ದೇಹದ ದುರ್ಗಂಧದಿಂದ ಪದೇ ಪದೇ ಮುಜುಗರಕ್ಕೆ ಒಳಗಾಗ್ತಾ ಇದೀರಾ, ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವು ಸರಳ ಪರಿಹಾರಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ದೇಹದ ದುರ್ಗಂಧದಿಂದ ಪದೇ ಪದೇ ಮುಜುಗರಕ್ಕೆ ಒಳಗಾಗ್ತಾ ಇದೀರಾ, ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವು ಸರಳ ಪರಿಹಾರಗಳು

ದೇಹದ ದುರ್ಗಂಧದಿಂದ ಪದೇ ಪದೇ ಮುಜುಗರಕ್ಕೆ ಒಳಗಾಗ್ತಾ ಇದೀರಾ, ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವು ಸರಳ ಪರಿಹಾರಗಳು

ಮನೆಯಲ್ಲಿ ಕನ್ನಡಿ ಮುಂದೆ ನಿಂತು, ನೀಟಾಗಿ ರೆಡಿ ಆಗಿ, ಮೈತುಂಬಾ ಘಮ ಬೀರುವ ಪರ್ಫ್ಯೂಮ್ ಹಾಕಿಕೊಂಡು ಹೊರ ಹೋದರೂ, ಸ್ವಲ್ಪ ಹೊತ್ತಿನಲ್ಲೇ ಕೆಲವರ ಮೈಯಿಂದ ವಿಚಿತ್ರ ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಅಕ್ಕಪಕ್ಕದವರಿಂದ ಮುಜುಗರಕ್ಕೆ ಒಳಗಾಗಬೇಕಾಗಬಹುದು. ಇದಕ್ಕೆ ಕಾರಣ ದೇಹದ ದುರ್ಗಂಧ. ಈ ಸಮಸ್ಯೆಯಿಂದ ಹೊರ ಬರುವುದು ಹೇಗೆ ಎಂಬ ವಿವರ ಇಲ್ಲಿದೆ (ಬರಹ: ಪ್ರಜ್ವಲಾ)

ದೇಹದ ದುರ್ಗಂಧಕ್ಕೆ ಕಾರಣ, ಪರಿಹಾರಗಳೇನು?
ದೇಹದ ದುರ್ಗಂಧಕ್ಕೆ ಕಾರಣ, ಪರಿಹಾರಗಳೇನು?

ದೇಹದ ದುರ್ಗಂಧ ಅಥವಾ ದೇಹದ ದುರ್ವಾಸನೆ ಕೆಲವರನ್ನು ಬಿಡದೇ ಕಾಡುವ ಸಮಸ್ಯೆಯಾಗಿರುತ್ತದೆ. ಇದರಿಂದ ಅತಿಯಾದ ಸಂಕೋಚ, ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಇದು ಆತ್ಮವಿಶ್ವಾಸದ ಕೊರತೆಗೂ ಕಾರಣವಾಗಬಹುದು. ಇದಕ್ಕೆ ಪ್ರಮುಖ ಕಾರಣ ಬ್ಯಾಕ್ಟೀರಿಯಾ ಹಾಗೂ ಬೆವರು.

ವಿಪರ್ಯಾಸವೆಂದರೆ, ಅದೆಷ್ಟೋ ಜನರಿಗೆ ತಮ್ಮ ದೇಹದಿಂದ ಈ ರೀತಿಯ ವಾಸನೆ ಬರುತ್ತಿದೆ ಎಂಬ ಬಗ್ಗೆ ಅರಿವೇ ಇರುವುದಿಲ್ಲ, ಇನ್ನು ಕೆಲವರು ಅರಿತಿದ್ದರೂ ಏನು ಮಾಡಬೇಕೆಂದು ತಿಳಿಯದೇ ಸುಮ್ಮನಿರುತ್ತಾರೆ. ಆದರೆ ಇದರಿಂದ ಅಕ್ಕಪಕ್ಕ ಇರುವವರಿಗೆ ಹಿಂಸೆ ತಪ್ಪಿದ್ದಲ್ಲ. ದೇಹ ದುರ್ಗಂಧ ಸಾಮಾನ್ಯ ಸಮಸ್ಯೆಯಾದರೂ ಇದಕ್ಕೆ ಕಾರಣಗಳು ಹಲವಿರುತ್ತದೆ.

