Chanakya Niti: ಕಾಗೆಯನ್ನ ನೋಡಿ 4 ಗುಣ ಕಲಿಬೇಕು ಹುಲುಮಾನವ; ಪ್ರಾಣಿ-ಪಕ್ಷಿಗಳಿಂದ ಏನೇನು ಕಲಿಬೇಕು ಅಂತ ಹೇಳ್ತಾರೆ ಆಚಾರ್ಯ ಚಾಣಕ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಕಾಗೆಯನ್ನ ನೋಡಿ 4 ಗುಣ ಕಲಿಬೇಕು ಹುಲುಮಾನವ; ಪ್ರಾಣಿ-ಪಕ್ಷಿಗಳಿಂದ ಏನೇನು ಕಲಿಬೇಕು ಅಂತ ಹೇಳ್ತಾರೆ ಆಚಾರ್ಯ ಚಾಣಕ್ಯ

Chanakya Niti: ಕಾಗೆಯನ್ನ ನೋಡಿ 4 ಗುಣ ಕಲಿಬೇಕು ಹುಲುಮಾನವ; ಪ್ರಾಣಿ-ಪಕ್ಷಿಗಳಿಂದ ಏನೇನು ಕಲಿಬೇಕು ಅಂತ ಹೇಳ್ತಾರೆ ಆಚಾರ್ಯ ಚಾಣಕ್ಯ

Chanakya Niti in Kannada: ಮನುಷ್ಯ ಎಷ್ಟೇ ಬುದ್ಧಿವಂತ ಎನಿಸಿಕೊಂಡರೂ ಆತ ಕಲಿಯುವುದು ಸಾಕಷ್ಟಿದೆ. ಆಚಾರ್ಯ ಚಾಣಕ್ಯರು ಹೇಳುವಂತೆ ಮನುಷ್ಯನಾದವನು ಮಿಲನ ಕ್ರಿಯೆ ಬಗ್ಗೆ ಕಾಗೆಗಳಿಂದ ಕಲಿಯಬೇಕಂತೆ. ಕಾಗೆ ಸೇರಿದಂತೆ ಕೆಲ ಪಕ್ಷಿ-ಪ್ರಾಣಿಗಳಿಂದ ಮನುಷ್ಯ ಕಲಿಯುವಂತದ್ದೇನಿದೆ..? ತಿಳಿದುಕೊಳ್ಳೋಣ

ಚಾಣಕ್ಯ ನೀತಿ
ಚಾಣಕ್ಯ ನೀತಿ

ಮನುಷ್ಯ ತನ್ನನ್ನು ತಾನು ಜಗತ್ತಿನ ಅತೀ ಬುದ್ಧಿವಂತ ಪ್ರಾಣಿ ಅಂತಾ ಎಂದುಕೊಂಡು ಬಿಟ್ಟಿದ್ದಾನೆ. ಆದರೆ ಮೂಖ ಪ್ರಾಣಿ-ಪಕ್ಷಿಗಳಿಂದಲೂ ನಾವು ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಆಚಾರ್ಯ ಚಾಣಕ್ಯರು ಮನುಷ್ಯನ ಜೀವನದ ಏಳಿಗೆಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿ ಮನುಷ್ಯನಾದವನು ಸಿಂಹದಿಂದ ಒಂದು, ಕೊಕ್ಕರೆಯಿಂದ ಎರಡು, ಕತ್ತೆಯಿಂದ ಮೂರು , ಕೋಳಿಯಿಂದ ನಾಲ್ಕು, ಕಾಗೆ ಹಾಗೂ ನಾಯಿಗಳಿಂದ ಐದು ವಿಚಾರಗಳನ್ನು ಮನುಷ್ಯ ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ. ಅವು ಯಾವುದು ಎಂಬುದನ್ನು ತಿಳಿದುಕೊಳ್ಳೋಣ

ಸಿಂಹ

ಸಿಂಹ ಕಾಡಿನ ರಾಜ. ಆದರೆ ಈ ಸಿಂಹದಿಂದ ಮನುಷ್ಯ ಕಲಿತುಕೊಳ್ಳಬೇಕಾದ ಒಂದು ಗುಣವಿದೆ. ಅದೇನೆಂದರೆ ನಾವು ಜೀವನದಲ್ಲಿ ಏನನ್ನೇ ಮಾಡಬೇಕು ಎಂದುಕೊಂಡಿದ್ದರೂ ಅದಕ್ಕೆ ನಮ್ಮ ಸಂಪೂರ್ಣ ಶಕ್ತಿಯನ್ನು ಬಳಸಬೇಕು. ಅರೆ ಮನಸ್ಸಿನಿಂದ ಯಾವುದನ್ನೂ ಮಾಡಬಾರದು.

ಕೊಕ್ಕರೆ

ಒಬ್ಬ ಮನುಷ್ಯನು ಕೊಕ್ಕರೆಯನ್ನು ನೋಡಿ 2 ವಿಚಾರಗಳನ್ನು ಕಲಿಯಬಹುದು. ಮೊದಲನೇಯದು ಇಂದ್ರಿಯಗಳನ್ನು ನಿಯಂತ್ರಿಸುವುದು ಹಾಗೂ ಎರಡನೇಯದಾಗಿ ಸಮಯ, ಸ್ಥಳ ಹಾಗೂ ನಿಮ್ಮ ಶಕ್ತಿಯ ಅರಿವು ನಿಮಗೆ ಇರಬೇಕು ಎನ್ನುವುದಾಗಿದೆ.

