ಕನ್ನಡ ಸುದ್ದಿ  /  Lifestyle  /  Social Media Chandrashekhar Nangali Thanked Ksrtc To Get His Bag Back Which He Lost In Mandya Rsm

ಜೈ KSRTC ! ಜೈ ಮಂಡ್ಯ ! ಜೈ ಇಂಡ್ಯ: ಕಳೆದುಹೋದ ಕೈಚೀಲ ಹುಡುಕಿಕೊಟ್ಟ ಸಾರಿಗೆ ಸಂಸ್ಥೆಗೆ ಥ್ಯಾಂಕ್ಸ್ ಹೇಳಿದ ಚಂದ್ರಶೇಖರ ನಂಗಲಿ

Social Media: ಬೆಂಗಳೂರಿನ ಹೊಸಕೋಟೆಯಿಂದ ಮಂಡ್ಯಕ್ಕೆ ಪ್ರಯಾಣಿಸುವಾಗ ತಾವು ಕಳೆದುಕೊಂಡ ಬ್ಯಾಗ್‌ ಮತ್ತೆ ವಾಪಸ್‌ ಸಿಕ್ಕಿದ್ದರ ಬಗ್ಗೆ ಚಂದ್ರಶೇಖರ ನಂಗಲಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಬ್ಯಾಗ್‌ ಪಡೆಯಲು ಸಹಾಯ ಮಾಡಿದ ಆಟೋ ಚಾಲಕ, ಕೆಎಸ್‌ಆರ್‌ಟಿಸಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕೆಎಸ್‌ಆರ್‌ಟಿಸಿಗೆ ಧನ್ಯವಾದ ಅರ್ಪಿಸಿದ ಚಂದ್ರಶೇಖರ ನಂಗಲಿ
ಕೆಎಸ್‌ಆರ್‌ಟಿಸಿಗೆ ಧನ್ಯವಾದ ಅರ್ಪಿಸಿದ ಚಂದ್ರಶೇಖರ ನಂಗಲಿ (PC: Chandrashekhar Nangali Facebook)

ಮರೆವು ಮನುಷ್ಯನ ಸಹಜ ಗುಣ. ನನಗೆ ಜ್ಞಾಪಕಶಕ್ತಿ ಚೆನ್ನಾಗಿದೆ ಎನ್ನುವವರು ಕೂಡಾ ಎಷ್ಟೋ ಸಾರಿ ಬಹಳಷ್ಟು ವಿಚಾರಗಳನ್ನು ಮರೆತುಬಿಡುತ್ತಾರೆ. ಏನಾದರೂ ತರಬೇಕು ಎಂದು ಹೊರಗೆ ಹೋದರೆ, ಮುಖ್ಯವಾದ ವಸ್ತುವನ್ನು ಮರೆತುಬಂದ ಎಷ್ಟೋ ಉದಾಹರಣೆಗಳಿವೆ.

ಹಾಗೇ ಪ್ರಯಾಣಿಸುವಾಗ ಕೂಡಾ ಬಹಳ ಮುಖ್ಯವಾದ ಎಷ್ಟೋ ವಸ್ತುಗಳನ್ನು ಮರೆತುಬಿಡುತ್ತೇವೆ. ಬಸ್‌, ಆಟೋ, ಟ್ರೈನಿನಲ್ಲಿ ಪ್ರಯಾಣಿಸುವಾಗ ಮೊಬೈಲ್‌, ಹಣದ ಬ್ಯಾಗ್‌, ಪ್ರಮುಖವಾದ ದಾಖಲೆಗಳು ಇರುವ ಬ್ಯಾಗ್‌ಗಳನ್ನು ಮರೆಯುತ್ತೇವೆ. ಹಾಗೇ ಮರೆತದ್ದು ಇನ್ನು ಸಂಪೂರ್ಣ ಮರೆತಂತೆ. ಏಕೆಂದರೆ ನಮ್ಮ ವಸ್ತುಗಳು ಯಾರಿಗೆ ಸಿಗುವುದೋ ಖುಷಿಯಿಂದ ಮನೆಗೆ ಕೊಂಡೊಯ್ಯುತ್ತಾರೆ. ಆದರೆ ಆ ವಸ್ತುಗಳನ್ನು ಕಳೆದುಕೊಂಡವರಿಗೆ ತಲುಪಿಸುವವರು ಕೋಟಿಗೆ ಒಬ್ಬರು.

