ಕನ್ನಡ ಸುದ್ದಿ  /  ಜೀವನಶೈಲಿ  /  ಸಂತಾನ ದೋಷ, ಹಣಕಾಸು ಎಲ್ಲಾ ಸಮಸ್ಯೆಗಳನ್ನೂ ಕಳೆಯುವ ಶ್ರೀ ಸೋಮೇಶ್ವರ ಸ್ವಾಮಿ; ಬೆಂಗಳೂರಿನ ಐತಿಹಾಸಿಕ ದೇಗುಲವಿದು

ಸಂತಾನ ದೋಷ, ಹಣಕಾಸು ಎಲ್ಲಾ ಸಮಸ್ಯೆಗಳನ್ನೂ ಕಳೆಯುವ ಶ್ರೀ ಸೋಮೇಶ್ವರ ಸ್ವಾಮಿ; ಬೆಂಗಳೂರಿನ ಐತಿಹಾಸಿಕ ದೇಗುಲವಿದು

Karnataka Temples: ಅಮಾವಾಸ್ಯೆಯ ದಿನ ಶಿವನಿಗೆ ರುದ್ರಾಭಿಷೇಕ ಮಾಡಿಸಿ ಬಿಲ್ವಪತ್ರೆಯಿಂದ ಪೂಜೆ ಮಾಡಿದ್ದಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಪಾರಾಗಬಹುದು. ದೀರ್ಘ ಕಾಲದಿಂದ ಕಾಡುವ ರೋಗಗಳಿಂದಲೂ ಮುಕ್ತಿ ಹೊಂದಬಹುದು. ಒಟ್ಟಾರೆ ಈ ದೇವಾಲಯಕ್ಕೆ ಪ್ರವೇಶಿಸಿದ ತಕ್ಷಣವೇ ನಮ್ಮ ದೇಹದಲ್ಲಿ ಮಿಂಚು ಸಂಚರಿಸಿದ ಅನುಭವವಾಗುತ್ತದೆ.

ಬೆಂಗಳೂರು ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ
ಬೆಂಗಳೂರು ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ (PC: Indian Temples Info)

Karnataka Temples: ಬೆಂಗಳೂರಿನಲ್ಲಿ ಚಾರಿತ್ರಿಕ ಹಿನ್ನೆಲೆಯುಳ್ಳ ಅನೇಕ ದೇವಾಲಯಗಳು ಕಂಡುಬರುತ್ತವೆ. ಇದರಲ್ಲಿ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ಪ್ರಮುಖವಾದುದು. ಕರ್ನಾಟಕದ ಬೆಂಗಳೂರಿನ ಪ್ರಾಂತ್ಯ ಹಲಸೂರಿನಲ್ಲಿ ಈ ದೇವಾಲಯ ಕಂಡು ಬರುತ್ತದೆ. ಮೂಲವಾಗಿ ಇದನ್ನು ಚೋಳರ ರಾಜನೊಬ್ಬನು ಕಟ್ಟಿಸಿದನೆಂದು ಹೇಳಲಾಗುತ್ತದೆ. ವಿಜಯನಗರ ಅರಸರ ಕಾಲದಲ್ಲಿ ಇದನ್ನು ಪುನರುಜ್ಜೀವನಗೊಳಿಸಲಾಯಿತು ಎಂಬ ಮಾಹಿತಿ ಇದೆ.

