ಭಗವಂತನ ಸಾಕ್ಷಾತ್ ಸನ್ನಿಧಾನ ಸಾಲಿಗ್ರಾಮ: ಅಂದ್ಹಾಗೆ ಸಾಲಿಗ್ರಾಮಗಳಲ್ಲಿ ಎಷ್ಟು ವಿಧ? ಇಲ್ಲಿದೆ ವಿವರ
Spiritual News: ಸಾಲಿಗ್ರಾಮವು ಭಗವಾನ್ ವಿಷ್ಣುವಿನ ಪ್ರತಿರೂಪವಾಗಿದೆ. ಇದನ್ನು ಪೂಜಿಸುವುದರಿಂದ ಆರಾಧನೆಯ ಫಲ ದೊರೆಯುತ್ತದೆ. ಕಾಶಿ ಕ್ಷೇತ್ರದಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವುದಕ್ಕಿಂತ ಸಾಲಿಗ್ರಾಮ ತೀರ್ಥ ಪ್ರೋಕ್ಷಣೆಯಾದರೆ ನೂರು ಪಟ್ಟು ಹೆಚ್ಚು ಫಲ ಎಂಬ ನಂಬಿಕೆ ಇದೆ.
Spiritual News: ಸಾಲಿಗ್ರಾಮವು ಭಗವಾನ್ ವಿಷ್ಣುವಿನ ಶಿಲಾ ಸಂಕೇತ. ಇದು ನಾರಾಯಣನ ಸಾಕ್ಷಾತ್ ಸನ್ನಿಧಾನ. ದೇವಸ್ಥಾನದಲ್ಲಿ ಹಾಗೂ ದ್ವೈತರು, ವಿಶಿಷ್ಟಾದ್ವೈತರು ಮತ್ತು ಅದ್ವೈತ್ವ ತತ್ವವನ್ನು ಪ್ರತಿಪಾದಿಸುವವರ ಮನೆಯಲ್ಲಿ ಸಾಲಿಗ್ರಾಮ ಇಲ್ಲದೆ ಪೂಜೆ ನಡೆಯುವುದಿಲ್ಲ. ಸಾಲಿಗ್ರಾಮಗಳು ವಿಷ್ಣುವಿನ ರೂಪ ಎಂದು ತ್ರಿಮತಾಚಾರ್ಯರು ತಮ್ಮ ಭಾಷ್ಯದಲ್ಲಿ ವಿವರಿಸಿದ್ದಾರೆ. ಸಾಲಿಗ್ರಾಮಗಳ ವೈಶಿಷ್ಟ್ಯ ಮತ್ತು ಮಹತ್ವ ಕುರಿತು ಖ್ಯಾತ ಆಧ್ಯಾತ್ಮ ಚಿಂತಕ ಹಾಗೂ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಈ ರೀತಿ ವಿವರಿಸಿದ್ದಾರೆ.
ಸಾಮಾನ್ಯವಾಗಿ ವಿಗ್ರಹಗಳಿಗೆ ಪ್ರತಿದಿನ ಪೂಜೆಯ ಸಮಯದಲ್ಲಿ ಷೋಡಶೋಪಚಾರಗಳನ್ನು ಮಾಡಬೇಕು. ಆದರೆ ಸಾಲಿಗ್ರಾಮಗಳಿಗೆ ಪೂಜೆಯ ಸಮಯದಲ್ಲಿ ಆವಾಹನಾದಿ ಉಪಚಾರಗಳ ಅಗತ್ಯವಿಲ್ಲ. ತುಳಸಿ, ಶಂಖ ಮತ್ತು ಸಾಲಿಗ್ರಾಮವನ್ನು ಎಲ್ಲಾ ಹಿಂದೂಗಳು ಪೂಜಿಸುತ್ತಾರೆ. ಸಾಲಿಗ್ರಾಮವು ಸಾಮಾನ್ಯವಾಗಿ ನುಣುಪಾದ ಕಪ್ಪು ಕಲ್ಲಿನ ರೂಪದಲ್ಲಿರುತ್ತದೆ.
ಸಾಲಿಗ್ರಾಮದ ವೈಶಿಷ್ಟ್ಯ
ಸಾಲಿಗ್ರಾಮವು ಮನೆಯಲ್ಲಿದ್ದರೆ ಯಾವುದೇ ದುಷ್ಟ ಶಕ್ತಿ ಪ್ರವೇಶಿಸುವುದಿಲ್ಲ. ಏಲಕ್ಕಿ, ಲವಂಗ, ಪಚ್ಚ ಕರ್ಪೂರ ಮೊದಲಾದ ಸುಗಂಧ ದ್ರವ್ಯಗಳನ್ನು ಬೆರೆಸಿದ ನೀರನ್ನು ಶಂಖದ ಮೂಲಕ ಸಾಲಿಗ್ರಾಮಗಳಿಗೆ ಪುರುಷಸೂಕ್ತವನ್ನು ಪಠಿಸಿ ಅಭಿಷೇಕ ಮಾಡಿದ ತೀರ್ಥವು ಸರ್ವಶಕ್ತವಾಗಿದೆ. ಅಂತಹ ತೀರ್ಥವನ್ನು ಭಕ್ತಿಯಿಂದ ಸೇವಿಸುವುದರಿಂದ ಅಕಾಲಿಕ ಮರಣ, ಎಲ್ಲಾ ರೋಗಗಳು ಮತ್ತು ಅನಿಷ್ಟಗಳು ನಿವಾರಣೆಯಾಗುತ್ತದೆ. ಸಾಲಿಗ್ರಾಮಗಳಿರುವ ಮನೆ ದೊಡ್ಡ ದೇಗುಲಕ್ಕೆ ಸಮಾನ. ಸಾಲಿಗ್ರಾಮವನ್ನು ನೋಡುವುದು, ಸ್ಪರ್ಶಿಸುವುದು ಮತ್ತು ಪೂಜಿಸುವುದು ಅಂತ್ಯವಿಲ್ಲದ ಪುಣ್ಯವನ್ನು ತರುತ್ತದೆ. ಅತಲ, ವಿತಲ, ರಸಾತಲ, ಪಾತಾಳ ಸೇರಿ 14 ಲೋಕಗಳಲ್ಲಿ ಈ ಸಾಲಿಗ್ರಾಮಕ್ಕೆ ಸರಿಸಾಟಿಯಾದ ಶಿಲೆ ಮತ್ತೊಂದಿಲ್ಲ. ಕಾರ್ತಿಕ ಮಾಸದಲ್ಲಿ ಸಾಲಿಗ್ರಾಮದ ಮೇಲೆ ಸ್ವಸ್ತಿಕ ಮಂಡಲ ಬರೆದರೆ ಅನಂತ ಪುಣ್ಯ ಸಿಗುತ್ತದೆ. ಮನೆಯಲ್ಲಿ ಒಂದು ವರ್ಷ ನಿತ್ಯಾಗ್ನಿ ಹೋಮ ಮಾಡಿದಷ್ಟೇ ಫಲ ದೊರೆಯುತ್ತದೆ.
