆ. ನನ್ನ ಅವಶ್ಯಕತೆ ಯಾರಿಗೂ ಇಲ್ಲ ಎನಿಸುತ್ತದೆ. ಏನು ಮಾಡಬೇಕೆಂದು ತೋಚುತ್ತಿಲ್ಲ. -ರಾಜೇಶ್ವರಿ, ಯಲಹಂಕ

ಉತ್ತರ: ನಿಮ್ಮ ಪರಿಸ್ಥಿತಿ ಅರ್ಥವಾಗುತ್ತೆ, ಇಂಥ ಸಂದರ್ಭದಲ್ಲಿ ನಿಮಗೆ ಬೇಸರ ಆಗುವುದು ಸಹಜ. ನಿಮ್ಮ ಅವಶ್ಯಕತೆ ಯಾರಿಗೂ ಇಲ್ಲವೆಂದು ತಿಳಿದು ಇನ್ನಷ್ಟು ನಿರಾಸೆ ಮತ್ತು ದುಃಖದಲ್ಲಿರುವಿರಿ. ಜವಾಬ್ಧಾರಿಗಳು ಕಡಿಮೆಯಾದವು ಎಂದು ಉತ್ಸಾಹವನ್ನು ಕಳೆದುಕೊಂಡಿರುವಿರಿ. ಉದ್ಯೋಗ ಇಲ್ಲದಿರುವ ಕಾರಣ ನಿಮಗೆ ಬೆಲೆಯಿಲ್ಲವೆಂದು ಭಾವಿಸಿದ್ದೀರಿ. ಈ ಎಲ್ಲ ನೆಗಟೀವ್ ಭಾವನೆಗಳಿಂದ ಬೇಸರವಾಗಿ ಮೊಬೈಲ್, ಟಿವಿಗಳ ಮೊರೆ ಹೋಗಿದ್ದೀರಿ.

ಆದರೆ, ನಿಮ್ಮ ಬದುಕಿನ ಒಳ್ಳೆಯ ವಿಚಾರವನ್ನು ಸಹ ಹಂಚಿಕೊಂಡಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಇಲ್ಲವೆಂದು ತಿಳಿದು ಖುಷಿಯಾಯಿತು. ಆರೋಗ್ಯವನ್ನು ಹೀಗೆಯೇ ಚೆನ್ನಾಗಿ ಕಾಪಾಡಿಕೊಳ್ಳಿ. ನೀವು ಆರೋಗ್ಯವಾಗಿದ್ದರೆ, ನಿಮಗೆ ಮತ್ತು ಮನೆಯ ಸದಸ್ಯರಿಗೆಲ್ಲಾ ಒಳ್ಳೆಯದು. ಆರೋಗ್ಯವೇ ಭಾಗ್ಯ. ನಿಮ್ಮ ನೆಮ್ಮದಿಗೆ ಈ ಕಾರಣವೊಂದು ಸಾಕಲ್ಲವೇ?

ನಿಮಗೆ ಆರ್ಥಿಕ ಸಮಸ್ಯೆಯಿಲ್ಲವೆಂದು ಸಹ ನೀವು ಹೇಳಿದ್ದೀರಿ ಮತ್ತು ನಿಮ್ಮ ಪತಿ ಸದಾ ಉದ್ಯೋಗದಲ್ಲಿ ಬ್ಯುಸಿ಼ಯಾಗಿರುತ್ತಾರೆಂದು ತಿಳಿಸಿದ್ದೀರಿ. ಅಂದರೆ ನಿಮ್ಮ ಪತಿ ಶ್ರಮ ಪಟ್ಟು ದುಡಿದು ಆಥಿ೯ಕ ಪರಿಸ್ಥಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಇದರಲ್ಲಿ ನಿಮ್ಮ ಕೊಡುಗೆಯೂ ಸಹ ಇದೆ, ನಿಮ್ಮ ಪತಿಯವರಿಗೆ ನಿಮ್ಮ ಮಾನಸಿಕ ಬೆಂಬಲ ಮತ್ತು ಪೋಷಣೆ ಇರುವುದರಿಂದ ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿದೆ.

