ಕನ್ನಡ ಸುದ್ದಿ  /  Lifestyle  /  Social Media Post Of Journalist Writer Bharathi Hegde About Plumber Facebook Poster Rsm

Social Media: ಪ್ಲಂಬರ್‌ನ ಪುಸ್ತಕ ಪ್ರೇಮ; ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಸೋಷಿಯಲ್‌ ಮೀಡಿಯಾ ಪೋಸ್ಟ್‌

Social Media: ಕೊಳಾಯಿ ರಿಪೇರಿ ಮಾಡಲು ಬಂದ ಪ್ಲಂಬರ್‌ ತಮ್ಮ ಬಗ್ಗೆ ವಿಚಾರಿಸಿ, ತಾವು ಬರೆದ ಪುಸ್ತಕವನ್ನು ಕೇಳಿ ಪಡೆದದ್ದನ್ನು ಪತ್ರಕರ್ತೆ, ಬರಹಗಾತಿ ಭಾರತಿ ಹೆಗಡೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಆತನ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಸೋಷಿಯಲ್‌ ಮೀಡಿಯಾ ಪೋಸ್ಟ್‌
ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಸೋಷಿಯಲ್‌ ಮೀಡಿಯಾ ಪೋಸ್ಟ್‌ (PC: Bharathi Hegde Facebook)

Social Media: ಪುಸ್ತಕ ಓದುವ ಹವ್ಯಾಸ ಕೆಲವರಿಗಷ್ಟೇ ಇರುತ್ತದೆ. ಪ್ಲಂಬರ್‌, ಪೇಂಟರ್‌, ಕಾರ್ಪೆಂಟರ್‌ಗಳಿಗೆ ಅವರ ಕೆಲವೇ ಹೆಚ್ಚು, ಆದರೆ ಪುಸ್ತಕ ಓದುವ ಹವ್ಯಾಸ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದೇ ವಿಚಾರವಾಗಿ ಪತ್ರಕರ್ತೆ, ಬರಹಗಾರ್ತಿ ಭಾರತಿ ಹೆಗಡೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ತಮಗೆ ಪುಸ್ತಕ ಕೇಳಿದ ಪ್ಲಂಬರ್‌ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ನಾನೇ ನಾಚಿಕೊಳ್ಳುವಂತಾಯ್ತು ಎಂದು ಹೇಳಿಕೊಂಡಿದ್ದಾರೆ.

ನಮ್ಮ ಮನೆಯ ಬಚ್ಚಲು ಮನೆಯ ಕೊಳಾಯಿ ಎರಡು ದಿನಗಳಿಂದ ಕೈಕೊಟ್ಟಿತ್ತು. ರಿಪೇರಿ ಮಾಡ್ಸನ ಅಂತ ಪ್ಲಂಬರ್‌ಗಳನ್ನು ಹುಡುಕಿ ಹುಡುಕಿ ಅಂತೂ ಇವತ್ತು ಒಬ್ರು ಸಿಕ್ರು. ಕೊಳಾಯಿ ರಿಪೇರಿ ಮಾಡಿ ಹಾಲಲ್ಲಿ ಬಂದು ನಿಂತು ಲೆಕ್ಕಾಚಾರ ಮಾಡತೊಡಗಿದವರು ಸುತ್ತ ಒಮ್ಮೆ ನೋಡಿ. ಮೇಡಂ, ನೀವೇನು? ಅಂತ ಕೇಳಿದ್ರು.

ಪತ್ರಕರ್ತೆ ಬಳಿ ಪುಸ್ತಕ ಕೇಳಿದ ಪ್ಲಂಬರ್‌

ಏನೂ ಅಂದ್ರೆ...? ಅಲ್ಲ ಇಲ್ಲೆಲ್ಲ ಪ್ರಶಸ್ತಿ ತಗಂತ ಇರೋ ಫೋಟೋ ಐತಲ್ಲ...ಅದ್ಕೆ ಕೇಳ್ದೆ ನೀವೇನ್ ಮಾಡ್ತೀರೀ ಅಂತ.‌..ನಾನಾ...ನಾನೊಬ್ಬ ಪತ್ರಕರ್ತೆ ಮತ್ತು ಕೆಲವು ಪುಸ್ತಕಗಳನ್ನು ಬರೆದಿದ್ದೀನಪ್ಪ. ಹೀಗೆಂದ‌ಕೂಡಲೇ ಆ ಮನುಷ್ಯ ಕೈ ಮುಗಿದು..ಹೌದಾ ಮೇಡಂ..ನೀವು ಬುಕ್ಕೆಲ್ಲ ಬರ್ದಿದೀರಾ...ಹಂಗಾರೆ ನಾನು ಸರಸ್ವತಿ ದೇವಿ ಮನೆಗೇ ಬಂದಿದೀನಿ...ಅಂದ್ರು.. ಅಯ್ಯಯ್ಯೋ...ಅಷ್ಟೆಲ್ಲ ಇಲ್ಲಪ್ಪ.‌ ಏನೋ ಕಿಂಚಿತ್ ಅಷ್ಟೆ. ಮುಜುಗರದಿಂದ ಹೇಳಿದೆ. ಮೇಡಂ. ನಂಗೂ ನಿಮ್ ಪುಸ್ತಕ ಕೊಡಿ...ನಿಮಗಾ...ನಿಮಗ್ಯಾಕ್ರೀ ಪುಸ್ತಕ...ಅಂತ ಸ್ವಲ್ಪ ಅಸಡ್ಡೆಯಿಂದಲೇ ಕೇಳ್ದೆ.‌