ಬದಲಾದ ಹವಾಮಾನ, ಹಾರ್ಮೋನ್‌ಗಳ ಬದಲಾವಣೆ, ಅನುವಂಶಿಕವಾಗಿ ಬಂದಂತಹ ಕೆಲವು ಅಂಶಗಳು ಮತ್ತು ಇತರೆ ಕೆಲವು ಆರೋಗ್ಯ ಸಮಸ್ಯೆಗಳು ದೇಹದ ದುರ್ವಾಸನೆಯನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದರೆ ಆರೋಗ್ಯಕರ ಅಭ್ಯಾಸಗಳು, ಆಹಾರ ನಿಯಂತ್ರಣ ಮತ್ತು ಕೆಲವು ಉಪಯುಕ್ತ ಸಾಮಗ್ರಿಗಳ ಬಳಕೆಯ ಮೂಲಕ ಇದನ್ನು ಸುಲಭವಾಗಿ ನಿಯಂತ್ರಿಸಬಹುದು.

ಸರಿಯಾದ ಕ್ರಮಗಳನ್ನು ಅನುಸರಿಸಿದರೆ, ಈ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಎಚ್‌ಟಿ ಲೈಫ್‌ಸ್ಟೈಲ್‌ (ಇಂಗ್ಲಿಷ್‌) ಜೊತೆಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ ಚರ್ಮರೋಗ ತಜ್ಞೆ ಡಾ. ತೃಪ್ತಿ ಅಗರ್‌ವಾಲ್‌ ಕೆಲವು ಮಾರ್ಗದರ್ಶನಗಳನ್ನು ಸೂಚಿಸಿದ್ದಾರೆ.

ದೇಹದ ದುರ್ವಾಸನೆ ತಡೆಯಲು ಸೂಕ್ತ ಮಾರ್ಗಗಳು

1. ಉತ್ತಮ ಆರೋಗ್ಯಕರ ಅಭ್ಯಾಸಗಳು

ದೇಹದ ದುರ್ವಾಸನೆ ತಡೆಯಲು ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಸರಿಯಾದ ದಿನಚರಿ‌ಗಳನ್ನು ಪಾಲಿಸುವುದು ಅಗತ್ಯ.

  • ಪ್ರತಿ ದಿನ ಸ್ನಾನ ಮಾಡುವುದು: ದಿನಕ್ಕೆ ಕನಿಷ್ಠ ಒಂದರಿಂದ ಎರಡು ಬಾರಿ ಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಬಹುದು. ಶುದ್ಧ ಮತ್ತು ಕೊಳಕುಮುಕ್ತ ಚರ್ಮ ದುರ್ವಾಸನೆಯುಂಟಾಗದಂತೆ ತಡೆಯುತ್ತದೆ.
  • ಸೂಕ್ತವಾದ ಬಟ್ಟೆ ಧರಿಸುವುದು: ಹಗುರವಾದ, ಗಾಳಿ ಸುಲಭವಾಗಿ ಪ್ರವೇಶಿಸಬಹುದಾದ ಕಾಟನ್ ಮತ್ತು ಲೆನಿನ್ ಬಟ್ಟೆಗಳನ್ನು ಧರಿಸುವುದು ಉತ್ತಮ.
  • ಹೆಚ್ಚುವ ಬೆವರುವ ಜಾಗದಲ್ಲಿ ಹೀಗೆ ಮಾಡಿ: ಹೆಚ್ಚು ಬೆವರುವ ಜಾಗ ಒಣಗಿದಂತಿಡಲು ಪೌಡರ್ ಅಥವಾ ಆಂಟಿಪರ್ಸ್ಪಿರಂಟ್‌ಗಳನ್ನು ಬಳಸಬಹುದು.
  • ದೇಹದ ದುರ್ವಾಸನೆ ತಡೆಯಲು ಸೂಕ್ತ ಉತ್ಪನ್ನಗಳ ಬಳಕೆ ಮಾಡುವುದು ಉತ್ತಮ. ಚರ್ಮದ ರೀತಿಗೆ ಅನುಗುಣವಾಗುವಂತೆ ಕೆಲವು ಉತ್ಪನ್ನಗಳು ದುರ್ವಾಸನೆಯನ್ನು ಕಡಿಮೆ ಮಾಡಬಹುದು. ಸೋಪ್, ಬಾಡಿವಾಶ್‌, ಪರ್ಫ್ಯೂಮ್ ಬಳಕೆ.
  • ಆಂಟಿಬ್ಯಾಕ್ಟೀರಿಯಲ್ ಸೋಪ್ ಬಳಕೆ: ಟೀ ಟ್ರೀ ಆಯಿಲ್, ನಿಂಬೆ ಹಣ್ಣಿನ ಸಾರ ಅಥವಾ ಚಾರ್ಕೋಲ್ ಒಳಗೊಂಡ ಸೋಪುಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಬಹುದು.
  • ಎಕ್ಸ್‌ಫೋಲಿಯೇಟಿಂಗ್ (ಮೃದುವಾಗಿ ಚರ್ಮವನ್ನು ಶುಚಿಗೊಳಿಸುವುದು): ಶವರ್ ಲೂಫಾ ಅಥವಾ ಸ್ಕ್ರಬ್ ಬಳಸಿ ನಿರ್ಜೀವ ಚರ್ಮದ ಕೋಶಗಳನ್ನು ತೊಡೆದು ಹಾಕುವುದು ದುರ್ವಾಸನೆ ತಡೆಯಲು ಸಹಕಾರಿ.
  • ಆಂಟಿಮೈಕ್ರೋಬಿಯಲ್ ವೈಪ್ಸ್: ಹೊರಗೆ ಹೋಗುವಾಗ ತಕ್ಷಣದ ತಾಜಾತನಕ್ಕಾಗಿ ಅಲೋವೆರಾ ಅಂಶ ಹೊಂದಿದ ವೈಪ್ಸ್‌ಗಳನ್ನು ಬಳಸಬಹುದು. ಇದರಿಂದ ಬೆವರನ್ನು ನಿವಾರಿಸಲು ಸಾಧ್ಯವಿದೆ.

