Korean Face Mask; ಪುರುಷರಿಗಾಗಿ ಕೊರಿಯನ್ ಶೀಟ್ ಮಾಸ್ಕ್; ತ್ವಚೆಯ ಕಾಳಜಿ ವಹಿಸಿದ್ರೆ ನೀವಾಗ್ತೀರಿ ಹ್ಯಾಂಡ್‌ಸಮ್
ಪುರುಷರು ಚರ್ಮದ ಬಗ್ಗೆ ಮತ್ತು ಮುಖದ ಅಂದದ ಕುರಿತು ಕಾಳಜಿ ವಹಿಸುವುದು ಸ್ವಲ್ಪ ಕಡಿಮೆಯೇ ಎನ್ನಬಹುದು. ಆದರೆ ಕೆಲವೊಂದು ಸರಳ ಟಿಪ್ಸ್ ಪಾಲಿಸಿದರೆ ಮತ್ತು ತ್ವಚೆಯ ರಕ್ಷಣೆಗೆ ಕ್ರಮ ಕೈಗೊಂಡರೆ, ಅವರು ಕೂಡ ಸುಂದರವಾಗಿ ಕಾಣಿಸುತ್ತಾರೆ. ಅದಕ್ಕಾಗಿ ಕೊರಿಯನ್ ಫೇಸ್‌ಮಾಸ್ಕ್ ಬಳಸಿ ನೋಡಿ.

ಪುರುಷರ ಚರ್ಮವು ಸಾಮಾನ್ಯವಾಗಿ ಒರಟಾಗಿದ್ದು, ಅವರು ಚರ್ಮದ ಆರೈಕೆ, ಪೋಷಣೆ ಮಾಡುವುದು, ಕಾಳಜಿ ವಹಿಸುವುದು ತೀರಾ ಕಡಿಮೆ. ಹೀಗಾಗಿ ಕಲ್ಮಶ, ಧೂಳು ಸೇರಿದಂತೆ ಇನ್ನಿತರ ಕಣಗಳು ತ್ವಚೆ ಸೇರಿಕೊಂಡು ಮೊಡವೆಗಳು ಮೂಡುತ್ತವೆ. ಇದರಿಂದ ತ್ವಚೆಯ ಕಾಂತಿ ಕಳೆಗುಂದುತ್ತದೆ. ಇದನ್ನು ನಿವಾರಣೆ ಮಾಡಲು ಪುರುಷರ ತ್ವಚೆಗೆ ಅನುಗುಣವಾಗಿ ಕೊರಿಯನ್ ಫೇಸ್ ಮಾಸ್ಕ್ ಟ್ರೆಂಡಿಂಗ್ ಅಲ್ಲಿದ್ದು ಅವುಗಳ ಬಳಕೆ ಹೇಗೆ ಎಂಬುದರ ಮಾಹಿತಿಯನ್ನು ಇಲ್ಲಿ ನೋಡೋಣ.
ಮೊಡವೆ, ಕಲೆ, ಕಾಂತಿ ಕಳೆಗುಂದುವುದು ಇಂದಿನ ದಿನಗಳಲ್ಲಿ ಪುರುಷರಲ್ಲೂ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆಯಾಗಿದ್ದು, ಇದನ್ನು ಬಗೆಹರಿಸಲು ಹಲವಾರು ರೀತಿಯ ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ ನಿಮ್ಮ ತ್ವಚ್ಚೆಗೆ ಅನುಗುಣವಾಗಿ ಕೋರಿಯನ್ ಫೇಸ್ ಮಾಸ್ಕ್ ಬಳಕೆಯ ಕುರಿತು ನಿಮಗೆ ತಿಳಿದಿದೆಯೇ?