ಇದೇನ್ ಮೇಡಂ ನೀವು...ನಾವೇನ್ ಪುಸ್ತಕ ಓದಬಾರ್ದಾ. ನಂಗೂ ಎಸ್ಸೆಸ್ಸೆಲ್ಸಿ ಆಗಿದೆ. ದಿನಾ ಪೇಪರ್ ಓದ್ತೀನಿ. ಸುಧಾ, ತರಂಗದಲ್ಲಿ ಬರೋ ಧಾರಾವಾಹಿ, ಕತೆಗಳನ್ನೆಲ್ಲ ಓದ್ತೀನಿ.‌ ನಾನು, ನನ್ನ ಹೆಂಡ್ತಿ ಇಬ್ರೂ ಓದೋರೇಯ. ನಂಗೆ ಪುಸ್ತಕ ಬರದಿರೋರು ಅಂದ್ರೆ ಬಾಳಾ ಗೌರವ ಮೇಡಂ. ಅದ್ಕೇಯ ನಿಮ್ದೊಂದು ಪುಸ್ತಕ ಕೊಡಿ...ಆಯ್ತಪ್ಪ ಅಂತ ಪಂಚಮವೇದ ಪುಸ್ತಕ ಕೊಟ್ಟೆ. ಉಳಿದ ನನ್ನ ಬಹುತೇಕ ಪುಸ್ತಕಗಳು ಹವ್ಯಕ ಭಾಷೆಯಲ್ಲಿರೋದ್ರಿಂದ ಇವರಿಗೆಲ್ಲ ಅರ್ಥವಾಗ್ಲಿಕ್ಕಿಲ್ಲ ಎಂದು ಈ ಪುಸ್ತಕ ಕೊಟ್ಟೆ. ತೊಗೊಂಡ ಪುಸ್ತಕ ಒಮ್ಮೆ ತಿರುವಿ ಹಾಕಿಬಿಟ್ಟು ಇದರ ಮಹತ್ವ ಏನು ಮೇಡಂ, ಯಾಕಾಗಿ ಈ ಪುಸ್ತಕ ಬರೆದಿದ್ದೀರಿ ಎಂದು ಕೇಳಿದ್ರು‌.

ಪ್ಲಂಬರ್‌ ಪುಸ್ತಕ ಪ್ರೀತಿ ಮೆಚ್ಚಿದ ಪತ್ರಕರ್ತೆ ಭಾರತಿ ಹೆಗಡೆ

ವೇದಾ ಮನೋಹರ ಅಂತ ಅವ್ರ ಹೆಸ್ರು. ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಇವತ್ತು ರೈತ ಮಹಿಳೆಯಾಗಿ ಕೃಷಿ ತಜ್ಞೆಯಾಗಿ ಹೆಸರು ಮಾಡಿದ್ದಾರಪ್ಪ..ಹೌದಾ ಮೇಡಂ. ಇಂಥ ಪುಸ್ತಕ ಬೇಕು ಮೇಡಂ.‌ ಕಷ್ಟಪಟ್ಟು ಮೇಲೆ ಬಂದವ್ರೆ ಅಂದ್ರೆ ಎಷ್ಟು ಸಾಧನೆ ಮಾಡಿದಾರಲ್ವ ಅವ್ರು‌ ಇಂಥವರ ಸಾಧನೆನ ನಮ್ ಮಕ್ಳಿಗೆಲ್ಲ ಓದಿ ಹೇಳ್ಬೇಕು ಮೇಡಂ. ನನ್ನ ಹೆಸರು ಅಶೋಕ್ ಜಿ.ಎನ್. ಅಂತ. ಮಂಡ್ಯದೋನ್ ನಾನು. ನಂಗೂ ಕೃಷಿ ಮಾಡ್ಬೇಕೂಂತ ಬಾಳ ಆಸೆ ಐತೆ‌‌. ಈ ಪುಸ್ತಕದಲ್ಲಿ ಈ ಮೇಡಂ ಕೃಷಿ ಸಾಧನೆನ ಓದಿ ನಾನೂ ಏನಾರ ಮಾಡೋಕಾಯ್ತದಾಂತ ನೋಡ್ತೀನಿ ಅಂತ... ಪುಸ್ತಕವನ್ನು ತುಂಬ ಜೋಪಾನವಾಗಿ ಒಂದು ಕವರ್ ಗೆ ಹಾಕ್ಕೊಂಡು ಹೋದ್ರು. ಪ್ಲಂಬರ್ ಏನು ಓದಬಲ್ಲ ಎನ್ನುವ ನನ್ನ ಅಸಡ್ಡೆಗೆ ನಾನೇ ನಾಚಿಕೊಳ್ಳೋ ಹಾಗಾಯ್ತು.

ವಿಭಾಗ