ಈಕೆ ಭಾರತದ ಶ್ರೀಮಂತ ಫುಡ್ ಯೂಟ್ಯೂಬರ್; ಅಡುಗೆ ವಿಡಿಯೊಗಳ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿರುವ ನಿಶಾ ಮಧುಲಿಕಾ
ಯುಟ್ಯೂಬ್ ವಿಡಿಯೊ ಮೂಲಕ ಹಣ ಗಳಿಸುವ ಟ್ರೆಂಡ್ ಸದ್ಯ ಚಾಲ್ತಿಯಲ್ಲಿದ್ದೆ. ವಿವಿಧ ರೀತಿಯ ಕಂಟೆಂಟ್‌ಗಳನ್ನು ಮಾಡುವ ಮೂಲಕ ಹಲವರು ಯುಟ್ಯೂಬ್ ಮೂಲಕ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲೊಬ್ಬರು ಮಹಿಳೆ ಯುಟ್ಯೂಬ್‌ನಲ್ಲಿ ಅಡುಗೆ ವಿಡಿಯೊ ಮಾಡುವ ಮೂಲಕ ಕೋಟ್ಯಾಧಿಪತಿ ಆಗಿದ್ದಾರೆ. ಇವರು ಭಾರತದ ಶ್ರೀಮಂತ ಫುಡ್ ಯುಟ್ಯೂಬ್ ಆಗಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣ, ಯೂಟ್ಯೂಬ್‌ಗಳಲ್ಲಿ ಫುಡ್ ಕಂಟೆಂಟ್‌ಗಳು ಜನರನ್ನು ಹೆಚ್ಚು ಸೆಳೆಯುತ್ತಿವೆ. ಯುಟ್ಯೂಬ್ ನೋಡಿ ಅಡುಗೆ ಕಲಿಯುವವರ, ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಯುಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಟಾಪ್ ಕುಕ್ಕಿಂಗ್ ಚಾನೆಲ್ ಹೊಂದಿರುವವರು ಇದ್ದಾರೆ.
ಇದೀಗ ಇವರೆಲ್ಲರ ನಡುವೆ ನಿಶಾ ಮಧುಲಿಕಾ ಅವರೇ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಇವರು ಭಾರತದ ಶ್ರೀಮಂತ ಅಡುಗೆ ಯಟ್ಯೂಬರ್ ಆಗಿದ್ದಾರೆ. 65 ವರ್ಷ ವಯಸ್ಸಿನ ಈಕೆ ಯುಟ್ಯೂಬ್ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ. ಯಾರು ಈ ನಿಶಾ ಮಧುಲಿಕಾ, ಅವರ ಯಶೋಗಾಥೆಯ ಕುರಿತ ಬರಹವಿದು.
14.5 ಮಿಲಿಯನ್ ಚಂದಾದಾರರನ್ನು ಹೊಂದಿರುವ ನಿಶಾ 43 ಕೋಟಿಯಷ್ಟು ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ರಿಪಬ್ಲಿಕ್ ವರ್ಲ್ಡ್ ವರದಿ ಮಾಡಿದೆ.
ನಿಶಾ ಅವರಿಗೆ ಯಶಸ್ಸಿಗಿಂತ ಜನರ ಹೃದಯ ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಇದು ಅವರ ಖ್ಯಾತಿಗೆ ಇನ್ನೊಂದು ಕಾರಣ ಎನ್ನಬಹುದು. ಪರಿಶ್ರಮ, ಉತ್ಸಾಹ ಒಂದು ಸಣ್ಣ ನಿರ್ಧಾರವು ಅವರ ಬದುಕನ್ನು ಹೇಗೆ ಬದಲಿಸಬಲ್ಲದು ಎಂಬುದನ್ನು ಅವರ ಕಥೆಯ ಮೂಲಕ ಕಂಡುಕೊಳ್ಳಬಹುದು.
