2024 ಮುಗಿದೇ ಹೋಯ್ತು ಅಂತ ಚಿಂತಿಸಬೇಡಿ; ಡಿಸೆಂಬರ್ ತಿಂಗಳಲ್ಲಿ ಈ 6 ಕೆಲಸ ಮಾಡಿ, ಇದ್ರಿಂದ ಖಂಡಿತ ತೃಪ್ತಿ–ಖುಷಿ ಸಿಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  2024 ಮುಗಿದೇ ಹೋಯ್ತು ಅಂತ ಚಿಂತಿಸಬೇಡಿ; ಡಿಸೆಂಬರ್ ತಿಂಗಳಲ್ಲಿ ಈ 6 ಕೆಲಸ ಮಾಡಿ, ಇದ್ರಿಂದ ಖಂಡಿತ ತೃಪ್ತಿ–ಖುಷಿ ಸಿಗುತ್ತೆ

2024 ಮುಗಿದೇ ಹೋಯ್ತು ಅಂತ ಚಿಂತಿಸಬೇಡಿ; ಡಿಸೆಂಬರ್ ತಿಂಗಳಲ್ಲಿ ಈ 6 ಕೆಲಸ ಮಾಡಿ, ಇದ್ರಿಂದ ಖಂಡಿತ ತೃಪ್ತಿ–ಖುಷಿ ಸಿಗುತ್ತೆ

2024ರ ಕೊನೆಯ ತಿಂಗಳಿಗೆ ಕಾಲಿರಿಸಿದ್ದೇವೆ. ಡಿಸೆಂಬರ್ ತಿಂಗಳು ಮುಗಿಯಿತು ಅಂದ್ರೆ ಈ ವರ್ಷ ಮುಗಿದ ಹಾಗೆ. ಈ ವರ್ಷ ಏನೂ ಮಾಡಿಲ್ಲಲ್ವಾ ಅಂತ ಚಿಂತೆ ಮಾಡುವವರೇ ಹೆಚ್ಚು, ಇದಕ್ಕಾಗಿ ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಡಿಸೆಂಬರ್‌ನಲ್ಲಿ ಈ 6 ಕೆಲಸ ಮಾಡಿ. ಮುಂದಿನ ವರ್ಷ ಖಂಡಿತ ನೀವು ಹೇಳ್ತೀರಿ 2024 ನನ್ನ ಬೆಸ್ಟ್ ಇಯರ್ ಅಂತ.

ಡಿಸೆಂಬರ್ ಅಲ್ಲಿ ಮಾಡಬೇಕಾದ ಕೆಲಸಗಳು
ಡಿಸೆಂಬರ್ ಅಲ್ಲಿ ಮಾಡಬೇಕಾದ ಕೆಲಸಗಳು (PC: Canva)

2024ಕ್ಕೆ ಬಾಯ್ ಹೇಳಿ, 2025ಕ್ಕೆ ಹಾಯ್ ಹೇಳಲು ಇನ್ನೊಂದೇ ತಿಂಗಳು ಬಾಕಿ. ಇನ್ನು ಕೆಲವೇ ದಿನಗಳಲ್ಲಿ ನಾವು ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಸಾಮಾನ್ಯವಾಗಿ ವರ್ಷಾಂತ್ಯಕ್ಕೆ ಬಂದಾಗ ಈ ವರ್ಷ ಏನೂ ಮಾಡಿಲ್ಲಲ್ವಾ ಅಂತ ಚಿಂತೆ, ಬೇಸರ ಮಾಡಿಕೊಳ್ಳುವವರೇ ಹೆಚ್ಚು. ನೀವು ಆ ಸಾಲಿಗೆ ಸೇರುವವರಾದರೇ ಖಂಡಿತ ಯೋಚಿಸಬೇಡಿ. ಯಾಕೆಂದರೆ ಈ ಡಿಸೆಂಬರ್ ಒಂದು ತಿಂಗಳಲ್ಲಿ ನೀವು ಸಾಕಷ್ಟು ಮಾಡಬಹುದು, ಮಾತ್ರವಲ್ಲ ಆ ಮೂಲಕ 2024ರನ್ನು ಬೆಸ್ಟ್ ಎಂದುಕೊಳ್ಳಬಹುದು. ಇದರಿಂದ ನಿಮಗೆ ಸಂತೋಷ, ತೃಪ್ತಿ ಸಿಗುತ್ತದೆ.

