Sleep and fertility: ಗರ್ಭಧಾರಣೆಯ ಸಮಸ್ಯೆಗೆ ನಿದ್ದೆಯ ಕೊರತೆಯೂ ಕಾರಣವಾಗಬಹುದು! ಎಚ್ಚರ ವಹಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Sleep And Fertility: ಗರ್ಭಧಾರಣೆಯ ಸಮಸ್ಯೆಗೆ ನಿದ್ದೆಯ ಕೊರತೆಯೂ ಕಾರಣವಾಗಬಹುದು! ಎಚ್ಚರ ವಹಿಸಿ

Sleep and fertility: ಗರ್ಭಧಾರಣೆಯ ಸಮಸ್ಯೆಗೆ ನಿದ್ದೆಯ ಕೊರತೆಯೂ ಕಾರಣವಾಗಬಹುದು! ಎಚ್ಚರ ವಹಿಸಿ

Sleep and fertility: ಇಂದು ಬಹುತೇಕ ಮಹಿಳೆಯರು ಫಲವಂತಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆಯೊಂದಿಗೆ ಜೀವನಶೈಲಿಯಲ್ಲಿನ ವ್ಯತ್ಯಾಸವೂ ಇದಕ್ಕೆ ಕಾರಣವಾಗಬಹುದು. ಇದರೊಂದಿಗೆ ನಿದ್ದೆಯ ಕೊರತೆಯೂ ಗರ್ಭಧಾರಣೆಯ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಹಾಗಾದರೆ ನಿದ್ದೆಗೂ ಫಲವಂತಿಕೆಗೂ ಏನು ಸಂಬಂಧ?

ಗರ್ಭಧಾರಣೆಯ ಸಮಸ್ಯೆ
ಗರ್ಭಧಾರಣೆಯ ಸಮಸ್ಯೆ

ಇಂದು ಹಲವಾರು ಕಾರಣಗಳಿಂದ ಹೆಣ್ಣುಮಕ್ಕಳು ಗರ್ಭಧಾರಣೆಯ ಪ್ರಮಾಣ ಕುಸಿಯುತ್ತಿದೆ. ಜೀವನಶೈಲಿಯಲ್ಲಿನ ಬದಲಾವಣೆಯು ಇದಕ್ಕೆ ಪ್ರಮುಖ ಕಾರಣ. ಮದ್ಯಪಾನ, ಧೂಮಪಾನ ಹಾಗೂ ಅಸಮರ್ಪಕ ಆಹಾರ ಸೇವನೆಯೂ ಇದಕ್ಕೆ ಕಾರಣವಾಗಬಹುದು. ಇದರೊಂದಿಗೆ ಅಧಿಕ ರಕ್ತದೊತ್ತಡ, ಒತ್ತಡ, ಮಧುಮೇಹ ಹಾಗೂ ಬೊಜ್ಜು ಇವು ಗರ್ಭಧಾರಣೆಗೆ ಸಮಸ್ಯೆ ಉಂಟು ಮಾಡಬಹುದು.

ಇದೆಲ್ಲದರೊಂದಿಗೆ ನಮ್ಮ ನಿದ್ದೆಯ ಕ್ರಮ ಕೂಡ ಫಲವಂತಿಕೆಗೆ ಅಡ್ಡಿಪಡಿಸುತ್ತದೆ ಎಂದರೆ ನಂಬಲೇಬೇಕು. ನಿದ್ದೆ ನಮ್ಮ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಬಹಳ ಅವಶ್ಯ. ನಿದ್ದೆಯ ಕೊರತೆಯಿಂದ ಇಂದು ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ದೀರ್ಘನಿದ್ದೆಯು ಮನುಷ್ಯನ ಅಂಗಾಂಶಗಳ ರಿಪೇರಿ ಹಾಗೂ ಹೊಸ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ದೀರ್ಘಕಾಲದ ನಿದ್ರಾಹೀತನೆಯು ಒತ್ತಡ, ಆತಂಕದಂತಹ ಮಾನಸಿಕ ಕಾಯಿಲೆಗಳ ಜೊತೆಗೆ ಫಲವಂತಿಕೆ ಮೇಲೂ ಪರಿಣಾಮ ಬೀರಬಹುದು.