ನಿಶಾ ಮಧುಲಿಕಾ ಹಿನ್ನೆಲೆ
ಉತ್ತರ ಪ್ರದೇಶ ಮೂಲದವರಾದ ನಿಶಾ ಒಂದು ಕಾಲದಲ್ಲಿ ಶಿಕ್ಷಕಿಯಾಗಿದ್ದವರು. ಇವರ ಗಂಡ ಬ್ಯುಸಿನೆಸ್ ಮ್ಯಾನ್, ಈಕೆಗೆ ಇಬ್ಬರು ಮಕ್ಕಳು. ಇವರು ಯುಟ್ಯೂಬ್ ಚಾನೆಲ್ ತೆರೆಯುವ ಮೊದಲು ಒತ್ತಡ ನಿರ್ವಹಣೆಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಬಗೆ ಬಗೆಯ ಅಡುಗೆ ಮಾಡುತ್ತಿದ್ದರು.
ಮಕ್ಕಳ ಬೆಳೆದು ದೊಡ್ಡವರಾದ ಮೇಲೆ ಅವರು ಹೊರಗಡೆ ಹೋಗುತ್ತಾರೆ. ಹೀಗಾಗಿ 2007 ರಿಂದ ನಿಶಾ ತನ್ನ ಮನೆಯ ಸಾಮಾನ್ಯ ಹವ್ಯಾಸವನ್ನ ಬ್ಲಾಗ್ ಮಾಡಲು ನಿರ್ಧರಿಸುತ್ತಾರೆ. ಮಕ್ಕಳು ಮನೆಯಿಂದ ದೂರಾದ ಮೇಲೆ ಅವರಿಗೆ ಒಂಟಿತನ ಕಾಡುತ್ತದೆ. ಎಮ್ಟಿ ನೆಸ್ಟ್ ಸಿಂಡ್ರೋಮ್ ಆವರಿಸುತ್ತದೆ. ಆಗ ಆಕೆ ಹೊಸ ಹೊಸ ಅಡುಗೆ ಮಾಡುವ ಮೂಲಕ ಬ್ಲಾಗ್ ಮಾಡಲು ಆರಂಭಿಸುತ್ತಾರೆ. ನಿಶಾ ಅವರ ನೇರವಾದ ವಿಧಾನ ಹಾಗೂ ಇಷ್ಟವಾಗುವ ರೆಸಿಪಿಗಳು ಜನರಿಗೆ ಅವರು ಬೇಗ ಕನೆಕ್ಟ್ ಆಗುವಂತೆ ಮಾಡಿತ್ತು.
2011ರಲ್ಲಿ 100ಕ್ಕೂ ಹೆಚ್ಚು ಪಾಕವಿಧಾನಗಳೊಂದಿಗೆ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸುವ ಯೋಚನೆ ಮಾಡುತ್ತಾರೆ ನಿಶಾ, ಅಲ್ಲದೇ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ. ಇವರು ಹಿಂದಿಯಲ್ಲಿ ಅಡುಗೆ ವಿಧಾನವನ್ನು ಹಂತ ಹಂತವಾಗಿ ವಿವರಿಸುವ ವಿಡಿಯೊ ಅಪ್‌ಲೋಡ್ ಮಾಡುತ್ತಾರೆ. ಆದರೆ ಯುಟ್ಯೂಬ್‌ನ #SeeSomethingNew ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಅವರ ಜೀವನವು ಬದಲಾಗುತ್ತದೆ. ಅವರ ವಿಭಿನ್ನ ಶೈಲಿ ಹಾಗೂ ಜನರಿಗೆ ಹತ್ತಿರವಾಗುವ ಕಟೆಂಟ್ ಬೇಗ ಗಮನ ಸೆಳೆಯುತ್ತದೆ. ಅಲ್ಲಿಂದ ಅವರಿಗೆ ಬದುಕು ಒಂದು ಟರ್ನಿಂಗ್ ಪಾಯಿಂಟ್ ಪಡೆಯುತ್ತದೆ.
