ಕನ್ನಡ ಸುದ್ದಿ  /  Lifestyle  /  Skin Care Tips Effective Home Remedies For Peeling Sunburn Problems Of The Summer Season Beauty Tips Arc

Summer Skin Care: ಬೇಸಿಗೆಯಲ್ಲಿ ಕಾಡುವ ತ್ವಚೆಯ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ; ಪಾಲಿಸಿ ಅಂದ ಹೆಚ್ಚಿಸಿಕೊಳ್ಳಿ

ಬೇಸಿಗೆಯಲ್ಲಿ ತ್ವಚೆಯ ಸಮಸ್ಯೆಗಳು ಸಾಮಾನ್ಯ. ಬೆವರು, ಸನ್‌ಬರ್ನ್‌ನಿಂದಾಗಿ ಉರಿ, ತುರಿಕೆ, ಚರ್ಮ ಸುಲಿದಂತಾಗುತ್ತದೆ. ಬೇಸಿಗೆ ಕಾಲದ ಈ ಸಮಸ್ಯೆಗಳಿಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಸನ್‌ಬರ್ನ್‌ನಿಂದಾದ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.

ಬೇಸಿಗೆಯಲ್ಲಿ ಕಾಡುವ ತ್ವಚೆಯ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ಬೇಸಿಗೆಯಲ್ಲಿ ಕಾಡುವ ತ್ವಚೆಯ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೇಸಿಗೆ ಬಂದಾಕ್ಷಣ ಚರ್ಮದ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಕಾಣಿಸುತ್ತವೆ. ಸನ್‌ಬರ್ನ್‌ನಿಂದ ಹಿಡಿದು ತುರಿಕೆಯವರೆಗೆ ಬೇಸಿಗೆ ಕಾಡುವ ತ್ವಚೆಯ ಸಮಸ್ಯೆಗಳು ಒಂದೆರಡಲ್ಲ. ಈ ಋತುವಿನಲ್ಲಿ ದೀರ್ಘಕಾಲದವರೆಗೆ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ಒಂದಿಲ್ಲೊಂದು ಅಪಾಯ ತಪ್ಪಿದ್ದಲ್ಲ. ಈ ವರ್ಷ ಬಿಸಿಲಿನ ತಾಪ ಜೋರಾಗಿದೆ. ಯುವಿ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಪ್ಪಿಸಿ, ಚರ್ಮದ ಆರೈಕೆ ಮಾಡಿಕೊಳ್ಳಲು ಅಡುಗೆಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಳ್ಳಬಹುದು. ಈ ಮನೆಮದ್ದುಗಳು ಬೇಸಿಗೆ ಕಾಲದಲ್ಲಿ ಉಂಟಾಗುವ ತ್ವಚೆಯ ಹಾನಿಗೆ ಉತ್ತಮ ಪರಿಹಾರವಾಗಿದೆ.

ಬೇಸಿಗೆಯಲ್ಲಿ ಹೆಚ್ಚು ಹೊತ್ತು ಸೂರ್ಯನ ಬಿಸಿಲಿನಲ್ಲಿ ಓಡಾಡಿದರೆ ಸನ್‌ಬರ್ನ್‌ ಉಂಟಾಗುತ್ತದೆ. ನಂತರ ಕ್ರಮೇಣ ತ್ವಚೆಯ ಮೇಲಿನ ಪದರ ಕಳಚಿಕೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದ ತ್ವಚೆಯ ಮೇಲೆ ಕೆಂಪು ಗುಳ್ಳೆಗಳಾದಂತೆ ಕಾಣಿಸುತ್ತದೆ ಮತ್ತು ರಾಶಸ್‌ಗಳು ಉಂಟಾಗುತ್ತವೆ. ಪ್ರಾರಂಭದಲ್ಲಿ ಬಿಸಿಲಿನಿಂದಾಗಿ ತ್ವಚೆಯು ಸುಟ್ಟು ಕೆಂಪಾಗಾಗುತ್ತದೆ. ಕ್ರಮೇಣ ಅದು ಉರಿ ಮತ್ತು ತುರಿಕೆಯ ಅನುಭವ ನೀಡುತ್ತದೆ. ಚರ್ಮದಲ್ಲಿರುವ ನೀರಿನಾಂಶ ಕಡಿಮೆಯಾಗುತ್ತದೆ. ನಂತರ ತ್ವಚೆಯ ಮೇಲ್ಪದರ ಕಳಚಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಕೆಲವರಲ್ಲಿ ನೋವಿನ ಅನುಭವನ್ನು ನೀಡುತ್ತದೆ ಎನ್ನುತ್ತಾರೆ ತಜ್ಞರು.