ಕೋಲಾರದ ಚಂದ್ರಶೇಖರ ನಂಗಲಿ ಕೂಡಾ ಇತ್ತೀಚೆಗೆ ತಾವು ಕಳೆದುಕೊಂಡ ಬ್ಯಾಗ್‌ ವಾಪಸ್‌ ಸಿಕ್ಕಿದ್ದರ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಬಸ್‌ನಲ್ಲೇ ಹ್ಯಾಂಡ್‌ಬ್ಯಾಗ್‌ ಮರೆತ ಚಂದ್ರಶೇಖರ ನಂಗಲಿ

ದಿನಾಂಕ 06.03.24 ರಂದು ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಸಿಲುಕಿಸಿದ್ದರಿಂದ ವಿಚಾರಣೆಗೆ ಹಾಜರಾಗಲು ಹೊಸಕೋಟೆಯಿಂದ ಮಂಡ್ಯಕ್ಕೆ ಮೂರು ಬಸ್ಸು ಬದಲಾಯಿಸಿ ಬೆಳಿಗ್ಗೆ 9.45 ಗಂಟೆಗೆ ಮಂಡ್ಯ ಬಸ್ ನಿಲ್ದಾಣದಲ್ಲಿಳಿದೆನು. ಯಾವೂದೋ ಮೂಡಿನಲ್ಲಿ ಹ್ಯಾಂಡ್ ಬ್ಯಾಗ್ ತೆಗೆದು ಕೊಳ್ಳದೆ ಕುಳಿತಲ್ಲೇ ಬಿಟ್ಟು ರಿಕ್ಷಾ ಏರಿ ಕೋರ್ಟ್ ಆವರಣಕ್ಕೆ ಬಂದೆನು. ಈ ಹ್ಯಾಂಡ್ ಬ್ಯಾಗ್‌ನಲ್ಲಿ ಕೋರ್ಟಿಗೆ ಸಂಬಂಧಪಟ್ಟ ಕೆಲವು ಕಾಗದ ಪತ್ರಗಳಿದ್ದವು. ಕ್ಯಾಷ್ ಇತ್ಯಾದಿ ಅಮೂಲ್ಯ ವಸ್ತುಗಳೇನೂ ಇರಲಿಲ್ಲ. ಒಂದು ಕ್ಷಣ "ಪೋನಾಲ್ ಪೋಗಟ್ಟುಂ ಪೋಡಾ" ಎನಿಸಿತು.‌ ಜೆರಾಕ್ಸ್ ಮಾಡಿಸಿ ದಾಖಲೆಗಳನ್ನು ಮತ್ತೆ ಸಿದ್ಧಪಡಿಸಿ ಕೊಳ್ಳಬೇಕು ಎಂದುಕೊಂಡೆನು. ನಂತರ ಮಾನವ ಪ್ರಯತ್ನ ಏಕೆ ಮಾಡಬಾರದು ? ಎಂದು ನಿರ್ಧರಿಸಿ, ರಿಕ್ಷಾವಾಲಾಗೆ ವಿಷಯ ತಿಳಿಸಿ ಪುನಃ ಮಂಡ್ಯ ಬಸ್ ನಿಲ್ದಾಣಕ್ಕೆ ಬಂದೆನು.

ನಾನು ಏರಿ ಬಂದ ರಿಕ್ಷಾವಾಲಾ ನನ್ನೊಂದಿಗೆ ಆಪ್ತವಾಗಿ ವರ್ತಿಸಿದ್ದಲ್ಲದೆ, ಸಂಬಂಧಪಟ್ಟ ಅಧಿಕಾರಿಯನ್ನು ಪತ್ತೆ ಮಾಡುವಲ್ಲಿ ಸಹಕರಿಸಿದನು. ನಾನು ಕುಳಿತು ಬಂದಿದ್ದ ಬಸ್ಸು ಈಗತಾನೆ ಮೂವ್ ಆಗಿದೆ, ಶ್ರೀರಂಗಪಟ್ಟಣಕ್ಕೆ ಈಗಲೇ ಫಾಲೋ ಮಾಡಿಕೊಂಡು ಹೋದರೆ ಅಲ್ಲಿ ಅದನ್ನು ಹಿಡಿಯಬಹುದು ಎಂದು ಬಸ್ ಸ್ಟ್ಯಾಂಡ್ ಇನ್ ಚಾರ್ಜ್ ಅಧಿಕಾರಿ ತಿಳಿಸಿದರು. ನಾನು ಕೋರ್ಟಿಗೆ ಹಾಜರಾಗಲೇ ಬೇಕೆಂದು ತಿಳಿಸಿದ್ದಕ್ಕೆ ಅವರು ಕೂಡಲೇ ಶ್ರೀರಂಗಪಟ್ಟಣದ ಸರೀಕ ಅಧಿಕಾರಿಯನ್ನು ಸಂಪರ್ಕಿಸಿ, ವಿಷಯ ತಿಳಿಸಿ, ಆ ಬಸ್ಸು ಬಂದೊಡನೆ ಹ್ಯಾಂಡ್ ಬ್ಯಾಗ್ ತೆಗೆದಿಟ್ಟುಕೊಂಡು ತನಗೆ ಕಳಿಸಿಕೊಡುವಂತೆ ಸೂಚಿಸಿದರು. ನನಗೆ ಕೋರ್ಟು ಮುಗಿದ ನಂತರ ಬಂದು ಸಂಪರ್ಕಿಸಿರಿ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿಗೆ ಧನ್ಯವಾದ

