Sleep Problem: ಆಫೀಸ್ ಕೆಲಸದ ಒತ್ತಡದಿಂದ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ತಜ್ಞರ ವರದಿ ಹೇಳುವುದಿಷ್ಟು..
ಕನ್ನಡ ಸುದ್ದಿ  /  ಜೀವನಶೈಲಿ  /  Sleep Problem: ಆಫೀಸ್ ಕೆಲಸದ ಒತ್ತಡದಿಂದ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ತಜ್ಞರ ವರದಿ ಹೇಳುವುದಿಷ್ಟು..

Sleep Problem: ಆಫೀಸ್ ಕೆಲಸದ ಒತ್ತಡದಿಂದ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ತಜ್ಞರ ವರದಿ ಹೇಳುವುದಿಷ್ಟು..

ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿಗೆ ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬೆನ್ನು ನೋವು, ನಿದ್ರಾಹೀನತೆ, ಒತ್ತಡ, ಮಾನಸಿಕ ಕಿರಿಕಿರಿ ಹೀಗೆ ಹಲವು ತೊಂದರೆಗಳನ್ನು ಐಟಿ-ಬಿಟಿ ಮಂದಿ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣಗಳು ಏನಿರಬಹುದು?

ಕೆಲಸದ ಒತ್ತಡದಿಂದ ನಿದ್ರೆ ಸರಿಯಾಗಿ ಬರುತ್ತಿಲ್ಲವೇ?
ಕೆಲಸದ ಒತ್ತಡದಿಂದ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? (Pixabay)

ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿ ನೆಮ್ಮದಿಯಾಗಿ ಮಲಗೋಣ ಎಂದರೆ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ನಿದ್ರೆ ಬಾರದಿರಲು ಹಲವು ಕಾರಣಗಳು ಇರಬಹುದು. ಆದರೆ ಇಂದಿನ ದಿನಗಳಲ್ಲಿ ಬಹುಮುಖ್ಯ ಕಾರಣ ಎಂದರೆ, ಆಫೀಸ್ ಕೆಲಸದ ಒತ್ತಡ. ಸೌತ್ ಫ್ಲಾರಿಡಾ ಯೂನಿವರ್ಸಿಟಿಯ ಕ್ಲೇರ್ ಇ. ಸ್ಮಿತ್ ಅಧ್ಯಯನದ ಪ್ರಕಾರ, ಕೆಲಸದಲ್ಲಿನ ಒತ್ತಡ ಮತ್ತು ಸದಾ ಕುಳಿತುಕೊಂಡೇ ಇರುವ ಸ್ಥಿತಿಯಿಂದಾಗಿ ಹಾಗೂ ಲ್ಯಾಪ್‌ಟಾಪ್ ನೋಡಿಕೊಂಡೇ ಇರಬೇಕಾದ ಅನಿವಾರ್ಯತೆಯಿಂದಾಗಿ ರಾತ್ರಿ ನಿದ್ರೆ ಸರಿಯಾಗಿ ಬರುತ್ತಿಲ್ಲ ಎಂದು ಹೇಳಲಾಗಿದೆ.

ಅಧ್ಯಯನ ವರದಿ ಹೇಳುವುದೇನು?

ಸ್ಮಿತ್ ಅವರ ಅಧ್ಯಯನ ವರದಿ, ಜರ್ನಲ್ ಆಫ್ ಅಕ್ಯುಪೇಶನಲ್ ಹೆಲ್ತ್ ಸೈಕಾಲಜಿಯಲ್ಲಿ ಪ್ರಕಟಗೊಂಡಿದೆ. ಅವರ ಅಧ್ಯಯನಕ್ಕೆ, 1,300 ಪೂರ್ಣಕಾಲಿಕ ಉದ್ಯೋಗಿಗಳನ್ನು ಬಳಸಿಕೊಂಡಿದ್ದು, ಅವರೆಲ್ಲರೂ ವಾರಕ್ಕೆ ಕನಿಷ್ಟ 46 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಸುಮಾರು 10 ವರ್ಷಗಳ ಕಾಲ ಉದ್ಯೋಗಿಗಳ ಜೀವನಶೈಲಿಯನ್ನು ಅಧ್ಯಯನ ಮಾಡಿ ವರದಿ ತಯಾರಿಸಿದ್ದಾರೆ. ಆಧುನಿಕ ಜೀವನಪದ್ಧತಿ ಮತ್ತು ಕೆಲಸದ ರೀತಿ ಹೇಗೆ ನಮ್ಮ ಆರೋಗ್ಯ, ದೇಹ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಅದು ತೋರಿಸಿಕೊಟ್ಟಿದೆ.

ಅಧ್ಯಯನದಲ್ಲಿ, ಉದ್ಯೋಗಿಗಳು ದಿನಕ್ಕೆ ಕನಿಷ್ಟ ಎಷ್ಟು ಗಂಟೆ ಸಮಯ ನಿದ್ರಿಸುತ್ತಾರೆ, ಮಲಗಿದ ಕೂಡಲೇ ನಿದ್ರೆ ಮಾಡುತ್ತಾರೆಯೇ, ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆಯೇ? ಹಗಲಿನ ವೇಳೆಯಲ್ಲಿ ನಿದ್ರಿಸುವ ಅಭ್ಯಾಸವಿದೆಯೇ? ಹೀಗೆ ಹಲವು ಸಂಗತಿಗಳನ್ನು ಪರಿಶೀಲಿಸಲಾಗಿದೆ.

ಹಾಗೆ ಅಧ್ಯಯನ ಮಾಡಿದಾಗ, ಸದಾ ಕುಳಿತುಕೊಂಡೇ ಕೆಲಸ ಮಾಡುವವರಲ್ಲಿ ನಿದ್ರೆಯ ಸಮಸ್ಯೆ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ನಿದ್ರಾಹೀನತೆಯ ಸಮಸ್ಯೆ ಶೇ. 37ರಷ್ಟು ಹೆಚ್ಚಳವಾಗಿರುವುದು ಕಂಡುಬಂದರೆ, ಉಳಿದಂತೆ ಇತರ ಕೆಲಸ ಮಾಡುವವರಲ್ಲಿ ನಿದ್ರೆಯ ಸಮಸ್ಯೆ ಕಂಡುಬಂದಿಲ್ಲ.

ಅಧ್ಯಯನ ಕೈಗೊಂಡ ಕ್ಲೇರ್ ಸ್ಮಿತ್ ಪ್ರಕಾರ, ಕೆಲಸಕ್ಕೆ ಹೆಚ್ಚಿನ ಗಮನ ಕೊಡುತ್ತಿರುವಂತೆಯೇ, ಆರೋಗ್ಯವಂತ ನಿದ್ರೆಯನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ದೀರ್ಘಾವಧಿಯವರೆಗೆ ನಿದ್ರೆ ಬಾರದೇ ಹೋದರೆ, ಮುಂದೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಆರೋಗ್ಯವಂತರಾಗಿರಲು ಎಂಟು ಗಂಟೆ ನಿದ್ರೆ ಮಾಡಲೇಬೇಕು. ಜತೆಗೆ ಅದಕ್ಕೆ ಸೂಕ್ತ ಸಮಯ ನಿಗದಿಪಡಿಸಬೇಕು. ಕಂಪನಿಗಳು ಈ ಬಗ್ಗೆ ಗಮನ ಹರಿಸಬೇಕು ಮತ್ತು ಉದ್ಯೋಗಿಗಳಿಗೆ ತಿಳಿವಳಿಕೆ ಮೂಡಿಸಬೇಕು ಎಂದಿದ್ದಾರೆ.

ನಿದ್ರೆಯ ಮೇಲೆ ಕಂಪ್ಯೂಟರ್ ಪ್ರಭಾವ

ಕಂಪ್ಯೂಟರ್ ಪರದೆಯನ್ನು ದಿನಪೂರ್ತಿ ವೀಕ್ಷಿಸುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಹಗಲಿನ ವೇಳೆ ನಿರ್ದಿಷ್ಟ ಸಮಯ ಮಾತ್ರ ಕಂಪ್ಯೂಟರ್ ವೀಕ್ಷಿಸಿದರೆ ಅಡ್ಡಿಯಿಲ್ಲ, ಆದರೆ ರಾತ್ರಿ ಮಾತ್ರ ಹೆಚ್ಚು ಸಮಯ ಕಂಪ್ಯೂಟರ್ ವೀಕ್ಷಿಸಬಾರದು ಎಂದು ವರದಿಯಲ್ಲಿ ಹೇಳಿದ್ದಾರೆ.

Whats_app_banner