Social Media: ತಡರಾತ್ರಿಯವರೆಗೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದರೆ ವಿವಿಧ ಕಾಯಿಲೆ ಬರುವುದು ಗ್ಯಾರಂಟಿ
ಕನ್ನಡ ಸುದ್ದಿ  /  ಜೀವನಶೈಲಿ  /  Social Media: ತಡರಾತ್ರಿಯವರೆಗೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದರೆ ವಿವಿಧ ಕಾಯಿಲೆ ಬರುವುದು ಗ್ಯಾರಂಟಿ

Social Media: ತಡರಾತ್ರಿಯವರೆಗೆ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿದ್ದರೆ ವಿವಿಧ ಕಾಯಿಲೆ ಬರುವುದು ಗ್ಯಾರಂಟಿ

ಸೋಷಿಯಲ್‌ ಮೀಡಿಯಾದಲ್ಲಿ ಅತಿಯಾಗಿ ರೀಲ್ಸ್‌ ನೋಡುತ್ತಿದ್ದೀರಾ? ನಿದ್ರೆ ಮಾಡುವ ಮೊದಲು ಅಧಿಕ ಸಮಯ ಮೊಬೈಲ್, ರೀಲ್ಸ್‌ ನೋಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ತಡರಾತ್ರಿಯವರೆಗೆ ಮೊಬೈಲ್ ನೋಡುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ತಡರಾತ್ರಿಯವರೆಗೆ ಮೊಬೈಲ್ ನೋಡುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. (Pixabay)

ಸುಲಭ ದರದಲ್ಲಿ ಇಂಟರ್‌ನೆಟ್ ಮತ್ತು ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್‌ಗಳು ಈಗ ದೊರೆಯುತ್ತದೆ. ಇದರಿಂದಾಗಿ ಯುವಜನತೆಯ ಸೋಶಿಯಲ್ ಮೀಡಿಯಾ ಬಂಧನಕ್ಕೆ ಕೊನೆಯೇ ಇಲ್ಲದಂತಾಗಿದೆ. ಏನಾದರೂ ಕೆಲಸ ಮಾಡುತ್ತಿದ್ದರೂ ಫೋನ್ ಕೈಯಲ್ಲಿ ಇರಬೇಕು, ಏನೂ ಕೆಲಸ ಮಾಡದೇ ಇದ್ದರೂ ಫೋನ್ ಕೈಯಲ್ಲಿರಬೇಕು ಎನ್ನುವಂತಾಗಿದೆ ನಮ್ಮ ಸ್ಥಿತಿ. ಅಗತ್ಯ ಇರಲಿ, ಇಲ್ಲದಿರಲಿ, ಸದಾ ಏನಾದರೊಂದು ಕೆಲಸಕ್ಕೆ ಫೋನ್ ಬಳಸುತ್ತಿರುತ್ತೇವೆ. ಆದರೆ ಆ ರೀತಿ ಸಮಯ ಕಳೆಯಲು, ಬೋರ್ ಹೋಗಲಾಡಿಸಲು ಮಾಡಿಕೊಂಡ ಅಭ್ಯಾಸದಿಂದ ಇಂದು ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಮೇಲ್ನೋಟಕ್ಕೆ ಗಂಭೀರ ಅನ್ನಿಸದಿದ್ದರೂ, ಇದರಿಂದ ವ್ಯಕ್ತಿಯ ದೈಹಿಕ ಚಟುವಟಿಕೆ ಮೇಲೆ ಭವಿಷ್ಯದಲ್ಲಿ ಖಂಡಿತಾ ಸಮಸ್ಯೆ ಎದುರಾಗುತ್ತದೆ. ಎಷ್ಟೇ ಬಿಝಿಯ ಕೆಲಸ ಮಾಡುತ್ತಿದ್ದರೂ, ಟಿಂಗ್ ಎಂದು ಸೋಶಿಯಲ್ ಮೀಡಿಯಾದ ನೋಟಿಫೀಕೇಶನ್ ಬಂದರೆ ಮುಗಿಯಿತು. ಫೋನ್ ಕೈಗೆತ್ತಿಕೊಂಡರೆ ಗಂಟೆಗಳು ಉರುಳಿದ್ದೇ ಗೊತ್ತಾಗಲ್ಲ.

ಮೋಡಿ ಮಾಡುವ ಸೋಶಿಯಲ್ ಮೀಡಿಯಾ

ಈಗ ಫೇಸ್‌ಬುಕ್‌ನ ಹುಚ್ಚು ಜನರಿಗೆ ಕಡಿಮೆಯಾಗಿದೆ. ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಕುರಿತು ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಕಿರು ಅವಧಿಯ ವಿಡಿಯೋ ಸರಣಿಯಲ್ಲಿ ವಿವಿಧ ರೀತಿಯ ಮಾಹಿತಿ, ಮನರಂಜನೆ ಬರುವುದರಿಂದ ಜನರು ಮುಗಿಬಿದ್ದು ಅವುಗಳನ್ನು ನೋಡುತ್ತಾರೆ. ರೀಲ್ಸ್ ನೋಡುವ ಆಸಕ್ತಿ ಎಷ್ಟು ಹೆಚ್ಚಾಗಿದೆ ಅಂದರೆ, ರಾತ್ರಿಯೆಲ್ಲಾ ನಿದ್ದೆಗಟ್ಟು ನೋಡುತ್ತಾ ಕೂರುವಷ್ಟು..

