ಕಟಿಂಗ್ ಶಾಪ್‌ನಲ್ಲೇ ಪುಟ್ಟ ಗ್ರಂಥಾಲಯ, ಓದಿನ ಅಭಿಯಾನ, ಮಾದರಿ ಪುಸ್ತಕಪ್ರೇಮಿ ಮರಿಯಪ್ಪನ ಕಥೆಯಿದು; ಅರುಣ ಜೋಳದ ಕೂಡ್ಲಿಗಿ ಬರಹ
ಓದು, ಪುಸ್ತಕಗಳ ಮೇಲೆ ಅತಿಯಾದ ಪ್ರೀತಿ ಇರುವವರು ತಮ್ಮ ಮನೆಯನ್ನೇ ಗ್ರಂಥಾಲಯವಾಗಿಸಿದ ಹಲವು ಕಥೆ ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪುಸಕ್ತ ಪ್ರೇಮಿ ತನ್ನ ಕಟಿಂಗ್ ಶಾಪ್‌ನಲ್ಲಿ ಚಿಕ್ಕ ಗ್ರಂಥಾಲಯ ತೆರೆದಿದ್ದಾರೆ. ಆ ಮೂಲಕ ಕಟಿಂಗ್ ಶಾಪ್‌ಗೆ ಬಂದವರಲ್ಲಿ ಓದಿನ ಪ್ರೀತಿ ಮೂಡುವಂತೆ ಮಾಡುತ್ತಿದ್ದಾರೆ. ಅವರ ಕಥೆಯನ್ನು ಅರುಣ ಜೋಳದ ಕೂಡ್ಲಿಗಿ ಬರಹದಲ್ಲಿ ನೀವೂ ಓದಿ.
ಇದು ಮಾದರಿ ಪುಸ್ತಕ ಪ್ರೇಮಿಯೊಬ್ಬರ ಕಥೆ. ಜನರು ಸಮಯ ಸಿಕ್ಕಾಗಲೆಲ್ಲಾ ಮೊಬೈಲ್ ಮೊರೆ ಹೋಗುವುದನ್ನು ತಪ್ಪಿಸಲು ತನ್ನ ಕಟಿಂಗ್ ಶಾಪ್ ಅನ್ನು ಗ್ರಂಥಾಲಯವನ್ನಾಗಿಸಿದ ಅಪರೂಪದ ವ್ಯಕ್ತಿ ಈತ. ಈ ಮೂಲಕ ಕಟಿಂಗ್ ಮಾಡಿಸಿಕೊಳ್ಳಲು ಬರುವವರಿಗೆ ಓದಿನ ಪ್ರೀತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಈ ವ್ಯಕ್ತಿ. ಇಂತಹ ಅಪರೂಪದ ವ್ಯಕ್ತಿ ಇರುವುದು ತಮಿಳುನಾಡಿನಲ್ಲಿ. ಯಾರವರು, ಅವರ ಕಥೆ ಏನು ಎಂಬುದನ್ನು ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಬರಹವನ್ನು ಕನ್ನಡಕ್ಕೆ ಅನುವಾದ ಮಾಡಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಅರುಣ ಜೋಳದ ಕೂಡ್ಲಿಗಿ. ಅವರ ಬರಹವನ್ನ ನೀವೂ ಓದಿ.
ಅರುಣ ಜೋಳದ ಕೂಡ್ಲಿಗಿ ಬರಹ
ತರಾವರಿ ಪುಸ್ತಕಗಳ ಗ್ರಂಥಾಲಯವಿರುವ ಕಟಿಂಗ್ ಶಾಪಿನ ಫೋಟೊವೊಂದು ವೈರಲ್ ಆಗಿ ಓಡಾಡುತ್ತಿತ್ತು. ಮೇಲ್ನೋಟಕ್ಕೆ ಇದೊಂದು ಪೋಟೊಶಾಪ್‌ನಲ್ಲಿ ಎಡಿಟ್ ಮಾಡಿದ ಫೇಕ್ ಫೋಟೊ ಇರಬೇಕು ಅಂದುಕೊಂಡೆ. ನಂತರ ಇದನ್ನು ಪರಿಶೀಲಿಸಲು ಗೂಗಲ್ ಮಾಡಿದಾಗ, ಈ ಫೋಟೊದ ನೈಜ ಕಥೆ ಹೇಳುವ ಹಿಂದೂ ಪತ್ರಿಕೆಯ ವರದಿಯೊಂದು ಕಾಣಿಸಿತು. ಈ ಫೋಟೊದ ಬಗೆಗಿನ ಕುತೂಹಲಕಾರಿ ಸಂಗತಿ ತಿಳಿಯಲೆಂದು ವರದಿಯನ್ನು ಅನುವಾದಿಸಿದ್ದೇನೆ.
