Char Dham Yatra: ಕೇದಾರನಾಥ, ಬದರಿನಾಥ ಯಾತ್ರೆಗೆ ಹೋಗುವ ಪ್ಲಾನ್ ಇದೆಯಾ; ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Char Dham Yatra: ಕೇದಾರನಾಥ, ಬದರಿನಾಥ ಯಾತ್ರೆಗೆ ಹೋಗುವ ಪ್ಲಾನ್ ಇದೆಯಾ; ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

Char Dham Yatra: ಕೇದಾರನಾಥ, ಬದರಿನಾಥ ಯಾತ್ರೆಗೆ ಹೋಗುವ ಪ್ಲಾನ್ ಇದೆಯಾ; ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

Char Dham Yatra: ಚಾರ್‌ ಧಾಮ್‌ ಯಾತ್ರೆಗೆ ಹೋಗುವ ಭಕ್ತರು ತಮ್ಮ ಹೆಸರನ್ನು ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ಕೇದಾರನಾಥ, ಬದರಿನಾಥ, ಗಂಗೋತ್ರಿ ಪುಣ್ಯಕ್ಷೇತ್ರಕ್ಕೆ ಹೋಗಲು ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಧಾನ ಹೀಗಿದೆ.

ಚಾರ್ ಧಾಮ್ ಯಾತ್ರೆಯ ಅಂಗವಾಗಿ ರುದ್ರಪ್ರಯಾಗ್‌ನಿಂದ ಕೇದಾರನಾಥ ದೇವಾಲಯಕ್ಕೆ ಹೋಗುತ್ತಿರುವ ಭಕ್ತರು. ಚಾರ್ ಧಾಮ್ ಯಾತ್ರೆಯ ನೋಂದಣಿ ವಿಧಾನವನ್ನು ತಿಳಿದುಕೊಳ್ಳಿ. (ಫೋಟೊ ಫೈಲ್)
ಚಾರ್ ಧಾಮ್ ಯಾತ್ರೆಯ ಅಂಗವಾಗಿ ರುದ್ರಪ್ರಯಾಗ್‌ನಿಂದ ಕೇದಾರನಾಥ ದೇವಾಲಯಕ್ಕೆ ಹೋಗುತ್ತಿರುವ ಭಕ್ತರು. ಚಾರ್ ಧಾಮ್ ಯಾತ್ರೆಯ ನೋಂದಣಿ ವಿಧಾನವನ್ನು ತಿಳಿದುಕೊಳ್ಳಿ. (ಫೋಟೊ ಫೈಲ್) (HT)

ಹಿಂದೂಗಳಿಗೆ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಚಾರ್‌ ಧಾಮ್‌ ಯಾತ್ರೆ (Char Dham Yatra) ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಈ ನಾಲ್ಕು ಪುಣ್ಯ ಕ್ಷೇತ್ರಗಳನ್ನು ಶಿವನ ವಾಸಸ್ಥಾನ ಎಂದು ಕರೆಯಲಾಗುತ್ತದೆ. ಉತ್ತರಾಖಂಡ್‌ನಲ್ಲಿರುವ ಚಾರ್‌ ಧಾಮ್‌ ಹಿಂದೂಗಳಿಗೆ ಪುಣ್ಯ ಕ್ಷೇತ್ರಗಳಾಗಿವೆ. ಇದನ್ನ ದೇವಭೂಮಿ ಅಂತಲೇ ಹೇಳುತ್ತಾರೆ. ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಇವುಗಳೇ ಚಾರ್‌ ಧಾಮ್‌ಗಳು. ಜೀವನದಲ್ಲಿ ಒಮ್ಮೆಯಾದರೂ ಚಾರ್‌ ಧಾಮ್‌ ಯಾತ್ರೆ ಮಾಡಿ ಪುಣ್ಯಗಳಿಸಬೇಕೆಂಬುದು ಅನೇಕ ಶಿವನ ಭಕ್ತರ ಕನಸು. ಅದಕ್ಕಾಗಿ ತಿಂಗಳುಗಳ ಮೊದಲೇ ತಯಾರಿ ನಡೆಸುವವರೂ ಇದ್ದಾರೆ. ಚಾರ್‌ ಧಾಮ್‌ಗೆ ಭೇಟಿ ನೀಡಬೇಕೆಂದರೆ ಭಕ್ತರು ತಮ್ಮ ಹೆಸರನ್ನು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಚಾರ್‌ ಧಾಮ್‌ಗಳಲ್ಲಿ ಕೇದಾರನಾಥ ಮತ್ತು ಬದರಿನಾಥ ಪುಣ್ಯಕ್ಷೇತ್ರಕ್ಕೆ (Kedarnath Badrinath Registration) ಹೋಗಲು ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಗಂಗೋತ್ರಿ ಮತ್ತು ಯಮುನೋತ್ರಿಗೆ (Gangotri Yamunotri Registration) ಈ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ.

ಕೇದಾರನಾಥ ಮತ್ತು ಬದರಿನಾಥ ದೇಗುಲದ ಬಾಗಿಲು ಯಾವಾಗ ತೆರೆಯುತ್ತದೆ?

ಕೇದಾರನಾಥ ಮತ್ತು ಬದರಿನಾಥ ಯಾತ್ರೆ ಇನ್ನೇನು ಪ್ರಾರಂಭವಾಗಲಿದೆ. ದೇವಾಲಯಗಳ ಬಾಗಿಲು ತೆರೆಯುವ ಬಹುನಿರೀಕ್ಷಿತ ದಿನ ಸಮೀಪಿಸುತ್ತಿದೆ. 2024ರ ಮೇ 10 ರಂದು ಕೇದಾರನಾಥ ದೇವಾಲಯದ ಬಾಗಿಲು ಭಕ್ತರಿಗಾಗಿ ತೆರೆಯಲಿದೆ. ಅದೇ ರೀತಿ ಬದರಿನಾಥ ದೇವಾಲಯದ ಬಾಗಿಲು 2024ರ ಮೇ 12 ರಂದು ತೆರೆಯಲಿದೆ. ನಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ, ಸೇವೆ ಮಾಡಬಹುದಾಗಿದೆ.