ಮಿತಿಮೀರಿದ ಸ್ಕ್ರೀನ್ ಟೈಮ್

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಟೈಮ್ ಎಂಬ ಆಯ್ಕೆಯೊಂದಿದೆ. ಅಂದರೆ, ನೀವು ಎಷ್ಟು ಸಮಯ ಮೊಬೈಲ್ ಬಳಸಿದ್ದೀರಿ, ಫೋನ್ ಸ್ಕ್ರೀನ್ ಅನ್ನು ಎಷ್ಟು ಸಮಯ ನೋಡಿದ್ದೀರಿ ಎಂದು ಅದು ಹೇಳುತ್ತದೆ. ಅಲ್ಲದೆ, ಯಾವ ಆಪ್‌ನಲ್ಲಿ ಎಷ್ಟು ಸಮಯ ಕಳೆದಿದ್ದೀರಿ ಎನ್ನುವುದನ್ನು ಕೂಡ ಅದು ತೋರಿಸುತ್ತದೆ. ಅದನ್ನು ಗಮನಿಸಿದಾಗ, ಜನರು ರೀಲ್ಸ್, ಶಾರ್ಟ್ಸ್ ನೋಡಲು ಅಧಿಕ ಸಮಯ ವ್ಯಯಿಸಿರುವುದು ಕಂಡುಬಂದಿದೆ.

ತಡರಾತ್ರಿಯವರೆಗೆ ಮೊಬೈಲ್ ನೋಡಿದರೆ ಏನಾಗುತ್ತದೆ?

ತಡರಾತ್ರಿಯವರೆಗೆ ಮೊಬೈಲ್ ನೋಡುವುದರಿಂದ ಮುಂದೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರೀಲ್ಸ್ ಮತ್ತು ಶಾರ್ಟ್ಸ್ ನೋಡುವುದನ್ನೇ ಹವ್ಯಾಸ ಮಾಡಿಕೊಂಡಿರುವ 4,000ಕ್ಕೂ ಅಧಿಕ ಮಂದಿಯನ್ನು ಅಧ್ಯಯನವೊಂದಕ್ಕಾಗಿ ಸಂದರ್ಶಿಸಿದಾಗ, ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ನಿದ್ರೆ ಮಾಡುವ ಮೊದಲು ಅಧಿಕ ಸಮಯ ಮೊಬೈಲ್ ನೋಡಿದ್ದರಿಂದ ಅವರಲ್ಲಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿದೆ. ಜತೆಗೆ ಹೃದಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಅವರಿಗೆ ತಗುಲಿದೆ.

ಯುವಜನರಲ್ಲೇ ಅಧಿಕ

ಟಿವಿ ಮತ್ತು ಕಂಪ್ಯೂಟರ್ ನೋಡುವುದನ್ನು ಹೊರತುಪಡಿಸಿ, ಶಾರ್ಟ್ಸ್ ಮತ್ತು ರೀಲ್ಸ್ ನೋಡುವವರನ್ನೇ ಗುರಿಯಾಗಿಸಿ ಅಧ್ಯಯನ ನಡೆಸಲಾಗಿದೆ. ಆ ಪೈಕಿ, ಅವರಲ್ಲಿ ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡಿವೆ ಎಂದು ತಜ್ಞರು ಹೇಳಿದ್ದಾರೆ.

ಇದಕ್ಕೆ ಕಾರಣವೇನು?

ಅತ್ಯಧಿಕ ಸಮಯ, ಕಣ್ಣಿಗೆ ತೀರಾ ಹತ್ತಿರದಲ್ಲೇ ಮೊಬೈಲ್ ಹಿಡಿದು ನೋಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮೊಬೈಲ್ ಡಿಸ್‌ಪ್ಲೇ ಹೊರಸೂಸುವ ನೀಲಿ ಬೆಳಕಿಗೆ ಒಡ್ಡಿಕೊಂಡಾಗ, ಕಣ್ಣು ಸುಸ್ತಾಗುತ್ತದೆ. ಇದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ದಿನಕ್ಕೆ ಕನಿಷ್ಠ ಆರು ಗಂಟೆಗಳ ಕಾಲ ನಿದ್ರೆ ಇಲ್ಲದೇ ಹೋದರೆ, ಅಧಿಕ ರಕ್ತದೊತ್ತಡಕ್ಕೆ ದಾರಿಮಾಡಿಕೊಡಬಹುದು. ಅಲ್ಲದೆ, ಅಧಿಕ ಸಮಯ ಮೊಬೈಲ್‌ನಲ್ಲೇ ಕಳೆದರೆ, ಆತಂಕ ಮತ್ತು ಖಿನ್ನತೆ ಎದುರಾಗಬಹುದು. ಹೆಚ್ಚು ಸಮಯ ಕುಳಿತಲ್ಲೇ ಇದ್ದರೆ, ಬೊಜ್ಜು, ಕೊಬ್ಬಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಇಂತಹ ಹಲವು ಗಂಭೀರ ಸಮಸ್ಯೆಗೆ ತುತ್ತಾಗುವ ಮೊದಲು ಎಚ್ಚೆತ್ತುಕೊಂಡು ಸ್ವನಿಯಂತ್ರಣ ಕೈಗೊಂಡರೆ, ಮುಂದೆ ಆರೋಗ್ಯ ಕಾಪಾಡಿಕೊಳ್ಳಬಹುದು.

Whats_app_banner