ಕಲೆಗಳಿಲ್ಲದ ಸುಂದರ ತ್ವಚೆಗೆ ಅಕ್ಕಿಹಿಟ್ಟಿನೊಂದಿಗೆ ಈ ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿ, ಅಚ್ಚರಿಯ ಫಲಿತಾಂಶ ನಿಮ್ಮದಾಗುತ್ತೆ
ಕಲೆ, ಮೊಡವೆ ಇಲ್ಲದ ಸುಂದರ ತ್ವಚೆ ತಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ ಕೂಡ. ಆದರೆ ಅಕ್ಕಿಹಿಟ್ಟಿನೊಂದಿಗೆ ಈ ಕೆಲವು ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರಿಂದ ತ್ವಚೆಯ ಕಾಂತಿಯೂ ವೃದ್ಧಿಯಾಗುತ್ತದೆ.

ಪ್ರತಿಯೊಬ್ಬರಿಗೂ ಕಲೆಗಳಿಲ್ಲದ ಸುಂದರ ತ್ವಚೆ ನಮ್ಮದಾಗಬೇಕು ಎನ್ನುವ ಆಸೆ ಇರುವುದು ಸಹಜ. ಅದರಲ್ಲೂ ಮಹಿಳೆಯರು ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ಮುಖದಲ್ಲಿ ಮೊಡವೆ, ಕಲೆಗಳಿದ್ದರೆ ಅವರಿಗೆ ಇಷ್ಟವಾಗುವುದಿಲ್ಲ. ಆದರೆ ಕಳಪೆ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ಪರಿಸರದ ಅಂಶಗಳು ತ್ವಚೆಯಲ್ಲಿ ಕಲೆ, ಮೊಡವೆ ಮುಂತಾದ ಸಮಸ್ಯೆ ಉಂಟಾಗಲು ಕಾರಣವಾಗುತ್ತವೆ. ಕೆಲವರು ಸೌಂದರ್ಯವರ್ದಕಗಳ ಮೂಲಕ ತ್ವಚೆ ಮೇಲಿನ ಕಲೆಯನ್ನು ಮುಚ್ಚಿ ಹಾಕುತ್ತಾರೆ.
ಚರ್ಮದ ಕಾಂತಿಯನ್ನು ಹೆಚ್ಚಿಸಲು ದುಬಾರಿ ಚರ್ಮದ ಆರೈಕೆಯ ಉತ್ಪನ್ನಗಳನ್ನು ಬಳಸುವುದಕ್ಕಿಂತ ಕೆಲವು ಮನೆಮದ್ದನ್ನು ಪ್ರಯತ್ನಿಸಬಹುದು. ಈ ದುಬಾರಿ ಉತ್ಪನ್ನಗಳಿಗೆ ನೂರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ಫೇಸ್‌ಪ್ಯಾಕ್ ತಯಾರಿಸಬಹುದು. ವಿಶೇಷವಾಗಿ ಅಕ್ಕಿಹಿಟ್ಟನ್ನು ಬಳಸುವುದರಿಂದ ಚರ್ಮ ಹೊಳೆಯುತ್ತದೆ. ಇದನ್ನು ಹಚ್ಚುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ಅಕ್ಕಿ ಹಿಟ್ಟನ್ನು ಹೇಗೆ ಬಳಸುವುದು ಎಂದು ನೋಡಿ.
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ರಿಪೇರಿ ಮಾಡಲು ಮತ್ತು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಫೇಸ್ ಪ್ಯಾಕ್ ತಯಾರಿಸಲು, ನಿಮಗೆ ಸಾವಯವ ಕ್ಯಾಸ್ಟರ್ ಆಯಿಲ್ ಮತ್ತು 2 ಚಮಚ ಅಕ್ಕಿ ಹಿಟ್ಟು ಬೇಕಾಗುತ್ತದೆ. ಈ ಫೇಸ್ ಪ್ಯಾಕ್ ತಯಾರಿಸಲು ಅಕ್ಕಿಹಿಟ್ಟಿನಲ್ಲಿ ಎಣ್ಣೆ ಬೆರೆಸಿ. ನಂತರ ಅದು ಪೇಸ್ಟ್‌ನಂತೆ ಆಗುತ್ತದೆ. ಇದನ್ನು ಮೊಡವೆ ಮತ್ತು ಕಲೆಗಳ ಮೇಲೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳನ್ನು ಹೋಗಲಾಡಿಸಲು, ಅಕ್ಕಿ ಹಿಟ್ಟನ್ನು ಒಂದು ಚಿಟಿಕೆ ಅರಿಶಿನ ಮತ್ತು ಟೊಮೆಟೊ ರಸದೊಂದಿಗೆ ಸೇರಿಸಿ ಮಿಶ್ರಣ ಮಾಡಿ. ಇದನ್ನು ಕಪ್ಪು ವೃತ್ತಗಳ ಮೇಲೆ ಹಚ್ಚಿ. ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈ ಮೂರೂ ಚರ್ಮವನ್ನು ಹೊಳೆಯುವಂತೆ ಮಾಡುವ ಗುಣಗಳನ್ನು ಹೊಂದಿವೆ.
ಹೈಪರ್‌ಪಿಗ್ಮೆಂಟೇಶನ್ ಸಮಸ್ಯೆಗೆ ಅಕ್ಕಿ ಹಿಟ್ಟು ತುಂಬಾ ಉಪಯುಕ್ತವಾಗಿದೆ. ಈ ಫೇಸ್‌ಪ್ಯಾಕ್ ತಯಾರಿಸಲು ನಿಂಬೆರಸ ಮತ್ತು ಅಕ್ಕಿ ಹಿಟ್ಟನ್ನು ಬಳಸಿ. ಈ ಎರಡು ಪದಾರ್ಥಗಳನ್ನು ಬೆರೆಸಿದ ನಂತರ, ಕೆಲವು ಹನಿ ರೋಸ್ ವಾಟರ್ ಸೇರಿಸಿ ಮತ್ತು ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ತೊಳೆಯಿರಿ. ಇದನ್ನು ಎರಡು ಅಥವಾ ಮೂರು ಬಾರಿ ಮಾಡಿದ ನಂತರ ನಿಮ್ಮ ತ್ವಚೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಕಾಣುತ್ತೀರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
