ನವೆಂಬರ್‌ 27ಕ್ಕೆ ಕಾರ್ತಿಕ ಹುಣ್ಣಿಮೆ ದೀಪೋತ್ಸವ; ಈ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದೇಕೆ, ಪೌರಾಣಿಕ ಹಿನ್ನೆಲೆ ಏನು?
ಕನ್ನಡ ಸುದ್ದಿ  /  ಜೀವನಶೈಲಿ  /  ನವೆಂಬರ್‌ 27ಕ್ಕೆ ಕಾರ್ತಿಕ ಹುಣ್ಣಿಮೆ ದೀಪೋತ್ಸವ; ಈ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದೇಕೆ, ಪೌರಾಣಿಕ ಹಿನ್ನೆಲೆ ಏನು?

ನವೆಂಬರ್‌ 27ಕ್ಕೆ ಕಾರ್ತಿಕ ಹುಣ್ಣಿಮೆ ದೀಪೋತ್ಸವ; ಈ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದೇಕೆ, ಪೌರಾಣಿಕ ಹಿನ್ನೆಲೆ ಏನು?

Kartika Deepotsava 2023: ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವವರು ತಮ್ಮ ಪೂರ್ವಜರ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಕಾರ್ತಿಕ ಮಾಸದಲ್ಲಿ ಬೆಳಗುವ ಸಾಂಪ್ರದಾಯಿಕ ದೀಪಗಳು ಪೂರ್ವಜರ ಆತ್ಮಗಳು ಸ್ವರ್ಗವನ್ನು ತಲುಪುವ ಮಾರ್ಗವನ್ನು ಬೆಳಗಿಸುತ್ತದೆ ಎಂಬ ನಂಬಿಕೆ ಇದೆ.

ಕಾರ್ತಿಕ ದೀಪೋತ್ಸವದ ಮಹತ್ವ , ಹಿನ್ನೆಲೆ
ಕಾರ್ತಿಕ ದೀಪೋತ್ಸವದ ಮಹತ್ವ , ಹಿನ್ನೆಲೆ

Kartika Deepotsava 2023: ಅಮಾವಾಸ್ಯೆ ಕಳೆದು ಇಂದಿನಿಂದ ( ನವೆಂಬರ್‌ 14) ಕಾರ್ತಿಕ ಮಾಸ ಆರಂಭವಾಗಿದೆ. ಹಿಂದೂಗಳಿಗೆ ಕಾರ್ತಿಕ ಮಾಸ ಬಹಳ ಮಹತ್ವದ್ದು ಕಾರ್ತಿಕ ಮಾಸದ ಆಚರಣೆ, ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಈ ಮಾಸದಲ್ಲಿ ಆಚರಿಸುವ ಕಾರ್ತಿಕ ದೀಪೋತ್ಸವ ಬಹಳ ಪವಿತ್ರ ಎನಿಸಿದೆ. ಕಾರ್ತಿಕ ಮಾಸದ ಹುಣ್ಣಿಮೆಯಂದು ದೀಪೋತ್ಸವ ಆಚರಿಸಲಾಗುತ್ತದೆ. ದೇಶದ ನಾನಾ ಭಾಗಗಳಲ್ಲಿ ದೀಪೋತ್ಸವವನ್ನು ವಿಭಿನ್ನ ಹೆಸರುಗಳಿಂದ ಆಚರಿಸಲಾಗುತ್ತದೆ.

ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತದೆ. ಭಕ್ತರು ಹಣತೆಗಳನ್ನು ತಂದು ಭಕ್ತಿಯಿಂದ ದೀಪ ಹಚ್ಚುತ್ತಾರೆ. ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ ದೇವಸ್ಥಾನ ಸೇರಿದಂತೆ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ದೀಪಾರಾಧನೆ ನಡೆಯುತ್ತದೆ. ಹಾಗೇ ಪ್ರತಿ ವರ್ಷವೂ ಬೆಂಗಳೂರಿನ ಇಸ್ಕಾನ್‌ನಲ್ಲಿ ಕೂಡಾ ವಿಶೇಷ ದೀಪೋತ್ಸವ ನಡೆಯುತ್ತದೆ. ಈ ಬಾರಿ ಇಸ್ಕಾನ್‌ನಲ್ಲಿ ಅಕ್ಟೋಬರ್‌ 28 ರಿಂದ ನವೆಂಬರ್‌ 27ವರೆಗೆ ದೀಪೋತ್ಸವ ಮಾಡಲಾಗುವುದು. ಈಗಾಗಲೇ ಇಸ್ಕಾನ್‌ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು ದೀಪೋತ್ಸವಕ್ಕೆ ಭಕ್ತರನ್ನು ಆಹ್ವಾನಿಸಿದೆ. ಭಕ್ತರು ಕೂಡಾ ಈ ವಿಶೇಷ ಸಂದರ್ಭವನ್ನು ಆನಂದಿಸಲು ಕಾಯುತ್ತಿದ್ದಾರೆ.