ಪರಿಹಾರ ಏನು?

ಬಿಸಿಲಿನಿಂದಾಗಿ ಚರ್ಮ ಸಿಪ್ಪೆ ಏಳುವುದಕ್ಕೆ ಪರಿಹಾರ ನಮ್ಮ ಅಡುಗೆ ಮನೆಯಲ್ಲಿಯೇ ಇದೆ. ಮನೆಮದ್ದುಗಳಿಂದಲೇ ಈ ತೊಂದರೆ ಪರಿಹಾರ ಕಂಡುಕೊಳ್ಳಬಹುದು.

ಅಲೋವೆರಾ ಜೆಲ್‌ ಹಚ್ಚಿಕೊಳ್ಳಿ

ಅಲೋವೆರಾ ಜೆಲ್‌ ತ್ವಚೆಯ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ತ್ವಚೆಗೆ ತೇವಾಂಶವನ್ನು ನೀಡುವುದರ ಜೊತೆಗೆ ಉರಿಯೂತ ಕಡಿಮೆ ಮಾಡಬಲ್ಲದು ಎಂದು ಇಂಡಿಯನ್‌ ಜರ್ನಲ್‌ ಆಫ್‌ ಡರ್ಮಟಾಲಜಿ ಅಧ್ಯಯನ ತಿಳಿಸಿದೆ. ತಾಜಾ ಅಲೋವೆರಾ ಜೆಲ್‌ ಅನ್ನು ನೇರವಾಗಿ ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಅಂಗಡಿಯಲ್ಲಿ ಸಿಗವ ರಾಸಾಯನಿಕಯುಕ್ತ ಜೆಲ್‌ಗಿಂತ ಇದು ಉತ್ತಮ.

ತಣ್ಣೀರಿನ ಆರೈಕೆ

ತಣ್ಣೀರು ಸ್ನಾನ ಮಾಡುವುದರ ಮೂಲಕ ಚರ್ಮ ಸುಲಿಯುವುದು ನಿಲ್ಲುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ ಉರಿಯೂತದಿಂದ ಪಾರಾಗಲು ಇದು ಉತ್ತಮವಾಗಿದೆ. ಐಸ್‌ಕ್ಯೂಬ್‌ಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿ ಅಥವಾ ಕೋಲ್ಡ್‌ ವಾಟರ್‌ ಬ್ಯಾಗ್‌ನಲ್ಲಿ ಹಾಕಿ ಸನ್‌ಬರ್ನ್‌ ಆದ ಜಾಗದಲ್ಲಿಡಿ. ಐಸ್‌ ಕ್ಯೂಬ್‌ಗಳನ್ನು ಎಂದಿಗೂ ನೇರವಾಗಿ ಸನ್‌ಬರ್ನ್ ಆದ ಜಾಗದಲ್ಲಿ ಇಡಬೇಡಿ. ಅದು ಸಿಪ್ಪೆ ಸುಲಿಯುವುದನ್ನು ಹೆಚ್ಚಾಗಿಸಬಹುದು ಮತ್ತು ಗುಣಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಸ್ನಾನದ ನೀರಿಗೆ ಓಟ್‌ಮೀಲ್‌ ಹಾಕಿ

