ರಕ್ಷಾ ಬಂಧನದ ನಿಮಿತ್ತ ದೂರದ ಊರಿನಲ್ಲಿರುವ ನಿಮ್ಮ ಸಹೋದರನಿಗೆ ಇಂದೇ ಕಳುಹಿಸಿ ಈ ರೀತಿ ವಿಶೇಷ ಪತ್ರ
ನಿಮ್ಮ ಸಹೋದರ ದೂರದ ಊರಲ್ಲಿದ್ದರೆ ನೀವು ಇಂದೇ ಅವರಿಗೆ ಪತ್ರ ಬರೆಯಿರಿ. ಪತ್ರ ಹೇಗಿರಬೇಕು ಎಂದರೆ ನೋಡಿದ ತಕ್ಷಣ ಅವರಿಗೆ ಸಂತೋಷವಾಗಬೇಕು. ಆ ಪತ್ರ ಕಾಣೆಯಾದರೂ ನೀವು ಬರೆದ ಪತ್ರ ಸದಾ ಅವರ ಕಣ್ಣ ಮುಂದೆ ಇರುವಂತೆ ಬರೆಯಬೇಕು. ಆ ಕುರಿತು ಇಲ್ಲಿದೆ ಸಲಹೆ. ರಕ್ಷಾ ಬಂಧನಕ್ಕೆ ಕೆಲವೇ ದಿನ ಬಾಕಿ ಇದೆ.
ಈ ವರ್ಷದ ರಕ್ಷಾಬಂಧನ ಬಂದೇಬಿಡ್ತು. ನೀವು ನಿಮ್ಮ ಅಣ್ಣ ಅಥವಾ ತಮ್ಮನಿಗೆ ಈ ಸಂದರ್ಭದಲ್ಲಿ ಒಂದೊಳ್ಳೆ ಪತ್ರ ಬರೆದರೆ ಅವರು ತುಂಬಾ ಸಂತೋಷ ಪಡುತ್ತಾರೆ. ನಿಮ್ಮ ಅಣ್ಣ ಅಥವಾ ತಮ್ಮ ದೂರದ ಊರಲ್ಲೇ ಇದ್ದು ಕೆಲಸ ಮಾಡುತ್ತಿದ್ದರೆ ಅಥವಾ ಕಲಿಯುತ್ತಿದ್ದರೆ ಅವರಿಗೆ ನೀವು ಇಂದೇ ಪತ್ರ ಬರೆಯಿರಿ. ಯಾಕೆಂದರೆ ಅಂಚೆಯ ಮೂಲಕ ಆ ಪತ್ರ ತಲುಪಲು ತುಂಬಾ ದಿನವಾಗುತ್ತದೆ. ಈಗೆಲ್ಲ ಯಾರು ಪತ್ರ ಬರೆಯುತ್ತಾರೆ? ಒಂದು ವಾಟ್ಸಾಪ್ ಮೆಸೇಜ್ ಮಾಡಿದರೆ ಆಯ್ತು ಎಂದು ನೀವು ಅಂದುಕೊಂಡರೆ, ಅದಕ್ಕಿಂತ ಹೆಚ್ಚಿನ ಖುಷಿಯಾಗುವುದು ಕೈಯಲ್ಲಿ ಪತ್ರ ಸಿಕ್ಕಾಗ ಮಾತ್ರ. ಈ ಬಾರಿ ನೀವು ಕೂಡ ನಿಮ್ಮ ಸಹೋದರನನ್ನು ತುಂಬಾ ಖುಷಿ ಪಡಿಸಬೇಕು ಎಂದುಕೊಂಡಿದ್ದರೆ ಇಂದೇ ಪತ್ರ ಬರೆದುಬಿಡಿ.
ಪತ್ರದ ವಿಷಯ ಏನಿರಬೇಕು?