ಡೈರಿ ಬರೆಯಿರಿ

2024ರಲ್ಲಿ ನೀವು ಮಾಡಿದ ಪ್ರಮುಖ ಕೆಲಸಗಳು, ಸಾಧನೆಗಳು, ನೆನಪುಗಳು ಮತ್ತು ಸಂತೋಷದ ವಿಷಯಗಳನ್ನು ನೆನಪಿಸಿಕೊಳ್ಳಿ ಮತ್ತು ಅವುಗಳನ್ನು ಪುಸ್ತಕದಲ್ಲಿ ಬರೆಯಿರಿ. ಆಗ ನಿಮಗೆ ಈ ವರ್ಷ ನಾನು ಎಷ್ಟೆಲ್ಲಾ ಸಾಧನೆ ಮಾಡಿದ್ದೇನೆ ಎಂಬ ತೃಪ್ತಿ ಸಿಗುತ್ತದೆ. ಒಳ್ಳೆಯ ನೆನಪುಗಳಿಗೆಲ್ಲಾ ಅಕ್ಷರರೂಪ ನೀಡಿ ಡೈರಿಯಲ್ಲಿ ದಾಖಲಿಸಿ. ಇದನ್ನು ಭವಿಷ್ಯದಲ್ಲಿ ಓದಿಗಾಗುವ ನಿಮಗೆ ಖುಷಿ ಸಿಗುತ್ತದೆ. ಆಗ 2024ರ ನೆನಪುಗಳನ್ನು ಆನಂದಿಸಬಹುದು.

ಬಾಕಿ ಇರುವ ರೆಸಲ್ಯೂಷನ್‌ಗಳನ್ನು ಮಾಡಿ

ಪ್ರತಿ ಸಲ ಹೊಸ ವರ್ಷ ಆರಂಭವಾಗುವಾಗ ಒಂದಿಷ್ಟು ರೆಸಲ್ಯೂಷನ್‌ಗಳನ್ನ ಮಾಡಿರುತ್ತೇವೆ. ಆದರೆ ಅದನ್ನು ಪೂರ್ತಿ ಮಾಡುವವರು ಕಡಿಮೆ ಅಂತಲೇ ಹೇಳಬೇಕು. 2024ರಲ್ಲಿ ನೀವು ಮಾಡಿದ ರೆಸಲ್ಯೂಷನ್‌ನಲ್ಲಿ ಯಾವುದು ಬಾಕಿ ಇದೆ ಅದನ್ನು ಈಗ ತಿಂಗಳಲ್ಲಿ ಮಾಡಿ ಮುಗಿಸಿ. ಒಂದೇ ತಿಂಗಳಲ್ಲಿ ಎಲ್ಲವೂ ಮುಗಿಸಲು ಸಾಧ್ಯವಿಲ್ಲ ಎಂದರೆ ತಿಂಗಳಲ್ಲಿ ಮುಗಿಸುವ ರೆಸಲ್ಯೂಷನ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ರೆಸಲ್ಯೂಶನ್ ಅನ್ನು ಪೂರ್ಣಗೊಳಿಸುವುದರಿಂದ ಮುಂದಿನ ವರ್ಷ ಇನ್ನಷ್ಟು ಹೊಂದಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಪ್ರವಾಸ, ರಜೆ

ಡಿಸೆಂಬರ್‌ನಲ್ಲಿ ಸಾಮಾನ್ಯವಾಗಿ ಎಲ್ಲರೂ ಪ್ರವಾಸ ಹೋಗುತ್ತಾರೆ, ರಜೆಯನ್ನು ಎಂಜಾಯ್ ಮಾಡುತ್ತಾರೆ. ಇದು ನಿಜಕ್ಕೂ ಅವಶ್ಯ ಕೂಡ. ಈ ಡಿಸೆಂಬರ್‌ನಲ್ಲಿ ರಜೆ ಹಾಕಿ ನಿಮ್ಮ ನೆಚ್ಚಿನ ಪ್ರವಾಸಿ ತಾಣಕ್ಕೆ ಭೇಟಿ ನೀಡಿ. ಇದು ನಿಮಗೆ ಒತ್ತಡದಿಂದ ಪರಿಹಾರ ನೀಡುವ ಜೊತೆಗೆ ಮನಸ್ಸಿಗೂ ಖುಷಿ ಕೊಡುತ್ತದೆ. ಹೊಸ ಸ್ಥಳ, ಹೊಸ ಜನ ನಿಮಗೆ ಮರೆಯಲಾರದ ನೆನಪು ನೀಡಬಹುದು.

