ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸರಿಯಾದ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಹೇಗೆ, ಯಾವ ಅಂಶ ಗಮನಿಸಬೇಕು; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸರಿಯಾದ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಹೇಗೆ, ಯಾವ ಅಂಶ ಗಮನಿಸಬೇಕು; ಇಲ್ಲಿದೆ ಮಾಹಿತಿ

ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸರಿಯಾದ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಹೇಗೆ, ಯಾವ ಅಂಶ ಗಮನಿಸಬೇಕು; ಇಲ್ಲಿದೆ ಮಾಹಿತಿ

ಬೇಸಿಗೆ ಆರಂಭವಾದ ಕೂಡಲೇ ಚರ್ಮದ ಕಾಳಜಿ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ಸಮಯದಲ್ಲಿ ಸನ್‌ಸ್ಕ್ರೀನ್ ಬಳಕೆ ಅತ್ಯವಶ್ಯ. ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸನ್‌ಸ್ಕ್ರೀನ್ ಆಯ್ಕೆ ಮಾಡಿಕೊಳ್ಳುವುದು ಹೇಗೆ ನೋಡಿ.

ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸರಿಯಾದ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಹೇಗೆ?
ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸರಿಯಾದ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಹೇಗೆ? (PC: HT File Photo )

ಬೇಸಿಗೆ ಆರಂಭವಾಗುವ ಈ ಹೊತ್ತಿನಲ್ಲೇ ಬಿಸಿಲ ಝಳ ಜೋರಾಗಿದೆ. ಈ ವರ್ಷ ಬಿಸಿಲಿನ ಪ್ರತಾಪ ಇನ್ನೂ ಜೋರಿದೆ. ಈ ಸಮಯದಲ್ಲಿ ಆರೋಗ್ಯ ಹಾಗೂ ಚರ್ಮದ ಕಾಳಜಿಗೆ ವಿಶೇಷ ಗಮನ ಕೊಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಚರ್ಮಕ್ಕೆ ಹಾನಿ ಮಾಡುವ ಕಾರಣ ಸನ್‌ಸ್ಕ್ರೀನ್ ಬಳಕೆಯ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು.

ಹಾಗಂತ ಎಲ್ಲರಿಗೂ ಎಲ್ಲಾ ಸನ್‌ಸ್ಕ್ರೀನ್ ಹೊಂದಿಕೆ ಆಗುವುದಿಲ್ಲ. ಸನ್‌ಸ್ಕ್ರೀನ್ ಬಳಕೆಯ ವಿಚಾರದಲ್ಲಿ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡಿರಬೇಕು. ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನಾವು ಸನ್‌ಸ್ಕ್ರೀನ್ ಬಳಕೆ ಮಾಡಬೇಕು. ಡಲ್‌ ಸ್ಕಿನ್‌ ಇರುವವರಿಗೆ, ಆಯಿಲ್ ಸ್ಕಿನ್ ಇರುವವರಿಗೆ, ಬಿರುಕು ಚರ್ಮದವರಿಗೆ ಹೀಗೆ ಪ್ರತಿ ಚರ್ಮದ ಪ್ರಕಾರಕ್ಕೂ ಹೊಂದುವ ಸನ್‌ಸ್ಕ್ರೀನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸನ್‌ಸ್ಕ್ರೀನ್‌ ಕುರಿತು ಒಂದಿಷ್ಟು ವಿಚಾರಗಳು ಇಲ್ಲಿವೆ.

ಸನ್‌ಸ್ಕ್ರೀನ್ ಬಳಕೆ ಅವಶ್ಯ ಏಕೆ?

ಸೂರ್ಯನ ವಿಕಿರಣಗಳಿಂದ ರಕ್ಷಣೆ: ಸೂರ್ಯನ ಯುವಿ ಕಿರಣ ಅಥವಾ ಅತಿ ನೇರಳೆ ಕಿರಣಗಳು ಚರ್ಮಕ್ಕೆ ಉಂಟು ಮಾಡುತ್ತವೆ. ಚರ್ಮದ ಮೇಲೆ ಯುವಿ ಕಿರಣಗಳ ಹಾನಿಯನ್ನು ನಿರ್ಬಂಧಿಸಲು ಸನ್‌ಸ್ಕ್ರೀನ್ ತಡೆಗೋಡೆಯಾಗಿ ಕೆಲಸ ಮಾಡುತ್ತದೆ. ಇದು ಬಿಸಿಲಿನ ಬೇಗೆಯನ್ನು ತಡೆಯುತ್ತದೆ ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ.

