ಮುಖ ಕಾಂತಿ ಕಳೆದುಕೊಂಡಿದೆ ಎಂದು ಬೇಸರ ಪಡಬೇಡಿ; ಚರ್ಮದ ಹೊಳಪು ಹೆಚ್ಚಿಸಲು ಅರಶಿನವನ್ನು ಹೀಗೆ ಬಳಸಿ
ಮುಖ ಕಾಂತಿ ಕಳೆದುಕೊಂಡಿದೆ ಎಂದು ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳತ್ತ ಮೊರೆ ಹೋಗುತ್ತಾರೆ. ಇದರ ಬದಲು ನೈಸರ್ಗಿಕವಾಗಿ ಸಿಗುವ ಪದಾರ್ಥದಿಂದ ಪ್ರಯೋಜನ ಪಡೆಯಬಹುದು. ಚರ್ಮದ ಹೊಳಪಿಗೆ ಅರಶಿನವನ್ನು ಹೀಗೆ ಬಳಸಿ. (ಬರಹ: ಪ್ರಜ್ವಲಾ)

ಮುಖ ಕಾಂತಿ ಕಳೆದುಕೊಂಡಿದೆ ಎಂದು ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳತ್ತ ಮೊರೆ ಹೋಗುತ್ತಾರೆ. ಪ್ರತಿದಿನ ಬ್ಯೂಟಿ ಕ್ರೀಮ್, ಸೀರಂ, ಫೇಸ್ ವಾಷ್ ಮುಂತಾದ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಇದರಿಂದ ಪ್ರಯೋಜನ ಸಿಗುತ್ತದೆ ಅಂತಾ ಹೇಳಲು ಸಾಧ್ಯವಿಲ್ಲ. ದುಬಾರಿ ಉತ್ಪನ್ನಗಳನ್ನು ಖರೀದಿಸಿ ದುಂದುವೆಚ್ಚ ಮಾಡುವುದರ ಬದಲು ಅಡುಗೆಮನೆಯಲ್ಲಿ ಲಭ್ಯವಿರುವ ಪದಾರ್ಥವನ್ನು ಬಳಸಬಹುದು. ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಸಿಗುವ ಅರಶಿನವು ಸುಲಭವಾಗಿ ಲಭ್ಯವಾಗುವ ಹಾಗೂ ಯಾವುದೇ ರಾಸಾಯನಿಕ ಇಲ್ಲದ ಶುದ್ಧ ಪ್ರಾಕೃತಿಕ ಪರಿಹಾರ.
ತರಕಾರಿ ಹಾಗೂ ಮಾಂಸಾಹಾರಿ ಅಡುಗೆಗಳಿಗೆ ಅರಿಶಿನ ಬಳಸುತ್ತಾರೆ. ಹಾಲಿನೊಂದಿಗೂ ಅರಶಿನ ಬೆರೆಸಿ ಕುಡಿಯುತ್ತಾರೆ. ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಅದರ ಪ್ರಯೋಜನ ಹಲವು. ಇದರಲ್ಲಿ ಶಕ್ತಿಯುತ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಇನ್‌ಫ್ಲಾಮೇಟರಿ ಗುಣಗಳಿವೆ. ಅರಿಶಿನವು ಮುಖದ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮೊಡವೆ, ಕಲೆ, ಕಪ್ಪು ಗುರುತು ಇತ್ಯಾದಿಗಳನ್ನು ಕಡಿಮೆ ಮಾಡಿಸುತ್ತದೆ. ಮುಖ್ಯವಾಗಿ, ಇದು ಎಲ್ಲಾ ರೀತಿಯ ಚರ್ಮದವರಿಗೂ ಸೂಕ್ತವಾಗಿರುತ್ತದೆ.
ಚರ್ಮಕ್ಕೆ ಅರಿಶಿನ ಬಳಕೆಯ ಪ್ರಯೋಜನಗಳು
ಉರಿಯೂತ ನಿವಾರಕ ಗುಣಗಳು: ಅರಿಶಿನದಲ್ಲಿ ಇರುವ ಕರ್ಕುಮಿನ್ ಎಂಬ ಘಟಕ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ ಮತ್ತು ಆಂಟಿ-ಇನ್‌ಫ್ಲಾಮೇಟರಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಿ, ಸೌಂದರ್ಯವನ್ನು ಹೆಚ್ಚಿಸುತ್ತದೆ.
ಮೆಲಾನಿನ್ ಉತ್ಪಾದನೆಯ ನಿಯಂತ್ರಣ: ಅರಿಶಿನವು ಮೆಲಾನಿನ್ ಉತ್ಪಾದನೆಯನ್ನು ತಡೆಯುವ ಮೂಲಕ ಹೈಪರ್‌ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ ಸುಕ್ಕುಗಟ್ಟುವಿಕೆ ತಡೆಯಲು ಸಹಕಾರಿ: ಅರಿಶಿನದ ಆಂಟಿ-ಆಕ್ಸಿಡೆಂಟ್ ಗುಣಗಳು ಮುಪ್ಪಿನ ಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತವೆ. ಚರ್ಮದ ಸುಕ್ಕುಗಟ್ಟುವಿಕೆಯನ್ನು ಇದು ತಡೆಯುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಿ, ಫೈನ್ ಲೈನ್ಸ್ ಮತ್ತು ರಿಂಕಲ್ಸ್ ಕಡಿಮೆ ಮಾಡುತ್ತದೆ.