ಹೌದು, ಕೆ-ಬ್ಯೂಟಿ ಎಂದೇ ಪ್ರಪಂಚದಾದ್ಯಂತ ಜನಪ್ರಿಯಗೊಳುತ್ತಿರುವ ಕೊರಿಯನ್ ಫೇಸ್ ಮಾಸ್ಕ್, ಆಧುನಿಕ ಪದಾರ್ಥಗಳೊಂದಿಗೆ ತಮ್ಮದೇ ಶೈಲಿಯಲ್ಲಿ ಸಾಂಪ್ರದಾಯಿಕ ಪದಾರ್ಥಗಳೊಂದಿಗೆ ತ್ವಚೆಯ ಆರೋಗ್ಯಕ್ಕೆ ಸಾಕಷ್ಟು ಮಹತ್ವ ನೀಡುತ್ತಾ ಬಂದಿದೆ. ಯಾವ ಚರ್ಮಕ್ಕೆ ಯಾವ ಕೊರಿಯನ್ ಶೀಟ್ ಮಾಸ್ಕ್ ಒಳ್ಳೆಯದು? ಇದರಿಂದ ಆಗುವ ಪ್ರಯೋಜನಗಳೇನು? ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದ್ದು, ನೀವೂ ಟ್ರೈ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.
ಪುರುಷರಿಗಾಗಿ ಕೊರಿಯನ್ ಫೇಸ್ ಮಾಸ್ಕ್ ಶೀಟ್‌ಗಳು
ಒಣ ಚರ್ಮ: ನಿಮ್ಮ ಚರ್ಮ ಒಣಗಿದ್ದರೆ ಅದನ್ನು ತೇವಾಂಶ ಇರುವಂತೆ ಮಾಡಲು ಹೈಲುರಾನಿಕ್ ಆಮ್ಲ ಮತ್ತು ಗ್ಲಿಸರಿನ್ ಒಳಗೊಂಡ ಮಾಸ್ಕ್‌ಗಳನ್ನು ಒಮ್ಮೆ ಪ್ರಯತ್ನಿಸಿ. ಈ ಅಂಶಗಳಿರುವ ಫೇಸ್ ಮಾಸ್ಕ್ ಕೇವಲ 15 ರಿಂದ 20 ನಿಮಿಷಗಳೊಳಗಾಗಿ ನಿಮ್ಮ ತ್ವಚೆಯ ತೇವಾಂಶವನ್ನು ಹಿಡಿದಿಟ್ಟುಕೊಂಡು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಅಲ್ಲದೇ, ತಾಜಾತನ ದೊರಕಿ ಚರ್ಮದ ಹೊಳಪು ಹೆಚ್ಚಿಸುತ್ತದೆ.
ಎಣ್ಣೆಯುಕ್ತ ಅಥವಾ ಸಂಯೋಜಿತ ಚರ್ಮ: ಎಣ್ಣೆ ತ್ವಚೆ ಹೊಂದಿರುವ ಮತ್ತು ಸಂಯೋಜಿತ ತ್ವಚೆ (ಒಣ ಮತ್ತು ಎಣ್ಣೆಯುಕ್ತ) ಹೊಂದಿರುವ ಪುರುಷರು ಇದ್ದಿಲು ಅಥವಾ ಜೇಡಿಮಣ್ಣಿನ ಫೇಸ್ ಪ್ಯಾಕ್ ಬಳಸುವುದರಿಂದ ಮುಖದ ಮೇಲಿನ ಹೆಚ್ಚುವರಿ ಎಣ್ಣೆಯಂಶ ಹೋಗಲಾಡಿಸಿ ಮಣ್ಣು, ಧೂಳುಗಳನ್ನು ನಿವಾರಿಸುತ್ತದೆ. ಮುಖದ ಕಾಂತಿ ಹೆಚ್ಚಾಗಿ, ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.