‘ನಾವು ಮಾಡುವ ಕರ್ತವ್ಯಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ’

ಇಷ್ಟು ಕಾಲ ಹೆಂಡತಿ ಮತ್ತು ತಾಯಿಯಾಗಿ ನಿಮ್ಮ ಕರ್ತವ್ಯಗಳನ್ನು ಪ್ರೀತಿ ಮತ್ತು ನಿಷ್ಟೆಯಿಂದ ಚೆನ್ನಾಗಿ ನಿಭಾಯಿಸಿದ್ದೀರಿ ಎನಿಸುತ್ತದೆ. ನಿಮ್ಮ ಪೋಷಣೆಯಿಂದ ಇಂದು ಮಕ್ಕಳು ಚೆನ್ನಾಗಿ ಓದಿಕೊಂಡು ಸ್ವತಂತ್ರರಾಗಿ ಸಾಗುತ್ತಿದ್ದಾರೆ. ಇದು ಸಹ ನಿಮ್ಮ ಕೊಡುಗೆಯಲ್ಲವೇ? ಮಕ್ಕಳು, ಪತಿ, ಪತ್ನಿ, ಪೋಷಕರು, ಸ್ನೇಹಿತರು... ಪ್ರತಿಯೊಬ್ಬರಿಗಾಗಿಯೂ ನಾವು ಮಾಡುವ ಕರ್ತವ್ಯ ಅಥವಾ ಸೇವೆಗಳು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರುತ್ತದೆ. ಮೊದಮೊದಲಿಗೆ ಹೆಚ್ಚಾಗಿದ್ದು ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಹೆಚ್ಚು.

ಅಗತ್ಯಗಳು ಹಾಗೂ ಬೇಡಿಕೆಯು ಕೂಡ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ, ಅವರಿಗೆ ನಿಮ್ಮ ಅವಶ್ಯಕತೆಯೇ ಇಲ್ಲವೆಂದು ಅಲ್ಲ. ನಿಮ್ಮ ಮಾನಸಿಕ ಬೆಂಬಲ, ಮಾರ್ಗದರ್ಶನ ಪ್ರೋತ್ಸಾಹದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ನಾನು ಬೇಡವಾದವಳು/ನು, ನನ್ನ ಅಗತ್ಯವಿಲ್ಲ, ನನ್ನ ಮೇಲೆ ಪ್ರೀತಿಯೂ ಇಲ್ಲ ಎಂದು ಭಾವಿಸಿದರೆ ಮನಸ್ಸಿಗೆ ಆಘಾತ, ನೋವು ನಿರಾಸೆಗಳಾಗಿ ಸಂಬಂಧಗಳಲ್ಲಿ ಕಲಹಗಳು ಉಂಟಾಗಿ, ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ. ಬದುಕಲ್ಲಿ ಉತ್ಸಾಹವು ಕುಂದುತ್ತದೆ.

ಮನೆಯ ಸದಸ್ಯರು ಅವರವರ ಓದು, ವೃತ್ತಿಯಲ್ಲಿ ತೊಡಗಿದಾಗ, ಮನೆಯಲ್ಲಿದ್ದವರಿಗೆ ಸಾಕಷ್ಟು ಗಮನಕೊಡದಿರಬಹುದು. ಹಾಗೆಂದು ನಿಮ್ಮ ಮೇಲೆ ಪ್ರೀತಿಯಾಗಲಿ, ಬೆಲೆಯಿಲ್ಲವೆಂದಲ್ಲ. ಈಗ ನೀವು, ನಿಮ್ಮನ್ನು ನೀವೇ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಿ.

- ನಾನು ನನ್ನನ್ನು ಎಷ್ಟು ಗೌರವಿಸುತ್ತೇನೆ?”,

- ⁠ನನ್ನ ಬದುಕನ್ನು ನಾನು ಎಷ್ಟು ಪ್ರೀತಿಸುತ್ತೇನೆ, ?”,

- ⁠ನನ್ನ ಬದುಕು ನನಗೆ ಎಷ್ಟು ಮುಖ್ಯ?

- ⁠ನನ್ನ ಆರೋಗ್ಯ, ಸಂತೋಷ ನನಗೆ ಎಷ್ಟು ಮಹತ್ವವಾದುದು?”

