ಉತ್ತರ ಕೊರಿಯಾದಲ್ಲಿ ತಪ್ಪಿಯೂ ಜೀನ್ಸ್ ಧರಿಸುವಂತಿಲ್ಲ, ಧರಿಸಿದ್ರೆ ಜೈಲುಶಿಕ್ಷೆ ಫಿಕ್ಸ್, ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ
ಜೀನ್ಸ್ ಪ್ಯಾಂಟ್ ಧರಿಸೋದು ಹಲವರಿಗೆ ಇಷ್ಟ. ಇದೊಂಥರ ಕಂಫರ್ಟ್ ಬಟ್ಟೆ ಅನ್ನೋದು ಸುಳ್ಳಲ್ಲ. ಆದರೆ ನೀವು ಜೀನ್ಸ್ ಧರಿಸಿ ನಾರ್ತ್ ಕೊರಿಯಾಕ್ಕೆ ಹೋದ್ರೆ ಖಂಡಿತ ಸಂಕಷ್ಟಕ್ಕೆ ಸಿಲುಕುತ್ತೀರಿ. ರಸ್ತೆಯಲ್ಲೇ ನಿಮ್ಮ ಪ್ಯಾಂಟ್ ಬಿಚ್ಚಿಸಿ ಬಿಡುತ್ತಾರೆ, ಮಾತ್ರವಲ್ಲ ಜೈಲುಶಿಕ್ಷೆಗೂ ಒಳಗಾಗಬಹುದು. ಏನಿದು ಕಥೆ, ಈ ದೇಶದಲ್ಲಿ ಜೀನ್ಸ್ ಬ್ಯಾನ್ ಆಗಲು ಕಾರಣವೇನು ನೋಡಿ
ಫ್ಯಾಷನ್ ಜಗತ್ತಿನಲ್ಲಿ ಜೀನ್ಸ್‌ಗೆ ವಿಶಿಷ್ಟ ಸ್ಥಾನವಿದೆ. ಜೀನ್ಸ್ ಧರಿಸೋದು ಹಲವರಿಗೆ ಇಷ್ಟ. ವಯಸ್ಸು ಮತ್ತು ಲಿಂಗ ವ್ಯತ್ಯಾಸವನ್ನು ಲೆಕ್ಕಿಸದೆ, ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಪ್ರಪಂಚದಲ್ಲಿ ಬಹಳ ಜನಪ್ರಿಯವಾಗಿರುವ ಜೀನ್ಸ್ ಉಡುಪುಗಳನ್ನು ಇಲ್ಲಿ ನಿಷೇಧಿಸಲಾಗಿದೆ. ಅದುವೇ ಉತ್ತರ ಕೊರಿಯಾ ಅಥವಾ ನಾರ್ತ್ ಕೊರಿಯಾ.
ಕಟ್ಟುನಿಟ್ಟಿನ ನಿಯಮಗಳಿಗೆ ಖ್ಯಾತಿ ಕೊರಿಯಾ
ಉತ್ತರ ಕೊರಿಯಾದ ಎಂದಾಕ್ಷಣ ನಮಗೆ ನೆನಪಾಗುವುದು ಇಲ್ಲಿನ ಕಾನೂನುಗಳು. ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ವಿಚಿತ್ರ ಕಾನೂನುಗಳನ್ನು ಪರಿಚಯಿಸುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಉತ್ತರ ಕೊರಿಯಾದ ಜನರು ಪಾಶ್ಚಿಮಾತ್ಯ ಸಿದ್ಧಾಂತಕ್ಕೆ ಆಕರ್ಷಿತರಾಗುತ್ತಾರೆ ಎಂಬ ಕಾರಣದಿಂದಾಗಿ ಅವರು ಕಠಿಣ ಕಾನೂನುಗಳನ್ನು ತರುತ್ತಾರೆ. ನೀವು ತೊಡುವ ಬಟ್ಟೆಯ ವಿಚಾರದಲ್ಲೂ ಕಟ್ಟುನಿಟ್ಟಿನ ಕಾನೂನುಗಳಿಗೆ ಎಂದರೆ ನೀವು ನಂಬಲೇಬೇಕು.
ಜೀನ್ಸ್ ತೊಟ್ಟರೆ ಅಷ್ಟೇ!