ಇದನ್ನೂ ಓದಿ: ಮೂತ್ರದ ದುರ್ವಾಸನೆಯಿಂದ ಬೇಸತ್ತಿದ್ದೀರಾ; ಈ ಆಹಾರಗಳ ಸೇವನೆಗೆ ಕಡಿವಾಣ ಹಾಕಿ

2. ಆಹಾರ ಮತ್ತು ಜೀವನಶೈಲಿ ಬದಲಾವಣೆ

  • ದೇಹದ ದುರ್ವಾಸನೆಯನ್ನು ಆಹಾರದ ಮೂಲಕವೂ ನಿಯಂತ್ರಿಸಬಹುದು.
  • ಆಹಾರದ ಮೇಲೆ ಗಮನಹರಿಸಿ: ದಿನನಿತ್ಯ ಸಾಕಷ್ಟು ನೀರು ಕುಡಿಯುವುದು ಬೆವರಿನ ಮೂಲಕ ಹಾನಿಕಾರಕ ಟಾಕ್ಸಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
  • ಹಣ್ಣು, ತರಕಾರಿ ಮತ್ತು ಹಸಿರು ಸೊಪ್ಪುಗಳ ಸೇವನೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
  • ಬೆಳ್ಳುಳ್ಳಿ, ಈರುಳ್ಳಿ, ಅತಿಯಾದ ಮಸಾಲೆಯುಳ್ಳ ಆಹಾರ, ಮತ್ತು ಮಧ್ಯ ಸೇವನೆಯು ದುರ್ವಾಸನೆಯನ್ನು ಹೆಚ್ಚಿಸಬಹುದು.

3. ನೈಜ ಸುವಾಸನೆಯ ತೈಲಗಳ ಬಳಕೆ

  • ಲ್ಯಾವೆಂಡರ್, ರೋಸ್ಮೆರೀ, ಅಥವಾ ಟೀ ಟ್ರೀ ಆಯಿಲ್‌ಗಳ ಬಳಕೆಯಿಂದ ವಾಸನೆ ತಗ್ಗಿಸಬಹುದು.
  • ರಸಾಯನಿಕ ಮುಕ್ತ, ನೈಸರ್ಗಿಕವಾದ ಡಿಯೋಡ್ರೆಂಟ್‌ ಆಯ್ಕೆಗಳು ದುರ್ವಾಸನೆ ತಡೆಯಲು ಸಹಾಯ ಮಾಡಬಹುದು.

ಈ ರೀತಿಯಾಗಿ ಕೆಲವು ಉಪಾಯಗಳನ್ನು ಪಾಲನೆ ಮಾಡಿಕೊಂಡು ಬಂದರೆ, ದೇಹದ ದುರ್ವಾಸನೆಯನ್ನು ತಡೆಗಟ್ಟಬಹುದು.

ದೇಹದ ದುರ್ವಾಸನೆ ಒಂದು ನಿತ್ಯ ಜೀವನದ ಸಾಮಾನ್ಯ ಸಮಸ್ಯೆಯಾಗಿದ್ದರೂ, ಸರಿಯಾದ ಹೈಜೀನ್ ಅಭ್ಯಾಸಗಳು, ಆಹಾರದ ನಿಯಂತ್ರಣ ಮತ್ತು ಸೂಕ್ತ ಉತ್ಪನ್ನಗಳ ಬಳಕೆಯಿಂದ ಇದನ್ನು ನಿಯಂತ್ರಿಸಬಹುದು. ಪ್ರತಿ ದಿನ ಸ್ನಾನ, ನೈಸರ್ಗಿಕ ಡಿಯೋಡರೆಂಟ್ ಬಳಕೆ ಮತ್ತು ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದರಿಂದ ದುರ್ವಾಸನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner