ಬೇಸಿಗೆ ರಜೆ ಎಂದು ಮಕ್ಕಳನ್ನು ಜಂಗಲ್‌ ಸಫಾರಿ ಕರ್ಕೊಂಡು ಹೋಗಬೇಕು ಅಂತಿದ್ದೀರಾ; ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಂಡಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆ ರಜೆ ಎಂದು ಮಕ್ಕಳನ್ನು ಜಂಗಲ್‌ ಸಫಾರಿ ಕರ್ಕೊಂಡು ಹೋಗಬೇಕು ಅಂತಿದ್ದೀರಾ; ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಂಡಿರಿ

ಬೇಸಿಗೆ ರಜೆ ಎಂದು ಮಕ್ಕಳನ್ನು ಜಂಗಲ್‌ ಸಫಾರಿ ಕರ್ಕೊಂಡು ಹೋಗಬೇಕು ಅಂತಿದ್ದೀರಾ; ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಂಡಿರಿ

ಈ ವರ್ಷದ ಬೇಸಿಗೆ ರಜೆಯಲ್ಲಿ ಕಾಡು ಪ್ರಾಣಿಗಳನ್ನು ತೋರಿಸುವ ಸಲುವಾಗಿ ಮಕ್ಕಳನ್ನು ಜಂಗಲ್‌ ಸಫಾರಿಗೆ ಕರೆದುಕೊಂಡು ಹೋಗಬೇಕು ಅಂತಿದ್ದೀರಾ, ಸುರಕ್ಷತೆಯ ಜೊತೆ ಮಕ್ಕಳು ಸಫಾರಿ ಎಂಜಾಯ್‌ ಮಾಡಲು ಈ ಕೆಲವು ಟಿಪ್ಸ್‌ ನೀವು ಪಾಲಿಸಲೇಬೇಕು.

ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಜಂಗಲ್‌ ಸಫಾರಿ ಕರೆದುಕೊಂಡು ಹೋಗುವ ಮುನ್ನ ಈ ವಿಚಾರ ತಿಳಿದಿರಲಿ
ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಜಂಗಲ್‌ ಸಫಾರಿ ಕರೆದುಕೊಂಡು ಹೋಗುವ ಮುನ್ನ ಈ ವಿಚಾರ ತಿಳಿದಿರಲಿ

ಬೇಸಿಗೆ ರಜೆಯಲ್ಲಿ ಪ್ರವಾಸ ಪ್ಲಾನ್‌ ಮಾಡೋದು ಸಹಜ. ಮಕ್ಕಳಂತೂ ಅಮ್ಮ-ಅಪ್ಪನ ಜೊತೆ ಹೊರಗಡೆ ಹೋಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮಕ್ಕಳೊಂದಿಗೆ ಮೋಜು ಮಾಡಲು ಮತ್ತು ಅವರನ್ನು ರೋಮಾಂಚನಗೊಳಿಸಲು ಜಂಗಲ್ ಸಫಾರಿ ಹೇಳಿ ಮಾಡಿಸಿದ್ದು. ಮಕ್ಕಳು ಪ್ರಾಣಿಗಳನ್ನು ಪಕ್ಷಿಗಳನ್ನು ನೋಡಿ ನಕ್ಕು ನಲಿಯುತ್ತಾರೆ. ಅವರಿಗೆ ಇದು ವಿಶೇಷ ಅನುಭವ ಕೊಡುವುದು ಖಂಡಿತ.

ಆದರೆ ಜಂಗಲ್‌ ಸಫಾರಿ ಮಕ್ಕಳನ್ನು ಕರೆದುಕೊಂಡು ಹೋಗುವ ಮುನ್ನ ಪೋಷಕರು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮಕ್ಕಳಲ್ಲಿ ಜಂಗಲ್‌ ಸಫಾರಿಯ ಖುಷಿ ಹೆಚ್ಚಿಸಲು ಈ ಕೆಲವು ಕ್ರಮಗಳನ್ನು ತಪ್ಪದೇ ಪಾಲಿಸಬೇಕು.