ಉತ್ತರ ಕೊರಿಯಾದಲ್ಲಿ ಯಾರಾದರೂ ಜೀನ್ಸ್ ಧರಿಸಿ ಹೊರಗೆ ಹೋದರೆ, ಕಿಮ್ ಸರ್ಕಾರ ಅವರನ್ನು ರಸ್ತೆಯಲ್ಲಿ ಶಿಕ್ಷಿಸುತ್ತೆ, ಮಾತ್ರವಲ್ಲ ನೀವು ಮತ್ತೆಂದೂ ಆ ಜೀನ್ಸ್ ಧರಿಸಬಾರದು ಅಷ್ಟರ ಮಟ್ಟಿಗೆ ಅದನ್ನು ಹರಿದು ಚೂರು ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ದಂಡ ಹಾಗೂ ಜೈಲುಶಿಕ್ಷೆಯನ್ನೂ ನೀಡಲಾಗುತ್ತದೆ. ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲು ಪೊಲೀಸರು ನಿರ್ದಿಷ್ಟವಾಗಿ ಬೀದಿಗಳಲ್ಲಿ ಗಸ್ತು ತಿರುಗುತ್ತಾರೆ. ಜೀನ್ಸ್ ಧರಿಸಿದವರನ್ನು ಶಿಕ್ಷಿಸುವುದು ಮತ್ತು ಉತ್ತರ ಕೊರಿಯಾದ ಡ್ರೆಸ್ ಕೋಡ್ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಪೊಲೀಸರ ಕರ್ತವ್ಯವಾಗಿದೆ.
ಜೀನ್ಸ್ ನಿಷೇಧಕ್ಕೆ ಕಾರಣವಿದು
ವಾಸ್ತವವಾಗಿ, ಉತ್ತರ ಕೊರಿಯಾದ ಜೀನ್ಸ್ ನಿಷೇಧವು ಅನೇಕರಿಗೆ ಹಾಸ್ಯಾಸ್ಪದವಾಗಿ ಕಾಣಿಸಬಹುದು. ಆದರೆ ಈ ನಿಷೇಧದ ಹಿಂದೆ ದೊಡ್ಡ ಕಾರಣವಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾದ ಜೀನ್ಸ್ ಧರಿಸುತ್ತಾರೆ ಎಂದರೆ ಅವರು ಉತ್ತರ ಕೊರಿಯಾದಲ್ಲಿ ಕಮ್ಯುನಿಸಂ ವಿರುದ್ಧ ಬಂಡಾಯವೆದ್ದು ತಮ್ಮ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ ಎಂದರ್ಥ. ಆದ್ದರಿಂದಲೇ ಆ ದೇಶದ ಜನರು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಜ್ಜೆ ಹಾಕುವುದನ್ನು ದೇಶದ ನಾಯಕತ್ವ ಸಹಿಸುವುದಿಲ್ಲ.
ಉತ್ತರ ಕೊರಿಯಾದಲ್ಲಿ ಇವೆಲ್ಲವಕ್ಕೂ ನಿಷೇಧ
ಉತ್ತರ ಕೊರಿಯಾದ ಜನರ ಮೇಲೆ ಆಗಾಗ್ಗೆ ನಿರ್ಬಂಧಗಳನ್ನು ಹೇರುವ ಕಿಮ್ ಜಾಂಗ್ ಉನ್, ಈಗಾಗಲೇ ಆ ದೇಶದಲ್ಲಿ ಹಲವನ್ನು ನಿಷೇಧಿಸಿದ್ದಾರೆ. ವಯಸ್ಸಿನ ಭೇದವಿಲ್ಲದೆ ಎಲ್ಲರೂ ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಕೂದಲು ಕತ್ತರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಕಿಮ್‌ನಂತೆ ಯಾರೂ ತಮ್ಮ ಕೂದಲನ್ನು ಕತ್ತರಿಸಬಾರದು. ಕೂದಲು ಕತ್ತರಿಸಿದರೆ ಪಾದಚಾರಿ ಮಾರ್ಗದಲ್ಲಿ ಶಿಕ್ಷೆ ಅನುಭವಿಸುತ್ತಾರೆ.ಮಹಿಳೆಯರು ಅಥವಾ ಪುರುಷರು ಜೀನ್ಸ್ ಧರಿಸಬಾರದು ಮತ್ತು ನೀಲಿ ಆಭರಣಗಳನ್ನು ಧರಿಸಬಾರದು. ಮಹಿಳೆಯರು ಕೆಂಪು ಲಿಪ್ಸ್ಟಿಕ್ ಧರಿಸಬಾರದು. ಅಂತಿಮವಾಗಿ, ದೇಶದಲ್ಲಿ ಕಪ್ಪು ಬಣ್ಣದ ಟ್ರೆಂಚ್ ಕೋಟ್ ಅನ್ನು ಯಾರೂ ಧರಿಸಬಾರದು ಎಂಬ ನಿರ್ಬಂಧಗಳಿವೆ. ಯಾರಾದರೂ ಆ ನಿರ್ಬಂಧಗಳನ್ನು ಉಲ್ಲಂಘಿಸಿದರೆ, ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.