ಕನ್ನಡ ಸುದ್ದಿ  /  ಜೀವನಶೈಲಿ  /  Rama Navami 2024: ಶ್ರೀರಾಮ ನವಮಿಗೆ ಮನೆ ಅಲಂಕಾರ ಹೇಗಿರಬೇಕು ಅಂತ ಯೋಚಿಸ್ತಾ ಇದೀರಾ; ಸರಳವಾಗಿ ಮನೆಯ ಅಂದ ಹೆಚ್ಚಿಸಲು ಇಲ್ಲಿದೆ ಐಡಿಯಾ

Rama Navami 2024: ಶ್ರೀರಾಮ ನವಮಿಗೆ ಮನೆ ಅಲಂಕಾರ ಹೇಗಿರಬೇಕು ಅಂತ ಯೋಚಿಸ್ತಾ ಇದೀರಾ; ಸರಳವಾಗಿ ಮನೆಯ ಅಂದ ಹೆಚ್ಚಿಸಲು ಇಲ್ಲಿದೆ ಐಡಿಯಾ

ಶ್ರೀರಾಮನ ಜನ್ಮದಿನವನ್ನು ಶ್ರೀರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಶ್ರೀರಾಮನ ಅನುಗ್ರಹ ಪಡೆಯುವ ಸಲುವಾಗಿ ಭಕ್ತರು ಮನೆ ಮನಗಳನ್ನು ವಿಶೇಷವಾಗಿ ಸಜ್ಜುಗೊಳಿಸುತ್ತಾರೆ. ಅದರಲ್ಲೂ ಮನೆ, ದೇವರಮನೆಗಳ ಅಲಂಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ರಾಮ ನವಮಿಯಂದು ಸರಳವಾಗಿ ಸುಂದರವಾಗಿ ಮನೆಯನ್ನು ಹೇಗೆ ಅಲಂಕರಿಸಬಹುದು ಎಂಬುದಕ್ಕೆ ಇಲ್ಲಿದೆ ಐಡಿಯಾ.

ಶ್ರೀರಾಮ ನವಮಿಗೆ ಹೀಗಿರಲಿ ಮನೆ ಅಲಂಕಾರ
ಶ್ರೀರಾಮ ನವಮಿಗೆ ಹೀಗಿರಲಿ ಮನೆ ಅಲಂಕಾರ

ಪಂಚಾಂಗದ ಪ್ರಕಾರ ಶ್ರೀರಾಮನು ಚೈತ್ರ ಮಾಸ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಅಭಿಜೀತ ಮುಹೂರ್ತದಲ್ಲಿ ಜನಿಸಿದನು. ಮಹಾವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನು ಜನಿಸಿದ ಈ ದಿನವನ್ನು ದೇಶದಾದ್ಯಂತ ಸಡಗರ, ಸಂಭ್ರಮದಿಂದ ಶ್ರೀರಾಮ ನವಮಿ ಎಂಬುದಾಗಿ ಆಚರಣೆ ಮಾಡುತ್ತಾರೆ. ರಾಮನವಮಿ ಚೈತ್ರ ಮಾಸದ ಒಂಭತ್ತನೇ ದಿನ ಅಂದರೆ ಹೊಸ ವರ್ಷದ ಮೊದಲ ಹಬ್ಬ.

ಟ್ರೆಂಡಿಂಗ್​ ಸುದ್ದಿ

ಈ ದಿನ ಮನೆಯೊಳಗೆ ಪವಿತ್ರ ಮತ್ತು ಮಂಗಳಕರ ವಾತಾವರಣವನ್ನು ಸೃಷ್ಟಿಸಲು ಭಕ್ತರು ತಮ್ಮ ಮನೆಗಳನ್ನು ಹೂವು, ಮಾವಿನ ತಳಿರು-ತೋರಣಗಳಿಂದ ಮಾತ್ರವಲ್ಲದೆ ಸುಂದರವಾದ ರಂಗೋಲಿಗಳಿಂದ ಅಲಂಕರಿಸುತ್ತಾರೆ. ಆದರೆ ಪ್ರತಿ ವರ್ಷವೂ ಒಂದೇ ರೀತಿಯ ಅಲಂಕಾರವಿದ್ದರೆ ಏನು ಚೆನ್ನ ಅಲ್ವಾ. ಅದಕ್ಕಾಗಿ ಈ ಬಾರಿ ಮನೆಯನ್ನು, ದೇವರ ಕೋಣೆಯನ್ನು ಸರಳವಾಗಿ, ವಿಭಿನ್ನ ರೀತಿಯಲ್ಲಿ ಅಲಂಕರಿಸಿ ನೋಡಿ. ಇದರಿಂದ ಶ್ರೀರಾಮ ನವಮಿಯ ಸಂಭ್ರಮ ದುಪ್ಪಟ್ಟಾಗುವುದರಲ್ಲಿ ಸಂದೇಹವಿಲ್ಲ.

