Silk Saree: ರೇಷ್ಮೆ ಸೀರೆ ಹಾಳಾಗದಂತೆ ಜೋಪಾನ ಮಾಡುವುದು ಹೇಗೆ; ಇಲ್ಲಿದೆ ಸಲಹೆ
Silk Clothes: ರೇಷ್ಮೆ ಸೀರೆ ಅಥವಾ ಬಟ್ಟೆಗಳು ದುಬಾರಿ ಹಾಗೂ ಸಾವಯವ ಉತ್ಪನ್ನಗಳನ್ನು ಬಳಸಿ ತಯಾರಿಸುವ ಕಾರಣ ಅವುಗಳನ್ನು ಜೋಪಾನವಾಗಿ ಜತನ ಮಾಡಬೇಕು. ಕೆಲವು ಸರಳ ಉಪಾಯಗಳನ್ನು ಅನುಸರಿಸುವ ಅವುಗಳ ಬಣ್ಣ ಮಾಸದಂತೆ, ಸದಾ ಹೊಸತರಂತೆ ಇರಿಸಬಹುದು. ಹಾಗಾದರೆ ರೇಷ್ಮೆ ಬಟ್ಟೆಗಳನ್ನು ಹಾಳಾಗದಂತೆ ಜೋಪಾನ ಮಾಡುವುದು ಹೇಗೆ, ಇಲ್ಲಿದೆ ಸಲಹೆ.
ಸೀರೆ ಭಾರತೀಯ ನಾರಿಯರ ಮೆಚ್ಚಿನ ಉಡುಪು. ಸೀರೆಗೂ ನಾರಿಗೂ ಅವಿನಾಭಾವ ಸಂಬಂಧ. ಎಷ್ಟೇ ಭಿನ್ನ ವಿನ್ಯಾಸ, ಬಟ್ಟೆಯ ಸೀರೆಗಳು ಮಾರುಕಟ್ಟೆಯನ್ನು ಅಲಂಕರಿಸಿದರೂ ರೇಷ್ಮೆ ಸೀರೆಯ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ರೇಷ್ಮೆ ಸೀರೆಯ ಅಂದ, ಗುಣವೇ ಹಾಗೆ. ಸಾಮಾನ್ಯವಾಗಿ ಮಹಿಳೆಯರ ಬಳಿ ಇರುವ ದುಬಾರಿ ಸೀರೆಗಳಲ್ಲಿ ರೇಷ್ಮೆ ಸೀರೆ ಮೊದಲ ಸ್ಥಾನದಲ್ಲಿರುತ್ತದೆ.
ರೇಷ್ಮೆಯ ಸೀರೆಯ ಮೇಲಿ ಒಲವು ಹೇಗೆ ಎಂದರೆ ಅಜ್ಜಿ, ಅಮ್ಮ ತಮ್ಮ ಮದುವೆಯಂದು ಧರಿಸಿದ ರೇಷ್ಮೆ ಸೀರೆಯನ್ನು ಮಕ್ಕಳು ಉಡುವುದನ್ನು ನೋಡಿದ್ದೇವೆ. ಹಿಂದೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಇದು ಟ್ರೆಂಡ್ ಆಗಿತ್ತು. ಅದೆಲ್ಲಾ ಸರಿ ಈ ರೇಷ್ಮೆ ಸೀರೆಯನ್ನು ಜತನ ಮಾಡುವುದು ಹೇಗೆ, ಎಷ್ಟುಗಳು ಕಳೆದರೂ ಅದನ್ನು ಹೊಸತರಂತೆ ಇರಿಸುವುದು ಹೇಗೆ, ಇದೆಲ್ಲಾ ಪ್ರಶ್ನೆಗಳು ಕಾಡುವುದು ಸಹಜ. ವರ್ಷಗಳು ಕಳೆದಂತೆ ಬಣ್ಣ ಮಾಸುತ್ತದೆ, ಹೊಳಪು ಕಡಿಮೆಯಾಗುತ್ತದೆ. ಆ ಕಾರಣಕ್ಕೆ ಇವುಗಳನ್ನು ಜೋಪಾನ ಮಾಡುವುದು ಅವಶ್ಯ.
