Friendship Day 2022: ಆಧುನಿಕ ಕೃಷ್ಣ-ಸುಧಾಮರಿಗೆ ಸ್ನೇಹಿತರ ದಿನದ ಶುಭಾಶಯ; ಸ್ನೇಹ ಚಿರಾಯುವಾಗಲಿ
ಸ್ನೇಹ ನಿಜಕ್ಕೂ ಬೆಲೆಕಟ್ಟಲಾಗದ ಅನುಬಂಧ. ಅದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ನೀವೂ, ನಿಮ್ಮ ಸ್ನೇಹವು ಚಿರಾಯುವಾಗಲಿ. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
ಟ್ರೆಂಡು ಬದಲಾದ್ರೂ ಫ್ರೆಂಡು ಬದಲಾಗಲ್ಲ. ಕಷ್ಟ-ಸುಖ, ನಗು-ಅಳು, ಏಳು-ಬೀಳುಗಳಲ್ಲಿ ಜೊತೆಯಾಗಿದ್ದು, ಕೈ ಹಿಡಿದು ಮೇಲೆತ್ತುವವನು ಸ್ನೇಹಿತ. ಇದು ರಕ್ತ ಸಂಬಂಧವನ್ನು ಮೀರಿದ ಬಂಧ. ಪುರಾಣದಲ್ಲಿ ಕೃಷ್ಣ-ಸುಧಾಮನ ಸ್ನೇಹ ಎಲ್ಲಿಂದ ಎಲ್ಲಿಯದು? ಕರ್ಣ-ದುರ್ಯೋಧನನ ಗೆಳೆತನಕ್ಕೆ ಕೊಂಡಿ ಯಾವುದು? ಇಲ್ಲ, ಇದಕ್ಕೆ ಉತ್ತರಿಸುವುದು ಕಷ್ಟ. ನಿಜವಾದವಾದ ಸ್ನೇಹಕ್ಕೆ ಹಣ, ಆಸ್ತಿ-ಅಂತಸ್ತು,ತತ್ವ-ಸಿದ್ಧಾಂತ, ದೇಶ-ಭಾಷೆಗಳ ಗಡಿ ಇಲ್ಲ. ಇದು ಮನಸು ಮತ್ತು ಹೃದಯಗಳ ಅನುಬಂಧ. ನೈಜ ಸ್ನೇಹಕ್ಕೆ ಮನಸ್ಸಿನ ಮಾತೇ ಮುನ್ನುಡಿ.
ಪೈಸೆಗೆ ಸಿಗುತ್ತಿದ್ದ ಚಾಕೋಲೇಟ್ ಹಂಚಿ ತಿನ್ನುತ್ತಿದ್ದ ವಯಸ್ಸಿನಿಂದ, ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ಬಾಯಿ ಚಪ್ಪರಿಸಿಕೊಂಡು ಬಿರಿಯಾನಿ ಸವಿಯುವವರೆಗೆ; ಟೆಟ್ರಾ ಪ್ಯಾಕ್ ಜ್ಯೂಸ್ ಬೈ ಟು ಮಾಡಿಕೊಂಡು ಕುಡಿಯುತ್ತಿದ್ದ ವಯಸ್ಸಿನಿಂದ, ಕಾಫಿ ಡೇಯಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತು ಕಾಫಿ ಹೀರೋವರೆಗೆ; ಗುಡ್ಡಗಾಡು ದಾಟಿ ಶಾಲೆಗೆ ಹೋಗಿ ಅಕ್ಷರ ಕಲಿಯುವ ವಯಸ್ಸಿನಿಂದ; ದೊಡ್ಡ ದೊಡ್ಡ ನಗರದಲ್ಲಿ ಬಾನೆತ್ತರಕ್ಕೆ ನಿಂತ ಕಟ್ಟಡದಲ್ಲಿ ಕುಳಿತು ಗರಿ ಗರಿ ನೋಟು ಸಂಪಾದಿಸುವವರೆಗೆ; ನಿಕ್ಕರ್ ಹಾಕೋ ವಯಸ್ಸಿನಿಂದ, ಕಾಲೇಜಿಗೆ ಚಕ್ಕರ್ ಹಾಕಿ, ಕೆಲಸಕ್ಕೂ ಬಂಕ್ ಹೊಡೆಯೋ ವಯಸ್ಸಿನವರೆಗೆ.... ಎಲ್ಲಾ ಬದಲಾಗಿದೆ. ಆದ್ರೆ ಸ್ನೇಹಿತ.... ಬದಲಾಗುವ ಮಾತೇ ಇಲ್ಲ. ಬದಲಾದರೆ, ಅದು ಸ್ನೇಹವೇ ಅಲ್ಲ.