ಈ ಪವಿತ್ರ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಪುಣ್ಯವನ್ನು ಪಡೆಯಬೇಕೆಂಬುದು ಹಲವರ ಕನಸಾಗಿರುತ್ತದೆ. ಆದರೆ ಕೇದಾರನಾಥ ಮತ್ತು ಬದರಿನಾಥ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲು ಭಕ್ತರು ಕಡ್ಡಾಯವಾಗಿ ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಬೇಕಾಗಿದೆ. ಭಕ್ತರಿಗೆ ಸುಲಭವಾಗಲೆಂದು ಹೆಸರು ನೋಂದಾಯಿಸಲು ಅಗತ್ಯವಿರುವ ಹಂತ–ಹಂತದ ಮಾರ್ಗದರ್ಶಿ ಇಲ್ಲಿದೆ. ನೀವು ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಯಾತ್ರೆ ಮಾಡಲು ನಿಮ್ಮ ಹೆಸರನ್ನು ಎರಡು ರೀತಿಯಲ್ಲಿ ನೊಂದಣಿ ಮಾಡಬಹುದು. ಭಕ್ತರಿಗಾಗಿ ಆಫ್‌ಲೈನ್‌ ಅಥವಾ ಆನ್‌ಲೈನ್‌ ರೀತಿಯಲ್ಲಿ ನೋಂದಣಿ ಮಾಡುವ ಅವಕಾಶ ಒದಗಿಸಲಾಗಿದೆ.

ಕೇದಾರನಾಥ-ಬದರಿನಾಥ ಯಾತ್ರೆಗೆ ಆನ್‌ಲೈನ್‌ ಮುಖಾಂತರ ಹೀಗೆ ನೋಂದಣಿ ಮಾಡಿಕೊಳ್ಳಿ

1) ಮೊದಲಿಗೆ ಅಧಿಕೃತ ವೆಬ್‌ಸೈಟ್ www.registrationandtouristcare.uk.gov.in ಗೆ ಭೇಟಿ ನೀಡಿ

2) ರಿಜಿಸ್ಟರ್ ಅಥವಾ ಲಾಗ್-ಇನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

3) ಅಲ್ಲಿ ಒಂದು ಫಾರ್ಮ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ

4) ಪರಿಶೀಲನೆ ಪೂರ್ಣಗೊಂಡ ನಂತರ ಮುಂದಿನ ಹಂತಗಳಿಗಾಗಿ ಪುನಃ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ

5) ಲಾಗಿನ್ ಆದ ನಂತರ, ಆಡ್/ಮ್ಯಾನೇಜ್ ಪಿಲಿಗ್ರಿಮ್ಸ್‌ ಅಥವಾ ಟೂರಿಸ್ಟ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

6) ನಿಮ್ಮ ಪ್ರವಾಸದ ಹೆಸರು, ಯಾತ್ರೆಯ ದಿನಾಂಕ, ಯಾತ್ರಿಕರ ಸಂಖ್ಯೆ ಇತ್ಯಾದಿ ಅಗತ್ಯ ವಿವರಗಳನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ

7) ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತಿನ ಪುರಾವೆಗಳನ್ನು ಲಗತ್ತಿಸಿ

8) ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ URN ಅನ್ನು ಎಸ್‌ಎಮ್‌ಎಸ್‌ ಮೂಲಕ ಪಡೆದುಕೊಳ್ಳಬಹುದು

9) ನೋಂದಣಿ ದಾಖಲೆಯನ್ನು ಡೌನ್‌ಲೋಡ್ ಮಾಡಿ ಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ಅನ್ನು ತೆಗೆದುಕೊಳ್ಳಿ.

ಕೇದಾರನಾಥ– ಬದರಿನಾಥ ಯಾತ್ರೆಗೆ ಆಫ್‌ಲೈನ್‌ನಲ್ಲಿ ಹೀಗೆ ನೋಂದಣಿ ಮಾಡಿ

1) ನಿಮ್ಮ ಸಮೀಪದ ಕೇದಾರನಾಥ ಮತ್ತು ಬದರಿನಾಥ ಯಾತ್ರಾ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡಿ

2) ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಐಡಿ ಪ್ರೂಫ್‌ ಮತ್ತು ಇತರ ದಾಖಲೆಗಳನ್ನು ಲಗತ್ತಿಸಿ

3) ನಂತರ, ನೋಂದಣಿ ಶುಲ್ಕದೊಂದಿಗೆ ಫಾರ್ಮ್ ಅನ್ನು ಸಲ್ಲಿಸಿ.

4) ನೋಂದಣಿ ದೃಢೀಕರಣದ ಸ್ಲಿಪ್ ಮತ್ತು ಯುಆರ್‌ಎನ್ ಸಂಖ್ಯೆಯನ್ನು ಕೇಳಿ ಪಡೆದುಕೊಳ್ಳಿ

ಕೇದಾರಾನಾಥ, ಬದರಿನಾಥ ಯಾತ್ರೆಗೆ ಭಕ್ತರ ಹೆಸರು ನೋಂದಾವಣಿಯು ಕಡ್ಡಾಯವಾಗಿರುವುದರಿಂದ ನಿಮಗೆ ಅನುಕೂಲವಾದ ರೀತಿಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ.

Whats_app_banner