ರೇಷ್ಮೆ ಸೀರೆಗಳನ್ನು ಜೋಪಾನ ಮಾಡಲು ಇಲ್ಲಿವೆ ಸರಳ ಟಿಪ್ಸ್
* ರೇಷ್ಮೆ ಸೀರೆ ಅಥವಾ ರೇಷ್ಮೆ ಬಟ್ಟೆಗಳಿಗೆ ಧೂಳು ತಾಕದಂತೆ ನೋಡಿಕೊಳ್ಳುವುದು ಅವಶ್ಯ. ಆ ಕಾರಣಕ್ಕೆ ಅವುಗಳನ್ನು ಸ್ವಚ್ಛ ಹಾಗೂ ಒಣ ಮಸ್ಲಿನ್ ಬಟ್ಟೆ ಅಥವಾ ಹತ್ತಿ ಚೀಲದಲ್ಲಿ ಇರಿಸಬೇಕು. ಮಸ್ಲಿನ್ ಬಟ್ಟೆ ಅಥವಾ ಹತ್ತಿಚೀಲವನ್ನು ಡಿಸ್ಟಾರ್ಚ್ ಅಥವಾ ಅನ್‌ಬ್ಲೀಚ್ ಮಾಡಬೇಕು. ಈಗ ಇಂತಹ ಸೀರೆ ಚೀಲಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಬಿಳಿ ಬಣ್ಣದ ಹತ್ತಿ ಚೀಲವನ್ನು ಖರೀದಿಸಬೇಕು, ಬಳಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಬೇಕು.
* ಜಾಗವಿದ್ದರೆ ಸೀರೆಗಳನ್ನು ಸುತ್ತಿ ಇಡುವುದು ಉತ್ತಮ. ಮಡಿಸುವುದು ಅವಶ್ಯ ಎನ್ನಿಸಿದರೆ ಮಡಿಸಿದ ಮೇಲೆ ತುದಿಗಳನ್ನು ಟಿಶ್ಯೂ ಪೇಪರ್‌ನಿಂದ ಅಂಟಿಸಿ. ಒಂದರ ಮೇಲೆ ಒಂದರಂತೆ ಸೀರೆ ಇರಿಸುವಾಗ ನಡುವೆ ಟಿಶ್ಯೂ ಪೇಪರ್ ಇರಿಸುವುದನ್ನು ಮರೆಯದಿರಿ.
* ಹಳೆಯ ರೇಷ್ಮೆ ಸೀರೆಯಾದರೆ ಅದನ್ನು ಜೋಪಾನ ಮಾಡುವುದು ಸ್ವಲ್ಪ ಕಷ್ಟ. ಆ ಕಾರಣಕ್ಕೆ ಅದು ಹಾಳಾಗದಂತೆ ನೋಡಿಕೊಳ್ಳಲು ಇದ್ದಿಲು ಬಟ್ಟೆಯಲ್ಲಿ ಸುತ್ತಿ ಇಡುವುದು ಉತ್ತಮ. ಸೀರೆಯನ್ನು ವಿವಿಧ ಕ್ಷೀಣಿಸುವ ಅಂಶಗಳಿಂದ ಸುರಕ್ಷಿತವಾಗಿರಿಸುತ್ತದೆ.
* ರೇಷ್ಮೆ ಸೀರೆಯನ್ನು ಇಡುವ ಜಾಗದ ಬಗ್ಗೆಯೂ ಗಮನ ಕೊಡುವುದು ಮುಖ್ಯವಾಗುತ್ತದೆ. ಬೆಲೆಬಾಳುವ ಬಟ್ಟೆಗಳನ್ನು ಸ್ವಚ್ಛ ಮತ್ತು ಶುಷ್ಕ ಜಾಗದಲ್ಲಿ ಇರಿಸಬೇಕು. ಅಗತ್ಯವಿದ್ದರೆ, ತೇವಾಂಶ ಹೀರಿಕೊಳ್ಳುವಂತೆ ಮಾಡಲು ಹಾಗೂ ಸೀರೆ ಇಡುವ ಜಾಗವನ್ನು ಒಣಗಿಸಲು ಆ ಜಾಗದಲ್ಲಿ ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಇರಿಸಬಹುದು. ಆದರೆ ನೇರವಾಗಿ ಬಟ್ಟೆಗೆ ತಾಕದಂತೆ ನೋಡಿಕೊಳ್ಳಬೇಕು.