ವಯಸ್ಸಾಗುವಿಕೆ ವಿರೋಧಿ ಅಂಶಗಳು: ಪ್ರತಿದಿನ ಸನ್‌ಸ್ಕ್ರೀನ್ ಹಚ್ಚುವುದರಿಂದ ಚರ್ಮದಲ್ಲಿ ಕಾಣಿಸುವ ವಯಸ್ಸಾಗುವ ಲಕ್ಷಣಗಳು ಗೋಚರವಾಗುವುದಿಲ್ಲ. ಇದು ತಕ್ಷಣದ ಹಾನಿಯನ್ನು ತಡೆದು ಸುಕ್ಕು, ನೆರಿಗೆ ಉಂಟಾಗದಂತೆ ಕಾಪಾಡುತ್ತದೆ. ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವ ಜೊತೆಗೆ ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಸನ್‌ಸ್ಕ್ರೀನ್ ಆಯ್ಕೆ

ಎಣ್ಣೆಯಂಶ ಇರುವ ಚರ್ಮಕ್ಕೆ ಸನ್‌ಸ್ಕ್ರೀನ್

ನಿಮ್ಮದು ಆಯಿಲ್ ಸ್ಕಿನ್ ಆಗಿದ್ದರೆ ನೀವು ಬಳಸುವ ಸನ್‌ಸ್ಕ್ರೀನ್‌ನಲ್ಲಿ ಎಣ್ಣೆಯುಂಶ ಹೆಚ್ಚಿದ್ದರೆ ಇದು ಮೊಡವೆ ಹಾಗೂ ಚರ್ಮದ ಹೊಳಪಿನ ಮೇಲೆ ಪರಿಣಾಮ ಬೀರಬಹುದು. ಆಯಿಲ್‌ ಸ್ಕಿನ್‌ಗೆ ಎಣ್ಣೆ ಮುಕ್ತ, ಕಾಮೆಡೋಜೆನಿಕ್ ಅಂಶ ಇರುವ ಸನ್‌ಸ್ಕ್ರೀನ್ ಬಳಕೆ ಉತ್ತಮ. ಇದು ರಂಧ್ರಗಳನ್ನು ಮುಚ್ಚದೇ ಎಣ್ಣೆ ಅಂಶ ಉತ್ಪಾದನೆಗೊಳಿಸುವುದನ್ನು ಸಮತೋಲನಗೊಳಿಸಬೇಕು.

ಈ ಅಂಶ ಗುರುತಿಸಿ: ಎಣ್ಣೆಯುಕ್ತ ಚರ್ಮಕ್ಕಾಗಿ ಸನ್‌ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ನಿಯಾಸಿನಮೈಡ್, ಸತು, ಗ್ರೀನ್‌ ಟೀ ಮತ್ತು ಸಿಕಾದಂತಹ ಪದಾರ್ಥಗಳನ್ನು ನೋಡಿ. ಹಗುರವಾದ, ಎಣ್ಣೆ-ಮುಕ್ತ, ಜೆಲ್ ಆಧಾರಿತ ಸನ್‌ಸ್ಕ್ರೀನ್‌ಗಳು ನಿಮಗೆ ಉತ್ತಮ.

ಒಣ ಚರ್ಮ ಇರುವವರಿಗೆ ಸನ್‌ಸ್ಕ್ರೀನ್

ನಿಮ್ಮದು ಒಣ ಚರ್ಮವಾಗಿದ್ದರೆ ಚರ್ಮ ಸಿಪ್ಪೆ ಏಳುವುದು, ನಿರ್ಜಲೀಕರಣ, ಚರ್ಮ ಬಿಗಿಯಾಗುವುದು ಮುಂತಾದ ಲಕ್ಷಣಗಳನ್ನು ನೀವು ಗುರುತಿಸಬಹುದು. ಒಣಚರ್ಮಕ್ಕೆ ಚರ್ಮವನ್ನು ಹೈಡ್ರೇಟ್ ಮಾಡುವ ಸನ್‌ಸ್ಕ್ರೀನ್‌ಗಳು ಬಹಳ ಮುಖ್ಯ. ಇವು ಚರ್ಮದಲ್ಲಿ ತೇವಾಂಶ ಉಳಿಸುವ ಜೊತೆಗೆ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ.

