ಅನುದಿನ ಅಧ್ಯಾತ್ಮ: ನಾನು ನೀನು, ಅದು ಇದು ಎಲ್ಲವೂ ರುದ್ರನೇ ಆಗಿರುವಾಗ ಯಾರು ದೊಡ್ಡವರು, ಯಾರು ಸಣ್ಣವರು
ಕನ್ನಡ ಸುದ್ದಿ  /  ಜೀವನಶೈಲಿ  /  ಅನುದಿನ ಅಧ್ಯಾತ್ಮ: ನಾನು ನೀನು, ಅದು ಇದು ಎಲ್ಲವೂ ರುದ್ರನೇ ಆಗಿರುವಾಗ ಯಾರು ದೊಡ್ಡವರು, ಯಾರು ಸಣ್ಣವರು

ಅನುದಿನ ಅಧ್ಯಾತ್ಮ: ನಾನು ನೀನು, ಅದು ಇದು ಎಲ್ಲವೂ ರುದ್ರನೇ ಆಗಿರುವಾಗ ಯಾರು ದೊಡ್ಡವರು, ಯಾರು ಸಣ್ಣವರು

ದೇವರ ಕಣ್ಣಲ್ಲಿ ಎಲ್ಲ ಮನುಷ್ಯರು ಮಾತ್ರವಲ್ಲ, ಸಕಲ ಜೀವರಾಶಿಗಳೂ ಸಮಾನ ಎಂದು ಹೇಳುವುದು ಋಷಿಯ ಉದ್ದೇಶ. ಇಷ್ಟೇ ಅಲ್ಲ, ಇದರ ಜೊತೆಗೆ ಇನ್ನೂ ಹತ್ತಾರು ಪರಿಕಲ್ಪನೆಗಳನ್ನು ಮಂತ್ರದ್ರಷ್ಟ ಋಷಿ ಈ ಸಾಲುಗಳಲ್ಲಿ ಅಡಗಿಸಿಟ್ಟಿದ್ದಾರೆ

ಶೀ ರುದ್ರಪ್ರಶ್ನಃ ಅರ್ಥಾನುಸಂಧಾನ (ಪ್ರಾತಿನಿಧಿಕ ಚಿತ್ರ)
ಶೀ ರುದ್ರಪ್ರಶ್ನಃ ಅರ್ಥಾನುಸಂಧಾನ (ಪ್ರಾತಿನಿಧಿಕ ಚಿತ್ರ)

ದೇವರು ಯಾರು ಮತ್ತು ಎಲ್ಲಿದ್ದಾನೆ? ಅವನು ಹೇಗಿದ್ದಾನೆ? ದೇವರು ಎನ್ನುವ ಶಕ್ತಿ ಪುರುಷ ರೂಪದಲ್ಲಿದೆಯೋ, ಮಹಿಳೆ ಏಕೆ ಆಗಿರಬಾರದು? ಹೀಗೆ ದೇವರು ಎಂಬ ಮೂರಕ್ಷರ ಕಿವಿಗೆ ಬಿದ್ದ ತಕ್ಷಣ ಮನಸ್ಸು ಎತ್ತೆತ್ತಲೋ ಹರಿದಾಡಲು ಆರಂಭಿಸುತ್ತದೆ. ಹತ್ತಾರು ಪ್ರಶ್ನೆಗಳಿಗೆ ನೂರಾರು ಉತ್ತರಗಳು. ಪ್ರಹ್ಲಾದನಂತೆ, ಧ್ರುವನಂತೆ ಮಗುವಿನ ಮನಸ್ಸು ಬಾರದಿದ್ದರೆ ದೇವರನ್ನು ಕಾಣಲಾಗದು. ಕಂಡವರು ಹಲವರು, ಆದರೆ ಕಂಡವರೆಲ್ಲಾ ಮಕ್ಕಳ ಮನಸ್ಸಿನವರು.

ದೇವರು ಎನ್ನುವುದೊಂದು ಅನುಭೂತಿ. ಅನುಭವಿಸಿಯೇ ಅರಿಯಬೇಕು. ಅನುಭವಿಸಿದವರು ಭಾಷೆಗೆ ದಕ್ಕಿದಷ್ಟು, ತಮ್ಮ ತಿಳಿವಿಗೆ ಎಟುಕಿದಷ್ಟು ವಿವರಿಸಿದರೆ ಅದಷ್ಟೇ ನಮಗೆ ದಕ್ಕುವ ಪುಣ್ಯ. ಕನ್ನಡದ ಕೀರ್ತನ ಸಾಹಿತ್ಯ, ವಚನ ಸಾಹಿತ್ಯ, ಸೂಫಿ ಸಂತರ ಪದಗಳು, ತತ್ವಪದಗಳಲ್ಲಿ ಇರುವುದು ಇದೇ. ಅನುಭವಿಸಿದ ಅನುಭವವೇ ಗಾಢವಾಗಿ ಹೆಪ್ಪುಗಟ್ಟಿ ಪದಗಳಾಗಿ ಹರಿದುಬಂದ ಅನುಭಾವದ ಹಾಡುಗಳಾದವು. ವೇದಕಾಲದ ಋಷಿಗಳಿಂದ ಇತ್ತೀಚಿನ ಶರಣರು, ದಾಸರವರೆಗೂ ಹರಿದುಬಂದ ಓತಪ್ರೋತ ಪ್ರವಾಹವಿದು.

ವೇದಗಳಲ್ಲಿ ರುದ್ರಪ್ರಶಃ ಎನ್ನುವ ಒಂದು ಮಹತ್ವದ ಭಾಗವಿದೆ. ಮಂತ್ರದ್ರಷ್ಟಾರನ ಎದುರು ದೇವರು ಪ್ರತ್ಯಕ್ಷನಾದ ಸಂದರ್ಭದಲ್ಲಿ ಭಾವನೆಯ ಕಟ್ಟೆಯೊಡೆದು ಹರಿದ ಮಂತ್ರಗಳವು. ಈಗಿನ ಸಂದರ್ಭಕ್ಕೆ ಒಗ್ಗಿಸಿ ಹೇಳುವುದಾದರೆ ಅದು ದೇವರನ್ನು ಕಂಡ ಋಷಿಯೊಬ್ಬ ದಾಖಲಿಸಿದ 'ಲೈವ್ ರಿಪೋರ್ಟ್'. ತೈತ್ತರೀಯ ಕೃಷ್ಣ ಯಜು ಸಂಹಿತೆಯ ನಾಲ್ಕನೇ ಕಾಂಡ 5ನೇ ಪ್ರಪಾಠದಲ್ಲಿರುವ ಈ ಮಂತ್ರಭಾಗದಲ್ಲಿ ದೇವರ ವಿಶ್ವವ್ಯಾಪಕತ್ವವನ್ನು ನಾನಾ ಉದಾಹರಣೆಗಳೊಂದಿಗೆ ವರ್ಣಿಸಲಾಗಿದೆ. ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ "ರುದ್ರ" ಎಂದು ಎಲ್ಲರೂ ಕರೆಯುವುದು ಇದೇ ಮಂತ್ರಭಾಗವನ್ನೇ.

"ರುದ್ರ"ದ ನಾಲ್ಕನೇ ಅನುವಾಕದಲ್ಲಿ ದೇವರಿಗೆ ನಮಸ್ಕರಿಸುವಾಗ ಋಷಿಯು "ನಮೋ ಮಹದ್ಭಃ, ಕ್ಷುಲ್ಲಕೇಭ್ಯಶ್ಚ" ಎಂದು ಹೇಳಿದ್ದಾರೆ. ಇದರ ನಂತರ ಮತ್ತೆ ಆರನೇ ಅನುವಾಕದಲ್ಲಿ ಇದೇ ಪರಿಕಲ್ಪನೆಯನ್ನು ಮತ್ತೊಮ್ಮೆ ಉದ್ಗರಿಸಿ, "ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ" ಎಂದು ಹೇಳಿದ್ದಾರೆ. ದೇವರು ಹೀಗಿದ್ದಾನೆ, ಹೀಗೆಯೇ ಇರುವನು ಎಂದು ಸಾರಿಹೇಳುವ ಋಷಿ ಎರಡೆರೆಡು ಸಲ ಹೇಳಿದ್ದು ಒಂದೇ ಅರ್ಥ ಹೊಮ್ಮಿಸುವ ಮಾತುಗಳನ್ನು. ಯಾವುದೇ ಮಾತನ್ನು ಪದೇಪದೆ ಹೇಳಿದರೆ ಅದರ ಮಹತ್ವ ಹೆಚ್ಚು ಎಂದೇ ಅರ್ಥವಲ್ಲವೇ?