ಕೊಲಾಯ್ಡಲ್‌ ಓಟ್‌ಮೀಲ್‌ ಉರಿಯೂತ ಶಮನಕಾರಿ ಗುಣಲಕ್ಷಣವನ್ನು ಹೊಂದಿದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಇದು ಸನ್‌ಬರ್ನ್‌ನಿಂದಾದ ತ್ವಚೆಯ ಶುಷ್ಕತೆ ಮತ್ತು ಕಿರಿಕಿರಿಯನ್ನು ಗುಣಪಡಿಸುತ್ತದೆ. ಜೊತೆಗೆ ತೇವಾಂಶವನ್ನು ಒದಗಿಸಿ, ಸನ್‌ಬರ್ನ್‌ ಗುಣಪಡಿಸುತ್ತದೆ. ನೀವು ಬ್ರೇಕ್‌ಫಾಸ್ಟ್‌ನಲ್ಲಿ ಬಳಸುವ ಓಟ್‌ಮೀಲ್‌ಗೂ ಕೊಲಾಯ್ಡಲ್‌ ಓಟ್‌ಮೀಲ್‌ಗೂ ವ್ಯತ್ಯಾಸವಿದೆ. ಕೊಲಾಯ್ಡಲ್‌ ಓಟ್ಸ್‌ ತೆಗೆದುಕೊಳ್ಳಿ ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಆ ಪುಡಿಯನ್ನು 2 ರಿಂದ 3 ಕಪ್‌ ನೀರಿಗೆ ಬೆರೆಸಿ. ಆ ನೀರಿನಿಂದ ಸನ್‌ಬರ್ನ್‌ ಆದ ಜಾಗವನ್ನು ತೊಳೆಯಿರಿ.

ಹೈಡ್ರೇಟ್ ಆಗಿರಿ

ಬೇಸಿಗೆಯಲ್ಲಿ ಡೀಹೈಡ್ರೇಷನ್‌ ಆಗುವುದು ಹೆಚ್ಚು. ಸನ್‌ಬರ್ನ್‌ ಆದ ಸಮಯದಲ್ಲಿ ಹೆಚ್ಚೆಚ್ಚು ನೀರು ಕುಡಿಯುವುದು ತ್ವಚೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದು ತ್ವಚೆಗೆ ತೇವಾಂಶವನ್ನು ಒದಗಿಸಲು ಉತ್ತಮವಾಗಿದೆ.

ಬಿಗಿಯಾದ ಬಟ್ಟೆಗಳನ್ನು ಬಳಸಬೇಡಿ

ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಸನ್‌ಬರ್ನ್‌ ಆದ ಜಾಗ ಇನ್ನಷ್ಟು ಹಾನಿಗೊಳಗಾಗುತ್ತದೆ. ಹಾಗಾಗಿ ಬಿಗಿಯಾದ ಉಡುಪುಗಳನ್ನು ಬಳಸಬೇಡಿ. ಸಡಿಲವಾದ ಹತ್ತಿಯ ಬಟ್ಟೆಗಳನ್ನು ಬಳಸಿ.

ಮಾಯಿಶ್ಚರೈಸರ್‌ ಬಳಸಿ

ತ್ವಚೆಯನ್ನು ಹೈಡ್ರೆಟ್‌ ಆಗಿರಿಸುವುದು ತುಂಬಾನೆ ಅವಶ್ಯಕ. ಹಾಗಾಗಿ ಬೇಸಿಗೆ ಸೂಕ್ತವಾದ ಮಾಯಿಶ್ಚರೈಸರ್‌ಗಳನ್ನು ಬಳಸಿ. ಮೊಡವೆ ಸಮಸ್ಯೆ ಇಲ್ಲದವರು ತೆಂಗಿನಎಣ್ಣೆಯನ್ನು ಬಳಸಬಹುದು. ಮೊಡವೆ ಸಮಸ್ಯೆಯಿರುವವರಿಗೆ ಅಲೋವೆರಾ ಜೆಲ್‌ ಉತ್ತಮವಾಗಿದೆ.

ಸನ್‌ಬರ್ನ್‌ ತಡೆಗಟ್ಟುವುದು ಹೇಗೆ?

* ಬೇಸಿಗೆಯಲ್ಲಿ ಮನೆಯಿಂದ ಹೊರ ಹೋಗುವ ಸಮಯದಲ್ಲಿ ಆದಷ್ಟು ತ್ವಚೆಯು ನೇರವಾಗಿ ಸೂರ್ಯನ ಬಿಸಿಲಿನ ಸಂಪರ್ಕದಲ್ಲಿ ಬರದಂತೆ ನೋಡಿಕೊಳ್ಳಿ. ಟೋಪಿ, ಸ್ಕಾರ್ಫ್‌ಗಳಿಂದ ಮುಖ, ತಲೆಯನ್ನು ಕವರ್‌ ಮಾಡಿಕೊಳ್ಳಿ.

* ಸನ್‌ಸ್ಕ್ರೀನ್‌ ಬಳಸಿ.

* ಯಾವಾಗಲೂ ಹೈಡ್ರೇಟ್‌ ಆಗಿರಿ.