ಈ ಅಂಶ ಇರಲಿ: ಒಣ ಚರ್ಮದವರು ಸನ್‌ಸ್ಕ್ರೀನ್ ಆಯ್ಕೆ ಮಾಡುವಾಗ ಸೆರಾಮೈಡ್‌ಗಳು, ಗ್ಲಿಸರಿನ್ ಮತ್ತು ಅಲೋವೆರಾದಂತಹ ಅಂಶಗಳು ಇರುವಂತೆ ನೋಡಿಕೊಳ್ಳಬೇಕು. ಕೆನೆಭರಿತ, ಹೈಡ್ರೇಟಿಂಗ್ ಕ್ರೀಮ್‌ಗಳು ನಿಮ್ಮ ಚರ್ಮಕ್ಕೆ ಹೇಳಿ ಮಾಡಿಸಿದಂತಿರುತ್ತವೆ.

ಸೂಕ್ಷ್ಮ ಚರ್ಮದವರಿಗೆ ಸನ್‌ಸ್ಕ್ರೀನ್

ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ನಿಮ್ಮ ಚರ್ಮವು ಸುಲಭವಾಗಿ ಕೆಂಪಾಗುವುದು, ಕಿರಿಕಿರಿ ಮತ್ತು ಅಲರ್ಜಿಗೆ ಒಳಗಾಗುತ್ತದೆ. ನಿಮಗೆ ಸುರಕ್ಷಿತ ಪದಾರ್ಥಗಳು ಮತ್ತು ಸುಗಂಧವನ್ನು ಹೊಂದಿರುವ ಸೌಮ್ಯವಾದ ಸನ್‌ಸ್ಕ್ರೀನ್ ಅಗತ್ಯವಿದೆ.

ಸೂಕ್ಷ್ಮ ಚರ್ಮಕ್ಕಾಗಿ ಸ್ಕ್ವಾಲೇನ್, ಗ್ರೀನ್ ಟೀ, ಹೈಲುರಾನಿಕ್ ಆಮ್ಲ, ಅಲೋ, ಟೈಟಾನಿಯಂ ಅಥವಾ ಸತು ಆಕ್ಸೈಡ್‌ನಂತಹ ಹೈಡ್ರೇಟಿಂಗ್ ಪದಾರ್ಥಗಳಿಂದ ಕೂಡಿರುವ ಸನ್‌ಸ್ಕ್ರೀನ್ ಆಯ್ಕೆ ಮಾಡಬೇಕು.

ಸಂಯೋಜಿತ ಚರ್ಮ

ಸಂಯೋಜಿತ ಚರ್ಮ ಅಥವಾ ಕಾಂಬಿನೇಷನ್ ಸ್ಕಿನ್ ಎಂದರೆ ಒಣ ಹಾಗೂ ಎಣ್ಣೆ ಮುಕ್ತ ಚರ್ಮ. ಈ ರೀತಿಯ ಚರ್ಮದ ಪ್ರಕಾರ ಹೊಂದಿರುವವರಿಗೆ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ನಿಜಕ್ಕೂ ಸವಾಲು. ಚರ್ಮದ ರಂಧ್ರಗಳನ್ನು ಮುಚ್ಚದೇ ಚರ್ಮ ಒಣಗದಂತೆ ನೋಡಿಕೊಳ್ಳುವ ಸನ್‌ಸ್ಕ್ರೀನ್ ಆಯ್ಕೆ ಮಾಡಬೇಕಾಗುತ್ತದೆ.