ಪೊನ್ನ ಮರಿಯಪ್ಪ ಹದಿನೆಂಟು ವರ್ಷ ದಿನಗೂಲಿ ಮಾಡಿ ಅದರಲ್ಲಿ ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾನೆ. ಈ ಹಣದಲ್ಲಿ ತನ್ನ ಬಹುದಿನದ ಕನಸಾದ ತನ್ನದೇ ‘ಸುರೇಶ್ ಬ್ಯೂಟಿ ಸೆಂಟರ್’ ಹೆಸರಿನ ಕಟಿಂಗ್ ಶಾಪೊಂದನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಿಲ್ಲೆರ್ ಪುರಂನಲ್ಲಿ 2014ರಲ್ಲಿ ತೆರೆಯುತ್ತಾನೆ.
ಸಹಜವಾಗಿ ಕಟಿಂಗ್ ಮಾಡಿಸಲು ಬಂದವರು ತಮ್ಮ ಸರತಿ ಬರುವ ತನಕ ಕಾಯಬೇಕಾಗಿತ್ತು. ಈ ಅವಧಿಯಲ್ಲಿ ಎಲ್ಲರೂ ತಮ್ಮ ಮೊಬೈಲಿನಲ್ಲಿ ಮುಳುಗಿರುತ್ತಿದ್ದರು. ಕೆಲವರು ಶಾಪಲ್ಲಿನ ಟಿವಿ ನೋಡುತ್ತಿದ್ದರು. ಹೀಗಿರುವಾಗ ಮರಿಯಪ್ಪನಿಗೆ ಸರತಿ ಬರುವ ತನಕ ಕಾಯುವವರ ಕೈಗೆ ಪುಸ್ತಕಗಳನ್ನು ಯಾಕೆ ಕೊಡಬಾರದು ಎನ್ನುವ ಯೋಚನೆ ಹೊಳೆಯುತ್ತದೆ. ಮರುದಿನವೇ ತನ್ನ ಶಾಪಿನಿಂದ ಟಿವಿಯನ್ನು ತೆಗೆಯುತ್ತಾನೆ. ಆಗ ಟಿವಿ ಇಟ್ಟಿದ್ದ ಜಾಗದಲ್ಲಿ ದಿನ ಪತ್ರಿಕೆಗಳ ಜತೆ 5 ಪುಸ್ತಕಗಳನ್ನು ಇಡುತ್ತಾರೆ. ಈ ಐದೂ ಪುಸ್ತಕಗಳು ಕಾರ್ಲ್ ಮಾರ್ಕ್ಸ್, ಅಬ್ರಾಹಂ ಲಿಂಕನ್, ಪೆರಿಯಾರ್, ಅಣ್ಣಾದೊರೈ, ಅಬ್ದುಲ್ ಕಲಾಮ್ ಕುರಿತಾದ ಆತ್ಮಕಥನ/ಜೀವನ ಚರಿತ್ರೆಗಳು. ಕೆಲವೇ ದಿನಗಳಲ್ಲಿ ಮೊಬೈಲ್ ನೋಡುವವರು ಈ ಪುಸ್ತಕಗಳನ್ನು ಹಿಡಿದು ತಿರುವಿ ಹಾಕಿ ಹಾಗೆ ಪುಸ್ತಕದ ಜಾಗಕ್ಕೆ ಇಡತೊಡಗಿದರು, ಕೆಲವರು ಚೂರು ಚೂರು ಓದತೊಡಗಿದರು. ಇದು ಮರಿಯಪ್ಪನ ಖುಷಿಯನ್ನು ಇಮ್ಮಡಿಗೊಳಿಸಿತು.
ಆ ನಂತರ ಮರಿಯಪ್ಪ ಹಳೆ ಪುಸ್ತಕ ಮಾರುವವರಲ್ಲಿ, ಹೆಚ್ಚು ರಿಯಾಯಿತಿ ದರದಲ್ಲಿ ಮಾರುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳನ್ನು ಕೊಂಡು ತನ್ನ ಶಾಪಿಗೆ ತರತೊಡಗುತ್ತಾನೆ. 2015ರ ಕೊನೆಗೆ ಶಾಪಿನ ಒಂದು ಗೋಡೆಯನ್ನು ಪುಸ್ತಕಗಳ ಕಪಾಟಿಗಾಗಿ ಸಿದ್ದಗೊಳಿಸುತ್ತಾನೆ. ತತ್ವಶಾಸ್ತ್ರ, ವಿಜ್ಞಾನ, ಜನಪದ ಕತೆ, ಧರ್ಮ, ನೀತಿಕತೆಗಳು, ಮಕ್ಕಳಿಗೆ ಬೇಕಾಗುವ ರಮ್ಯ ಕಥೆಗಳು ಹೀಗೆ ಹಲವು ವೈವಿಧ್ಯಮಯ 250 ಪುಸ್ತಗಳು ಸೇರ್ಪಡೆಗೊಳ್ಳುತ್ತವೆ.
