Nightmares: ಕೆಟ್ಟ ಕನಸುಗಳಿಂದ ನಿದ್ದೆಗೆ ಅಡ್ಡಿಯಾಗುತ್ತಿದೆಯೇ; ದುಃಸ್ವಪ್ನವನ್ನು ತಡೆಯಲು ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಬೇಡಿ
Foods To Eat and Avoid To Prevent Nightmares: ರಾತ್ರಿ ಮಲಗುವ ಮುನ್ನ ನಾವು ಸೇವಿಸುವ ಆಹಾರವು ಪರೋಕ್ಷವಾಗಿ ಕೆಟ್ಟ ಕನಸು ಬೀಳಲು ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು. ದುಃಸ್ವಪ್ನಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಸೇವಿಸಬಹುದಾದ ಮತ್ತು ಸೇವಿಸಬಾರದ ಆಹಾರಗಳ ಬಗ್ಗೆ ತಜ್ಞರ ವಿವರ ಇಲ್ಲಿದೆ. ನಿಮಗೂ ಕೆಟ್ಟ ಕನಸು ಬೀಳುತ್ತಿದ್ದರೆ ಒಮ್ಮೆ ಈ ಲೇಖನ ಓದಿ.
ಮನುಷ್ಯ ಬೆಳೆದಂತೆ ದುಃಸ್ವಪ್ನಗಳು ಬೀಳುವ ಸಾಧ್ಯತೆ ಕಡಿಮೆ ಎನ್ನುತ್ತಾರೆ. ಆದರೆ ಕೆಲವರಲ್ಲಿ ಹೆಚ್ಚು ಹೆಚ್ಚು ಕೆಟ್ಟ ಕನಸುಗಳೇ ಬೀಳುತ್ತಿರುತ್ತವೆ. ದೆವ್ವಗಳ ಅಟ್ಟಿಸಿಕೊಂಡು ಬರುವುದು, ಎತ್ತರದ ಕಟ್ಟಡದಿಂದ ಕೆಳಗೆ ಬೀಳುವುದು, ನಿರ್ಜನ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಅಥವಾ ಪ್ರೀತಿಪಾತ್ರರು ಸತ್ತಂತೆ ಇಂತಹ ಕನಸುಗಳು ಸಂಕಟಕ್ಕೆ ದೂಡುತ್ತವೆ. ಈ ಕನಸುಗಳು ನಿದ್ದೆಗೆ ಅಡ್ಡಿಪಡಿಸುವುದು ಮಾತ್ರವಲ್ಲ, ಒತ್ತಡವನ್ನೂ ಉಂಟು ಮಾಡುತ್ತವೆ. ಕೆಲವರು ಇದನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸರ ಅನುಭವಿಸುತ್ತಾರೆ. ಕೆಲವರಿಗೆ ನಿರ್ದಿಷ್ಟ ದಿನದಂದು ಮಾತ್ರ ಆಗಾಗ್ಗೆ ದುಃಸ್ವಪ್ನಗಳನ್ನು ಕಾಡಬಹುದು. ಇದಕ್ಕೆ ಮಾನಸಿಕ ಒತ್ತಡದೊಂದಿಗೆ ಮಸಾಲೆ ಅಥವಾ ಎಣ್ಣೆಯುಕ್ತ ಆಹಾರ ಪದಾರ್ಥಗಳ ಸೇವನೆ ಕಾರಣವಾಗಬಹುದು.
ಹಲವು ಬಾರಿ ಒಂದು ಲೋಟ ನೀರು ಕುಡಿಯುವುದರಿಂದ ದುಃಖ ತರಿಸಿದ್ದ ಕನಸಿನಿಂದ ಕೊಂಚ ನಿರಾಳವಾಗಬಹುದು. ಇದರೊಂದಿಗೆ ರಾತ್ರಿ ಊಟದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ತಪ್ಪಿಸುವುದರಿಂದ ಕೆಟ್ಟ ಕನಸು ಬೀಳುವುದನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.