ಬಟ್ಟೆಗಳ ಬಗ್ಗೆ ಗಮನ ಕೊಡಿ

ಜಂಗಲ್ ಸಫಾರಿಗೆ ಹೋಗುವಾಗ ನೀವು ಧರಿಸುವ ಬಟ್ಟೆಗಳ ಬಣ್ಣದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಕಾಡಿನ ನೆಲ, ಮರಗಳು ಮತ್ತು ಹುಲ್ಲಿನೊಂದಿಗೆ ಬೆರೆಯುವ ನೈಸರ್ಗಿಕ ಬಣ್ಣಗಳ ಬಟ್ಟೆಗಳನ್ನು ಆರಿಸುವುದು ಉತ್ತಮ. ತಿಳಿ ಕಂದು, ಹಸಿರು ಮತ್ತು ಬೂದು ಬಣ್ಣಗಳು ಸೂಕ್ತವಾಗಿವೆ. ಬಿಳಿ, ಕಪ್ಪು, ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದೇ ಇರುವುದು ಉತ್ತಮ. ಈ ಬಣ್ಣಗಳು ಕಾಡು ಪ್ರಾಣಿಗಳ ಗಮನವನ್ನು ಸುಲಭವಾಗಿ ಸೆಳೆಯುತ್ತವೆ, ಇದು ಅನಗತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಬಟ್ಟೆಗಳು ಆರಾಮದಾಯಕವಾಗಿದ್ದು, ದೇಹವನ್ನು ಸಂಪೂರ್ಣವಾಗಿ ಆವರಿಸುವಂತೆ ನೋಡಿಕೊಳ್ಳಿ.

ಫ್ಲ್ಯಾಶ್‌ ಲೈಟ್‌ ಆಫ್‌ ಇರುವಂತೆ ನೋಡಿಕೊಳ್ಳಿ

ಸಫಾರಿ ಸಮಯದಲ್ಲಿ ಫೋಟೊ ಮತ್ತು ವಿಡಿಯೊ ತೆಗೆಯುವುದು ಸಾಮಾನ್ಯವಾದರೂ ಕ್ಯಾಮೆರಾ ಮತ್ತು ಮೊಬೈಲ್ ಫೋನ್ ಲೈಟ್‌ ಆನ್‌ ಆಗದಂತೆ, ಫ್ಲ್ಯಾಶ್‌ ಆಗದಂತೆ ನೋಡಿಕೊಳ್ಳಿ. ಫ್ಲ್ಯಾಶ್ ಲೈಟ್ ಕಾಡು ಪ್ರಾಣಿಗಳನ್ನು ಹೆದರಿಸಬಹುದು ಅಥವಾ ಕೆರಳಿಸಬಹುದು. ಇದರಿಂದ ತೊಂದರೆ ಎದುರಾಗಬಹುದು, ಮಾತ್ರವಲ್ಲ ಪ್ರಾಣಿಗಳಿಗೂ ಸಮಸ್ಯೆಯಾಗುತ್ತದೆ ಎಂಬುದು ನೆನಪಿರಲಿ. ನೈಸರ್ಗಿಕ ಬೆಳಕಿನಲ್ಲಿ ಪ್ರಾಣಿಗಳ ಸುಂದರ ದೃಶ್ಯಗಳನ್ನು ಕ್ಲಿಕ್ ಮಾಡಿ.

ಗುಂಪು, ಜೀಪಿನ ಹತ್ತಿರ ಇರಿ

ಸಫಾರಿ ಮಾರ್ಗದರ್ಶಿಯ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿ. ಅವರು ಹೇಳುವವರೆಗೂ ಸಫಾರಿ ವಾಹನದಿಂದ (ಜೀಪ್ ಅಥವಾ ವ್ಯಾನ್) ಇಳಿಯಲು ಪ್ರಯತ್ನಿಸಬೇಡಿ. ಕಾಡು ಪ್ರಾಣಿಗಳು ಎಲ್ಲಿ ವಾಸಿಸುತ್ತವೆ ಮತ್ತು ಅವು ಹೇಗೆ ವರ್ತಿಸುತ್ತವೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವರ ಮಾತು ಕೇಳಿ. ಅಲ್ಲದೆ, ಯಾವಾಗಲೂ ನಿಮ್ಮ ತಂಡ ಮತ್ತು ನಿಮ್ಮ ವಾಹನದೊಂದಿಗೆ ಇರಿ. ಕಾಡಿನಲ್ಲಿ ಒಂಟಿಯಾಗಿ ಅಲೆದಾಡುವುದರಿಂದ ಅಪಾಯ ಎದುರಾಗಬಹುದು. ದಾರಿ ತಪ್ಪುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ಕೊಡಿ. ಮಕ್ಕಳನ್ನು ಒಂಟಿಯಾಗಿ ಬಿಡದಿರಿ.