ಶ್ರೀರಾಮ ನವಮಿಯಂದು ಹೀಗಿರಲಿ ಮನೆ ಅಲಂಕಾರ

ಪ್ರವೇಶ ದ್ವಾರದಲ್ಲಿರಲಿ ಹೂವಿನ ತೋರಣ

ಹಬ್ಬವೆಂದ ಮೇಲೆ ಮನೆಯನ್ನು ಹೂವುಗಳಿಂದ ಅಲಂಕರಿಸದಿದ್ದರೆ ಹೇಗೆ ಹೇಳಿ. ಅದರಲ್ಲೂ ಮನೆಯ ಮುಖ್ಯದ್ವಾರವನ್ನು ಮನಕ್ಕೊಪ್ಪುವ ಹೂವುಗಳಿಂದ, ಹೂಮಾಲೆಗಳಿಂದ ಅಲಂಕರಿಸಿದರೆ ಹಬ್ಬ ಕಳೆಕಟ್ಟುತ್ತದೆ. ರಾಮ ನವಮಿ ಹಬ್ಬವಾದ ಕಾರಣ ರಾಮನಿಗೆ ಪ್ರಿಯವಾದ ಹಳದಿ ಇಲ್ಲವೇ ಕಿತ್ತಳೆ ಬಣ್ಣದ ಹೂವಿನ ತೋರಣವನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ಹಳದಿ ಹಾಗೂ ಕಿತ್ತಳೆಯ ಚೆಂಡು ಹೂಗಳನ್ನು ಬಳಸಿಕೊಂಡು ನಿಮ್ಮ ಮನೆಯ ಪ್ರವೇಶದ್ವಾರವನ್ನು ಅಲಂಕರಿಸಿದರೆ, ನೋಡುವ ಕಣ್ಣುಗಳಿಗೆ ಖುಷಿ ನೀಡುವುದರ ಜೊತೆಗೆ ಮನಸ್ಸಿಗೂ ಹಿತವೆನ್ನಿಸುತ್ತದೆ.

ದೇವರಕೋಣೆಯ ಮುಂದಿರಲಿ ಬಣ್ಣ ಬಣ್ಣದ ರಂಗೋಲಿ

ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಅಥವಾ ನಿಮ್ಮ ಪೂಜಾ ಕೋಣೆಯಲ್ಲಿ ವರ್ಣರಂಜಿತ ರಂಗೋಲಿ ಪುಡಿಗಳು ಹಾಗೂ ಹೂವುಗಳನ್ನು ಬಳಸಿ ಮೋಡಿ ಮಾಡುವ ರಂಗೋಲಿ ವಿನ್ಯಾಸವನ್ನು ರಚಿಸಿ. ಮಂಗಳಕರ ಸಂದರ್ಭಗಳಲ್ಲಿ ರಂಗೋಲಿಯಿದ್ದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಧನಾತ್ಮಕ ವಾತಾವರಣೆ ಮನೆ ಮಾಡುತ್ತದೆ ಎಂಬುದು ನಂಬಿಕೆ.

