Skin Care: ಮೊಡವೆ ಸಮಸ್ಯೆಯಿಂದ ಪಾರಾಗಲು ಸುಲಭ ಮನೆ ಮದ್ದು; ಗ್ರೀನ್ ಟೀ ಜೇನುತುಪ್ಪದ ಸ್ಕ್ರಬ್ ಬಳಸುವ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  Skin Care: ಮೊಡವೆ ಸಮಸ್ಯೆಯಿಂದ ಪಾರಾಗಲು ಸುಲಭ ಮನೆ ಮದ್ದು; ಗ್ರೀನ್ ಟೀ ಜೇನುತುಪ್ಪದ ಸ್ಕ್ರಬ್ ಬಳಸುವ ವಿಧಾನ

Skin Care: ಮೊಡವೆ ಸಮಸ್ಯೆಯಿಂದ ಪಾರಾಗಲು ಸುಲಭ ಮನೆ ಮದ್ದು; ಗ್ರೀನ್ ಟೀ ಜೇನುತುಪ್ಪದ ಸ್ಕ್ರಬ್ ಬಳಸುವ ವಿಧಾನ

Beauty Tips: ಮೊಡವೆ , ಎಲ್ಲರನ್ನೂ ಕಾಡುವ ಚರ್ಮದ ಸಮಸ್ಯೆಯಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಸಹ ಮೊಡವೆ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿರುವ ಮನೆಮದ್ದುಗಳನ್ನು ನೀವು ಒಮ್ಮೆ ಪ್ರಯತ್ನಿಸಿ ನೋಡಬಹುದು.

ಮೊಡವೆ ಹೋಗಲಾಡಿಸಲು ಗ್ರೀನ್‌ ಟೀ ಜೇನುತುಪ್ಪದ ಸ್ಕ್ರಬ್‌
ಮೊಡವೆ ಹೋಗಲಾಡಿಸಲು ಗ್ರೀನ್‌ ಟೀ ಜೇನುತುಪ್ಪದ ಸ್ಕ್ರಬ್‌ (PC: Pixabay)

Skin Care Tips: ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಪ್ಲಾನ್ ಮಾಡಿದ್ದೀರಿ ಎಂದುಕೊಳ್ಳೋಣ ಅಥವಾ ಹೊಸ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವ ತಯಾರಿಯಲ್ಲಿದ್ದೀರಿ. ಈ ಎಲ್ಲಾ ಸಂದರ್ಭದಲ್ಲಿ ನೀವು ಕರೆಯದೇ ನಿಮ್ಮ ಮುಖದ ಮೇಲೆ ಅರಳುವ ಅತಿಥಿಯೆಂದರೆ ಅದು ಮೊಡವೆ . ಮುಖದ ಮೇಲೆ ಒಂದು ಮೊಡವೆ ಮೂಡಿತು ಎಂದರೆ ಸಾಕು ಮುಖದ ಸೌಂದರ್ಯವೇ ಕಳೆಗಟ್ಟಿದ ರೀತಿ ಭಾಸವಾಗಿಬಿಡುತ್ತದೆ.

ಮೊಡವೆಯನ್ನು ಮರೆ ಮಾಚಲು ನೀವು ಸರ್ಕಸ್‌ ಮಾಡಬೇಕಾಗುತ್ತದೆ. ನೀವು ಎಷ್ಟೇ ಅಂದ ಚಂದದ ಅಲಂಕಾರ ಮಾಡಿಕೊಂಡರೂ ಸಹ ನೋಡುವವರ ಕಣ್ಣು ಮೊದಲು ಆ ಮೊಡವೆಯ ಮೇಲೆಯೇ ಹೋಗಿ ಬಿಡುತ್ತದೆ. ಆದರೆ ಈ ಮೊಡವೆಗಳಿಂದ ಪಾರಾಗಲು ನೀವು ಕೆಲವು ಮನೆ ಮದ್ದುಗಳನ್ನು ಬಳಕೆ ಮಾಡಬಹುದು. ಇವುಗಳು ತ್ವಚೆಯ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೇ ಇನ್ನೆಂದು ನಿಮ್ಮ ಮುಖದ ಮೇಲೆ ಮೊಡವೆಯ ನಿಶಾನೆ ಇಲ್ಲದಂತೆ ಮಾಡುತ್ತವೆ.