ಶಬ್ದ ಮಾಡದಂತೆ ನೋಡಿಕೊಳ್ಳಿ

ಚಿಕ್ಕ ಮಕ್ಕಳು ಸ್ವಾಭಾವಿಕವಾಗಿಯೇ ಉತ್ಸುಕರಾಗಿರುತ್ತಾರೆ. ಕಾಡು ಸುತ್ತುವಾಗ ಮತ್ತು ಅದರಲ್ಲಿರುವ ಪ್ರಾಣಿಗಳನ್ನು ನೋಡಿದಾಗ ಅವರಲ್ಲಿ ಕುತೂಹಲ, ಉತ್ಸಾಹ ಹೆಚ್ಚಾಗಿ ಅವರು ಕೂಗಾಡುವುದು, ಕಿರುಚಾಡುವುದು ಮಾಡಬಹುದು. ಇದರಿಂದ ಕಾಡುಪ್ರಾಣಿಗಳು ಕೆರಳುವ ಸಾಧ್ಯತೆ ಇದೆ. ಹಾಗಾಗಿ ಮಕ್ಕಳಿಗೆ ಮುಂಚಿತವಾಗಿ ಸಫಾರಿಗೆ ಹೋದಾಗ ಹೇಗೆ ಇರಬೇಕು ಎಂಬುದನ್ನು ತಿಳಿಸಿ ಇರಿ. ಅವರಿಗೆ ಮೊದಲೇ ಕೆಲವೊಂದು ನಿಬಂಧನೆಗಳನ್ನು ವಿಧಿಸಿ. ಮಕ್ಕಳ ಚಲನವಲನಗಳ ಮೇಲೆ ನಿರಂತರವಾಗಿ ನಿಗಾ ಇರಿಸಿ.

ಡಿಯೋಡರೆಂಟ್, ಸುಗಂಧ ದ್ರವ್ಯ ಬಳಸದಿರಿ

ಇದನ್ನು ಸುರಕ್ಷತಾ ನಿಯಮಗಳಲ್ಲಿಯೂ ಸೇರಿಸಲಾಗಿದೆ. ಸಫಾರಿಗೆ ಹೋಗುವಾಗ ಡಿಯೋಡರೆಂಟ್, ಸುಗಂಧ ದ್ರವ್ಯ ಅಥವಾ ವಿಶಿಷ್ಟವಾದ ವಾಸನೆಯನ್ನು ಹೊಂದಿರುವ ಇತರ ಸುಗಂಧ ದ್ರವ್ಯಗಳನ್ನು ಬಳಸಬೇಡಿ. ಈ ಪ್ರಾಣಿಗಳು ಬಲವಾದ ವಾಸನೆಗಳಿಗೆ ಆಕರ್ಷಿತವಾಗಬಹುದು ಅಥವಾ ಅನಾನುಕೂಲ, ಕೋಪ ಮತ್ತು ದಾಳಿ ಮಾಡುವ ಸಾಧ್ಯತೆಯೂ ಇದೆ.

ಎರಡು ಮೂರು ದಿನ ಸಫಾರಿ ಫ್ಲಾನ್‌ ಮಾಡಿ

ಒಂದೇ ದಿನದಲ್ಲಿ ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳನ್ನು ನೋಡಲು ಸಾಧ್ಯವಾಗದಿರಬಹುದು. ನಿಮ್ಮ ಪ್ರವಾಸ ಎರಡು ಅಥವಾ ಮೂರು ದಿನಗಳಾಗಿದ್ದರೆ, ಸಫಾರಿ ಪ್ರದೇಶದಲ್ಲಿ ಲಭ್ಯವಿರುವ ಕಾಟೇಜ್‌ಗಳಲ್ಲಿ ತಂಗಲು ಪ್ರಯತ್ನಿಸಿ. ಇದು ಕಾಡಿನಲ್ಲಿ ಹೆಚ್ಚು ಸಮಯ ಕಳೆಯಲು, ವಿವಿಧ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ನೋಡುವ ಅವಕಾಶವನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಪ್ರಯಾಣದ ಅನುಭವವನ್ನು ಹೆಚ್ಚು ವಿಶೇಷ ಮತ್ತು ಅವಿಸ್ಮರಣೀಯವಾಗಿಸುತ್ತದೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.