ಈ ಬಗ್ಗೆ ಮಾತನಾಡುವ ದೆಹಲಿಯ ಪ್ರೈಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಯೆಟಿಷಿಯನ್ ಇನ್ ಚಾರ್ಜ್ ಅಂಕಿತಾ ಘೋಷಾಲ್ ಬಿಷ್ಟ್ ʼದುಃಸ್ವಪ್ನಗಳು ನಿದ್ದೆಗೆ ಅಡ್ಡಿಪಡಿಸುವ ಜೊತೆಗೆ ಮಾನಸಿಕ ಸಂಕಟಕ್ಕೂ ಕಾರಣವಾಗಬಹುದು. ಇದು ನಮ್ಮಲ್ಲಿ ಒತ್ತಡ ಹಾಗೂ ಆತಂಕದ ಭಾವನೆಯನ್ನು ಉಂಟು ಮಾಡುತ್ತದೆ. ಒತ್ತಡ, ಆತಂಕ, ಔಷಧಿ ಮತ್ತು ನಿದ್ರೆಯ ಅಸ್ವಸ್ಥತೆಗಳು ಕೆಟ್ಟ ಕನಸು ಬೀಳಲು ಕಾರಣವಾದರೂ ಕೂಡ ಕೆಲವು ಆಹಾರ ಕ್ರಮಗಳು ದುಃಸ್ವಪ್ನಕ್ಕೆ ಕಾರಣವಾಗಬಹುದುʼ ಎನ್ನುತ್ತಾರೆ.
ʼದುಃಸ್ವಪ್ನಕ್ಕೆ ನಿರ್ದಿಷ್ಟ ಆಹಾರಗಳು ಕಾರಣ ಎನ್ನುವ ಬಗ್ಗೆ ಯಾವುದೇ ಸ್ವಷ್ಟ ಪುರಾವೆಗಳಿಲ್ಲದೇ ಇದ್ದರೂ ಕೆಲವು ಆಹಾರ ಹಾಗೂ ಪಾನೀಯಗಳು ನಿದ್ದೆಗೆ ಅಡ್ಡಿಪಡಿಸಬಹುದು. ಆ ಕಾರಣದಿಂದ ದುಃಸ್ವಪ್ನ ಬರುವ ಸಾಧ್ಯತೆ ಹೆಚ್ಚುʼ ಎನ್ನುತ್ತಾರೆ ಹೈದರಾಬಾದ್‌ನ ಕೇರ್ ಆಸ್ಪತ್ರೆಯ ಹಿರಿಯ ಪೌಷ್ಟಿಕ ತಜ್ಞೆ ಸಮೀನಾ ಅನ್ಸಾರಿ.
ದುಃಸ್ವಪ್ನಗಳನ್ನು ತಡೆಯಲು ತಿನ್ನಬೇಕಾದ ಆಹಾರಗಳು
ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು: ಮಲಗುವ ಮುನ್ನ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಇದು ದುಃಸ್ವಪ್ನಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಧಾನ್ಯಗಳ ಬ್ರೆಡ್, ಕೆಂಪಕ್ಕಿ ಅನ್ನ ಹಾಗೂ ಸಿಹಿ ಗೆಣಸು ಇವು ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶ ಹೊಂದಿರುತ್ತವೆ.
ಕ್ಯಾಲ್ಸಿಯಂ ಸಮೃದ್ಧ ಆಹಾರಗಳು: ಕ್ಯಾಲ್ಸಿಯಂ ದೇಹವನ್ನು ಶಾಂತಗೊಳಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದುಃಸ್ವಪ್ನಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಲು, ಮೊಸರು, ಚೀಸ್ ಮತ್ತು ಪಾಲಕ ಮತ್ತು ಕೇಲ್‌ನಂತಹ ಸೊಪ್ಪುಗಳು ಹಾಗೂ ಡೇರಿ ಉತ್ಪನ್ನಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳಾಗಿವೆ.
ಟ್ರಿಪ್ಟೊಫಾನ್ ಅಂಶವಿರುವ ಆಹಾರಗಳು: ಟ್ರಿಪ್ಟೊಫಾನ್ ಅಮೈನೋ ಆಮ್ಲವಾಗಿದ್ದು, ಅದು ನಿದ್ರೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಟ್ರಿಪ್ಟೊಫಾನ್ ಅಧಿಕವಾಗಿರುವ ಆಹಾರಗಳಲ್ಲಿ ಟರ್ಕಿ, ಕೋಳಿ, ಮೀನು, ಮೊಟ್ಟೆ, ಬೀಜಗಳು ಮತ್ತು ಬೀಜಗಳು ಸೇರಿವೆ.
ವಿಟಮಿನ್ ಬಿ 6: ವಿಟಮಿನ್ ಬಿ 6 ದೇಹವು ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ನಿದ್ರೆಗೆ ಸಹಕಾರಿ. ಬಾಳೆಹಣ್ಣುಗಳು, ಬೀಜಗಳು, ಕೋಳಿ, ಮೀನು ಮತ್ತು ಧಾನ್ಯಗಳು ವಿಟಮಿನ್ ಬಿ 6 ಸಮೃದ್ಧ ಆಹಾರ ಪದಾರ್ಥಗಳಾಗಿವೆ.
