Ayodhya Ram Mandir: ರಾಮೋತ್ಸವ ವೈಯಕ್ತಿಕ ಆಚರಣೆಯಾಗದು, ಭಾರತೀಯರ ಭಾರತೀಯತೆಯ ಉತ್ಸವ: ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  Ayodhya Ram Mandir: ರಾಮೋತ್ಸವ ವೈಯಕ್ತಿಕ ಆಚರಣೆಯಾಗದು, ಭಾರತೀಯರ ಭಾರತೀಯತೆಯ ಉತ್ಸವ: ರಾಜೀವ ಹೆಗಡೆ ಬರಹ

Ayodhya Ram Mandir: ರಾಮೋತ್ಸವ ವೈಯಕ್ತಿಕ ಆಚರಣೆಯಾಗದು, ಭಾರತೀಯರ ಭಾರತೀಯತೆಯ ಉತ್ಸವ: ರಾಜೀವ ಹೆಗಡೆ ಬರಹ

ದೇವರು-ಧರ್ಮ-ಪೂಜೆ-ಆರಾಧನೆಗಳೆಲ್ಲ ವೈಯಕ್ತಿಕವಾದುದು. ಇದನ್ನು ವೈಯಕ್ತಿಕ ಮಟ್ಟದಲ್ಲಿಯೇ ಉಳಿಸಿಕೊಂಡರೆ ದೇವರು-ಧರ್ಮ ಎಲ್ಲರಿಗೂ ಗೌರವ ಮತ್ತು ಸಮಾಜಕ್ಕೂ ಕ್ಷೇಮ. ರಾಜೀವ ಹೆಗಡೆ ಅವರ ಬರಹ ಓದಿ.

ಜನವರಿ 22ರ ಸೋಮವಾರ ಅಯೋಧ್ಯೆಯ ರಾಮಮಂದಿರಲ್ಲಿ ಪ್ರಾಣ ಪ್ರತಿಷ್ಠಾನೆ ನಡೆಯಲಿದೆ
ಜನವರಿ 22ರ ಸೋಮವಾರ ಅಯೋಧ್ಯೆಯ ರಾಮಮಂದಿರಲ್ಲಿ ಪ್ರಾಣ ಪ್ರತಿಷ್ಠಾನೆ ನಡೆಯಲಿದೆ

ಆಧುನಿಕ ಹಾಗೂ ಪ್ರಾಚೀನ ಭಾರತದ ನಿರ್ಮಾತೃಗಳಲ್ಲಿ ಈ ದೇಶವು ʼರಾಮರಾಜ್ಯʼ ಆಗಿರಬೇಕು ಎನ್ನುವುದು ಕನಸಾಗಿತ್ತು. ಆದರೆ ಸಮಾಜದಲ್ಲಿ ಸಮಾಜವ್ಯಾದಿಗಳು ಹಾಗೂ ಬುದ್ಧಿವ್ಯಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಮರಾಜ್ಯ ಎನ್ನುವುದಕ್ಕೆ ಕೋಮುವಾದದ ಬಣ್ಣ ಹಚ್ಚಿದರು. ನಮ್ಮ ಆಧುನಿಕ ಭಾರತದ ಕೆಲ ಪ್ರಿಂಟ್‌ ಮಶೀನ್‌ಗಳು ನಮ್ಮ ಆಚರಣೆ, ನಂಬಿಕೆಗಳಿಗೆಲ್ಲ ಒಂದೊಂದೇ ಲೇಬಲ್‌ ಹಚ್ಚಿಕೊಂಡು ಬಂದವು. ಇದೇ ಅವತಾರದ ಮುಂದಿನ ರೂಪವಾಗಿ ಶ್ರೀರಾಮ ಮಂದಿರವನ್ನು ಕೆಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೆ ವಾಸ್ತವದಲ್ಲಿ ಇಂದು ಭಾರತದಲ್ಲಿ ನಡೆಯುತ್ತಿರುವುದು ಯಾವುದೋ ಒಂದು ಧರ್ಮ ಅಥವಾ ರಾಮನ ಉತ್ಸವವಲ್ಲ. ಇದು ಭಾರತೀಯತೆಯ ಉತ್ಸವ. ಭಾರತವನ್ನು ರಾಮ, ಕೃಷ್ಣ, ವಿಶ್ವನಾಥನಿಲ್ಲದೇ ಉಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ ನಾವಿಷ್ಟು ವರ್ಷಗಳ ಕಾಲ ಈ ವಿಚಾರವನ್ನು ಬಹಿರಂಗವಾಗಿ ಹೇಳಿದರೆ ʼಕೋಮುವಾದʼದ ಹಣೆಪಟ್ಟಿ ಕಟ್ಟಿಕೊಂಡು ಬದುಕಬೇಕಾಗುತ್ತಿತ್ತು. ಇಂದು ಭಾರತ ಬದಲಾಗುತ್ತಿದೆ.

ರಾಮ, ಮಂದಿರ, ನಮ್ಮ ನಂಬಿಕೆಗಳನ್ನು ನಾವು ಪ್ರಚುರಪಡಿಸಲು ಹೊರಟಾಗಲೆಲ್ಲ ಒಂದಿಷ್ಟು ಬಿಟ್ಟಿ ಬೋಧನೆ ಆರಂಭವಾಗುತ್ತದೆ. ಈಗ ಹೊಸದಾಗಿ, ‘ದೇವರು-ಧರ್ಮ-ಪೂಜೆ-ಆರಾಧನೆಗಳೆಲ್ಲ ವೈಯಕ್ತಿಕವಾದುದು. ಇದನ್ನು ವೈಯಕ್ತಿಕ ಮಟ್ಟದಲ್ಲಿಯೇ ಉಳಿಸಿಕೊಂಡರೆ ದೇವರು-ಧರ್ಮ ಎಲ್ಲರಿಗೂ ಗೌರವ ಮತ್ತು ಸಮಾಜಕ್ಕೂ ಕ್ಷೇಮ. ಇದು ಎಲ್ಲ ಧರ್ಮಾನುಯಾಯಿಗಳಿಗೂ ಅನ್ವಯಿಸುತ್ತದೆ’ ಎನ್ನುವುದು ಸೇರಿಕೊಂಡಿದೆ.

ಇವರ ಕುಚೋದ್ಯಗಳೇ ಅರ್ಥವಾಗುವುದಿಲ್ಲ. ನಾವು ಆರಾಧನೆಗೆ ಕುಳಿತಾಗಲೆಲ್ಲ ಸಮಸ್ಯೆ ಸೃಷ್ಟಿಸಿ, ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಏಕೆ ಮಾಡುತ್ತೀರಿ. ದೇವರು-ಧರ್ಮ ವೈಯಕ್ತಿಕವಾಗಿ ಇಟ್ಟುಕೊಳ್ಳಬೇಕು ಎನ್ನುವವರು ಸರ್ಕಾರಿ ಪ್ರಾಯೋಜಕತ್ವದಲ್ಲಿ ಯಾತ್ರೆಗೆ ಹಣ ನೀಡುವುದೇಕೆ? ಕೂಟದಲ್ಲಿ ಭಾಗಿಯಾಗಿ ಬಾಡೂಟ ಮಾಡಿ ಬರುವುದೇಕೆ? ನಮಗೂ ನಮ್ಮ ರಾಮನನ್ನು ಆರಾಧಿಸುವ ಹಕ್ಕನ್ನು ಸಂವಿಧಾನ ನೀಡಿದೆ. ರಾಮ-ಕೃಷ್ಣ-ವಿಶ್ವನಾಥ ಬಂದಾಗ ಮಾತ್ರ ವೈಯಕ್ತಿಕ ಆರಾಧನೆ ನೆನಪಾಗುವುದು ಏಕೆ? ಆರಾಧನೆಯ ನಿರ್ಧಾರ ವೈಯಕ್ತಿಕ ಆಗಿರಬಹುದು, ಆದರೆ ಆಚರಣೆಯಲ್ಲ ಎನ್ನುವುದು ನೆನಪಿರಲಿ.