ಕಾರ್ತಿಕ ಪೌರ್ಣಮಿಯ ಮಹತ್ವ

ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಆಚರಣೆಯನ್ನು ಕೇರಳದಲ್ಲಿ ತ್ರಿಕಾರ್ತಿಕ, ತಮಿಳುನಾಡಿನಲ್ಲಿ ಲಕ್ಷಬ್ಬ, ಕರ್ನಾಟಕದಲ್ಲಿ ಹುಣ್ಣಿಮೆ ದೀಪ, ಕಾಕಡಾರತಿ ಎಂದೂ ಕರೆಯುತ್ತಾರೆ. ತಮಿಳಿಗರಿಗೆ ಇದೊಂದು ಸಾಂಪ್ರದಾಯಿಕ ಹಬ್ಬವಾಗಿದೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದರಿಂದ ಹಿಂದಿನ ಜನ್ಮದ ಪಾಪ ಕರ್ಮಗಳು ನಾಶವಾಗುತ್ತದೆ. ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ದೀಪಗಳು ಶುದ್ಧತೆಯ ಪ್ರತೀಕವೂ ಆಗಿರುವುದರಿಂದ ಮನೆ ಮನದಲ್ಲಿ ನಕಾರಾತ್ಮಕ ಶಕ್ತಿಗಳು ತೊಲಗಿ ಧನಾತ್ಮಕ ಅಂಶಗಳು ನೆಲೆಸುತ್ತದೆ. ದೀಪದ ಜ್ವಾಲೆಗಳ ಬಿಳಿ ಕೆಂಪು ಮತ್ತು ನೀಲಿ ಬಣ್ಣವು ಲಕ್ಷ್ಮಿ , ಸರಸ್ವತಿ ಹಾಗೂ ಪಾರ್ವತಿಯರನ್ನು ಪ್ರತಿನಿಧಿಸುತ್ತದೆ. ಪಶ್ಚಿಮ ದಿಕ್ಕಿಗೆ ದೀಪವನ್ನು ಹಚ್ಚುವುದರಿಂದ ಸಾಲದ ಬಾಧೆ ದೋಷಗಳು ದೂರಾಗುತ್ತದೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವವರು ತಮ್ಮ ಪೂರ್ವಜರ ಆಶೀರ್ವಾದ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಕಾರ್ತಿಕ ಮಾಸದಲ್ಲಿ ಬೆಳಗುವ ಸಾಂಪ್ರದಾಯಿಕ ದೀಪಗಳು ಪೂರ್ವಜರ ಆತ್ಮಗಳು ಸ್ವರ್ಗವನ್ನು ತಲುಪುವ ಮಾರ್ಗವನ್ನು ಬೆಳಗಿಸುತ್ತದೆ ಎಂಬ ನಂಬಿಕೆ ಇದೆ.

ಹಿನ್ನೆಲೆ/ಪೌರಾಣಿಕ ಕಥೆಗಳು

ಶ್ರೀ ರಾಮನ ವಿಜಯದ ಸಂಭ್ರಮ ಆಚರಣೆಯ ಅಂಗವಾಗಿ ಕಾರ್ತಿಕ ಮಾಸದಲ್ಲಿ ಸರಯೂ ನದಿ ತೀರದಲ್ಲಿ ಒಂದು ತಿಂಗಳ ಕಾಲ ದೀಪೋತ್ಸವ ಮಾಡಲಾಗಿತ್ತು. ಅಂದಿನಿಂದಲೂ ಈ ದೀಪೋತ್ಸವ ಆಚರಿಸಲಾಗುತ್ತದೆ ಎಂಬ ಕಥೆ ಇದೆ. ಮಹಾಭಾರತದ 18 ದಿನಗಳು ಕುರುಕ್ಷೇತ್ರ ಯುದ್ಧದಲ್ಲಿ ಪ್ರಾಣ ತೆತ್ತ ಸೈನಿಕರ ಗೌರವಾರ್ಥವಾಗಿ ಜನರು ದೀಪಗಳನ್ನು ಬೆಳಗಿಸಿದರು ಎಂದು ಪುರಾಣ ಹೇಳುತ್ತದೆ. ಆದ್ದರಿಂದ ಈಗಲೂ ಕೂಡಾ ಭಾರತದ ಯೋಧರ ನೆನಪಿಗಾಗಿ ಕಾರ್ತಿಕ ಮಾಸದಲ್ಲಿ ದೀಪ ಹಚ್ಚಿ ಅವರ ತ್ಯಾಗವನ್ನು ನೆನೆಯಲಾಗುತ್ತದೆ.