ಮೊಡವೆಯಿಂದ ಪರಿಹಾರ: ಅರಿಶಿನದ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಮೊಡವೆಗಳನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಮೊಡವೆಗಳ ತೊಂದರೆಯೂ ಕಡಿಮೆಯಾಗುತ್ತದೆ.
ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ: ಚರ್ಮದಲ್ಲಿನ ಕಪ್ಪು ಕಲೆ, ಪಿಗ್ಮೆಂಟೇಷನ್ ಇದ್ದರೆ ಅರಶಿನವನ್ನು ಚರ್ಮಕ್ಕೆ ಹಚ್ಚುವುದರಿಂದ ಅದು ಗುಣವಾಗುತ್ತದೆ. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.
ಚರ್ಮಕ್ಕೆ ಅರಿಶಿನವನ್ನು ಬಳಸುವ ವಿಧಾನಗಳು
ಅರಿಶಿನ ಮತ್ತು ನಿಂಬೆ ಹಣ್ಣಿನ ರಸದ ಪ್ಯಾಕ್: ಇದನ್ನು ತಯಾರಿಸುವುದು ತುಂಬಾ ಸುಲಭ. ಚರ್ಮಕ್ಕೆ ಇದನ್ನು ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸಿ, ಹೈಪರ್‌ಪಿಗ್ಮೆಂಟೇಶನ್ ಕಡಿಮೆ ಮಾಡುತ್ತದೆ.
ಚಮಚ ಅರಿಶಿನ ಪುಡಿ, 2 ಚಮಚ ನಿಂಬೆ ಹಣ್ಣಿನ ರಸ (ನಿಂಬೆ ಬದಲು ಟೊಮೆಟೊ ಕೂಡ ಬಳಸಬಹುದು). ಅರಿಶಿನ ಪುಡಿಯನ್ನು ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಹಾಗೆಯೇ ಬಿಟ್ಟು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.
ಅರಿಶಿನ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್: ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಚರ್ಮವನ್ನು ತೇವಗೊಳಿಸಿ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಬೇಕಾಗುವ ಪದಾರ್ಥಗಳು 1 ಚಮಚ ಅರಿಶಿನ ಪುಡಿ, 1 ಚಮಚ ಜೇನುತುಪ್ಪ. ಅರಿಶಿನ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 10 ರಿಂದ 15 ನಿಮಿಷಗಳ ನಂತರ ತೊಳೆಯಿರಿ.
ಅರಿಶಿನ ಮತ್ತು ಹಾಲು: 1 ಚಮಚ ಅರಿಶಿನ ಪುಡಿಗೆ 2 ಚಮಚ ಹಾಲು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮವನ್ನು ತೇವಗೊಳಿಸಿ, ಮುಖದ ಹೊಳಪನ್ನು ಹೆಚ್ಚಿಸುತ್ತದೆ.
ಅರಿಶಿನ ಮತ್ತು ಮೊಸರು: 1 ಚಮಚ ಅರಿಶಿನ ಪುಡಿಗೆ 2 ಚಮಚ ಮೊಸರು ಬೆರೆಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದು ಚರ್ಮದ ತೈಲ ಸಮತೋಲನವನ್ನು ನಿಯಂತ್ರಿಸಿ, ಹೊಳಪನ್ನು ಹೆಚ್ಚಿಸುತ್ತದೆ.
ಅರಿಶಿನ ಮತ್ತು ಓಟ್ ಮೀಲ್: 1 ಚಮಚ ಅರಿಶಿನ ಪುಡಿ, 1 ಚಮಚ ಓಟ್ ಮೀಲ್ (ಹಾಲು ಅಥವಾ ಮೊಸರಿನಲ್ಲಿ ನೆನೆಸಿರುವ ಓಟ್ಸ್), ಅಗತ್ಯವಿರುವಷ್ಟು ನೀರು ಬೆರೆಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮವನ್ನು ಸ್ವಚ‌್ಛ ಮಾಡಿ, ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಅರಿಶಿನವು ನೈಸರ್ಗಿಕವಾಗಿ ಚರ್ಮದ ಆರೋಗ್ಯವನ್ನು ಸುಧಾರಿಸಲು ಮತ್ತು ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸರಿಯಾದ ವಿಧಾನದಲ್ಲಿ ಮತ್ತು ಮಿತವಾಗಿ ಬಳಸುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆದರೆ, ಹಾಗೆ ಬಳಸುವ ಮೊದಲು ಚರ್ಮದ ಸಣ್ಣ ಭಾಗದಲ್ಲಿ ಒಮ್ಮೆ ಪರೀಕ್ಷಿಸಿ ನೋಡಿ. ಯಾವುದೇ ಅಲರ್ಜಿ ಅಥವಾ ತುರಿಕೆ ಇತ್ಯಾದಿ ಸಮಸ್ಯೆ ಕಂಡು ಬರದಿದ್ದಲ್ಲಿ ನಂತರ ಮುಖಕ್ಕೆ ಹಚ್ಚಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).
ವಿಭಾಗ