ಕನ್ನಡ ಸುದ್ದಿ  /  Lifestyle  /  Side Dishes Combination With Dosa Idly South Indian Breakfast Chutney Recipe Dip Recipe Bgy

Side Dishes: ದೋಸೆ , ಇಡ್ಲಿ ಜೊತೆ ಅದೇ ಚಟ್ನಿ ಅದೇ ಸಾಂಬಾರ್‌ ತಿಂದು ಬೇಜಾರಾಗಿದ್ಯಾ? ಈ ಹೊಸ ಡಿಪ್‌ಗಳನೊಮ್ಮೆ ಟ್ರೈ ಮಾಡಿ

Side Dishes: ಬ್ರೇಕ್‌ಫಾಸ್ಟ್‌ಗೆ ದೋಸೆ, ಇಡ್ಲಿ ಮಾಡಬೇಕೆಂದರೆ ಸಾಮಾನ್ಯವಾಗಿ ಅದಕ್ಕೆ ಚಟ್ನಿ ಅಥವಾ ಸಾಂಬಾರನ್ನು ಡಿಪ್‌ ಆಗಿ ತಯಾರಿಸುತ್ತೇವೆ. ಆದರೆ ನಿಮಗೆ ಪ್ರತಿ ಬಾರಿಯೂ ಅದೇ ಚಟ್ನಿ ಅದೇ ಸಾಂಬಾರ್‌ ತಿಂದು ಬೇಸರ ಎನಿಸಿದಲ್ಲಿ, ನಿಮ್ಮ ನಾಲಗೆಗೆ ಹೊಸ ರುಚಿ ಉಣಬಡಿಸಬೇಕು ಎಂದಾದಲ್ಲಿ ಇಲ್ಲಿ ಕೆಲವೊಂದು ಹೊಸ ರೆಸಿಪಿಗಳನ್ನು ತಿಳಿಸಲಾಗಿದೆ. ಒಮ್ಮೆ ಟ್ರೈ ಮಾಡಿ.

ದೋಸೆ , ಇಡ್ಲಿ ಜೊತೆ ತಿನ್ನಲು ಹೊಸ ರುಚಿಯ ಡಿಪ್‌ ತಯಾರಿಸಿ
ದೋಸೆ , ಇಡ್ಲಿ ಜೊತೆ ತಿನ್ನಲು ಹೊಸ ರುಚಿಯ ಡಿಪ್‌ ತಯಾರಿಸಿ (PC: Unsplash)

Side Dishes: ದಕ್ಷಿಣ ಭಾರತದ ಬಗೆಬಗೆಯ ಆಹಾರ ಪದಾರ್ಥಗಳು, ಖಾದ್ಯಗಳು ಇಡೀ ಭಾರತದಲ್ಲಿ ಅತ್ಯಂತ ಹೆಸರು ಗಳಿಸಿದ ಪಾಕಪದ್ಧತಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಅದರಲ್ಲೂ ಇಡ್ಲಿ, ವಡಾ, ವಿವಿಧ ರೀತಿಯ ದೋಸೆಗಳು, ಶ್ಯಾವಿಗೆ, ಉಪ್ಪಿಟ್ಟು-ಚೌಚೌ ಬಾತ್‌ ಸೇರಿದಂತೆ ಲೆಕ್ಕಕ್ಕೆ ಸಿಗದಷ್ಟು ವೈವಿಧ್ಯತೆಗಳಿವೆ. ದಕ್ಷಿಣ ಭಾರತದ ಆಹಾರ ರುಚಿಕರವಾಗಿವೆ. ಅದಕ್ಕೆ ಲಭ್ಯವಿರುವ ಕಾಂಬಿನೇಷನ್‌ಗಳು ಕೂಡಾ ಬಾಯಲ್ಲಿ ನೀರು ತರಿಸುವಂಥವು.

ನೀವು ಮನೆಯಲ್ಲಿ ದೋಸೆ ಅಥವಾ ಇಡ್ಲಿ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಅದಕ್ಕೆ ಒಪ್ಪುವಂತಹ ವಿಭಿನ್ನ ಕಾಂಬಿನೇಷನ್‌ ರೆಸಿಪಿಯನ್ನು ಹೇಳಿಕೊಡುತ್ತೇವೆ ನೋಡಿ.