ಮುಂದಿನ ಮೈಲಿಗಲ್ಲಾಗಿ 2017ರಲ್ಲಿ ಸಾಮಾಜಿಕ ಮಾಧ್ಯಮ ಶೃಂಗಸಭೆ ಮತ್ತು ಪ್ರಶಸ್ತಿ ಇದರಲ್ಲಿ ಟಾಪ್ ಯುಟ್ಯೂಬ್ ಫುಡ್ ಕಟೆಂಟ್ ಕ್ರಿಯೇಟರ್ ಎಂದು ಗುರುತಿಸಲಾಗುತ್ತದೆ. ಇದು ಅವರ ವೀಡಿಯೊಗಳ ಜನಪ್ರಿಯತೆಯನ್ನು ಎತ್ತಿ ತೋರಿಸಿತು. ಇದರಿಂದ ಪ್ರೇಕ್ಷಕರು ಹಾಗೂ ಮಾಧ್ಯಮಗಳಿಂದ ಇವರಿಗೆ ವ್ಯಾಪಕ ಮನ್ನಣೆ ದೊರೆಯುತ್ತದೆ.
ಅಲ್ಲಿಂದ ಶಿಕ್ಷಕಿಯಾಗಿದ್ದ ನಿಶಾ ಅಡುಗೆ ಕಂಟೆಂಟ್ ಕ್ರಿಯೇಟರ್ ಆಗಿ ಬದಲಾಗುತ್ತಾರೆ. ಭಾರತದ ಅತ್ಯಧಿಕ ಗಳಿಕೆಯ ಮಹಿಳಾ ಯೂಟ್ಯೂಬರ್ ಆಗುವ ಅವರ ಪ್ರಯಾಣವು ಪ್ರಭಾವಶಾಲಿಯಾಗಿದ್ದರೂ, ಅರ್ಥಪೂರ್ಣ ಸಾಮಾಜಿಕ ಬದಲಾವಣೆಯನ್ನು ಸೃಷ್ಟಿಸಲು ಅವರು ತಮ್ಮ ಯಶಸ್ಸನ್ನು ಹೇಗೆ ಬಳಸಿಕೊಂಡರು ಎಂಬುದರಲ್ಲಿ ಅವರ ನಿಜವಾದ ಪರಂಪರೆ ಅಡಗಿದೆ.
ಸಾಮಾಜಿಕ ಸೇವೆಗೂ ಆದ್ಯತೆ
ಯುಟ್ಯೂಬ್‌ನಲ್ಲಿ ಫುಡ್ ಕಂಟೆಂಟ್ ಮಾಡುವ ಮೂಲಕ ಜನರಿಗೆ ಹತ್ತಿರವಾಗಿರುವುದು ಮಾತ್ರವಲ್ಲ ಸಾಮಾಜಿಕ ಸೇವೆಯಲ್ಲೂ ಒಂದು ಕೈ ಮುಂದೆ ಎಂದು ತೋರಿಸಿದ್ದಾರೆ ನಿಶಾ. ಟಾಟಾ ಟ್ರಸ್ಟ್‌ನ ಪ್ರಾಜೆಕ್ಟ್ ದ್ರುವ್ ಜೊತೆ ಆಕೆ ಕೈ ಜೋಡಿಸಿದ್ದಾರೆ. ಇದು ಹಳ್ಳಿಗಳಲ್ಲಿ ಡಿಜಿಟಿಲ್ ಸಾರಕ್ಷತೆ ಮೂಡಿಸುವ ಪ್ರಾಜೆಕ್ಟ್ ಆಗಿದೆ. ಆಕೆಯ ಬೆಂಬಲವು ಪ್ರಾಜೆಕ್ಟ್ ಧ್ರುವ್ ತನ್ನ ವ್ಯಾಪ್ತಿಯನ್ನು ಹಲವಾರು ಹಳ್ಳಿಗಳಿಗೆ ವಿಸ್ತರಿಸಲು ಸಹಾಯ ಮಾಡಿದೆ, ಆನ್‌ಲೈನ್ ಸಂಪನ್ಮೂಲಗಳು, ಶೈಕ್ಷಣಿಕ ವಿಷಯ ಮತ್ತು ಆರ್ಥಿಕ ಅವಕಾಶಗಳನ್ನು ಪ್ರವೇಶಿಸಲು ಅಗತ್ಯವಿರುವ ಪರಿಕರಗಳು ಮತ್ತು ಜ್ಞಾನವನ್ನು ಸಮುದಾಯಗಳಿಗೆ ಒದಗಿಸುತ್ತದೆ.