- ⁠ನನ್ನ ಸಂತೋಷಕ್ಕೆ ಬೇರೆಯವರ ಮೇಲೆ ನಾನು ಅವಲಂಬಿಯಾಗಿದ್ದೇನೆಯೇ?”

- ⁠ನನ್ನ ಸಂತೋಷ ನನ್ನ ಕೈಯಲ್ಲಿಯೇ ಇದೆಯೇ?”

- ⁠ನನ್ನನ್ನು ನಾನು ಹೇಗೆ ಸಂತೋಷ ಪಡಿಸಿಕೊಳ್ಳಬಹುದು?”

ಈ ಪ್ರಶ್ನೆಗಳನ್ನು ಸ್ವಲ್ಪ ಸಮಯ ತೆಗೆದುಕೊಂಡು ಉತ್ತರಿಸಿ. ಮೊದಲಿಗೆ ನಿಮಗೆ ಉತ್ತರಿಸಲು ಮುಜುಗರ ಅಥವಾ ಕಷ್ಟವಾಗಬಹುದು. ಆದರೆ, ಪ್ರಯತ್ನಪಟ್ಟು ಉತ್ತರಿಸಿ. ನಿಮ್ಮ ಸಮಸ್ಯೆಗೆ ಪರಿಹಾರ ನಿಮ್ಮಉತ್ತರವೇ ನೀಡುತ್ತದೆ. ದಿನಚರಿಯಲ್ಲಿ ಸಾಧ್ಯವಾದರೆ ಚಿಕ್ಕಪುಟ್ಟ ಗುರಿಗಳು, ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ.

ನಿಮಗೆ ಚಿಕ್ಕ ವಯಸ್ಸಿನಲ್ಲಿ ಅಥವಾ ತಾಯಿಯಾದ ಸಮಯದಲ್ಲಿ ಹೆಚ್ಚು ಜವಾಬ್ಧಾರಿಗಳಿಂದ ಬಹುಶಃ ನಿಮ್ಮ ಆಸಕ್ತಿಯಿರುವ ಚಟುವಟಿಕೆಗಳು, ಹವ್ಯಾಸಗಳನ್ನು, ಕಲಿಕೆಗಳನ್ನು ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗದಿದ್ದರಬಹುದು. ಆದರೆ ಈಗ ನಿಮಗೆ ಬದುಕು ಸಾಕಷ್ಟು ಸಮಯವಕಾಶ ನೀಡುತ್ತಿದೆ. ವಿರಾಮವೂ ಇದೆ. ಪುನಃ ನಿಮ್ಮ ಕನಸುಗಳಿಗೆ ಚಾಲನೆ ನೀಡಿ, ಪ್ರಯತ್ನವನ್ನು ಆರಂಭಿಸಿ. ನೀವು ಮಾಡುತ್ತಿರುವ ಕೆಲಸವನ್ನು ಶಿಸ್ತು, ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿದರೆ, ನಿಮ್ಮ ಮನಸ್ಸು ಮತ್ತು ಬದುಕಿಗೆ ನೆಮ್ಮದಿ, ಉತ್ಸಾಹ, ಗುರಿ, ಉದ್ದೇಶ ಮತ್ತು ಸ್ಪೂತಿ೯ಯೂ ಸಹ ಸಿಗುತ್ತದೆ. ಸುತ್ತಮುತ್ತಲಿರುವ ಜನರ ಪ್ರಶಂಸೆಯನ್ನು ಗಳಿಸಿ, ಅವರಿಗೂ ಪ್ರೇರಣೆಯಾಗುತ್ತೀರ. ಟಿವಿ, ಮೊಬೈಲ್ ವ್ಯಸನವೂ ಕ್ರಮೇಣ ಕಮ್ಮಿಯಾಗುತ್ತದೆ. ಭವಿಷ್ಯದಲ್ಲಿ ಇದೇ ನಿಮ್ಮ ಉದ್ಯೋಗವಾಗಿ ಬದಲಾಗಬಹುದು. ಒಳ್ಳೆಯದಾಗಲಿ!

---

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

Whats_app_banner