ರಾಮರಾಜ್ಯ ಎಂದರೇನು?

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಶತಮಾನಗಳ ಬಳಿಕ ಹಸನ್ಮುಖಿ ರಾಮನ ವಿಗ್ರಹ ಅಲ್ಲಿ ರಾರಾಜಿಸುತ್ತಿದೆ. ಶತಮಾನಗಳ ಬಳಿಕ ಇಡೀ ದೇಶವೇ ಭಾರತೀಯತೆಯನ್ನು ವಿಜ್ರಂಭಿಸುತ್ತಿದೆ. ಈ ಸಂದರ್ಭದಲ್ಲಿ ನೈಜ ರಾಮ ಭಕ್ತರು ತಮ್ಮ ಖುಷಿಯನ್ನಷ್ಟೇ ಹಂಚಿಕೊಳ್ಳುತ್ತಿದ್ದಾರೆ. ಆದರೆ ಕೆಲವು ವಿಘ್ನ ಸಂತೋಷಿಗಳು ಖುಷಿಗೆ ತಣ್ಣಿರು ಎರಚುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ರಾಮನ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಅವಕಾಶವಿತ್ತು. ಜಾತಿ, ಕುಲ ಬೇಧವಿಲ್ಲದೇ ತನ್ನ ಜನರನ್ನು ರಾಮ ನೋಡಿಕೊಂಡು ಬಂದಿರುವುದೇ ರಾಮರಾಜ್ಯ.

ನಮ್ಮ ಕನಸು ಕೂಡ ಅದೇನೆ. ನಮ್ಮಲ್ಲೂ ಅಂತಹುದೇ ರಾಮರಾಜ್ಯ ಹುಟ್ಟಲಿ. ನಮ್ಮ ಭಾವನೆ, ನಂಬಿಕೆಗೂ ಗೌರವಿಸುವ ಸೌಜನ್ಯ ಬೆಳೆಸಿಕೊಳ್ಳಿ. ಸತ್ಯವೇನೆಂದರೆ ಈ ದೇಶ ಹಾಗೂ ಇಲ್ಲಿಯ ಇತಿಹಾಸವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀರಾಮ ಮಂದಿರದ ಐತಿಹಾಸಿಕ ಕ್ಷಣವನ್ನು ಖುಷಿಯಿಂದ ತುಂಬಿಕೊಳ್ಳುತ್ತಾನೆ. ಎಲ್ಲರೂ ರಾಮ ಜಪ ಮಾಡಬೇಕಿಲ್ಲ. ಪ್ರತಿಯೊಂದು ದೇವರನ್ನು ಜಪಿಸುವರಿಗೆ ಗೌರವಿಸುವುದೇ ಭಾರತೀಯತೆ, ರಾಮನ ಗುಣ. ಕೆಲವರು ಒಣ ಪ್ರತಿಷ್ಠೆಗಾಗಿ ವೈಯಕ್ತಿಕವಾಗಿ ಸಂಭ್ರಮಿಸಬಹುದು, ಸಂಭ್ರಮಿಸದೆಯೂ ಇರಬಹುದು. ಆದರೆ ಬಹುತೇಕರು ಹಬ್ಬ ಮಾಡಿ ರಾಮ ನವಮಿಯಂತೆ ಸಂಭ್ರಮಿಸುತ್ತಾರೆ‌ ಅಥವಾ ಸಂಭ್ರಮವನ್ನು ಗೌರವಿಸುತ್ತಾರೆ. ನಾವೆಲ್ಲ ಒಂದೇ ಎನ್ನುತ್ತಾರೆ...