ಆಶ್ಚರ್ಯ ! ನಂಬಲಸಾಧ್ಯ ! ನನ್ನ ಹ್ಯಾಂಡ್ ಬ್ಯಾಗ್ ಶ್ರೀರಂಗಪಟ್ಟಣದಿಂದ ಮಂಡ್ಯಕ್ಕೆ ಹಿಂದಿರುಗಿ ಬಂದು ಮಂಡ್ಯದ ಅಧಿಕಾರಿ ಕೈ ಸೇರಿತು. ಇವರು ನನಗೆ ಫೋನ್ ಮಾಡಿ ಹ್ಯಾಂಡ್ ಬ್ಯಾಗ್ ಬಂದಿದೆ. ಮಧ್ಯಾಹ್ನ ಬಂದು ತೆಗೆದುಕೊಂಡು ಹೋಗಿ ಎಂದು ಫೋನ್ ಮಾಡಿದರು. ಕೋರ್ಟು ಮುಗಿದ ನಂತರ, ನೇರವಾಗಿ ಅಧಿಕಾರಿ ಬಳಿ ತೆರಳಿ ನನ್ನ ಹ್ಯಾಂಡ್ ಬ್ಯಾಗ್ ಪಡೆದುಕೊಂಡೆನು. ಬಸ್ಸಿನಲ್ಲಿ ಮರೆತು ಕಳೆದು ಹೋದ ವಸ್ತುವೊಂದು ಮರಳಿ ನನ್ನ ಕೈ ಸೇರಿದ ಈ ಬಗೆ ಯಾವುದೋ ವಿದೇಶದಲ್ಲಿ ನಡೆದ ಪ್ರಸಂಗವಲ್ಲ ! ಇದು ಇಲ್ಲೇ ಮಂಡ್ಯದಲ್ಲೇ ನಡೆದದ್ದು. ಈ ದಕ್ಷ ಕಾರ್ಯಭಾರ ನಿರ್ವಹಣೆಗಾಗಿ ಸ್ಥಳೀಯ ಅಧಿಕಾರಿಯನ್ನು ಮನಸಾ ಸ್ಮರಿಸುತ್ತೇನೆ. ಜೈ KSRTC ! ಜೈ ಮಂಡ್ಯ ! ಜೈ ಇಂಡ್ಯ ! ಎಂದು ವಿ.ಚಂದ್ರಶೇಖರ ನಂಗಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚಂದ್ರಶೇಖರ ನಂಗಲಿ ಅವರ ಪೋಸ್ಟ್‌ಗೆ ಅನೇಕರು ಕಾಮೆಂಟ್‌ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಂತರಗಂಗೆ ಬೆಟ್ಟದ ಕಲ್ಲು ಬಂಡೆಗಳ ಸಂದಿಯಲ್ಲಿ ನುಗ್ಗಿ ಒಂದೊಂದು ಆಕಾರಕ್ಕೆ ತಕ್ಕಂತೆ ಹೆಸರಿಟ್ಟು ಇತಿಹಾಸ ಬರೆದಿರುವ ನಿಮಗೆ ನಿಮ್ಮ ಕೈಚೀಲ ಹುಡುಕುವುದು ಯಾವ ಲೆಕ್ಕ ಸಾರ್. ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಧನ್ಯವಾದಗಳು ಸರ್ ಎಂದು ಒಬ್ಬರು ಫಾಲೋವರ್‌ ಕಾಮೆಂಟ್‌ ಮಾಡಿದ್ದರೆ, ಮತ್ತೊಬ್ಬರು ಇಂತಹ ಹಲವು ಪ್ರಕರಣಗಳನ್ನು ನೋಡಿದರೆ , ದೇಶ ಇನ್ನೂ ಪೂರ್ತಿಯಾಗಿ ಕೆಟ್ಟಿಲ್ಲ . ರಾಜಕೀಯ ಹೊಲಸೆದ್ದಿದೆಯಾದರೂ ಜನಜೀವನದಲ್ಲಿ ಆರೋಗ್ಯಕರ ಪ್ರವೃತ್ತಿ ಇದೆ, ಎನ್ನಿಸುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.