ಬಾಲ್ಯದಲ್ಲಿ ಸ್ನೇಹಿತ ಅಂದ್ರೆ, ಜೊತೆಗಾರ. ಸದಾ ತನ್ನ ಜೊತೆಯಾಗಿ ಹೋದಲ್ಲಿ ಬಂದಲ್ಲಿ ಇರುವವನೇ ಗೆಳೆಯ. ಆದ್ರೆ ಈಗ ಕಾಲ ಬದಲಾಗಿದೆ. ಕುಟುಂಬ, ಉದ್ಯೋಗ ಹಾಗೂ ಇತರ ಕಾರಣಗಳಿಂದಾಗಿ, ಬಾಲ್ಯದಲ್ಲಿ ಜೊತೆಗಿದ್ದ ಸ್ನೇಹಿತರು ಅಂತರದಿಂದ ದೂರವಾಗಿದ್ದಾರೆ. ಆದ್ರೆ ಸ್ನೇಹ ದೂರ ಆಗೋದಿಕ್ಕೆ ಸಾಧ್ಯವಾ ಹೇಳಿ? ಅಂತರ ಹೆಚ್ಚಾದಂತೆ, ಸ್ನೇಹದ ಮೌಲ್ಯ, ಕಾಳಜಿ ಮತ್ತು ಪ್ರೀತಿಯೂ ಹೆಚ್ಚುತ್ತದೆ. ಅಂತರದಿಂದ ದೂರ ಆದ್ರೆ ಏನಂತೆ, ಸಾಮಾಜಿಕ ಮಾಧ್ಯಮಗಳು ಎಲ್ಲವನ್ನೂ, ಎಲ್ಲರನ್ನೂ ಹತ್ತಿರವಾಗಿಸಿದೆ. ಆಧುನಿಕ ಯುಗದಲ್ಲೂ ಸ್ನೇಹ ಚಿರಾಯು.
ಏನೇ ನೋವಾದರೂ, ಏನೇ ಖುಷಿಯ ವಿಚಾರವಿದ್ದರೂ ಮೊದಲ ಫೋನ್ ಸ್ನೇಹಿತನಿಗೆ. ಹೊಸ ಹುಡುಗಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದರೂ, ಸ್ನೇಹಿತನಿಗೆ ತಿಳಿಸುವವರೆಗೂ ಸಮಾಧಾನ ಇಲ್ಲ. ಇನ್ನು ಮನಸಿನ ಮಾತನ್ನು ಹೇಳೋಕೆ ಸ್ನೇಹಿತನಿಗಿಂತ ಹೆಚ್ಚು ಯಾರಿರ್ತಾರೆ ಹೇಳಿ. ಏನಾದರೂ ನೋವಾದರೆ, ಬೇಜಾರಾದ್ರೆ ಮೊದಲ ಕರೆಯೂ ಸ್ನೇಹಿತನಿಗೆ. ಮನಸ್ಸಿನ ನೋವಿಗೆ ಮೊದಲ ವೈದ್ಯ ಎಂದಿಗೂ ಸ್ನೇಹಿತ. ಅದಕ್ಕೆ ಸೂಕ್ತ ಔಷಧಿ ಇರುವುದು ಅವನಲ್ಲೇ.