ಟ್ರೆಂಡಿಂಗ್​ ಸುದ್ದಿ

ಕೆಂಪೇಗೌಡರು ನಿರ್ಮಿಸಿದ ದೇವಸ್ಥಾನ

ಅಂದಿನ ಕಾಲದಲ್ಲೂ ಮೂಲ ವಿಗ್ರಹಗಳ ಜೊತೆಗೆ ಹೊಸ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮುಖ್ಯವಾಗಿ ಮೊದಲಿಯಾರ್‌ಗಳು ಈ ದೇವಸ್ಥಾನಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿರುತ್ತಾರೆ. ಇಂದಿಗೂ ಆ ದೇವಾಲಯದಲ್ಲಿ ತಮಿಳಿನ ಸೊಗಡು ಕಂಡುಬರುತ್ತದೆ. ಕೆಲವು ಕಥೆಗಳ ಪ್ರಕಾರ ಬೇಟೆ ಮುಗಿಸಿಕೊಂಡು ಬಂದ ಕೆಂಪೇಗೌಡರು ಒಂದು ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಆಯಾಸದ ಕಾರಣ ಅವರಿಗೆ ನಿದ್ದೆ ಆವರಿಸುತ್ತದೆ. ಆಗ ಕನಸಿನಲ್ಲಿ ಬಂದ ಸೋಮೇಶ್ವರ ಸ್ವಾಮಿಯು ದೇವಾಲಯವನ್ನು ನಿರ್ಮಿಸಲು ಆದೇಶಿಸುತ್ತಾನೆ. ಹಣದ ಬಗ್ಗೆ ಯೋಚನೆಗೆ ಒಳಗಾಗದೆ ಕೆಂಪೇಗೌಡರು, ತಾವು ಮಲಗಿದ್ದ ಜಾಗದಲ್ಲಿಯೇ ಹುದುಗಿದ್ದ ನಿಧಿಯನ್ನು ಬಳಸಿಕೊಳ್ಳಲು ಸೂಚಿಸುತ್ತಾರೆ. ಈ ಕನಸು ಕಾಣುತ್ತಿದ್ದಂತೆ ನಿದ್ರೆಯಿಂದ ಎದ್ದ ಕೆಂಪೇಗೌಡರಿಗೆ ಭಯದ ಜೊತೆ ಅಚ್ಚರಿಯೂ ಉಂಟಾಗುತ್ತದೆ. ದೇವರ ಆದೇಶದಂತೆ ತಮ್ಮ ಜವಾಬ್ದಾರಿಯನ್ನು ತಿಳಿದ ಕೆಂಪೇಗೌಡರು, ಶ್ರದ್ಧಾಭಕ್ತಿಗಳಿಂದ ಈ ದೇವಸ್ಥಾನವನ್ನು ನಿರ್ಮಿಸುತ್ತಾರೆ. ಧಾರ್ಮಿಕ ಗುರುಗಳು ಸೂಚಿಸಿದಂತೆ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತದೆ.

ಕೆಲವರ ಪ್ರಕಾರ ಜಯಪ್ಪಗೌಡ ಎಂಬ ರಾಜನಿಗೆ ಶಿವನು ದೇವಾಲಯ ನಿರ್ಮಿಸಲು ಆದೇಶಿಸಿದನು ಎನ್ನಲಾಗಿದೆ. ಆದರೆ ದೊರೆತಿರುವ ಆಧಾರಗಳ ಪ್ರಕಾರ ಈ ದೇವಾಲಯವನ್ನು ನಿರ್ಮಿಸಿದ್ದು ಕೆಂಪೇಗೌಡರು. ವಿಶೇಷವೆಂದರೆ ಈ ದೇವಾಲಯದ ಗರ್ಭಗುಡಿಯು ಚೌಕಾಕಾರವನ್ನು ಹೊಂದಿದೆ. ಇದರಿಂದಾಗಿ ವಾಸ್ತುವಿನ ಪ್ರಕಾರ ಇಲ್ಲಿ ಸ್ಥಾಪಿಸಿರುವ ಶಿವನ ಲಿಂಗಕ್ಕೆ ವಿಶೇಷವಾದ ಶಕ್ತಿ ಇದೆ. ಅನುಭವಿಗಳ ಪ್ರಕಾರ ಆ ದೇವಾಲಯದಲ್ಲಿ ಧನಾತ್ಮಕ ಶಕ್ತಿ ನೆಲೆಸಿದೆ. ಲಿಂಗದಿಂದ ಹೊರಟ ಬೆಳಕಿನ ಕಿರಣವು ಭಕ್ತರಿಗೆ ತಲುಪುತ್ತದೆ ಎಂಬ ನಂಬಿಕೆ ಇದೆ. ಕೆಲವರಿಗೆ ಇದರ ಅನುಭವವೂ ಆಗಿದೆ. ಗರ್ಭಗುಡಿಯ ಮುಂದೆ ಒಂದು ನಿರ್ದಿಷ್ಟ ಜಾಗದ ಮೇಲ್ಭಾಗದಲ್ಲಿ ಮತ್ಸ್ಯ ಯಂತ್ರವಿದೆ. ಆದರೆ ಕೆಳಗೆ ನಿಂತು ದೇವರಲ್ಲಿ ಬೇಡಿಕೊಂಡರೆ ಜೀವನದಲ್ಲಿ ಇರುವ ಎಲ್ಲಾ ಕಷ್ಟ ನಷ್ಟಗಳು ಮರೆಯಾಗುತ್ತವೆ. ಈ ದೇವಾಲಯದಲ್ಲಿ ಬರುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನದಾನ ಮಾಡಿದರೆ ಹಣದ ಕೊರತೆ ಕಡಿಮೆಯಾಗಿ ಸುಖ ಜೀವನ ನಡೆಸಬಹುದು.