‘ಶಾಪಿಗೆ ಬಂದು ಅವರ ಸರತಿ ಬರುವವರೆಗೆ ಕಾಯುವ ಗಿರಾಕಿಗಳನ್ನು ದಯವಿಟ್ಟು ಮೊಬೈಲ್ ಬಳಸಬೇಡಿ, ಇಲ್ಲಿ ಒಳ್ಳೊಳ್ಳೆ ಪುಸ್ತಕಗಳಿವೆ ಕಟಿಂಗ್ ಮಾಡಿಸಿಕೊಳ್ಳುವ ತನಕ ಪುಸ್ತಕ ಓದಿ‘ ಎಂದು ಆತ್ಮೀಯವಾಗಿ ಕೇಳಿಕೊಳ್ಳುವೆ. ಈ ತನಕ ಯಾರೂ ನನ್ನ ಮಾತನ್ನು ಮೀರಿಲ್ಲ. ಅದು ನನಗೆ ಖುಷಿಕೊಡುತ್ತದೆ ಎನ್ನುತ್ತಾನೆ ಮರಿಯಪ್ಪ.
ಶಾಲಾ ಮಕ್ಕಳು ಬಂದಾಗ, ನೀವು ಪುಸ್ತಕ ಓದುವುದು ಮಾತ್ರವಲ್ಲ, ನೀವು ಓದಿದ ಭಾಗದ ಮುಖ್ಯಾಂಶಗಳನ್ನು ಬರೆದು ಹೋಗಿ ಎಂದು ಹೇಳುತ್ತಾರೆ. ಹೀಗೆ ವಿವರ ಟಿಪ್ಪಣಿ ಪರಿಚಯ ಬರೆಯುವುದಕ್ಕಾಗಿ 2018 ರಿಂದ ಒಂದು ದಾಖಲಾತಿ ಪುಸ್ತಕವನ್ನೂ ಇಟ್ಟಿದ್ದಾರೆ. ಅದರಲ್ಲಿ ಪುಸ್ತಕ ಓದಿದವರು ಅಭಿಪ್ರಾಯ ಬರೆದು ಹೋಗುತ್ತಾರೆ. ಈತನಕ 300 ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ, ತಮ್ಮ ಹೆಸರು ಮತ್ತು ಶಾಲೆಯ ವಿಳಾಸವನ್ನು ಬರೆದು ಹೋಗಿದ್ದಾರೆ.
ಕನಿಷ್ಠ ಒಂದು ಪುಸ್ತಕದ 10 ಪುಟ ಓದಿ, ಅದರ ಬಗ್ಗೆ ಒಂದು ಟಿಪ್ಪಣಿ ಬರೆದರೆ ಹೇರ್ ಕಟ್‌ಗೆ 80 ರೂ ಇದ್ದರೆ 30 ರೂ ರಿಯಾಯಿತಿ ಕೊಡುವುದಾಗಿ ಹೇಳಿ 2020ರ ಹೊಸ ವರ್ಷವನ್ನು ಆಚರಿಸಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಮರಿಯಪ್ಪನವರ ಸಲೂನ್ ಲೈಬ್ರರಿಯ ಫೋಟೋ ವೈರಲ್ ಆಗುವುದಕ್ಕಿಂತ ಮೊದಲು ಆರು ವರ್ಷ ಯಾವುದೇ ಪ್ರಚಾರ ಬಯಸದೆ ಮರಿಯಪ್ಪ ತನ್ನ ಸಲೂನಲ್ಲಿ ಓದು ಅಭಿಯಾನ ಶುರುಮಾಡಿದ್ದರು. ಮರಿಯಪ್ಪನ ಪುಸ್ತಕ ಪ್ರೀತಿ ನೋಡಿ ಪ್ರಸಿದ್ಧ ಪುಸ್ತಕ ಪ್ರಕಾಶನ Hatchette Indiaದವರು ಒಂದಷ್ಟು ಇಂಗ್ಲಿಷ್ ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇದರಿಂದ ಆ ತನಕ ಬರಿ ತಮಿಳು ಪುಸ್ತಕ ಇಟ್ಟಿದ್ದ ಮರಿಯಪ್ಪ ಇದೀಗ ಇಂಗ್ಲಿಷ್ ಪುಸ್ತಕಗಳನ್ನು ಇಟ್ಟಿದ್ದಾರೆ. ತೂತುಕುಡಿ ಎಂ.ಪಿ. ಕನಿಮೋಜಿ ಯವರು 50 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಮರಿಯಪ್ಪನ ಸಲೂನಿನಲ್ಲಿ 900 ರಷ್ಟು ವೈವಿಧ್ಯಮಯ ತಮಿಳು, ಇಂಗ್ಲಿಷ್ ಪುಸ್ತಕಗಳ ಸಂಗ್ರಹವಾಗಿದೆ. ನಿರಂತರವಾಗಿ ಓದುತ್ತಿದ್ದರೆ ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಮರಿಯಪ್ಪ ಹೇಳುತ್ತಾರೆ.