ನಿಶಾ ಅವರ ಕಥೆಯಲ್ಲಿ ನಿಜಕ್ಕೂ ಸ್ಫೂರ್ತಿದಾಯಕವಾಗಿರುವುದು ಎಂದರೆ ಗೃಹಿಣಿಯಿಂದ ಡಿಜಿಟಲ್ ಉದ್ಯಮಿಯಾಗಿ ಆಕೆ ಸಾಗಿಬಂದ ದಾರಿ ಹೇಗಿತ್ತು ಎನ್ನುವುದು. ತನ್ನದೇ ಮನೆಯಲ್ಲಿ ತನ್ನ ಖುಷಿಯಾಗಿ ಅಡುಗೆ ಮಾಡುತ್ತಿದ್ದ ಆಕೆ ಈಗ ಭಾರತೀಯ ಪಾಕಪದ್ಧತಿಯನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸುತ್ತಿದ್ದಾರೆ. ಹವ್ಯಾಸಕ್ಕಾಗಿ ಆರಂಭಿಸಿದ ಯುಟ್ಯೂಬ್ ಚಾನೆಲ್ ಅನ್ನು ಈಗ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ಇವರು ಸಾಂಪ್ರದಾಯಿಕ ಅಡುಗೆಗಳನ್ನು ಹಾಗೂ ಇವರ ಪ್ರಾಯೋಗಿಕ ಅಡುಗೆಗಳನ್ನು ಜನ ಹೆಚ್ಚು ಮೆಚ್ಚಿಕೊಳ್ಳುತ್ತಾರೆ.
ಈ ಎಲ್ಲದರ ನಡುವೆ ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ನಿಶಾ. ಅವರು ತನ್ನ 50ನೇ ವಯಸ್ಸಿನಲ್ಲಿ ಯಟ್ಯೂಬ್ ಚಾನೆಲ್ ತೆರೆಯುತ್ತಾರೆ. ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಆಕೆ ಸಾಬೀತು ಪಡಿಸಿದ್ದಾರೆ.
ಆಕೆಯ ಸಾಧನೆಯು ಭಾರತದಲ್ಲಿ ವಿಶೇಷವಾಗಿ ಮಹತ್ವದ್ದಾಗಿದೆ, ಅಲ್ಲಿ ಅವರು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಬಯಸುವ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿದ್ದಾರೆ.
ಉದ್ಯಮಶೀಲತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದ ನಿಶಾ ಅವರ ಬದುಕಿನ ರೀತಿ ನಿಜಕ್ಕೂ ಸ್ಪೂರ್ತಿಧಾಯಕ. ನಿಜವಾದ ಯಶಸ್ಸನ್ನು ಕೇವಲ ಹಣಕಾಸಿನ ಸಾಧನೆಗಳಿಂದ ಅಳೆಯಲಾಗುವುದಿಲ್ಲ ಆದರೆ ಸಮಾಜದಲ್ಲಿ ಒಬ್ಬರು ಸೃಷ್ಟಿಸುವ ಧನಾತ್ಮಕ ಪ್ರಭಾವದಿಂದ ಅಳೆಯಲಾಗುತ್ತದೆ ಎಂದು ಅವರು ಪ್ರದರ್ಶಿಸುತ್ತಾರೆ. ಪ್ರಾಜೆಕ್ಟ್ ಧ್ರುವ್ ಹಾಗೂ ಯುಟ್ಯೂಬ್ ಚಾನೆಲ್ ಮೂಲಕ ಈ ಎರಡನ್ನೂ ಪ್ರದರ್ಶಿಸಿದ್ದಾರೆ ನಿಶಾ ಮಧುಲಿಕಾ.