ಈ ಬಗ್ಗೆ ದೆಹಲಿಯ ವಸಂತ ವಿಹಾರದ ನೋವಾ ಐವಿಎಫ್‌ ಸೆಂಟರ್‌ನ ವೈದ್ಯರಾದ ಡಾ. ಸಂದೀಪ್‌ ತಲ್ವಾರ್‌ ನಿದ್ದೆ ಹಾಗೂ ಫಲವಂತಿಕೆಯ ನಡುವಿನ ಸಂಬಂಧ ಹಾಗೂ ಅಸರ್ಮಪಕ ನಿದ್ದೆ ಫಲಿವಂತಿಕೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಫಲವಂತಿಕೆಯ ಮೇಲೆ ನಿದ್ದೆಯ ಪರಿಣಾಮ

ಫಲವಂತಿಕೆಯ ವಿಚಾರದಲ್ಲಿ ನಿದ್ದೆಯು ಪ್ರಮುಖವಾಗಿ ಪರಿಣಾಮ ಬೀರುವ ಅಂಶವೆಂದರೆ ಹಾರ್ಮೋನ್‌ ಉತ್ಪಾದನೆ. ನಿದ್ದೆಯ ಕೊರತೆಯು ಹಾರ್ಮೋನ್‌ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಅಸರ್ಮಪಕ ನಿದ್ದೆಯ ಕಾರಣದಿಂದ ಕೆಲವೊಂದು ಹಾರ್ಮೋನ್‌ನಗಳ ಸವ್ರಿಕೆ ಹೆಚ್ಚಿದರೆ, ಇನ್ನೂ ಕೆಲವು ಕಡಿಮೆ ಪ್ರಮಾಣದಲ್ಲಿ ಸವ್ರಿಕೆಯಾಗುತ್ತದೆ. ಇದರಿಂದ ಫಲವಂತಿಕೆ ಸಾಧ್ಯವಾಗದೇ ಇರಬಹುದು.

ನಿದ್ದೆಯ ಕೊರತೆಯಿಂದ ಅಂಡೋತ್ಪತ್ತ ಕ್ರಿಯೆಯಲ್ಲಿನ ವ್ಯತ್ಯಾಸ, ಮುಟ್ಟಿನ ತೊಂದರೆ ಹಾಗೂ ಮಹಿಳೆಯರ ಫಲವಂತಿಕೆಯ ಮಟ್ಟ ಕುಸಿಯಲು ಕಾರಣ ಎಂಬುದನ್ನು ಹಲವಾರು ಅಧ್ಯಯನಗಳು ಸಾಬೀತು ಪಡಿಸಿವೆ. ಇದು ಪುರುಷರಲ್ಲೂ ವೀರ್ಯಾಣು ಪ್ರಮಾಣ ಇಳಿಕೆಯಾಗಲು ಹಾಗೂ ವೀರ್ಯಾಣುಗಳಿಗೆ ಸಂಬಂಧಿಸಿದ ತೊಂದರೆ ಉಂಟಾಗಲು ಕಾರಣವಾಗಬಹುದು ಎನ್ನಲಾಗಿದೆ. ಹಾರ್ಮೋನುಗಳಲ್ಲಿನ ಅಸಮತೋಲನವು ಕಾಮಾಸಕ್ತಿಯ ಇಳಿಕೆಗೂ ಕಾರಣವಾಗಬಹುದು. ಇಂತಹ ರಾಸಾಯನಿಕ ಬದಲಾವಣೆಗಳು ಫಲವಂತಿಕೆಗೆ ತಡೆಗೋಡೆಯಾಗಬಹುದು.

ನಿದ್ದೆಯ ಕೊರತೆಯಿಂದ ದೇಹದಲ್ಲಿ ಒತ್ತಡದ ಹಾರ್ಮೋನುಗಳ ಸ್ರವಿಕೆಯ ಪ್ರಮಾಣ ಹೆಚ್ಚುತ್ತದೆ. ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಈಸ್ಟ್ರೋಜೆನ್‌, ಟೆಸ್ಟೋಸ್ಟೆರಾನ್‌ ಹಾಗೂ ಇತರ ಸಾಂತನೋತ್ಪತ್ತಿಗೆ ನೆರವಾಗುವ ಹಾರ್ಮೋನುಗಳ ಮಟ್ಟದ ಇಳಿಕೆಗೂ ಕಾರಣವಾಗಬಹುದು.

ಮೆಲಟೋನಿನ್‌ ಹಾಗೂ ಕಾರ್ಟಿಸೋಲ್‌ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಮೆದುಳಿನ ಪ್ರದೇಶವು ಪ್ರತಿದಿನ ಸಂತಾನೋತ್ಪತ್ತಿ ಹಾರ್ಮೋನುಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ.