ತನ್ನ ವಿದ್ಯಾಭ್ಯಾಸ ಕುಂಟಿತವಾದರೂ ಬೇರೆಯವರು ಓದಬೇಕು, ಓದಿ ಜ್ಞಾನ ಸಂಪಾದಿಸಬೇಕೆಂದು ಕನಸುವ ಪೊನ್ನ ಮರಿಯಪ್ಪನವರ ನಡೆಯಿಂದ ಸೆಲೂನ್ ಶಾಪ್‌ನ ಸ್ಥಾಪಿತ ಕಲ್ಪನೆಯನ್ನೆ ಹೊಡೆದು ಹಾಕಿದ್ದಾರೆ.
(ಕೃಪೆ): ದ ಹಿಂದು
ಮೂಲ: ಸೋಮ ಬಸು
ಅನುವಾದ: ಅರುಣ್ ಜೋಳದಕೂಡ್ಲಿಗಿ
ಅರುಣ್ ಸೆಪ್ಟೆಂಬರ್ 22 ರಂದು ಈ ಪೋಸ್ಟ್ ಹಾಕಿದ್ದರು. ಈಗಾಗಲೇ ಹಲವರು ಈ ಪೋಸ್ಟ್ ನೋಡಿದ್ದು 100ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 15 ಮಂದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಹಲವರು ಕಾಮೆಂಟ್ ಮಾಡಿ ಮರಿಯಪ್ಪನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಅರುಣ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು
‘ತಿಪಟೂರು ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲಿ ಸುಬ್ರಹ್ಮಣ್ಯ Subramanya Subbu ಕೂಡ ಈ ರೀತಿ ಮಾಡಿ ಸಾಕಷ್ಟು ವರ್ಷಗಳು ನಡೆಸಿದ್ದಾರೆ. ಹತ್ತು ವರ್ಷಗಳ ಕೆಳಗೆ ನಾನು ಹೋಗಿದ್ದೆ‘ ಎಂದು ಹರಿಪ್ರಸಾದ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
‘ಎಂಥಾ ಸ್ಫೂರ್ತಿದಾಯಕ ನಡೆ!!! ಅರುಣ್ ಜೋಳದಕೂಡ್ಲಿಗಿ ಅವರೇ ಹೀಗೆ ಎಲ್ಲೋ ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಅನುವಾದ ಮಾಡಿ ಹಾಕುವುದೂ ಒಂದು ಹೊಸ ಸಾಧ್ಯತೆಯನ್ನು ಹೊಳೆಯಿಸುತ್ತಿದೆ. ಎಷ್ಟೋ ಸಾರಿ ತುಂಬಾ ಇನ್ಫೋರ್ಮೇಟಿವ್ ಆದ, ನಂಬಲರ್ಹ ಅನಿಸಿದ ಲೇಖನಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ಓದಿರುತ್ತೇವೆ ಮತ್ತು ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುತ್ತೇವೆ. ಆಗೆಲ್ಲಾ ನನಗೆ ಅನಿಸುವುದು ಇಡೀ ಲೇಖನವನ್ನು ಅನುವಾದ ಮಾಡಿ ಹಾಕಿದರೆ ಹೆಚ್ಚು ಜನರಿಗೆ ತಲುಪುವುದು ಎಂದು ಧನ್ಯವಾದಗಳು‘ ಎಂದು ವೃಂದಾ ಹೆಗಡೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
‘ನಮ್ಮೂರಲ್ಲಿ ಕೂಡಾ ಇದೇ ತರಹದ ಅಂಗಡಿ ಇದೆ ಸರ್...‘ ಸಂಗಪ್ಪ ಚಿಟ್ಟಿ ಅನ್ನುವವರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಮರಿಯಪ್ಪ ಅವರ ಕಾರ್ಯವನ್ನು ಶ್ಲಾಘಿಸಿ ಕಾಮೆಂಟ್ ಮಾಡಿದ್ದಾರೆ. ಇಂತಹವರು ಹಲವರಿಗೆ ಸ್ಪೂರ್ತಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.