ರಾಮ-ಕೃಷ್ಣ-ವಿಶ್ವನಾಥನ ವಿಚಾರದಲ್ಲಿ ಜಾತ್ಯತೀತತೆಯ ಭಾಷಣ ಬೇಡ

ಸತ್ಯವಾದ ರಾಮನ ಧರ್ಮದ ಅನುಯಾಯಿಗಳು ಎಂದಿಗೂ ನೈಜ ಜಾತ್ಯತೀತತೆಯನ್ನು ಪಾಲಿಸಿಕೊಂಡು ಹೋಗುತ್ತಾರೆ. ಹೀಗಾಗಿ ರಾಮ-ಕೃಷ್ಣ-ವಿಶ್ವನಾಥನ ವಿಚಾರ ಬಂದಾಗ ಮಾತ್ರ ನಮಗೆ ಜಾತ್ಯತೀತತೆಯ ಭಾಷಣ ಬೇಡ. ಹಾಗೆಯೇ ರಾಮನ ಧರ್ಮದಲ್ಲಿ ಜಾತಿ ಬೇಧವಿದೆ ಎಂದು ಆಡಿಕೊಳ್ಳುವ ಅಗತ್ಯವೂ ಇಲ್ಲ. ವೈರುಧ್ಯ, ಅಸಮಾನತೆ ಇರದ ಪ್ರದೇಶ ಹಾಗೂ ಧರ್ಮವು ಈ ಜಗತ್ತಿನಲ್ಲಿಲ್ಲ. ಏಕೆಂದರೆ ಇದು ಮಾನವನ ಹುಳುಕು ಗುಣವೇ ಹೊರತು, ಧರ್ಮದ್ದಲ್ಲ. ಆಯಾ ಕಾಲದಲ್ಲಿ ಧರ್ಮವನ್ನು ಬೋಧಿಸುವವರು ಮಾಡಿರುವ ಎಡವಟ್ಟುಗಳಷ್ಟೇ. ನನ್ನ ರಾಮನ ಧರ್ಮದ ವಿಶೇಷತೆ ಏನೆಂದರೆ ನಾವು ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುತ್ತೇವೆ.

ಹಾಗೆಯೇ ದೇವರನ್ನು ನಂಬದ ನಾಸ್ತಿಕನನ್ನು ನಮ್ಮವನು ಎನ್ನುತ್ತೇವೆ. ಹೆಸರಿನಲ್ಲಿ ರಾಮನ ಹೆಸರು ಇಟ್ಟುಕೊಂಡು ರಾಮ ಭಕ್ತರನ್ನು ಹೀಯಾಳಿಸಿದರೂ ಅವರನ್ನೂ ನಮ್ಮವರೆನ್ನುತ್ತೇವೆ. ರಾಮ ಸೇರಿ ನನ್ನ ಧರ್ಮದ ಪ್ರತಿಯೊಂದು ದೇವರನ್ನು ಆರಾಧಿಸುವವನ್ನು ನಾವು ಗೌರವಿಸುತ್ತೇವೆ. ನಮ್ಮ ದೇವರನ್ನು ನಂಬದವರು ರಾಕ್ಷಸರು ಎಂದು ಯಾವುದೇ ಹಂತದಲ್ಲೂ ಬೋಧಿಸುವುದಿಲ್ಲ. ಇದುವೇ ರಾಮನ ಧರ್ಮದ ವಿಶೇಷತೆ ಹಾಗೂ ರಾಮರಾಜ್ಯದ ಕಲ್ಪನೆ. ಆದರೆ ರಾಮ ರಾಜ್ಯದಲ್ಲಿ ಎಂದಿಗೂ ಒಂದು ಧರ್ಮದ ಆರಾಧನೆಯನ್ನು ಹೀಯಾಳಿಸಿಕೊಂಡು, ಇನ್ನೊಬ್ಬರನ್ನು ಸ್ವಾಗತಿಸುವುದಿಲ್ಲ. ಗಾಂಧೀಜಿ ಕಂಡ ರಾಮರಾಜ್ಯದ ಕನಸಿನಲ್ಲೂ, ಪ್ರತಿಯೊಬ್ಬರ ಆಸ್ಥೆಯನ್ನು ಗೌರವಿಸಬೇಕು ಎಂದೇ ಹೇಳಲಾಗಿದೆ.