ಪತ್ರದ ವಿಷಯ ಏನಿರಬೇಕು ಎಂದು ಯೋಚನೆ ಮಾಡುತ್ತಿದ್ದರೆ ಅದಕ್ಕೂ ನಾವು ಇಲ್ಲಿ ಸಲಹೆ ನೀಡಿದ್ದೇವೆ. ನೀವು ನಿಮ್ಮ ಸಹೋದರನೊಂದಿಗೆ ಕಳೆದ ತುಂಬಾ ಒಳ್ಳೆಯ ಕ್ಷಣಗಳನ್ನು ಅಥವಾ ಬಾಲ್ಯವನ್ನು ನೆನಪಿಸಿಕೊಳ್ಳಿ. ಅದನ್ನೇ ಪತ್ರದಲ್ಲಿ ಬರೆಯಿರಿ. ಮೊದಲಿಗೆ ನೀವು ನಿಮ್ಮ ಅಣ್ಣನ ಆರೋಗ್ಯದ ಬಗ್ಗೆ ವಿಚಾರಿಸಿ. ಆನಂತರದಲ್ಲಿ ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿ. ನೀವಿಬ್ಬರೂ ಸೇರಿ ಮಾಡಿದ ಯಾವುದಾದರೂ ತುಂಟತನವನ್ನು ನೆನಪಿಸಿಕೊಳ್ಳಿ ಇದೆಲ್ಲವನ್ನು ಸಂಕ್ಷಿಪ್ತವಾಗಿ ಬರೆಯಿರಿ.
ಪತ್ರದೊಡನೆ ಇರಲಿ ರಾಖಿ
ಈ ಪತ್ರವನ್ನು ಅಂದಗಾಣಿಸಲು ಅದರ ಜೊತೆಗೆ ಒಂದು ರಾಖಿಯನ್ನು ಕಳಿಸಿಕೊಡಿ. ನೀವು ಹೋಗಿ ರಾಖಿ ಕಟ್ಟಲು ಸಾಧ್ಯವಾಗದಿದ್ದರೆ ಪತ್ರದ ಮೂಲಕ ಅದನ್ನು ಸೇರಿಸಿ ಕಳುಹಿಸಿ. ಪತ್ರ ಬರೆಯುವಾಗ ಅವರಿಗೆ ಇಷ್ಟವಾಗುವ ರೀತಿ, ನೋಡಿದ ತಕ್ಷಣ ಖುಷಿಯಾಗುವ ರೀತಿ ಅಲಂಕಾರ ಮಾಡಿ. ಅಂದರೆ ಕಲರ್ ಪೆನ್ ಅಥವಾ ಪೆನ್ಸಿಲ್ ಬಳಸಿ ಅದರ ಮೇಲೆ ಸಿಂಪಲ್ಲಾದ ಚಿತ್ತಾರ ಬಿಡಿಸಿ. ಅಥವಾ ಯಾವುದಾದರೂ ಸ್ಟಿಕರ್ ಅಂಟಿಸಿ. ಪತ್ರವನ್ನು ಕಂಡೊಡನೆ ಈ ಪತ್ರ ಸದಾ ನನ್ನ ಜೊತೆಗೆ ಇರಬೇಕು ಎಂದು ನಿಮ್ಮ ಸಹೋದರನಿಗೆ ಅನಿಸುವ ರೀತಿಯಲ್ಲಿ ಆ ಪತ್ರವಿರಲಿ.
ಕೆಲವರು ಪತ್ರ ಚೆನ್ನಾಗಿದೆ ಎಂದು ಹೇಳುವ ಬದಲು ಎಂದಿಗೂ ಆ ಪತ್ರವನ್ನು ಇಟ್ಟುಕೊಂಡು ಅದನ್ನು ಒಳಗೊಳಗೆ ಸಂಭ್ರಮಿಸುತ್ತಾರೆ. ಎಷ್ಟೋ ಜನರ ಸಹೋದರರು ಹೀಗೆ ಇರುತ್ತಾರೆ. ನಿಮ್ಮ ಸಹೋದರನ ಸ್ವಭಾವ ಅವನ ಇಷ್ಟದ ಬಣ್ಣ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಆ ಪತ್ರಕ್ಕೊಂದು ಚಂದದ ಕವರ್ ಸೆಲೆಕ್ಟ್ ಮಾಡಿ. ಆದಷ್ಟು ಬೇಗ ಈ ಪತ್ರವನ್ನು ಬರೆದು ಕಳಿಸಿಕೊಡಿ. ಇಲ್ಲವಾದರೆ ಆ ಪತ್ರ ತಲುಪುವುದರಲ್ಲಿ ತಡವಾದೀತು.
ವಿಭಾಗ