ದೇಹವು ಕತ್ತಲೆಯಲ್ಲಿದ್ದಾಗ ಮೆಲಟೋನಿನ್‌ ಹಾರ್ಮೋನ್‌ ಬಿಡುಗಡೆಯಾಗುತ್ತದೆ, ಇದು ನಮ್ಮ ನಿದ್ದೆ ಹಾಗೂ ನಿದ್ದೆಯಿಂದ ಎಚ್ಚರಗೊಳ್ಳುವ ಚಕ್ರಗಳನ್ನು ನಿಯಂತ್ರಿಸುತ್ತದೆ. ಇದು ಉತ್ಕರ್ಷಣ ವಿರೋಧಿಯಾಗಿದ್ದು, ಅಂಡಾಣುಗಳು ಅಂಡೋತ್ಪತ್ತಿಗೆ ಸಮೀಪಿಸುತ್ತಿರುವಾಗ ಅವುಗಳ ಗುಣಮಟ್ಟವನ್ನು ಕಡಿಮೆ ಮಾಡುವ ಫ್ರಿ ರಾಡಿಕಲ್ಸ್‌ ಹಾಗೂ ಇತರ ಹಾನಿಕಾರಕ ಘಟಕಗಳಿಂದ ಅಂಡಾಣುಗಳನ್ನು ರಕ್ಷಿಸುತ್ತವೆ. ರಾತ್ರಿ ವೇಳೆ ಅತಿಯಾದ ಬೆಳಕು ಬೀಳುವುದು, ಅದರಲ್ಲೂ ವಿಶೇಷವಾಗಿ ಮೊಬೈಲ್‌ ಅಥವಾ ಟಿವಿಯ ಬೆಳಕು ಕಣ್ಣಿನ ಮೇಲೆ ಹೆಚ್ಚು ಹೊತ್ತು ಬೀಳುವುದರಿಂದ ಮೆಲಟೋನಿನ್‌ ಚಕ್ರಕ್ಕೆ ಅಡ್ಡಿ ಉಂಟಾಗುತ್ತದೆ. ಇದು ಅಂಡಾಣುಗಳ ಕಾರ್ಯಸಾಧ್ಯತೆಯನ್ನು ಕುಂಠಿತಗೊಳಿಸಬಹುದು. ಇದಲ್ಲದೆ, ಸ್ಥಿರವಾದ ನಿದ್ರಾಹೀನತೆಯು ಅಂಡೋತ್ಪತ್ತಿಗೆ ಕಾರಣವಾಗುವ ಹಾರ್ಮೋನ್ ಲ್ಯುಟೈನೈಜಿಂಗ್ ಹಾರ್ಮೋನ್ ಅಥವಾ ಎಲ್ಹೆಚ್ ಬಿಡುಗಡೆಯ ಮೇಲೆ ಪರಿಣಾಮ ಬೀರಬಹುದು.

ಎಷ್ಟು ಹೊತ್ತಿನ ನಿದ್ದೆ ಅಗತ್ಯ?

ಸಾಕಷ್ಟು ನಿದ್ದೆಯ ಅಗತ್ಯತೆಗಳನ್ನು ಪೂರೈಸಲು ದಿನದಲ್ಲಿ 6 ರಿಂದ 7 ಗಂಟೆಗಳ ನಿದ್ದೆ ಮಾಡಬೇಕು. ಆದರೆ 9 ಗಂಟೆಗಳಿಗಿಂತಲೂ ಹೆಚ್ಚು ನಿದ್ದೆ ಮಾಡುವುದು ಸರಿಯಲ್ಲ. ಅತಿಯಾದ ನಿದ್ದೆ ಕೂಡ ಫಲವಂತಿಕೆಗೆ ತೊಂದರೆ ಮಾಡಬಹುದು.

ಇತ್ತೀಚಿನ ನ್ಯಾಷನಲ್‌ ಸ್ಲೀಪ್‌ ಫೌಂಡೇಶನ್‌ ಅಧ್ಯಯನದ ಪ್ರಕಾರ, ಐವಿಎಫ್‌ಗೆ ಒಳಗಾಗಿರುವ ಮಹಿಳೆಯರಲ್ಲಿ ಪ್ರತಿದಿನ 9 ಗಂಟೆಗಳ ಕಾಲ ಮಲಗುವವರಿಗಿಂತ, 7 ರಿಂದ 8 ಗಂಟೆಗಳ ಕಾಲ ಮಲಗುವ ಮಹಿಳೆಯರಲ್ಲಿ ಶೇ 25ರಷ್ಟು ಅಧಿಕ ಪ್ರಮಾಣದಲ್ಲಿ ಗರ್ಭಧಾರಣೆ ಸಾಧ್ಯವಾಗಿದೆ.

ಏಳು ಗಂಟೆಗಳಿಗಿಂತಲೂ ಕಡಿಮೆ ನಿದ್ರೆ ಮಾಡುವ ಮಹಿಳೆಯರಲ್ಲಿ ಶೇ 15ರಷ್ಟು ಗರ್ಭಧಾರಣೆ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ನಿದ್ರಿಸುವುದರಿಂದ ಸುರಕ್ಷಿತ ಹಾಗೂ ಆರೋಗ್ಯಕರ ಗರ್ಭಧಾರಣೆ ಸಾಧ್ಯ.

Whats_app_banner