ಉತ್ಸವಕ್ಕೆ ಹುಳಿ ಹಿಂಡಿ ರಾವಣನಾಗುವ ಕೆಲಸ ಬೇಡ

ನನ್ನ ರಾಮನ ಆರಾಧನೆಯನ್ನು ನಾನು ಹಾಗೂ ನಮ್ಮವರು ಖುಷಿಯಿಂದ ಮಾಡಲು ಬಿಡಿ. ನಾವು ಸಂಘ ಜೀವಿಗಳು. ನಾವು ಹಬ್ಬ, ಉತ್ಸವವನ್ನು ವೈಯಕ್ತಿಕವಾಗಿ ಮಾಡುವುದಿಲ್ಲ. ಎಲ್ಲರೊಂದಿಗೆ ಖುಷಿ ಹಂಚಿಕೊಂಡು ಬಾಳುವುದೇ ರಾಮರಾಜ್ಯದ ನೈಜತೆ. ನಮ್ಮ ಉತ್ಸವಕ್ಕೆ ಹುಳಿ ಹಿಂಡಿ ರಾವಣನಾಗುವ ಕೆಲಸ ಮಾಡಬೇಡಿ.

ಅಂದ್ಹಾಗೆ ರಾಮ ಒಂದು ಧರ್ಮದ ಪ್ರತೀಕವಲ್ಲ. ರಾಮನನ್ನು ಕಲ್ಪಿಸಿಕೊಳ್ಳದೇ ಭಾರತೀಯ ನಾಗರಿಕತೆಯನ್ನು ಅಂದಾಜಿಸಲಾಗುವುದಿಲ್ಲ. ಭಾರತದ ಸಂಸ್ಕೃತಿ, ಇತಿಹಾಸ, ಪುರಾಣ, ಕಥೆ, ರಾಜಕೀಯ, ಆಡಳಿತ ಪ್ರತಿ ಹಂತದಲ್ಲೂ ರಾಮ ರಾರಾಜಿಸುತ್ತಾ ವಿರಾಜಮಾನನಾಗಿದ್ದಾನೆ. ಆದರೆ ಇಷ್ಟು ವರ್ಷ ರಾಮ, ಕೃಷ್ಣನ ಭಕ್ತರು ಎಂದು ಬಹಿರಂಗವಾಗಿ ಹೇಳಿಕೊಂಡರೆ ಕೋಮುವಾದಿಗಳಾಗುತ್ತೇವೆ ಎನ್ನುವ ಅಪನಂಬಿಕೆಯಲ್ಲಿದ್ದೆವು. ಜಗತ್ತಿನ ಪ್ರತಿಯೊಂದು ದೇಶದ ರಾಜಕಾರಣಿ, ಅಲ್ಲಿಯ ವ್ಯವಸ್ಥೆ ತನ್ನ ದೇಶ ನಂಬುವ ಧರ್ಮವನ್ನು ವಿಜೃಂಭಿಸುತ್ತದೆ. ನಾವೇಕೆ ಅಯೋಗ್ಯರ ಮಾತಿಗೆ ಮರುಳಾಗಿ ಮತಿಹೀನರಾಗಬೇಕು. ನಮ್ಮ ದೇಶದ ಆತ್ಮವಿರುವುದೇ ದೇವರು ಎನ್ನುವ ಅದ್ಭುತ ನಂಬಿಕೆಯಲ್ಲಿ. ನಮ್ಮ ಪಾಲಿಗೆ ಕರ್ಮಭೂಮಿ ಹಾಗೂ ಧರ್ಮಭೂಮಿ ಎರಡೂ ಇದೇ ರಾಮನ ಭವ್ಯ ಭಾರತ. ನಾವು ಬೇರೆ ದೇಶಕ್ಕೆ ಹೋಗಿ ಇದನ್ನು ಸಂಭ್ರಮಿಸಲಾಗುವುದಿಲ್ಲ.