ಮುಂದಿನ ವರ್ಷಕ್ಕೆ ಪ್ಲಾನ್ ಮಾಡಿ

ನೀವು ವೃತ್ತಿ, ವ್ಯಾಪಾರ, ಉದ್ಯೋಗ ಹೀಗೆ ಯಾವುದೇ ಕ್ಷೇತ್ರದಲ್ಲಿರಲಿ ಮುಂದಿನ ವರ್ಷ ನೀವೇನು ಮಾಡಬೇಕು ಎಂದು ಯೋಚಿಸಿ. ವೈಯಕ್ತಿಕ ಜೀವನದ ದೃಷ್ಟಿಯಿಂದಲೂ ನೀವು ಆಲೋಚನೆ ಮಾಡಬೇಕು. ಡಿಸೆಂಬರ್ ಆರಂಭದಿಂದಲೇ ಈ ಕೆಲಸ ಮಾಡುವುದು ವರ್ಷಾಂತ್ಯಕ್ಕೆ ಸಹಾಯವಾಗುತ್ತದೆ. ನಿಗದಿತ ಗುರಿಗಳನ್ನು ಸಾಧಿಸಲು ಏನು ಮಾಡಬೇಕೆಂದು ಸಹ ಯೋಚಿಸಬೇಕು.

ಹಣಕಾಸು ಯೋಜನೆ

ವರ್ಷದ ಕೊನೆಯಲ್ಲಿ ಹಣಕಾಸು ಯೋಜನೆ ಬಹಳ ಮುಖ್ಯ. ಈ ವರ್ಷದ ಆದಾಯ, ಖರ್ಚು, ಉಳಿತಾಯವನ್ನು ಸ್ಪಷ್ಟವಾಗಿ ಬರೆಯಬೇಕು. ಮುಂದಿನ ವರ್ಷ ಹೇಗಿರುತ್ತದೆ ಎಂಬ ಅಂದಾಜುಗಳನ್ನು ಸ್ಪಷ್ಟವಾಗಿ ಲೆಕ್ಕ ಹಾಕಬೇಕು. ಇದರಿಂದ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರುತ್ತದೆ. ಈ ಕಾಲದಲ್ಲಿ ಮನುಷ್ಯನಿಗೆ ಹಣಕಾಸಿನ ಸ್ವಷ್ಟತೆ ಇರುವುದು ಬಹಳ ಮುಖ್ಯ.

ಆರೋಗ್ಯದ ವಿಚಾರವೂ ಗಮನದಲ್ಲಿರಲಿ

ಮನುಷ್ಯರಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ಎಲ್ಲವನ್ನೂ ಅಂದುಕೊಂಡಂತೆ ಸಾಧಿಸಬಹುದು. ಅದಕ್ಕಾಗಿಯೇ ಈ ವರ್ಷ ನಮ್ಮ ಆರೋಗ್ಯದ ಸ್ಥಿತಿ ಹೇಗಿದೆ ಎಂಬುದನ್ನು ನಾವು ಸಂಪೂರ್ಣವಾಗಿ ನೆನಪಿಟ್ಟುಕೊಳ್ಳಬೇಕು. ಈ ವರ್ಷ ನೀವು ಯಾವ ಸಮಸ್ಯೆಗಳನ್ನು ಎದುರಿಸಿದ್ದೀರಿ, ಯಾವ ಕಾರಣಕ್ಕೆ ಎದುರಿಸಿದ್ದೀರಿ ಎಂಬುದನ್ನು ಬರೆಯಿರಿ. ಮುಂದೆ ಇಂತಹ ಆರೋಗ್ಯ ಸಮಸ್ಯೆಗಳು ಬಾರದಂತೆ ಎಚ್ಚರ ವಹಿಸಿ. ಅನಾರೋಗ್ಯಕರ ಅಭ್ಯಾಸಗಳನ್ನು ಬದಲಾಯಿಸಲು ಸಿದ್ಧರಾಗಿರಿ. ಆರೋಗ್ಯದ ವಿಚಾರದಲ್ಲಿ ಸೋಮಾರಿತನ ಮಾಡದೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.

ಡಿಸೆಂಬರ್‌ ತಿಂಗಳಲ್ಲಿ ನೀವು ಈ 6 ಕೆಲಸ ಮಾಡಿದ್ರೆ ಖಂಡಿತ ನಿಮಗೆ ಯಶಸ್ಸು, ಖುಷಿ, ತೃಪ್ತಿ, ಸಂತೋಷ ಎಲ್ಲವೂ ಸಿಗುತ್ತದೆ. ಇನ್ನೇಕೆ ತಡ ಈಗಲೇ ಈ ಮೇಲಿನ ಕೆಲಸಗಳನ್ನು ಶುರು ಮಾಡಿ. ಆಗಲೇ ಡಿಸೆಂಬರ್ 1 ಅರ್ಧ ದಿನ ಕಳೆಯಿತು, ನೆನಪಿರಲಿ.

Whats_app_banner