ಮೊಡವೆಗಳ ವಿರುದ್ಧ ಸಮರ ಸಾರುತ್ತದೆ ಗ್ರೀನ್ ಟೀ ಹಾಗೂ ಜೇನುತುಪ್ಪದ ಸ್ಕ್ರಬ್

ಮೊಡವೆಗಳ ವಿರುದ್ಧ ಹೋರಾಡಲು ಗ್ರೀನ್ ಟೀ ಹಾಗೂ ಜೇನುತುಪ್ಪದಿಂದ ತಯಾರಿಸಿದ ಸ್ಕ್ರಬ್ ನಿಜಕ್ಕೂ ಒಂದು ಒಳ್ಳೆಯ ಆಯ್ಕೆಯಾಗಿದೆ. ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್ ಎಂಬ ಅಂಶವು ಆಂಟಿ ಆಕ್ಸಿಡಂಟ್‌ಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಇವುಗಳು ಚರ್ಮವು ಯಾವುದೇ ರೀತಿಯಲ್ಲಿ ಹಾನಿಗೆ ಒಳಗಾಗದಂತೆ ಕಾಪಾಡುತ್ತವೆ. ಗ್ರೀನ್ ಟೀಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಲಕ್ಷಣಗಳೂ ಇರುವುದರಿಂದ ಮೊಡವೆ ರಚನೆಗೆ ಕಾರಣವಾಗುವ ಪ್ರೊಪಿಯೊನಿಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಸಹಕಾರಿಯಾಗಿದೆ.

ಗ್ರೀನ್ ಟೀ ಜೊತೆಯಲ್ಲಿ ಜೇನುತುಪ್ಪದಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶಗಳು ನಿಮಗೆ ಸುಂದರವಾದ ತ್ವಚೆಯನ್ನು ಹೊಂದಲು ಸಹಕಾರಿಯಾಗಿದೆ. ಇವುಗಳಲ್ಲಿ ಕೂಡ ಆಂಟಿಬ್ಯಾಕ್ಟೀರಿಯಾ ಗುಣಗಳು ಅಡಕವಾಗಿದೆ. ಹೀಗಾಗಿ ಗ್ರೀನ್ ಟೀ ಹಾಗೂ ಜೇನುತುಪ್ಪದ ಮಿಶ್ರಣವು ಮೊಡವೆಗಳ ವಿರುದ್ಧ ಹೇಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ

1. ಮೊಡವೆಗೆ ಪರಿಹಾರ : ಹಾರ್ಮೋನ್‌ಗಳಲ್ಲಿ ಏರುಪೇರು, ಒತ್ತಡ, ಕಳಪೆ ಆಹಾರ ಪದ್ಧತಿ , ಮಾಲಿನ್ಯ. ಮುಖದ ಶುದ್ಧತೆಯನ್ನು ಕಾಪಾಡಿಕೊಳ್ಳದೇ ಇರುವುದು ಇವೆಲ್ಲವೂ ಕೂಡ ಮೊಡವೆ ಉಂಟಾಗಲು ಕಾರಣವಾಗಿದೆ. ಇವುಗಳು ಮುಖದಲ್ಲಿರುವ ರಂಧ್ರಗಳನ್ನು ಮುಚ್ಚುವ ಮೂಲಕ ಮುಖದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸಿಬಿಡುತ್ತವೆ. ಆದರೆ ಗ್ರೀನ್ ಟೀ ಹಾಗೂ ಜೇನುತುಪ್ಪದಲ್ಲಿರುವ ಆಂಟಿ ಆಕ್ಸಿಡಂಟ್ ಗುಣಲಕ್ಷಣಗಳು ಮುಖದಲ್ಲಿರುವ ಮಲೀನತೆಗಳನ್ನು ತೊಡೆದು ಹಾಕುವ ಕಾರ್ಯವನ್ನು ಮಾಡುತ್ತದೆ.

2. ಚರ್ಮವನ್ನು ಎಕ್ಫೋಲಿಯೇಟ್ ಮಾಡುತ್ತದೆ : ಗ್ರೀನ್ ಟೀ, ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಲು ಸಹಕಾರಿಯಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡಂಟ್ ಗುಣಗಳು ಮೊಡವೆಗಳಿಂದ ಮುಖದ ಮೇಲೆ ಮೂಡುವ ಕೆಂಪು ಕಲೆಗಳನ್ನು ಶಮನ ಮಾಡುತ್ತದೆ. ಜೇನುತುಪ್ಪದೊಂದಿಗೆ ಗ್ರೀನ್ ಟೀ ಪುಡಿಯನ್ನು ಬೆರೆಸಿ ತಯಾರಿಸಿ ಸ್ಕ್ರಬ್ ಮುಖಕ್ಕೆ ಹೆಚ್ಚಿನ ಕಾಂತಿಯನ್ನು ನೀಡುತ್ತದೆ.