ಒಂದಂತೂ ಸತ್ಯ, ನಮ್ಮ ರಾಮ-ಕೃಷ್ಣ-ವಿಶ್ವನಾಥನ ಧರ್ಮದ ಅನುಯಾಯಿಗಳು ಪಾಲಿಸುತ್ತಿರುವುದೆಲ್ಲ ಸರಿಯಾಗಿದೆ ಎಂದಲ್ಲ. ಆದರೆ ನಮ್ಮ ಧರ್ಮ ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಎಂದಿಗೂ ಸಿದ್ಧವಿದೆ. 'ಇದಂ ಇತ್ತಂʼ ಎಂದು ಬೇಲಿ ಹಾಕಿಕೊಳ್ಳುವ ಗುಣವನ್ನು ರಾಮ ಹೇಳಿರುವ ಧರ್ಮ ಹೊಂದಿಲ್ಲ.

ಕೊನೆಯದಾಗಿ: ವೈಯಕ್ತಿಕ ಆಚರಣೆಯ ಬಿಟ್ಟಿ ಬೋಧನೆಯ ಜತೆಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಬೇಕೆ ವಿನಃ ಮಂದಿರಕ್ಕಲ್ಲ ಎನ್ನುವ ರೀತಿಯ ಚಿತ್ರಗಳು ಕೂಡ ಓಡಾಡುತ್ತಿವೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕವಾದರೂ ಗುಣಮಟ್ಟದ ಉಚಿತ ಶಿಕ್ಷಣ, ಉಚಿತ ಆಸ್ಪತ್ರೆ ದೊರೆಯಲಿಲ್ಲ. ಇನ್ನು ನಮ್ಮ ರಾಮನ ರಾಜ್ಯದಲ್ಲಿ ಅದು ದೊರೆಯಬಹುದು, ಕಾದು ನೋಡಿ. ನಾವು ಇಷ್ಟು ವರ್ಷ ಕಾದಿದ್ದೇವೆ, ನೀವು ಕಾಯುವ ತಾಳ್ಮೆ, ಸಹಿಷ್ಣುತೆ ಬೆಳೆಸಿಕೊಳ್ಳಿ. ರಾಮನ ಹೃದಯ ವೈಶಾಲ್ಯತೆ, ತ್ಯಾಗವನ್ನು ರೂಢಿಸಿಕೊಳ್ಳಿ. ವನವಾಸಕ್ಕೆ ಹೋಗಿ ನಿಮ್ಮ ಮನಸ್ಸಿನೊಳಗಿನ ರಾವಣನ್ನು ವಧೆ ಮಾಡಿ ಬನ್ನಿ. ಬದಲಾಗಿ ಬಂದರೆ ರಾವಣನನ್ನು ರಾಮ ಒಪ್ಪಿಕೊಳ್ಳುತ್ತಾನೆ. ಅದುವೇ ರಾಮನ ಧರ್ಮದ ವಿಶೇಷತೆ. ರಾಮನು ಧರ್ಮದ ಸಂಕೇತವಲ್ಲ, ಭಾರತೀಯತೆಯ ಪ್ರತಿರೂಪ. ರಾಮನ ಜೀವನಕಥನದಲ್ಲಿ ಭಾರತೀಯತೆಯಿದೆ. ಅಂದ್ಹಾಗೆ ನಮ್ಮ ರಾಮ, ಕೃಷ್ಣ, ವಿಶ್ವನಾಥ ಮಂದಿರವನ್ನೂ ಕಟ್ಟಿಸಿಕೊಳ್ಳುತ್ತಾರೆ. ಜತೆ-ಜತೆಗೆ ಶಾಲೆಯನ್ನೂ ಕಟ್ಟಿಸುತ್ತಾರೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

Whats_app_banner