ಸೂಕ್ಷ್ಮ ಚರ್ಮ: ನಿಮ್ಮ ತ್ವಚೆಯು ಸೂಕ್ಷ್ಮವಾಗಿದ್ದಲ್ಲಿ ಬ್ಲೀಚ್‌ನಂತಹ ಪದಾರ್ಥಗಳನ್ನು ಬಳಸುವುದು ಒಳ್ಳೆಯದಲ್ಲ. ನಿಮ್ಮ ಮುಖಕ್ಕೆ ಕಾಂತಿ ನೀಡುವ ಅಂದರೆ ಆಲೋವೆರಾ, ಕ್ಯಾಮೊಮೈಲ್, ಕ್ಯಾಲೆಡುಲ ಅಥವಾ ಗ್ರೀನ್ ಟೀ ಫೇಸ್ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕಿರಿಕಿರಿಯಾಗುವ, ರಾಸಾಯನಿಕ ಅಥವಾ ಸುಗಂಧ ದ್ರವ್ಯವುಳ್ಳ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ.
ಅಸಮ ಚರ್ಮ: ನಿಮ್ಮ ಚರ್ಮವು ಅಸಮವಾಗಿದ್ದಲ್ಲಿ ಅಂದರೆ ಒಂದೇ ಬಣ್ಣವಿಲ್ಲದೇ 2-3 ಬಣ್ಣಗಳಿಂದ ತುಂಬಿದ್ದರೆ, ವಿಟಮಿನ್ ಸಿ, ನಿಯಾಸಿನಮೈಡ್ ಇರುವ ಫೇಸ್ ಮಾಸ್ಕ್ ಪ್ರಯತ್ನಿಸಿ. ಈ ಮಾಸ್ಕ್ ನಿಮ್ಮ ಮಂದ ಚರ್ಮವನ್ನು ಹೊಳಪಿಸುತ್ತದೆ ಹಾಗೂ ಕಪ್ಪು ಕಲೆಗಳನ್ನು ತಡೆಗಟ್ಟುತ್ತದೆ.
ಮೊಡವೆ ಪೀಡಿತ ಚರ್ಮ: ನಿಮ್ಮ ಮುಖವು ಮೊಡವೆಗಳಿಂದ ಕೂಡಿದ್ದರೆ ಸ್ಯಾಲಿಸಿಲಿಕ್ ಆಮ್ಲ, ವಿಚ್ ಹ್ಯಾಝೆಲ್ ಮತ್ತು ಟೀ ಟ್ರೀ ಆಯಿಲ್‌ಗಳುಳ್ಳ ಫೇಸ್ ಶೀಟ್ ಮಾಸ್ಕ್‌ಗಳು ನಿಮಗೆ ಒಳ್ಳೆಯದು. ಇವು ಆ ಮೊಡವೆಯಿಂದ ಆಗುವ ಉರಿಯೂತ, ಬಿರುಕುಗಳನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಶಿಲೀಂಧ್ರ-ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದಿಂದ ಚರ್ಮವನ್ನು ರಕ್ಷಿಸುತ್ತದೆ.
ತಜ್ಞರ ಪ್ರಕಾರ, ಅನೇಕ ಶೀಟ್ ಮಾಸ್ಕ್‌ಗಳು ಸಂರಕ್ಷಕಗಳು, ಸುಗಂಧ ದ್ರವ್ಯಗಳು ಮತ್ತು ಕೃತಕ ಬಣ್ಣಗಳಂತಹ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇದು ಸೂಕ್ಷ್ಮ ಚರ್ಮದ ಪ್ರಕಾರಗಳಲ್ಲಿ ಕಿರಿಕಿರಿ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಫೇಸ್ ಮಾಸ್ಕ್ ಶೀಟ್‌ಗಳನ್ನು ಆಯ್ಕೆ ಮಾಡುವಾಗ ಅದರಲ್ಲಿರುವ ಸಲಹೆಗಳನ್ನು ಓದಿ. ಅದು ನಿಮ್ಮ ಮುಖಕ್ಕೆ ಸೂಕ್ತವೇ ಎಂಬುದನ್ನು ಪರಿಗಣಿಸಿ ನಂತರ ಬಳಸಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