ಹಬ್ಬಕ್ಕಿರಲಿ ಕಣ್ಮನ ಸೆಳೆಯುವ ವಾಲ್ ಹ್ಯಾಂಗಿಂಗ್ಸ್

ನಿಮ್ಮ ಮನೆಯ ಗೋಡೆಗಳು ಖಾಲಿ ಖಾಲಿಯೆಂಬಂತಿವೆಯೇ? ಹಾಗಾದರೆ ಹಬ್ಬದ ವೇಳೆಯಲ್ಲಾದರೂ ಗೋಡೆಗಳಿಗೆ ಹೊಸ ಜೀವ ತುಂಬುವುದಕ್ಕಾಗಿ ನಿಮ್ಮ ಅಭಿರುಚಿಯ ಚಿತ್ತಾರಗಳನ್ನು ಹಾಕಿ ನೋಡಿ. ಅದರಲ್ಲೂ ನೀವೇ ಮನೆಯಲ್ಲೇ ತಯಾರಿಸಿದ ಕುಸುರಿಗಳನ್ನೋ, ಚಿತ್ತಾರಗಳನ್ನೋ ಹಾಕಿದರಂತೂ ಆ ಖುಷಿ ದುಪ್ಪಟ್ಟಾಗುತ್ತದೆ. ಇದು ಸಾಧ್ಯವಲ್ಲವೆಂದರೆ ಆನ್‌ಲೈನ್‌ನಲ್ಲಿ ಗೋಡೆಯ ಅಂದವನ್ನು ಹೆಚ್ಚಿಸುವ ಅನೇಕ ಅಲಂಕಾರಿಕ ವಸ್ತುಗಳು ಲಭ್ಯವಿದ್ದು, ಅವುಗಳನ್ನೊಮ್ಮೆ ಪ್ರಯತ್ನಿಸಿ ನೋಡಿ.

ದೀಪಗಳು ಮತ್ತು ಲೈಟ್‌ಗಳಿಂದ ಮನೆಯ ಅಲಂಕಾರ ಮಾಡಿ

ಈಗಂತೂ ದೀಪಗಳು ಹಾಗೂ ಅಲಂಕಾರಿಕ ಲೈಟ್‌ಗಳನ್ನು ಬರಿಯ ದೀಪಾವಳಿಗೆ ಮಾತ್ರವಲ್ಲದೆ ಇತರ ಹಬ್ಬಗಳಲ್ಲೂ ಬಳಕೆ ಮಾಡಲಾಗುತ್ತದೆ. ಸದ್ಯ ರಾಮ ನವಮಿಯ ಸಂಭ್ರಮದಲ್ಲೂ ದೀಪಗಳಿಂದ, ಅಲಂಕಾರಿಕ ಲೈಟ್‌ಗಳಿಂದ ನಿಮ್ಮ ಮನೆಯ ಪ್ರವೇಶದ್ವಾರಗಳು, ದೇವರಕೋಣೆ, ಮೆಟ್ಟಿಲುಗಳು, ಒಳಾಂಗಣಗಳು, ವಾಸದ ಕೋಣೆಗಳನ್ನು ಸೃಜನಾತ್ಮಕವಾಗಿ ವಿನ್ಯಾಸಗೊಳಿಸಿದ ದೀಪಗಳೊಂದಿಗೆ ಅಲಂಕರಿಸುವ ಮೂಲಕ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಿ. ಅವು ಮನೆ ಮನಗಳನ್ನು ಬೆಳಗುತ್ತವೆ. ಅಂಧಕಾರವನ್ನು ದೂರ ಮಾಡುತ್ತವೆ ಮತ್ತು ಈ ರಾಮನವಮಿ ಅಲಂಕಾರವನ್ನು ಇನ್ನಷ್ಟು ವಿಶೇಷಗೊಳಿಸುತ್ತವೆ.

ದೇವರಕೋಣೆಯಲ್ಲಿ ಭಕ್ತಿಯ ವಾತಾವರಣ ನಿರ್ಮಿಸಿ

ಮನೆಯಲ್ಲಿ ಅತ್ಯಂತ ಪವಿತ್ರವಾದ ಜಾಗವೆಂದರೆ ಅದು ದೇವರಮನೆ. ಈ ರಾಮನವಮಿ ಹಬ್ಬದಂದು ನಿಮ್ಮ ಮನೆಯ ದೇವರಕೋಣೆಯನ್ನು ಕಣ್ಮನ ಸೆಳೆಯುವಂತೆ ಮಾಡಿ. ಅದಕ್ಕಾಗಿ ಹೂವುಗಳು, ದೀಪಗಳು ಮತ್ತು ಧೂಪದ್ರವ್ಯಗಳನ್ನು ಬಳಕೆ ಮಾಡಿ. ಇದರಿಂದ ಮನೆಯ ತುಂಬ ಶಾಂತಿ ಮತ್ತು ಭಕ್ತಿಯ ವಾತಾವರಣ ಮನೆ ಮಾಡುತ್ತದೆ. ದೇವತೆಗಳಿಗೆ ಹಣ್ಣುಗಳು, ಸಿಹಿ ತಿನಿಸು ಮತ್ತು ನೈವೇದ್ಯವನ್ನು ಅರ್ಪಿಸಿ.