ಸಂತಾನ ದೋಷ ಪರಿಹಾರ

ಪೂರ್ವ ದಿಕ್ಕಿನಲ್ಲಿ ವಿಶಾಲವಾದ ಮತ್ತು ಎತ್ತರವಾದ ಗೋಪುರವಿದೆ. ಈ ಗೋಪುರದ ಮುಂದೆ ದೀರ್ಘ ದಂಡ ನಮಸ್ಕಾರ ಮಾಡಿದಲ್ಲಿ ಸಂತಾನ ದೋಷ ಮರೆಯಾಗುತ್ತದೆ. ಆತ್ಮಸ್ಥೈರ್ಯ ಹೆಚ್ಚಿ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವ ಆಸೆ ಮೂಡುತ್ತದೆ. ಈ ದೇವಾಲಯದ ಪ್ರತಿಯೊಂದು ಭಾಗವನ್ನು ಗಣಿತ ಶಾಸ್ತ್ರವನ್ನುಆಧರಿಸಿ ನಿರ್ಮಿಸಲಾಗಿದೆ. ಇತ್ತೀಚೆಗೆ ಜನಪ್ರಿಯವಾಗಿರುವ ಪಿರಮಿಡ್ ಪರಿಹಾರವೂ ಇಲ್ಲಿ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ಮಕ್ಕಳನ್ನು ಇಲ್ಲಿ ಕರೆದುಕೊಂಡು ಬಂದು ದೇವರಿಗೆ ಪೂಜೆ ಮಾಡಿಸಿದರೆ ವಿದ್ಯಾಭ್ಯಾಸದಲ್ಲಿನ ತೊಡಕು ನಿವಾರಣೆಯಾಗುತ್ತದೆ.

ಅಮಾವಾಸ್ಯೆಯ ದಿನ ಶಿವನಿಗೆ ರುದ್ರಾಭಿಷೇಕ ಮಾಡಿಸಿ ಬಿಲ್ವಪತ್ರೆಯಿಂದ ಪೂಜೆ ಮಾಡಿದ್ದಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಪಾರಾಗಬಹುದು. ದೀರ್ಘ ಕಾಲದಿಂದ ಕಾಡುವ ರೋಗಗಳಿಂದಲೂ ಮುಕ್ತಿ ಹೊಂದಬಹುದು. ಒಟ್ಟಾರೆ ಈ ದೇವಾಲಯಕ್ಕೆ ಪ್ರವೇಶಿಸಿದ ತಕ್ಷಣವೇ ನಮ್ಮ ದೇಹದಲ್ಲಿ ಮಿಂಚು ಸಂಚರಿಸಿದ ಅನುಭವವಾಗುತ್ತದೆ. ಈ ದೇವಾಲಯದಲ್ಲಿ ಒಟ್ಟು 48 ಸ್ತಂಭಗಳಿವೆ. ಉತ್ತರ ದಿಕ್ಕಿನಲ್ಲಿ ನವಗ್ರಹಗಳು ಇರುವ ಕಾರಣ ಸೂರ್ಯದೇವನ ಅನುಗ್ರಹ ಉಂಟಾಗುತ್ತದೆ. ಈ ದೇವಾಲಯದಲ್ಲಿ ನವಗ್ರಹಗಳಿಗೆ ಅಭಿಷೇಕ ಮಾಡಿಸಿದಲ್ಲಿ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳ ದೋಷದಿಂದ ಪಾರಾಗಬಹುದು ಎಂಬ ನಂಬಿಕೆ ಇದೆ.

ಕೈಲಾಸ ಪರ್ವತವನ್ನು ಎತ್ತಿರುವ ರಾವಣ, ಮಹಿಷಾಸುರನನ್ನು ಸಂಹಾರ ಮಾಡುತ್ತಿರುವ ದುರ್ಗಾ ಮಾತೆ, ಸಪ್ತ ಋಷಿಗಳು ಮತ್ತು ಗಿರಿಜಾ ಕಲ್ಯಾಣವನ್ನು ಪ್ರತಿಬಿಂಬಿಸುವ ಚಿತ್ರ ಶಿಲ್ಪಗಳು ಗಮನ ಸೆಳೆಯುತ್ತದೆ. ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ಕಲ್ಯಾಣಿಯನ್ನು ಕೂಡಾ ಇಲ್ಲಿ ನೋಡಬಹುದು.