Shivaratri Upavasa recipe: ಶಿವರಾತ್ರಿ ಜಾಗರಣೆಗೆ ಸಾಬುದಾನಿ, ಸಿಹಿಗೆಣಸಿನ ರೆಸಿಪಿ
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಶಿವರಾತ್ರಿ ಹಬ್ಬದಲ್ಲಿ ಉಪವಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹಾಗಾದರೆ ಉಪವಾಸದಂದು ಯಾವ ಯಾವ ರೆಸಿಪಿ ತಯಾರಿಸಿ ತಿನ್ನಬಹುದು, ಅವುಗಳನ್ನು ತಯಾರಿಸುವುದು ಹೇಗೆ?
ಶಿವನ ಹಬ್ಬ ಶಿವರಾತ್ರಿಯನ್ನು ದೇಶದಾದ್ಯಂತ ಬಹಳ ಭಕ್ತಿ, ಭಾವದಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಉಪವಾಸ ಹಾಗೂ ಜಾಗರಣೆಗೆ ಮೊದಲ ಆದ್ಯತೆ. ರಾತ್ರಿಯೆಲ್ಲಾ ಜಾಗರಣೆ ಕುಳಿತು ಶಿವನನ್ನು ಆರಾಧಿಸಲಾಗುತ್ತದೆ.
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಶಿವರಾತ್ರಿ ಹಬ್ಬದಲ್ಲಿ ಉಪವಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಉಪವಾಸ ಎಂದರೆ ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ಇರಬೇಕು ಎಂಬ ನಿಯಮವಿಲ್ಲ. ಆ ಕಾರಣಕ್ಕೆ ಕೆಲವೊಂದು ಆಯ್ದ ರೆಸಿಪಿಗಳನ್ನು ತಯಾರಿಸಿ ತಿನ್ನುವ ಮೂಲಕ ಉಪವಾಸವನ್ನು ಸಂಪನ್ನಗೊಳಿಸಬಹುದು. ಹಾಗಾದರೆ ಉಪವಾಸದಂದು ಯಾವ ಯಾವ ರೆಸಿಪಿ ತಯಾರಿಸಿ ತಿನ್ನಬಹುದು, ಅವುಗಳನ್ನು ತಯಾರಿಸುವುದು ಹೇಗೆ?
ಸಬುದಾನಿ ಉಪ್ಪಿಟ್ಟು
ಸಬುದಾನಿಯಿಂದ ತಯಾರಿಸುವ ಖಾದ್ಯಗಳನ್ನು ಉಪವಾಸದಂದು ಸೇವಿಸಬಹುದು. ಉಪ್ಪಿಟ್ಟು, ಕಿಚಡಿ, ವಡೆ ಇದನ್ನು ತಿನ್ನುವ ಮೂಲಕ ಶಿವರಾತ್ರಿ ಉಪವಾಸವನ್ನು ಅಂತ್ಯಗೊಳಿಸಬಹುದು.
ಬೇಕಾಗುವ ಪದಾರ್ಥಗಳು: ಸಬುದಾನಿ - 1ಕಪ್, ಶೇಂಗಾ - ಸ್ವಲ್ಪ, ಹಸಿಮೆಣಸು - 2, ಸಾಸಿವೆ, ಜೀರಿಗೆ, ಉಪ್ಪು, ಎಣ್ಣೆ
ಮಾಡುವ ವಿಧಾನ: ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಸಿಡಿಸಿ. ಅದಕ್ಕೆ ಹುರಿದು ಪುಡಿ ಮಾಡಿದ ಶೇಂಗಾಬೀಜದ ಪುಡಿ, ಕತ್ತರಿಸಿದ ಹಸಿಮೆಣಸು ಸೇರಿಸಿ ಕೈಯಾಡಿಸಿ. ನಂತರ ನೆನೆಸಿದ ಸಬ್ಬಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಸಕ್ಕರೆ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಆಗಾಗ ಪಾತ್ರೆಯಲ್ಲಿ ಕೈಯಾಡಿಸಿ, ಸರಿಯಾಗಿ ಬೆಂದಿದ ಅನ್ನಿಸಿದ ಮೇಲೆ ಸ್ಟೌ ಆರಿಸಿ.
ಸಾಬದಾನಿ ಕಿಚಡಿ
ಬೇಕಾಗುವ ಪದಾರ್ಥಗಳು: ಸಾಬುದಾನಿ - 1ಕಪ್, ಆಲೂಗಡ್ಡೆ - 2, ಹಸಿಮೆಣಸು - 2, ಶೇಂಗಾಪುಡಿ - 3 ಚಮಚ, ತುಪ್ಪು -2 ಚಮಚ, ಜೀರಿಗೆ - 1 ಚಮಚ, ಕರಿಬೇವು - 7 ರಿಂದ 8, ನಿಂಬೆರಸ, ಉಪ್ಪು- ರುಚಿಗೆ, ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ: ಸಾಬುದಾನಿಯನ್ನು 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ನೀರಿನಿಂದ ತೆಗೆದು ಬೇರೆ ಪಾತ್ರೆಗೆ ಹಾಕಿ ನೀರು ಆರಲು ಬಿಡಿ. ಬಾಣಲೆಯೊಂದರಲ್ಲಿ ತುಪ್ಪ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಜೀರಿಗೆ, ಸಾಸಿವೆ ಕರಿಬೇವು ಹಾಗೂ ಹಸಿಮೆಣಸು ಹಾಕಿ ಹುರಿಯಿರಿ. ಅದಕ್ಕೆ ಬೇಯಿಸಿ ಸ್ಮ್ಯಾಷ್ ಮಾಡಿದ ಆಲೂಗೆಡ್ಡೆಯನ್ನು ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ. ಅದಕ್ಕೆ ನೆನೆಸಿದ ಸಾಬೂದಾನಿ ಹಾಗೂ ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಅದರ ಮೇಲೆ ನಿಂಬೆರಸ ಹಿಂಡಿ ಮಿಶ್ರಣ ಮಾಡಿ.
