Green Tea: ತೂಕ ಇಳಿಕೆಗಷ್ಟೇ ಅಲ್ಲ; ತ್ವಚೆಯ ಅಂದಕ್ಕೂ ಬೇಕು ಗ್ರೀನ್ ಟೀ; ಆದರೆ ಬಳಕೆಯ ಕ್ರಮ ತಿಳಿದಿರಲಿ
Green Tea For Skin Health: ಗ್ರೀನ್ ಟೀ ಕುಡಿಯುವುದರಿಂದ ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಚರ್ಮದ ಸಮಸ್ಯೆಗಳಿಗೂ ಗ್ರೀನ್ ಟೀ ಮದ್ದು. ತ್ವಚೆಯ ಅಂದಕ್ಕೆ ಗ್ರೀನ್ ಬಳಕೆ ಎಷ್ಟು ಅವಶ್ಯ, ಇದರಿಂದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ, ಇದರ ಬಳಕೆಯ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗ್ರೀನ್ ಟೀ ಸೇವನೆಯಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಸುವುದರಿಂದ ಹೃದಯದ ಆರೋಗ್ಯದವರೆಗೆ ಇದರ ಸೇವನೆಯಿಂದ ದೇಹಕ್ಕಾಗುವ ಉಪಯೋಗಗಳು ಹಲವು. ಇದರೊಂದಿಗೆ ತ್ವಚೆಯ ಅಂದ ಹೆಚ್ಚಿಸುವ ಗುಣವೂ ಇದರಲ್ಲಿದೆ ಎಂಬುದು ಹಲವರಿಗೆ ತಿಳಿದಿರಕ್ಕಿಲ್ಲ. ಸೌಂದರ್ಯ ಉತ್ಪನ್ನಗಳಲ್ಲಿ ಕೂಡ ಗ್ರೀನ್ ಟೀಯನ್ನು ಬಳಸುತ್ತಾರೆ. ತ್ವಚೆಯ ಸೌಂದರ್ಯ ಮತ್ತು ಗ್ರೀನ್ ಟೀ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಚರ್ಮರೋಗ ತಜ್ಞೆ ಡಾ. ಆಂಚಲ್ ಪಂಥ್.
ʼಗ್ರೀನ್ ಟೀ ಹಲವು ರೀತಿಯಲ್ಲಿ ಚರ್ಮವನ್ನು ಆರೈಕೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ, ಯುವಿ ಕಿರಣಗಳಿಂದ ತ್ವಚೆಯನ್ನು ರಕ್ಷಿಸುವ ಗುಣ, ಅಕಾಲಿಕ ನೆರೆ ತಡೆಯುವುದು, ಉರಿಯೂತದ ಲಕ್ಷಣಗಳನ್ನು ನಿವಾರಿಸುತ್ತದೆ. ತ್ವಚೆಯ ಸುಕ್ಕುಗಳ ರಿಪೇರಿಗೂ ಇದು ಸಹಕಾರಿ.
ಗ್ರೀನ್ ಟೀಯಿಂದ ಚರ್ಮಕ್ಕೆ ಉಪಯೋಗಗಳು
ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು
ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿವೆ. ವಿಶೇಷವಾಗಿ ಕ್ಯಾಟೆಚಿನ್‌ಗಳು ಫ್ರಿ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ. ಇವು ಉತ್ಕರ್ಷಣ ನಿರೋಧಕಗಳು ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಹಾಗೂ ಒಟ್ಟಾರೆ ಚರ್ಮದ ಆರೋಗ್ಯ ಸುಧಾರಿಸಲು ಇದು ಸಹಕಾರಿ.
ಉರಿಯೂತದ ಪರಿಣಾಮಗಳು
ಗ್ರೀನ್ ಟೀ ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ಅಲ್ಲದೆ ಉರಿಯೂತದಿಂದ ಉಂಟಾಗುವ ಚರ್ಮ ಕಿರಿಕಿರಿಯನ್ನೂ ತಡೆಯುತ್ತದೆ. ಚರ್ಮ ಕೆಂಪಾಗುವುದನ್ನು ನಿಯಂತ್ರಿಸುತ್ತದೆ. ಮೊಡವೆ, ರೊಸಾಸಿಯ, ಎಕ್ಸಿಮಾದಂತಹ ಸಮಸ್ಯೆಗಳಿಗೂ ಇದು ಮದ್ದು.
ಯುವಿ ಕಿರಣಗಳಿಂದ ರಕ್ಷಣೆ
ಗ್ರೀನ್ ಟೀಯು ಪಾಲಿಫಿನಾಲ್‌ಗಳನ್ನು ಹೊಂದಿ ಇದು ಸೂರ್ಯನ ಅತಿ ನೇರಳೆ ವಿಕಿರಣಗಳಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ವಿರುದ್ಧ ರಕ್ಷಣೆ ನೀಡುತ್ತದೆ. ಸ್ಕ್ರೀನ್ ಬಳಕೆಯ ಜೊತೆಗೆ ಗ್ರೀನ್ ಟೀಯನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ಸನ್‌ಸ್ಕ್ರೀನ್ ಬಳಸದೇ ಇರುವುದು ತಪ್ಪು.