ಈ ಅಂಶಗಳನ್ನು ಗಮನಿಸಿ: ಹೈಬ್ರಿಡ್ ಅಥವಾ ಹಗುರವಾದ ಕ್ರೀಮ್ ಮತ್ತು ಲೋಷನ್ ಸ್ವರೂಪಗಳಲ್ಲಿ ಹೈಲುರಾನಿಕ್ ಆಮ್ಲ, ನಿಯಾಸಿನಮೈಡ್, ಹಸಿರು ಚಹಾ, ಸತುವಿನಿಂತಹ ಅಂಶ ಇರುವ ಸನ್‌ಸ್ಕ್ರೀನ್‌ಗಳನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ.

ಸಾಮಾನ್ಯ ಚರ್ಮಕ್ಕೆ ಸನ್‌ಸ್ಕ್ರೀನ್

ಯಾವುದೇ ಚರ್ಮದ ಪ್ರಕಾರಕ್ಕಾದರೂ ಚರ್ಮವನ್ನು ಸ್ವಚ್ಛಗೊಳಿಸುವುದು ಹಾಗೂ ಸರಿಯಾದ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯ ಚರ್ಮದ ಪ್ರಕಾರಕ್ಕೆ ಉತ್ತಮವಾದ ಸನ್‌ಸ್ಕ್ರೀನ್ ಎಂದರೆ ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ ಮತ್ತು ಹೈಡ್ರೇಟಿಂಗ್ ಪದಾರ್ಥಗಳನ್ನು ಹೊಂದಿರುವುದು.

ವಿಟಮಿನ್ ಸಿ ಮತ್ತು ಇ ನಂತಹ ಪದಾರ್ಥಗಳನ್ನು ಹೊಂದಿರುವ ಸನ್‌ಸ್ಕ್ರೀನ್ ಬಳಕೆ ಇವರಿಗೆ ಉತ್ತಮ.

ಸನ್‌ಸ್ಕ್ರೀನ್ ಆಯ್ಕೆ ಮಾಡುವಾಗ ಯಾವ ಅಂಶ ಪರಿಗಣಿಸಬೇಕು?

  • ಸ್‌ಪಿಎಪ್‌ ಅಂಶ (SPF): ದೈನಂದಿನ ಬಳಕೆಗೆ ಸೂಕ್ತವಾದ ಸನ್‌ಸ್ಕ್ರೀನ್ 30 ಅಥವಾ ಹೆಚ್ಚಿನ ಎಸ್‌ಪಿಎಫ್ ಅಂಶವನ್ನು ಹೊಂದಿರಬೇಕು. ದೀರ್ಘಕಾಲ ಹೊರಾಂಗಣದಲ್ಲಿ ಇರುವವರು ನೀವಾದ್ರೆ ಎಸ್‌ಪಿಎಫ್‌ ಅಂಶ 50 ಇರುವಂತೆ ಪರಿಗಣಿಸುವುದು ಮುಖ್ಯವಾಗುತ್ತದೆ.
  • ಯುವಿಎ ಮತ್ತು ಯುವಿಬಿ ಕಿರಣಗಳೆರಡರ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸುವ ವಿಶಾಲ-ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ (Broad-spectrum protection) ಅನ್ನು ಆರಿಸಿಕೊಳ್ಳಿ.
  • ವಿನ್ಯಾಸ: ಸನ್‌ಸ್ಕ್ರೀನ್ ಆಯ್ಕೆ ಮಾಡುವಾಗ ಉತ್ಪನ್ನದ ವಿನ್ಯಾಸವನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಎಣ್ಣೆಯುಕ್ತ ಚರ್ಮಕ್ಕೆ ಜೆಲ್ ಆಧಾರಿತ, ಒಣ ಚರ್ಮಕ್ಕೆ ಕ್ರೀಮ್ ಆಧಾರಿತ ಮತ್ತು ಸಂಯೋಜಿತ / ಸಾಮಾನ್ಯ ಚರ್ಮಕ್ಕೆ ಹಗುರವಾದ ಲೋಷನ್‌ಗಳು ಉತ್ತಮವಾಗಿರುತ್ತದೆ.
  • ಪದಾರ್ಥಗಳು: ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಚರ್ಮ ಹೊಂದುವ ಪದಾರ್ಥಗಳು ಇರುವ ಸನ್‌ಸ್ಕ್ರೀನ್‌ಗಳನ್ನು ಖರೀದಿಸಲು ಲೇಬಲ್‌ಗಳನ್ನು ಪರಿಶೀಲಿಸಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.