ಅರಳಿನ ಮೊಸರನ್ನ
ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಅಕ್ಕಿಯಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸುವುದಿಲ್ಲ. ಆ ಕಾರಣಕ್ಕೆ ಅಕ್ಕಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಶ್ರಿವರಾತ್ರಿ ಉಪವಾಸದಲ್ಲಿ ಅರಳಿನಿಂದ ಮಾಡಿದ ಮೊಸರನ್ನು ಸೇವಿಸಬಹುದು.
ಬೇಕಾಗುವ ಪದಾರ್ಥಗಳು: ಅರಳು- 3ಕಪ್, ತೆಂಗಿನತುರಿ - 1ಕಪ್, ಮೊಸರು - 1ಕಪ್, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, ಹಸಿಮೆಣಸು, ಸಾಸಿವೆ, ಜೀರಿಗೆ, ಶುಂಠಿ
ತಯಾರಿಸುವ ಬಗೆ: ಮೊದಲು ಒಗ್ಗರಣೆ ರೆಡಿಟ್ಟುಕೊಳ್ಳಬೇಕು. ಅದಕ್ಕೆ ಮೊಸರು ಸೇರಿಸಿ ನಂತರ ಅರಳು, ಉಪ್ಪು, ಶುಂಠಿ, ಹಸಿಮೆಣಸಿನ ಪೇಸ್ಟ್ ಸೇರಿಸಿ ಮಿಶ್ರಣ ಮಾಡಬೇಕು. ನಂತರ ಕೊತ್ತಂಬರಿ ಸೊಪ್ಪು ಸೇರಿಸಿ. ಬೇಕಿದ್ದರೆ ದ್ರಾಕ್ಷಿ ಹಾಗೂ ದಾಳಿಂಬೆ ಸೇರಿಸಬಹುದು. ಇದು ತಕ್ಷಣಕ್ಕೆ ರೆಡಿಯಾಗುವ ರೆಸಿಪಿ
ಹಣ್ಣಿನ ಸಲಾಡ್
ಶಿವರಾತ್ರಿ ಉಪವಾಸದಂದು ಹಣ್ಣು ತಿನ್ನಲು ಅಡ್ಡಿಯಿಲ್ಲ. ಒಂದೇ ಬಗೆಯ ಹಣ್ಣು ತಿನ್ನುವುದು ನಿಮಗೆ ಬೇಸರ ಎನ್ನಿಸಿದರೆ ವಿವಿಧ ಬಗೆಯ ಹಣ್ಣುಗಳಿಂದ ಸಲಾಡ್ ತಯಾರಿಸಿ ತಿನ್ನಬಹುದು. ಎಲ್ಲಾ ಬಗೆಯ ಹಣ್ಣನ್ನು ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಅದಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸಿನ ಪುಡಿ ಹಾಗೂ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ತಿನ್ನಬಹುದು.
ಸಿಹಿ ಗೆಣಸಿನ ಪಾಯಸ
ಶಿವನ ಉಪವಾಸದಲ್ಲಿ ಸಿಹಿ ಗೆಣಸಿನ ಖಾದ್ಯಗಳನ್ನು ಸೇವಿಸಬಹುದು. ಸಿಹಿ ಈ ಬಾರಿ ಉಪವಾಸದಲ್ಲಿ ಸಿಹಿ ಗೆಣಸಿನ ಪಾಯಸ ಮಾಡಿ ತಿನ್ನಬಹುದು ನೋಡಿ.
ಬೇಕಾಗುವ ಪದಾರ್ಥಗಳು: ಸಿಹಿ ಗೆಣಸು –ಅರ್ಧ ಕೆಜಿ, ಬೆಲ್ಲ – 1ಕಪ್, ಏಲಕ್ಕಿ, ತುಪ್ಪ – 2 ಚಮಚ, ಹಾಲು – 1ಕಪ್, ಒಣಹಣ್ಣುಗಳು
ತಯಾರಿಸುವ ಬಗೆ: ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಒಣಹಣ್ಣುಗಳನ್ನು ಹುರಿದುಕೊಳ್ಳಿ. ನಂತರ ತುಪ್ಪ ಹಾಗೂ ಒಣಹಣ್ಣುಗಳನ್ನು ಬೇರೆ ಬೇರೆ ಪಾತ್ರೆಗೆ ತೆಗೆದಿರಿಸಿ. ಬಾಣಲೆಗೆ ಬೇಯಿಸಿದ ಸಿಹಿಗೆಣಸನ್ನು ಸೇರಿಸಿ ಕೈಯಾಡಿಸಿ. ಅದು ಸ್ವಲ್ಪ ಪರಿಮಳ ಬರುವಾಗ ಹಾಲು ಸೇರಿಸಿ ಮಿಶ್ರಣ ಮಾಡಿ, 10 ನಿಮಿಷಗಳ ಕಾಲ ಕುದಿಸಿ. ನಂತರ ಇದಕ್ಕೆ ಬೆಲ್ಲ ಸೇರಿಸಿ ಪುನಃ ೫ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ, ಹುರಿದುಕೊಂಡ ಒಣಹಣ್ಣುಗಳು ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿದರೆ ಸಿಹಿಗೆಣಸಿನ ಪಾಯಸ ಸಿದ್ಧ.