ಈ ಮಹತ್ತು, ಕ್ಷುಲ್ಲಕ, ಜೇಷ್ಠ, ಕನಿಷ್ಠ ಎನ್ನುವ ಸಂಸ್ಕೃತ ಪದಗಳನ್ನು ಸರಳವಾಗಿ ಕನ್ನಡಕ್ಕೆ ಅನುವಾದಿಸಿದರೆ, "ದೊಡ್ಡವರು ಮತ್ತು ಸಣ್ಣವರು" ಎಂದಷ್ಟೇ ಆಗುತ್ತದೆ. ಇದು ಬಂದಿರುವ ಸಂದರ್ಭವನ್ನೂ ಅನುಸರಿಸಿ ಅರ್ಥ ವಿವರಿಸುವುದಾದರೆ "ದೊಡ್ಡವರು ಸಣ್ಣವರಿಗೆ ನಮಸ್ಕಾರ" ಎಂದು ಮನದಟ್ಟಾಗುತ್ತದೆ.

ಮಂತ್ರದ್ರಷ್ಟ ಋಷಿ ಈಶ್ವರ (ದೇವರನ್ನು) “ಹೀಗಿದ್ದಾನೆ” ಎಂದು ವರ್ಣಿಸುವ ಜೊತೆಜೊತೆಗೆ ಏಕಕಾಲಕ್ಕೆ ಅವನ ಸ್ವಭಾವವನ್ನೂ ಜಗತ್ತಿಗೆ ಮನಗಾಣಿಸುವ ಪ್ರಯತ್ನಿಸುತ್ತಿರುವಂತೆ ಭಾಸವಾಗುತ್ತದೆ. ದೇವರ ಕಣ್ಣಲ್ಲಿ ಎಲ್ಲ ಮನುಷ್ಯರು ಮಾತ್ರವಲ್ಲ, ಸಕಲ ಜೀವರಾಶಿಗಳೂ ಸಮಾನ ಎಂದು ಹೇಳುವುದು ಋಷಿಯ ಉದ್ದೇಶ. ಇಷ್ಟೇ ಅಲ್ಲ, ಇದರ ಜೊತೆಗೆ ಇನ್ನೂ ಹತ್ತಾರು ಪರಿಕಲ್ಪನೆಗಳನ್ನು ಮಂತ್ರದ್ರಷ್ಟ ಋಷಿ ಈ ಸಾಲುಗಳಲ್ಲಿ ಅಡಗಿಸಿಟ್ಟಿದ್ದಾರೆ. ಮೇಲು-ಕೀಳು, ಗಂಡು-ಹೆಣ್ಣು, ಮನುಷ್ಯ-ಪ್ರಾಣಿ ಎಂಬ ಭೇದಗಳಿಗೆ ಪರಮಾತ್ಮನ ಜಗತ್ತಿನ ಅರ್ಥವೇ ಇಲ್ಲ ಎಂದು "ರುದ್ರ" ಸಾರಿ ಹೇಳುತ್ತದೆ. "ರುದ್ರಪ್ರಶ್ನಃ" ಪ್ರತಿಪಾದಿಸುವ ಮತ್ತಷ್ಟು ವಿಚಾರಗಳನ್ನು ನಾಳೆ ನೋಡೋಣ. (ಮುಂದುವರಿಯುವುದು)

ಬರಹ: ವೈಶಂಪಾಯನ

Whats_app_banner