ಕತ್ತೆ

ಕತ್ತೆಯಿಂದ ಮನುಷ್ಯ ಮೂರು ಬುದ್ಧಿಗಳನ್ನು ಕಲಿಯಬಹುದಾಗಿದೆ. ಎಷ್ಟೇ ಆಯಾಸವಾದರೂ, ಎಷ್ಟೇ ಭಾರ ಎನಿಸಿದರೂ ಸಹ ಹಿಡಿದುಕೊಂಡ ಕೆಲಸವನ್ನು ಮಾಡಿ ಮುಗಿಸುವ ಸಾಮರ್ಥ್ಯ ಹೊಂದಿರಬೇಕು. ಬಿಸಿ - ಚಳಿ ಏನೇ ಇರಲಿ ಅವುಗಳಿಗೆ ಮೈ ಒಡ್ಡಬಾರದು ಹಾಗೂ ಇದ್ದಿದ್ದರಲ್ಲಿ ತೃಪ್ತಿ ಪಡುವುದನ್ನು ಕತ್ತೆಗಳನ್ನು ನೋಡಿ ಕಲಿಯಬೇಕು ಎಂದು ಹೇಳಲಾಗಿದೆ.

ಹುಂಜ : ಕೋಳಿಗಳಿಂದ ನೀವು 4 ವಿಚಾರಗಳನ್ನು ಕಲಿಯಬಹುದಾಗಿದೆ. ಒಂದು ಧೈರ್ಯಶಾಲಿಯಾಗಿರುವುದು, ಎರಡನೆಯದು ಸಮಯಕ್ಕೆ ಸರಿಯಾಗಿ ಏಳುವುದು, ಮೂರನೇಯದು ಯಾವಾಗಲು ಯುದ್ಧಕ್ಕೆ ಸನ್ನದ್ಧರಾಗಿ ಇರುವುದು ಹಾಗೂ ನಾಲ್ಕನೆಯದು ಆಹಾರಕ್ಕಾಗಿ ಹೋರಾಡುವುದಾಗಿದೆ.

ಕಾಗೆ

ಕಾಗೆಯಿಂದ ಮನುಷ್ಯ ನಾಲ್ಕು ಗುಣಗಳನ್ನು ಕಲಿಯಬೇಕು. ಮೊದಲನೆಯದಾಗಿ ಧೈರ್ಯಶಾಲಿಯಾಗಿ ಇರುವುದು. ಎರಡನೆಯದು ಮಿಲನದ ಸಮಯವು ತೀರಾ ಖಾಸಗಿಯಾಗಿ ಇರುವಂತೆ ಎಚ್ಚರಿಕೆ ವಹಿಸುವುದು. ಮೂರನೆಯದು ಇತರರ ಚಟುವಟಿಕೆಗಳನ್ನು ಗಮನಿಸುವುದು, ನಾಲ್ಕನೆಯದು ಸಂಗಾತಿಯನ್ನು ಆರಿಸುವುದು ಹಾಗೂ ಅದನ್ನು ಬದಲಾಯಿಸುವ ಬಗೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬುದ್ಧಿವಂತಿಕೆಯ ನಿರ್ಧಾರಗಳನ್ನು ಕೈಗೊಳ್ಳುವುದು(ಕಾಗೆ ಕಡಿಮೆ ನೀರಿದ್ದ ಹೂಜಿಯಲ್ಲಿ ಕಲ್ಲುಗಳನ್ನು ಹಾಕಿ ನೀರು ಕುಡಿದ ಕತೆ ನಿಮಗೆ ನೆನಪಿದ್ದಿರಬಹುದು)

ನಾಯಿ

ನಾಯಿಗಳಿಂದ ಮಾನವ ಮೊದಲು ಕಲಿಯಬೇಕಾದ ಕೆಲಸವೇನೆಂದರೆ ನೀವು ಏನನ್ನು ತಿನ್ನುತ್ತಿರೋ ಅದರಲ್ಲೇ ಸಂತೃಪ್ತಿ ಪಡುವುದು. ಎರಡನೆಯದಾಗಿ ಎಷ್ಟೇ ಆಳವಾದ ನಿದ್ರೆಯಲ್ಲಿದ್ದರೂ ಸಹ ಜಾಗರೂಕರಾಗಿ ಇರುವುದು. ಮೂರನೇಯದು ಮಾಲೀಕರಿಗೆ ನಿಷ್ಠೆಯಿಂದ ಇರುವುದು, ನಾಲ್ಕನೆಯದು ಧೈರ್ಯದಿಂದ ಮುನ್ನುಗ್ಗುವುದು ಹಾಗೂ ಐದನೆಯದು ಜವಾಬ್ದಾರಿಯಿಂದ ಎಂದೂ ದೂರ ಸರಿಯದೇ ಉಳಿಯುವುದು.

ಮನುಷ್ಯನಾದವನು ಸಿಂಹ, ನಾಯಿ, ಕೋಳಿ, ಕಾಗೆ ಹಾಗೂ ಕತ್ತೆಗಳಿಂದ ಈ ಒಳ್ಳೆಯ ಗುಣಗಳನ್ನು ಕಲಿತುಕೊಂಡು ಅದರಂತೆ ನಡೆದರೆ ಆತ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವಲ್ಲಿ ಶಕ್ತನಾಗುತ್ತಾನೆ ಎಂದು ಆಚಾರ್ಯ ಚಾಣಾಕ್ಯ ಹೇಳಿದ್ದಾರೆ.

Whats_app_banner