ಹಬ್ಬದ ಆಚರಣೆಗಾಗಿ ದೇವರನ್ನು ಪ್ರತಿಷ್ಠಾಪನೆ ಮಾಡಿ

ಶ್ರೀರಾಮನ ಜನ್ಮದಿನವನ್ನು ಸಂತೋಷದಿಂದ ಆಚರಿಸಲು ದೇವರಕೋಣೆಯ ಒಳಗೆ ಅಥವಾ ನಿಮ್ಮ ಮನೆಯ ದೈವಿಕ ಜಾಗದಲ್ಲಿ ಎತ್ತರದ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳಿ. ಅದರ ಮೇಲೆ ವಿಗ್ರಹಗಳನ್ನು ಸ್ವಚ್ಛಗೊಳಿಸಿ ಪ್ರತಿಷ್ಠಾಪನೆ ಮಾಡಿ. ಹೊಸ ಬಟ್ಟೆಗಳು ಮತ್ತು ಹೂವುಗಳಿಂದ ವಿಗ್ರಹಗಳನ್ನು ಅಲಂಕರಿಸಿ. ದೇವರ ಮುಂದೆ ದೀಪಗಳನ್ನು ಬೆಳಗಿಸಿ. ದೇವರ ವಿಗ್ರಹಗಳ ಮುಂದೆ ಧೂಪ, ಅಗರಬತ್ತಿ ಇಲ್ಲವೇ ಅರೋಮಾಥೆರಪಿ ತೈಲಗಳನ್ನು ಬಳಸುವ ಮೂಲಕ ಮನಸ್ಸಿಗೆ ಹಿತಕರ ಭಾವನೆ ಮೂಡುತ್ತದೆ. ಅಲ್ಲದೆ ಬೆಳ್ಳಿ ಅಥವಾ ಹಿತ್ತಾಳೆಯ ಬಟ್ಟಲುಗಳಲ್ಲಿ ನೈವೇದ್ಯಕ್ಕಿರುವ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.

ರೋಮಾಂಚಕ ಅಲಂಕಾರಗಳು

ರಾಮನವಮಿ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಹೂವಿನ ಅಲಂಕಾರಗಳನ್ನು ಮಾಡುವುದಷ್ಟೇ ಅಲ್ಲದೆ ಹೊಸತನ, ಹೊಸಬಗೆಯ ಅಲಂಕಾರಗಳನ್ನು ಇಂದಿನ ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ಬಣ್ಣ ಬಣ್ಣದ ಪರದೆಗಳು, ಟಸೆಲ್ ತಂತಿಗಳು ಹೀಗೆ ಅನೇಕ ರೀತಿಯ ಅಲಂಕಾರಿಕ ವಸ್ತುಗಳನ್ನು ಬಳಸುವ ಮೂಲಕ ಹೂವುಗಳಿಲ್ಲದಿದ್ದರೂ ನಿಮ್ಮ ಹಬ್ಬವನ್ನು ಆಚರಿಸಿಕೊಳ್ಳಬಹುದು.

ಒಟ್ಟಿನಲ್ಲಿ ರಾಮನವಮಿಯ ಸಂಭ್ರಮ ಇನ್ನೂ ಹೆಚ್ಚಾಗಬೇಕೆಂದರೆ ಮನೆಯನ್ನು, ದೇವರಕೋಣೆಯನ್ನು ಹೀಗೆ ವಿಶೇಷವಾಗಿ ಅಲಂಕರಿಸಿ ನೋಡಿ. ಇದರಿಂದ ರಾಮ ನವಮಿ ಹಬ್ಬದ ಖುಷಿ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ.