ಒತ್ತಡದ ಕಾರಣದಿಂದ ನಿದ್ದೆ ಬರೋದು ಕಷ್ಟ ಆಗಿದ್ಯಾ, ಚಿಂತೆಯಿಲ್ಲದ ನೆಮ್ಮದಿಯ ನಿದ್ದೆಗೆ ಈ ಪಾನೀಯಗಳನ್ನು ಸೇವಿಸಿ
ಒತ್ತಡ ಮತ್ತು ಬ್ಯುಸಿ ಜೀವನಶೈಲಿಯಿಂದ ಇಂದು ಸುಖನಿದ್ರೆ ಎನ್ನುವುದು ಹಲವರಿಗೆ ಕನಸಿನ ಮಾತಾಗಿದೆ. ಅಂತಹ ಸಂದರ್ಭದಲ್ಲಿ ನಿದ್ರೆ ಬರಲು ನಾನಾ ತಂತ್ರಗಳ ಮೊರೆ ಹೋಗುತ್ತಾರೆ. ಸುಖನಿದ್ರೆ ನಿಮ್ಮದಾಗಲು ಈ ಸರಳ ಪಾನೀಯಗಳನ್ನು ಟ್ರೈ ಮಾಡಿ..

ನಿದ್ರೆ ಎನ್ನುವುದು ಅತ್ಯುತ್ತಮ ಔಷಧ ಎನ್ನುವ ಮಾತಿದೆ. ಸುಖನಿದ್ರೆ ಎನ್ನುವುದು ಕೆಲವರಿಗೆ ವರವಾದರೆ, ಇನ್ನು ಕೆಲವರಿಗೆ ಅದು ಬರುವುದೇ ಇಲ್ಲ. ಒತ್ತಡ ಮತ್ತು ಬ್ಯುಸಿ ಜೀವನಶೈಲಿಯಿಂದಾಗಿ ಹಲವರು ಒಂದು ಒಳ್ಳೆಯ ನಿದ್ರೆಯಿಂದ ವಂಚಿತವಾಗುತ್ತಿದ್ದಾರೆ. ಕೆಲವರಿಗೆ ಕೆಲಸದ ಒತ್ತಡ ಇದ್ದರೆ, ಇನ್ನು ಕೆಲವರಿಗೆ ಮಾನಸಿಕ ಒತ್ತಡ ಇರುತ್ತದೆ. ಮತ್ತೆ ಹಲವರಿಗೆ ಇತರ ಕಾರಣಗಳಿಂದ ಒತ್ತಡ ಉಂಟಾಗಿರಬಹುದು. ಜತೆಗೆ ಆಧುನಿಕ ಜೀವನಶೈಲಿಯು, ಒತ್ತಡವನ್ನು ಕೂಡ ಇಂದಿನ ಜನತೆಗೆ ಕೊಡುಗೆಯಾಗಿ ನೀಡಿದೆ. ಕೆಲಸದ ಒತ್ತಡ, ಕೌಟುಂಬಿಕ ಒತ್ತಡ ಹೀಗೆ ಹಲವು ರೀತಿಯ ಒತ್ತಡಗಳ ಪರಿಣಾಮ ಖಿನ್ನತೆ, ನಿದ್ರಾಹೀನತೆಯ ಸಮಸ್ಯೆಗಳು ಜನರನ್ನು ಬಾಧಿಸುತ್ತವೆ. ಹೀಗೆ ಸದಾ ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದರೆ, ಮುಂದೆ ಅವರಿಗೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುವ ಅಪಾಯವಿದೆ. ಹೃದಯ ಸಂಬಂಧಿ ಕಾಯಿಲೆಗಳೂ ಕಾಣಿಸಿಕೊಳ್ಳಬಹುದು.
ಒತ್ತಡದ ಪರಿಣಾಮ ನಿಮಗೆ ನಿದ್ರೆ ಕಡಿಮೆಯಾದರೆ, ಅದಕ್ಕೆ ಸಹಕರಿಸಲು ಕೆಲವೊಂದು ಸರಳ ಪಾನೀಯಗಳನ್ನು ನೀವು ಪ್ರಯತ್ನಿಸಬಹುದು. ಅವುಗಳ ಸೇವನೆಯಿಂದ ಒಳ್ಳೆಯ ನಿದ್ರೆ ಬರುವುದು ಮಾತ್ರವಲ್ಲದೆ, ಮನಸ್ಸು ಸಮಾಧಾನದಿಂದ ಇರುತ್ತದೆ. ಮನಸ್ಸು ಹಗುರವಾದರೆ ನಿದ್ರೆಯೂ ಸುಲಭದಲ್ಲಿ ಬರುತ್ತದೆ, ಜತೆಗೆ ಒತ್ತಡವೂ ಇಳಿಕೆಯಾಗುತ್ತದೆ.
ಜೇನುತುಪ್ಪದೊಂದಿಗೆ ಬಿಸಿ ಹಾಲು
ಸ್ವಲ್ಪ ಬಿಸಿಯಾಗಿರುವ ಹಾಲಿನ ಜೊತೆ ಜೇನು ತುಪ್ಪವನ್ನು ಸೇರಿಸಿ ನಿದ್ರೆ ಮಾಡುವ ಮೊದಲು ಸೇವಿಸಿದರೆ, ಒತ್ತಡ ದೂರಾಗಿ ಸುಖನಿದ್ರೆ ಬರುತ್ತದೆ. ಹಾಲಿನಲ್ಲಿರುವ ಟ್ರಿಪ್ಟೊಫಾನ್ ಅಂಶದ ಜತೆ ಜೇನುತುಪ್ಪ ಸೇರಿಕೊಂಡರೆ, ಮನಸ್ಸು ಶಾಂತವಾಗಿ ಒಳ್ಳೆಯ ನಿದ್ರೆಗೆ ಪ್ರೇರಣೆ ನೀಡುತ್ತದೆ. ಚಿಂತೆಯನ್ನು ಹೋಗಲಾಡಿಸಿ, ಉಲ್ಲಾಸಭರಿತ ಮತ್ತು ಚೈತನ್ಯದ ಮನಸ್ಸನ್ನು ನೀಡುತ್ತದೆ.
ಇದನ್ನೂ ಓದಿ: ನಿಮ್ಮ ಡಯೆಟ್‌ನಲ್ಲಿ ಈ ಹಣ್ಣು, ತರಕಾರಿಗಳನ್ನು ಸೇರಿಸಿದ್ರೆ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣ್ತೀರಿ, ಇದರಲ್ಲಿದೆ ಯೌವನದ ಗುಟ್ಟು
ಅರಶಿನ ಹಾಲು
ಮಲಗುವ ಮುನ್ನ ಬಿಸಿ ಹಾಲಿನ ಜೊತೆ ಅರಶಿನ ಹಾಕಿ ಸೇವಿಸಿದರೆ, ಮನಸ್ಸು ಶಾಂತವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ವಿಶ್ರಾಂತಿ ಪಡೆಯಲು ಅದು ಉತ್ತೇಜನ ನೀಡುತ್ತದೆ.
ತುಳಸಿ ಚಹಾ
ನಿದ್ರೆಗೆ ಮೊದಲು ಸೇವಿಸುವ ಮತ್ತೊಂದು ಪಾನೀಯವೆಂದರೆ ಅದು ತುಳಸಿ ಚಹಾ. ಒತ್ತಡವನ್ನು ಕಡಿಮೆ ಮಾಡಿ, ಮನಸ್ಸು ಮತ್ತು ದೇಹವನ್ನು ಶಾಂತವಾಗಿಸುತ್ತದೆ. ಅದರಿಂದ ನಮ್ಮ ಆತಂಕ ಮತ್ತು ನಿದ್ರಾಹೀನತೆ ದೂರವಾಗಿ ಒಳ್ಳೆಯ ನಿದ್ರೆ ಆವರಿಸುತ್ತದೆ.
ಇದನ್ನೂ ಓದಿ: ಶೂ ಹಾಕಿದಾಗ ನಿಮ್ಮ ಪಾದದಲ್ಲಿ ಗುಳ್ಳೆ ಉಂಟಾಗಿ ತೊಂದರೆಯಾಗುತ್ತಿದೆಯೇ? ವೈದ್ಯರ ಸಲಹೆ ಇಲ್ಲಿದೆ
ಬಾದಾಮಿ ಹಾಲು
ಬಿಸಿ ಬಾದಾಮಿ ಹಾಲು ಅಥವಾ ತಣ್ಣಗಿನ ಬಾದಾಮಿ ಹಾಲನ್ನು ಒತ್ತಡವನ್ನು ನಿರ್ವಹಿಸಿ, ಮನಸ್ಸನ್ನು ಶಾಂತವಾಗಿಸುತ್ತದೆ. ಅದರಲ್ಲಿ ಮೆಗ್ನೇಷಿಯಂ ಮತ್ತು ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿದ್ದು, ನರಮಂಡಲವನ್ನು ಶಾಂತಗೊಳಿಸುತ್ತದೆ. ಸ್ನಾಯುಗಳ ವಿಶ್ರಾಂತಿ ಮತ್ತು ಗುಣಮಟ್ಟದ ನಿದ್ರೆಗೆ ನಿಮ್ಮನ್ನು ಪ್ರೇರೇಪಿಸುತ್ತದೆ.
ಶುಂಠಿ, ನಿಂಬೆ ಮತ್ತು ಜೇನುತುಪ್ಪದ ಚಹಾ
ಶುಂಠಿ, ಜೇನುತುಪ್ಪ ಮತ್ತು ನಿಂಬೆ ಬಳಸಿ ಮಾಡುವ ಚಹಾ, ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿಗೆ ಹಿತ ನೀಡುವ ಪಾನೀಯವಾಗಿದೆ. ಈ ಎಲ್ಲ ರೀತಿಯ ಪಾನೀಯಗಳನ್ನು ಸುಲಭದಲ್ಲಿ ಮನೆಯಲ್ಲೇ ತಯಾರಿಸಿ ಕುಡಿಯಬಹುದು.
ಒತ್ತಡದ ಜೀವನಶೈಲಿ ಮತ್ತು ವಿವಿಧ ರೀತಿಯ ಅಭ್ಯಾಸಗಳು ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಕೆಲವರು ನಿದ್ರೆ ಮಾಡುವ ಮೊದಲು ಸದಾ ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್ ನೋಡುತ್ತಿರುತ್ತಾರೆ. ಅದರಿಂದ ಕಣ್ಣಿಗೆ ಆಯಾಸವಾಗುವುದಲ್ಲದೆ, ನಿದ್ರೆಯೂ ದೂರಾಗಬಹುದು. ಜತೆಗೆ ಕೆಲವರು ನಿದ್ರೆ ಮಾಡುವ ಮೊದಲು, ಧೂಮಪಾನ ಮಾಡುತ್ತಾರೆ, ಅದರಿಂದಲೂ ನಿದ್ರೆಗೆ ಸಮಸ್ಯೆಯಾಗುತ್ತದೆ. ಅಲ್ಲದೆ, ಕಚೇರಿಯಲ್ಲಿ ಸದಾ ಕುಳಿತುಕೊಂಡೇ ಕೆಲಸ ಮಾಡುವ ವೃತ್ತಿ ನಿಮ್ಮದಾಗಿದ್ದರೆ, ಬೆಳಗ್ಗೆ ಅಥವಾ ಸಂಜೆ ಸಾಧ್ಯವಾದಷ್ಟು ಸ್ವಲ್ಪ ಸಮಯ ನಡಿಗೆ, ಜಾಗಿಂಗ್‌ನಲ್ಲಿ ಮಾಡಿ. ಇದರಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮವೂ ದೊರೆಯುತ್ತದೆ ಮತ್ತು ಉತ್ತಮ ನಿದ್ರೆಯೂ ಪ್ರಾಪ್ತವಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