3. ಟೋನರ್‌ನಂತೆ ಕಾರ್ಯ ನಿರ್ವಹಿಸುತ್ತದೆ : ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡಂಟ್‌ಗಳು ಚರ್ಮದ ಟೋನರ್‌ನಂತೆ ಕಾರ್ಯ ನಿರ್ವಹಿಸುತ್ತದೆ. ತ್ವಚೆಯ ಮೇಲೆ ಇರುವ ಸೂಕ್ಷ್ಮಾಣು ಜೀವಿಗಳ ವಿರುದ್ಧ ಟೋನರ್‌ಗಳು ಹೊಡೆದಾಡುತ್ತವೆ. ಇದರಿಂದ ಚರ್ಮ ಇನ್ನಷ್ಟು ಮೃದುಗೊಳ್ಳುತ್ತದೆ. ಇದರ ಜೊತೆ ಚರ್ಮಕ್ಕೆ ನೇರಳಾತೀತ ಕಿರಣಗಳಿಂದ ಉಂಟಾಗುವ ಹಾನಿಯನ್ನು ಶಮನ ಮಾಡುವ ಕೆಲಸವನ್ನೂ ಗ್ರೀನ್ ಟೀ ಪುಡಿ ಮಾಡುತ್ತದೆ.

4. ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ : ಚರ್ಮ ಸುಕ್ಕುಗಟ್ಟಿದಂತೆಲ್ಲಾ ವಯಸ್ಸು ಹೆಚ್ಚಿದಂತೆ ತೋರುತ್ತದೆ. ಆದರೆ ಗ್ರೀನ್ ಟೀ ಹಾಗೂ ಜೇನುತುಪ್ಪದ ಸ್ಕ್ರಬ್ ನಿಮ್ಮ ಚರ್ಮವನ್ನು ಮೃದುಗೊಳಿಸುವ ಮೂಲಕ ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಇವುಗಳು ತ್ವಚೆಯಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ.

ಗ್ರೀನ್ ಟೀ ಪುಡಿ ಹಾಗೂ ಜೇನುತುಪ್ಪದಿಂದ ಮನೆಯಲ್ಲಿಯೇ ಸ್ಕ್ರಬ್ ತಯಾರಿಸುವುದು ಹೇಗೆ?

ಗ್ರೀನ್ ಟೀ ಹಾಗೂ ಜೇನುತುಪ್ಪದ ಸ್ಕ್ರಬ್ ಮನೆಯಲ್ಲಿಯೇ ತಯಾರಿಸುವುದು ತುಂಬಾನೇ ಸುಲಭ. ಇದಕ್ಕೆ ನಿಮಗೆ ಹೆಚ್ಚಿನ ಪದಾರ್ಥಗಳ ಅವಶ್ಯಕತೆ ಕೂಡ ಬೀಳುವುದಿಲ್ಲ. ನೀವು ದಿನನಿತ್ಯ ಬಳಕೆ ಮಾಡುವ ಯಾವುದೇ ಗ್ರೀನ್ ಟೀ ಪುಡಿಯನ್ನು ತೆಗೆದುಕೊಳ್ಳಿ. ಗ್ರೀನ್ ಟೀ ಎಲೆಗಳೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ. ಬೇಕಿದ್ದರೆ ನೀವು ಇದಕ್ಕೆ ವಿಟಮಿನ್ ಇ ಮಾತ್ರೆಗಳನ್ನು ಸಹ ಹಾಕಿಕೊಳ್ಳಬಹುದು. ಎಲ್ಲವನ್ನೂ ಸಮನಾಗಿ ಮಿಕ್ಸ್‌ ಮಾಡಿ ಸ್ಕ್ರಬ್‌ ಹದಕ್ಕೆ ತನ್ನಿ.

ಸ್ಕ್ರಬ್ ತಯಾರಾದ ಬಳಿಕ ಇದನ್ನು ಮುಖದ ಮೇಲೆ ವೃತ್ತಾಕಾರದ ರೀತಿಯಲ್ಲಿ ಮಸಾಜ್ ಮಾಡಿ. ತೀರಾ ಗಟ್ಟಿಯಾಗಿ ಉಜ್ಜಬೇಡಿ. ಎಲ್ಲೆಲ್ಲಿ ನಿಮಗೆ ಎಣ್ಣೆಯಂಶ ಜಾಸ್ತಿ ಇರುತ್ತದೆ ಎನಿಸುತ್ತದೆಯೋ ಅಲ್ಲೆಲ್ಲ ಮೃದುವಾಗಿ ಮಸಾಜ್ ಮಾಡಿಕೊಳ್ಳುತ್ತಾ ಹೋಗಿ. ಕೆಲವು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದಾದ ಬಳಿಕ ಮುಖಕ್ಕೆ ಟೋನರ್ ಹಾಗೂ ಮಾಯಿಶ್ಚರೈಸರ್ ಬಳಕೆ ಮಾಡಿ.

Whats_app_banner