* ಚಳಿಗಾಲದಲ್ಲಿ ರೇಷ್ಮೆ ಸೀರೆಯನ್ನು ಪ್ಯಾಕ್ ಮಾಡುವ ಮೊದಲು ಅವುಗಳಲ್ಲಿ ಯಾವುದೇ ಕಲೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಹಾರ ಕಲೆಗಳು, ಜಿಡ್ಡಿನಂಶ ಮುಂತಾದವು ಇದ್ದರೆ ಡ್ರೈಕ್ಲೀನಿಂಗ್ ಕೊಟ್ಟು ಸ್ವಚ್ಛಗೊಳಿಸಿ. ಅವುಗಳನ್ನು ಮಡಿಸಿ ಬ್ಯಾಗ್ ಅಥವಾ ಕಪ್‌ಬೋರ್ಡ್‌ನಲ್ಲಿ ಇಡುವ ಮೊದಲು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಇರಿಸಿ.
* ರೇಷ್ಮೆ ಸೀರೆಯ ಜೊತೆ ಯಾವುದೇ ಉಣ್ಣೆಯ ಬಟ್ಟೆ, ಪ್ಲಾಸ್ಟಿಕ್ ವಸ್ತುಗಳು, ರಬ್ಬರ್ ಬ್ಯಾಂಡ್ ಹಾಗೂ ಲೋಹದ ವಸ್ತುಗಳನ್ನು ಇರಿಸುವುದನ್ನು ತಪ್ಪಿಸಿ. ಇದರಿಂದ ರೇಷ್ಮೆ ಸೀರೆಯ ಝರಿಗಳು ಬೇಗನೆ ಸವೆಯಬಹುದು ಅಥವಾ ಕಪ್ಪಾಗಬಹುದು.
* ರೇಷ್ಮೆ ಸೀರೆ ಅಥವಾ ಬಟ್ಟೆಗೆ ಯಾವುದೇ ರೀತಿಯ ಸುಗಂಧ ದ್ರವ್ಯ ಅಥವಾ ಡಿಯೋಡ್ರೆಂಟ್‌ಗಳನ್ನು ತಾಕಿಸಬೇಡಿ. ಇದು ಕೂಡ ಝರಿಯ ಹೊಳಪು ಹಾಗೂ ಬಣ್ಣ ಮಾಸಲು ಕಾರಣವಾಗಬಹುದು.
ಪ್ರತಿ ಬಾರಿ ಸೀರೆ ಅಥವಾ ರೇಷ್ಮೆ ಬಟ್ಟೆಗಳನ್ನು ತೊಟ್ಟ ನಂತರ ಬಿಸಿಲಿಗೆ ಹಾಕಲು ಮರೆಯದಿರಿ. ನೀರಿನಿಂದ ತೊಳೆಯುವುದನ್ನು ತಪ್ಪಿಸುವುದು ಉತ್ತಮ. ಒಂದು ವೇಳೆ ಕಲೆಯಾಗಿದ್ದರೆ ಕಲೆಯಾದ ಭಾಗವನ್ನು ಮಾತ್ರ ನೀರಿನಿಂದ ತೊಳೆಯಿರಿ. ಆದರೆ ಗಟ್ಟಿಯಾಗಿ ಉಜ್ಜುವುದು, ಬ್ರಷ್ ಬಳಸುವುದು ಮಾಡದಿರಿ. ಸದಾ ಬಿಸಿಲಿನಲ್ಲಿ ಒಣಗಿಸುವುದು ಮುಖ್ಯ, ಇದರೊಂದಿಗೆ ರೇಷ್ಮೆ ಸೀರೆಯನ್ನು ವರ್ಷದಲ್ಲಿ ಎರಡು ಬಾರಿ ಬಿಸಿಲಿಗೆ ಹಾಕುವುದು ಬಹಳ ಮುಖ್ಯ.
ವಿಭಾಗ