ಮೊಡವೆ ನಿವಾರಣೆ
ಗ್ರೀನ್ ಟೀಯಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಅಂಶಗಳು ಮೊಡವೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಇದು ಮೇಧೋಗ್ರಂಥಿಗಳ ಸ್ರಾವವನ್ನು ಕಡಿಮೆ ಮಾಡಲು ಹಾಗೂ ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮ ಆರೈಕೆಯಲ್ಲಿ ಗ್ರೀನ್ ಟೀ ಸೇರಿಸುವುದು ಹೇಗೆ?
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಚರ್ಮದ ಆರೈಕೆಯಲ್ಲಿ ಗ್ರೀನ್ ಟೀ ಬಳಕೆ ಹೇಗೆ ಎಂಬ ಬಗ್ಗೆ ಚರ್ಮರೋಗ ತಜ್ಞೆ ಡಾ. ಪ್ರಿಯಾ ಅವರು ನೀಡಿದ ಸಂದರ್ಶನ ಹೀಗಿದೆ.
ಕ್ಲೆನ್ಸರ್: ಗ್ರೀನ್ ಟೀಯನ್ನು ಕ್ಲೆನ್ಸರ್ ರೂಪದಲ್ಲಿ ಬಳಸಬಹುದು. ಗ್ರೀನ್ ಟೀಯನ್ನು ಚೆನ್ನಾಗಿ ಕುದಿಸಿ ತಣಿದ ಮೇಲೆ ಕ್ಲೆನ್ಸರ್ ರೂಪದಲ್ಲಿ ಬಳಸಬಹುದು.
ಗ್ರೀನ್ ಟೀ ಫೇಸ್ ಮಾಸ್ಕ್: ಗ್ರೀನ್ ಟೀ ಪುಡಿಯನ್ನು ಜೇನುತುಪ್ಪ, ಮೊಸರು ಹಾಗೂ ಮುಲ್ತಾನಿಮಿಟ್ಟಿಯೊಂದಿಗೆ ಬೆರಿಸಿ ಫೇಸ್‌ಮಾಸ್ಕ್ ತಯಾರಿಸಬಹುದು. ಇದನ್ನು ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಟ್ಟು ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.
ಟೋನರ್: ಗ್ರೀನ್ ಟೀಯನ್ನು ಕುದಿಸಿ, ತಣ್ಣಗಾದ ಮೇಲೆ ಹತ್ತಿ ಉಂಡೆಯಿಂದ ಮುಖ ಹಾಗೂ ಚರ್ಮದ ಮೇಲೆ ಹಚ್ಚಬಹುದು. ಇದು ಟೋನರ್ ರೀತಿ ಕೆಲಸ ಮಾಡುತ್ತದೆ.
ಮಾಯಿಶ್ಚರೈಸರ್: ಚರ್ಮವನ್ನು ಹೈಡ್ರೇಟ್ ಮಾಡಲು ಕೂಡ ಗ್ರೀನ್ ಟೀ ಸಹಕಾರಿ. ಗ್ರೀನ್ ಟೀ ಅಂಶ ಇರುವ ಮಾಯಿಶ್ಚರೈಸರ್ ಬಳಕೆ ಉತ್ತಮ.
ಚರ್ಮ ಆರೈಕೆಗೆ ಗ್ರೀನ್ ಟೀ ಬಳಸುವ ಮುನ್ನ
ಪ್ಯಾಚ್ ಟೆಸ್ಟ್: ಗ್ರೀನ್ ಟೀ ಎಲ್ಲಾ ರೀತಿಯ ಚರ್ಮಕ್ಕೂ ಹೊಂದುವುದಿಲ್ಲ. ಆ ಕಾರಣಕ್ಕೆ ಮೊದಲು ಸಣ್ಣ ಜಾಗದಲ್ಲಿ ಹಚ್ಚಿ ನೋಡಿ. ಅದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗದೇ ಇದ್ದರೆ ನಂತರ ನಿರಂತರವಾಗಿ ಬಳಸಿ.
ಗ್ರೀನ್ ಟೀ ಗುಣಮಟ್ಟ ನೋಡಿಕೊಳ್ಳಿ: ನೀವು ತ್ವಚೆಗೆ ಬಳಸುವ ಗ್ರೀನ್ ಆಯ್ಕೆ ಮಾಡಿಕೊಳ್ಳುವ ಮುನ್ನ ಅದರ ಗುಣಮಟ್ಟವನ್ನು ಪರಿಶೀಲಿಸಿ. ಸಾವಯವ ಗ್ರೀನ್ ಟೀ ತ್ವಚೆಗೆ ಉತ್ತಮ.
ಚರ್ಮದ ಸೂಕ್ಷ್ಮತೆ: ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಗ್ರೀನ್ ಟೀ ಬಳಕೆಗೂ ಮುನ್ನ ತಜ್ಞರ ಬಳಿ ಸಲಹೆ ಪಡೆಯುವುದು ಉತ್ತಮ.
ವಿಭಾಗ