ಖಾರವಾದ್ರೂ ಸಖತ್‌ ಟೇಸ್ಟಿ ಕೆಂಪು ಮೆಣಸಿನಕಾಯಿ ಚಟ್ನಿ

ದಕ್ಷಿಣ ಭಾರತದ ಪಾಕಪದ್ಧತಿಗಳಲ್ಲಿ, ತೆಂಗಿನಕಾಯಿ ಬಳಕೆ ಸಾಮಾನ್ಯ. ಅದ್ರಲ್ಲೂ ತೆಂಗಿನ ಕಾಯಿ ಬಳಸಿ ಚಟ್ನಿ ಮಾಡದೆ ದೋಸೆ, ಇಡ್ಲಿಯನ್ನು ತಿನೋದೇ ಇಲ್ಲವೇನೋ. ಆದರೂ ತೆಂಗಿನಕಾಯಿ ಬಳಸದೆ ನೀವು ಕೆಂಪು ಚಟ್ನಿಯನ್ನು ತಯಾರಿಸಬಹುದು. ಈ ಚಟ್ನಿಯನ್ನು ಕೆಂಪು ಮೆಣಸಿನಕಾಯಿ, ಈರುಳ್ಳಿ, ಹುಣಸೆಹಣ್ಣು ಮತ್ತು ಬೆಳ್ಳುಳ್ಳಿ ಬಳಸಿ ತಯಾರಿಸಲಾಗುತ್ತದೆ. ರುಚಿಯಾದ ಬಿಸಿ ದೋಸೆಯನ್ನು ಈ ಚಟ್ನಿಯೊಂದಿಗೆ ಸವಿಯಿರಿ.

ಕಡಲೆಕಾಯಿ ಬೆಳ್ಳುಳ್ಳಿ ಚಟ್ನಿ ಪುಡಿ ಟೇಸ್ಟ್‌ ಮಾಡಲೇಬೇಕು

ದಕ್ಷಿಣ ಭಾರತದ ಪಾಕವಿಧಾನದಲ್ಲಿ ಚಟ್ನಿಯಷ್ಟೇ ಬೇಡಿಕೆ ಚಟ್ನಿಪುಡಿಗೂ ಇದೆ. ಇದು ದೋಸೆ ಮತ್ತು ಇಡ್ಲಿಯೊಂದಿಗೆ ಸಖತ್‌ ಕಾಂಬಿನೇಷನ್. ಅನೇಕ ಬಗೆ ಚಟ್ನಿ ಪುಡಿಗಳಿವೆಯಾದರೂ ಇಡ್ಲಿ ಇಲ್ಲವೇ ದೋಸೆಗೆ ಹೊಂದಿಕೊಳ್ಳುವುದು ಕಡಲೆಕಾಯಿ ಮತ್ತು ಬೆಳ್ಳುಳ್ಳಿ ಬಳಸಿ ತಯಾರಿಸಲಾಗುವ ಕಡಲೆಕಾಯಿ ಬೆಳ್ಳುಳ್ಳಿ ಚಟ್ನಿ ಪುಡಿ. ಇದಲ್ಲದೆ, ನೀವು ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ಸೇರಿಸಬೇಕು. ಈ ಪದಾರ್ಥಗಳನ್ನು ಬಾಣಲೆಯಲ್ಲಿ ಸ್ವಲ್ಪ ಹುರಿದು ನಂತರ ಪುಡಿ ಮಾಡಿಕೊಳ್ಳಬಹುದು.

ಕಣ್ಣಿಗೂ ಹಬ್ಬ ಬಾಯಿಗೂ ರುಚಿಕರ ಮಂಜಲ್ ಸಾಂಬಾರ್

ತಮಿಳುನಾಡು ಭಾಗದಲ್ಲಿ ಹೆಚ್ಚಿಗೆ ಬಳಕೆಯಲ್ಲಿರುವ ಮಂಜಲ್ ಸಾಂಬಾರ್ ಈ ಖಾದ್ಯಕ್ಕೆ ನೀವು ಈರುಳ್ಳಿ, ಉದ್ದಿನಬೇಳೆ, ಹುಣಸೆಹಣ್ಣು, ಅರಿಶಿನ, ಕತ್ತರಿಸಿದ ಬೆಳ್ಳುಳ್ಳಿ, ಝುಕಿನಿ, ಕ್ಯಾರೆಟ್, ಒಣ ಮೆಣಸಿನಕಾಯಿಗಳು ಇತ್ಯಾದಿಗಳನ್ನು ಬಳಸಬೇಕಾಗುತ್ತದೆ. ಹೆಚ್ಚು ತರಕಾರಿಗಳನ್ನು ಬಳಸಿದರೆ ಅದರ ರುಚಿ ಇನ್ನಷ್ಟು ಉತ್ತಮವಾಗಿರುತ್ತದೆ.