ಯಾವುದೇ ಸಲುಗೆಯ ಬಂಧ-ಸಂಬಂಧಗಳಲ್ಲಿ ಜಗಳ ಮನಸ್ತಾಪಗಳು ಸಾಮಾನ್ಯ. ಯಾಕಂದ್ರೆ ಅಲ್ಲಿ ಅತಿಯಾದ ಪ್ರೀತಿ ಮತ್ತು ಕಾಳಜಿ ಇರುತ್ತದೆ. ಹೀಗಾಗಿ ಆಪ್ತರ ವಿಚಾರದಲ್ಲಿ ಮನಸ್ಸಿಗೆ ನೋವಾಗುವುದು ತುಂಬಾ ಬೇಗ. ಆರೆ ಈ ಬೇಜಾರು, ಕೋಪ ಹೆಚ್ಚು ಸಮಯ ಇರುವುದಿಲ್ಲ. ಕೆಲ ಸಮಯದಲ್ಲಿ ಮತ್ತೆ ಆ ಹಿಂದಿಗಿಂತ ಹೆಚ್ಚಿನ ಆಪ್ತತೆ ಟಿಸಿಲೊಡೆಯುತ್ತದೆ. ಇದು ಸ್ನೇಹಕ್ಕಿರುವ ಶಕ್ತಿ. ಸಣ್ಣ ಪುಟ್ಟ ಮನಸ್ತಾಪಗಳಿಂದ ಬಂಧದಿಂದ ಹೊರಬರುವುದು ನಿಜಕ್ಕೂ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಯಾಕೆ ಹೀಗಾಯ್ತು ಎಂದು ಯೋಚಿಸುವುದಕ್ಕಿಂತ, ಮುಂದೆ ಏನು ಮಾಡೋದು ಎಂಬುದಕ್ಕೆ ಉತ್ತರ ಕಂಡುಕೊಂಡರೆ ಆಪ್ತತೆ ಗಟ್ಟಿಯಾಗುತ್ತದೆ.
ಇಂದು ಸ್ನೇಹಿತರ ದಿನ. ಆಪ್ತ ಮನಸ್ಸುಗಳಿಗಾಗಿ ಇರುವ ದಿನ. ಸದಾ ನಿಮ್ಮೊಂದಿಗಿರುವ ಸ್ನೇಹಿತರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಈ ದಿನವನ್ನು ಸದುಪಯೋಗಪಡಿಸಿ. ನಿಮ್ಮಿಂದ ಸಾಧ್ಯವಾದಷ್ಟು ಈ ದಿನ ಎಂಜಾಯ್ ಮಾಡಿ. ನಿಮ್ಮ ಆಪ್ತರಿಗೆ ಹೇಳಬೇಕೆಂಬ ಭಾವನೆಗಳನ್ನೆಲ್ಲಾ ಹಂಚಿಕೊಳ್ಳಿ. ಸಾಧ್ಯವಾದರೆ, ನಿಮಗೆ ಅವರ ಮೇಲೆ ಏನಾದರೂ ನೋವು ಬೇಜಾರು ಇದ್ದರೆ, ಅದನ್ನು ಪತ್ರದ ರೂಪದಲ್ಲಿ ಬರೆದುಕೊಡಿ. ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದರೆ, ಅದರ ಮೌಲ್ಯ ಜಾಸ್ತಿಯಾಗುತ್ತದೆ.
ಸ್ನೇಹ ನಿಜಕ್ಕೂ ಬೆಲೆಕಟ್ಟಲಾಗದ ಅನುಬಂಧ. ಅದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ನೀವೂ, ನಿಮ್ಮ ಸ್ನೇಹವು ಚಿರಾಯುವಾಗಲಿ. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
ವಿಭಾಗ