ಬ್ರಹ್ಮ-ವಿಷ್ಣುವಿನ ಮುಂದೆ ಬೆಳಕಿನ ಜ್ವಾಲೆಯಾಗಿ ಕಾಣಿಸಿಕೊಳ್ಳುವ ಶಿವ

ಕಾರ್ತಿಕ ದೀಪೋತ್ಸವಕ್ಕೆ ಸಂಬಂಧಿಸಿದಂತೆ ಮತ್ತೊಂದು ಪೌರಾಣಿಕ ಕಥೆ ಇದೆ. ಯಾರು ಶ್ರೇಷ್ಠರು ಎಂಬ ವಿಚಾರಕ್ಕೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ವಾದ ವಿವಾದ ಆರಂಭವಾಗುತ್ತದೆ. ಇವರ ಜಗಳ ನೋಡಿ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಇಬ್ಬರ ಜಗಳವನ್ನು ನಿಲ್ಲಿಸಲು ಶಿವನು ಅವರಿಬ್ಬರ ಮಧ್ಯೆ ಕಂಬವಾಗಿ ನಿಲ್ಲುತ್ತಾನೆ. ಈ ಕಂಬದ ಎರಡೂ ತುದಿ ಎಲ್ಲಿದೆ ಹುಡುಕಿ ಬನ್ನಿ ಎಂದು ಹೇಳುತ್ತಾನೆ. ಬ್ರಹ್ಮನು ಹಂಸರೂಪ ತಾಳಿ ಮೇಲ್ಬಾಗಕ್ಕೆ ಹಾರಿದರೆ, ವಿಷ್ಣುವು ವರಾಹ ರೂಪವನ್ನು ತಾಳಿ ಪಾತಾಳದೆಡೆಗೆ ಹೋಗುತ್ತಾನೆ. ಸ್ವಲ್ಪ ದೂರ ಹೋದ ವಿಷ್ಣುವು ಸೋಲು ಒಪ್ಪಿಕೊಂಡು ವಾಪಸ್‌ ಬರುತ್ತಾನೆ. ಆದರೆ ಬ್ರಹ್ಮ, ಕಂಬದ ಮೇಲಿನ ಭಾಗವನ್ನು ಹುಡುಕುವಾಗ ಕೇದಿಗೆ ಹೂ ಸೃಷ್ಟಿಕರ್ತನಿಗೆ ನೆರವಾಗುತ್ತದೆ.

ನಾನು ಈ ಕಂಬದ ತುದಿಯಿಂದಲೇ ಬೀಳುತ್ತಿದ್ದಾಗಿ ಶಿವನ ಬಳಿ ಸುಳ್ಳು ಹೇಳುವಂತೆ ಕೇದಿಗೆ ಹೂವು ಬ್ರಹ್ಮನಿಗೆ ಹೇಳುತ್ತದೆ. ಅದಕ್ಕೆ ಒಪ್ಪಿದ ಬ್ರಹ್ಮನು, ಕಂಬದ ಮೇಲಿನ ಭಾಗವನ್ನು ನಾನು ಕಂಡು ಹಿಡಿದಿದ್ದೇನೆ. ಅದರ ಮೇಲಿಂದಲೇ ಈ ಹೂ ಬೀಳುತ್ತಿದ್ದಕ್ಕೆ ಸಾಕ್ಷಿ ಎನ್ನುತ್ತಾನೆ. ಆದರೆ ಪರಶಿವನಿಗೆ ಬ್ರಹ್ಮನ ಸುಳ್ಳು ಅರಿವಾಗುತ್ತದೆ. ಇಬ್ಬರ ಮೇಲೂ ಕೋಪಗೊಳ್ಳುವ ಶಿವ, ಬ್ರಹ್ಮನನ್ನು ಯಾರೂ ಪೂಜಿಸಬಾರದು ಹಾಗೇ ಕೇದಿಗೆ ಹೂವನ್ನು ಕೂಡಾ ಯಾವ ಪೂಜೆಗೂ ಬಳಸದಂತೆ ಆಗದಿರಲಿ ಎಂದು ಶಾಪವಿಡುತ್ತಾನೆ. ಬಹ್ಮ ಹಾಗೂ ವಿಷ್ಣುವಿನ ಮುಂದೆ ಬೆಳಕಿನ ಜ್ವಾಲೆಯಾಗಿ ಶಿವನು ಕಾಣಿಸಿಕೊಂಡ ಈ ದಿನವನ್ನೇ ಕಾರ್ತಿಕ ಮಹಾದೀಪ ಎಂದು ಕರೆಯಲಾಗುವುದು. ಅದೇ ದಿನ ತಪ್ಪದೆ ಕಾರ್ತಿಕ ದೀಪೋತ್ಸವ ಆಚರಿಸಲಾಗುವುದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

Whats_app_banner