ತಮಿಳುನಾಡಿನ ಪ್ರಸಿದ್ಧ ವಡಾ ಕರಿ ತಿಂದಿದ್ದೀರಾ..?

ವಡಾ ಕರಿ ತಮಿಳುನಾಡಿನ ಪ್ರಸಿದ್ಧ ಖಾದ್ಯವಾಗಿದ್ದು, ಟೊಮೆಟೊ ಮತ್ತು ಈರುಳ್ಳಿಯ ರುಚಿಕರವಾದ ಮೇಲೋಗರದಲ್ಲಿ ಪ್ಯಾನ್ ಫ್ರೈಡ್ ಕ್ರಿಸ್ಪಿ ಮಸಾಲಾ ಲೇಪಿತ ವಡಾಗಳೊಂದಿಗೆ ತಯಾರಿಸಲಾಗುತ್ತದೆ. ವಡಾಗಳಿಗೆ ಹಿಟ್ಟನ್ನು ಚೆನ್ನಾ ದಾಲ್‌ನಿಂದ ತಯಾರಿಸಬಹುದು. ಇದರ ಜೊತೆಗೆ ನಿಮಗೆ ಟೊಮ್ಯಾಟೊ, ಈರುಳ್ಳಿ, ತೆಂಗಿನಕಾಯಿ ಪೇಸ್ಟ್, ಬೆಳ್ಳುಳ್ಳಿ, ಮೆಣಸಿನಕಾಯಿ ಮತ್ತು ಮಸಾಲೆಗಳು ಬೇಕಾಗುತ್ತವೆ.

ಖಾರ ಖಾರವಾದ ಟೊಮೆಟೋ ತೊಕ್ಕು

ತುಂಬಾನೇ ಖಾರ ಇಷ್ಟಪಡುವ ಆಹಾರ ಪ್ರಿಯರು ದೋಸೆಯೊಂದಿಗೆ ಟೊಮೆಟೋ ತೊಕ್ಕು ಮಾಡಿ ಸವಿಯಲೇ ಬೇಕು. ಏಕಂದರೆ ಖಾರದ ಈ ತೊಕ್ಕು ಬಿಸಿ ಬಿಸಿ ದೋಸೆಗೆ ಮಾತ್ರವಲ್ಲ, ಇಡ್ಲಿಯೊಂದಿಗೆ, ಬಿಸಿ ಅನ್ನದೊಂದಿಗೂ ಬೆಸ್ಟ್‌ ಕಾಂಬಿನೇಶನ್‌. ಈ ಡಿಶ್‌ ಹುಳಿ-ಖಾರ ರುಚಿಯನ್ನು ಹೊಂದಿದೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಇದಕ್ಕೆ ಸಿಹಿಯನ್ನು ಸೇರಿಸಬಹುದು. ಈ ಖಾದ್ಯಕ್ಕೆ, ನೀವು ಟೊಮ್ಯಾಟೊ, ಅರಿಶಿನ, ಸಾಂಬಾರ್ ಪುಡಿ, ಕೆಂಪು ಮೆಣಸಿನಕಾಯಿಗಳು ಮತ್ತು ಸಿಹಿಗಾಗಿ ಬೆಲ್ಲವನ್ನು ಸೇರಿಸಬೇಕು.

ಒಟ್ಟಿನಲ್ಲಿ ದೋಸೆ ಮಾಡಿದಾಗಲೆಲ್ಲಾ ಅದರ ರುಚಿಯನ್ನು ದುಪ್ಪಟ್ಟುಮಾಡುವ ಕಾಂಬಿನೇಷನ್‌ ಏನು ಮಾಡೋದಪ್ಪಾ ಅಂತ ಯೋಚಿಸುವ ಆಹಾರ ಪ್ರೇಮಿಗಳಿಗೆ ಇದೊಂದು ಉತ್ತಮ ಅವಕಾಶ. ಬಿಡುವಾದಾಗ ಇಂತಹ ವಿಭಿನ್ನ ಡಿಶ್‌ ಗಳನ್ನು ತಯಾರಿಸಿ ದೋಸೆಯೊಂದಿಗೆ ಸವಿದು ನೋಡಿ.

ವಿಭಾಗ