ಗಿಡಮೂಲಿಕೆ ಚಹಾಗಳು: ಮಲಗುವ ಮುನ್ನ ಒಂದು ಕಪ್ ಕ್ಯಾಮೊಮೈಲ್, ಲ್ಯಾವೆಂಡರ್ ಚಹಾವನ್ನು ಕುಡಿಯುವುದು ಚೆನ್ನಾಗಿ ನಿದ್ದೆ ಬರುತ್ತದೆ. ಇದು ನಿದ್ದೆಯ ಗುಣಮಟ್ಟ ಸುಧಾರಿಸಲು ಸಹಕಾರಿ.
ದುಃಸ್ವಪ್ನಗಳನ್ನು ತಡೆಯಲು ಈ ಆಹಾರಗಳನ್ನು ಸೇವಿಸದಿರಿ
ಮದ್ಯಪಾನ: ಮಲಗುವ ಮುನ್ನ ಮದ್ಯಪಾನ ಸೇವನೆಯು ನಿದ್ದೆಗೆ ಅಡ್ಡಿಪಡಿಸುತ್ತದೆ ಮತ್ತು ದುಃಸ್ವಪ್ನಗಳಿಗೆ ಕಾರಣವಾಗಬಹುದು. ಮದ್ಯಪಾನ ಮಾಡಿದಾಗ ಅರೆನಿದ್ರಾವಸ್ಥೆ ಇರುತ್ತದೆ, ಆ ಕಾರಣದಿಂದ ಹೆಚ್ಚು ಕನಸು ಬೀಳಬಹುದು.
ಮಸಾಲೆಯುಕ್ತ ಆಹಾರಗಳು: ಮಲಗುವ ಮುನ್ನ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ, ಇದು ಅಡ್ಡಿಪಡಿಸಿದ ನಿದ್ರೆ ಮತ್ತು ದುಃಸ್ವಪ್ನಗಳಿಗೆ ಕಾರಣವಾಗಬಹುದು.
ಕೆಫೀನ್ ಅಂಶವುಳ್ಳ ಪಾನೀಯಗಳು: ಕೆಫೀನ್ ಒಂದು ಉತ್ತೇಜಕವಾಗಿದ್ದು ಅದು ನಿದ್ರೆಗೆ ಅಡ್ಡಿಪಡಿಸುತ್ತದೆ ಮತ್ತು ದುಃಸ್ವಪ್ನಗಳಿಗೆ ಕಾರಣವಾಗಬಹುದು. ಮಲಗುವ ಮುನ್ನ ಗಂಟೆಗಳಲ್ಲಿ ಕಾಫಿ, ಚಹಾ ಮತ್ತು ಚಾಕೊಲೇಟ್‌ನಂತಹ ಕೆಫೀನ್ ಅಂಶ ಒಳಗೊಂಡಿರುವ ಆಹಾರಗಳು ಮತ್ತು ಪಾನೀಯಗಳನ್ನು ತಪ್ಪಿಸುವುದು ಉತ್ತಮ.
ಕೊಬ್ಬಿನಂಶವಿರುವ ಆಹಾರಗಳು: ಮಲಗುವ ಮುನ್ನ ಹೆಚ್ಚಿನ ಕೊಬ್ಬಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಅಜೀರ್ಣ ಮತ್ತು ಅಸ್ವಸ್ಥತೆ ಉಂಟಾಗುತ್ತದೆ, ಇದು ನಿದ್ರೆಗೆ ಅಡ್ಡಿಪಡಿಸುತ್ತದೆ ಮತ್ತು ದುಃಸ್ವಪ್ನಗಳಿಗೆ ಕಾರಣವಾಗುತ್ತದೆ. ಸಂಜೆಯ ಸಮಯದಲ್ಲಿ ಹೊಟ್ಟೆ ಬಿರಿಯುವಷ್ಟು ತಿನ್ನುವುದು, ಜಿಡ್ಡಿನ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ.
ಸಕ್ಕರೆ ಅಂಶವಿರುವ ಆಹಾರಗಳು: ಮಲಗುವ ಮೊದಲು ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಏರಿಕೆ ಉಂಟಾಗುತ್ತದೆ, ಇದು ನಿದ್ರೆಗೆ ತೊಂದರೆ ಮಾಡುತ್ತದೆ ಮತ್ತು ದುಃಸ್ವಪ್ನಗಳಿಗೆ ಕಾರಣವಾಗುತ್ತದೆ.
ವಿಭಾಗ