ಸಾಲಿಗ್ರಾಮ ಹೇಗೆ ಬಂತು
ಹಿಂದೆ ಪ್ರಿಯಂವದಾ ಎಂಬ ಮಹಿಳೆ ಇದ್ದಳು. ಅತ್ಯಂತ ಸುಂದರಿಯೂ ಸದ್ಗುಣಿಯೂ ಆದ ಆಕೆ ಶ್ರೀಮನ್ನಾರಾಯಣನ ಕುರಿತು ತಪಸ್ಸು ಮಾಡಿ, ಮೆಚ್ಚಿಸಿ ಅವನೇ ತನ್ನ ಮಗನಾಗಿ ಹುಟ್ಟಬೇಕೆಂದು ಬಯಸುತ್ತಾಳೆ. ಅವಳ ಆಸೆಯನ್ನು ಪೂರೈಸಿದ ಸ್ವಾಮಿಯು ಅವಳ ಮುಂದಿನ ಜನ್ಮದಲ್ಲಿ ಗಂಡಕಿ ನದಿಯ ರೂಪವನ್ನು ಪಡೆಯುವಂತೆ ಮಾಡಿದನು. ನಂತರ ಆ ನದಿಯಿಂದ ಸಾಲಿಗ್ರಾಮದ ರೂಪದಲ್ಲಿ ವಿಷ್ಣುವು ಹೊರ ಹೊಮ್ಮಿದನು. ಸಾಲಿಗ್ರಾಮವನ್ನು ಭಕ್ತಿಯಿಂದ, ಪರಿಪೂರ್ಣ ನಂಬಿಕೆಯಿಂದ, ಶಾಸ್ತ್ರದ ಪ್ರಕಾರ ಅಭಿಷೇಕ ಮಾಡುವುದು ಕೋಟಿ ಯಜ್ಞಗಳ ಸಾಧನೆಗೆ ಸಮ. ಕೋಟಿಗಟ್ಟಲೆ ಗೋವುಗಳನ್ನು ದಾನ ಮಾಡಿದ ಫಲ ಅವರಿಗೆ ಸಿಗುತ್ತದೆ. ಸಾಲಿಗ್ರಾಮ ಪೂಜೆಯಿಂದ ದೇವರ ಆರಾಧನೆಯ ಪೂರ್ಣ ಫಲ ದೊರೆಯುತ್ತದೆ. ಕಾಶಿ ಕ್ಷೇತ್ರದಲ್ಲಿ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವುದಕ್ಕಿಂತ ಸಾಲಿಗ್ರಾಮದ ತೀರ್ಥದಲ್ಲಿ ಸ್ನಾನ ಮಾಡಿದರೆ ಹೆಚ್ಚು ಪುಣ್ಯ. ಸಾಲಿಗ್ರಾಮ ದಾನ ಮಾಡಿದರೆ ಪುಣ್ಯಕ್ಷೇತ್ರದಲ್ಲಿ ಮಾಡಿದ ದಾನಕ್ಕಿಂತ ನೂರು ಪಟ್ಟು ಹೆಚ್ಚು ಫಲ ದೊರೆಯುತ್ತದೆ.
ಸಾಲಿಗ್ರಾಮ ಹುಟ್ಟಿದ ಮತ್ತೊಂದು ಕಥೆ
ಮತ್ತೊಂದು ಕಥೆಯ ಪ್ರಕಾರ ಒಂದು ಕಾಲದಲ್ಲಿ ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳು ಅತ್ಯಂತ ಪಾಪ ಕಾರ್ಯಗಳನ್ನು ಮಾಡುತ್ತಿದ್ದವು. ಅದನ್ನು ನೋಡಿದ ಬ್ರಹ್ಮದೇವನು ಇದಕ್ಕೆ ಕಾರಣ ತನ್ನ ಸೃಷ್ಟಿಕ್ರಿಯೆಯೇ ಅಥವಾ ತಾನು ಮಾಡಿದ ಸೃಷ್ಟಿಯಲ್ಲಿ ದೋಷವಿದೆಯೇ ಎಂದು ದುಃಖಿಸುತ್ತಿರುವಾಗ, ಅವನಿಂದ ಎರಡು ಹನಿ ಕಣ್ಣೀರು ಬಿದ್ದಿತು. ಆ ಕಣ್ಣೀರ ಹನಿಗಳೇ ಗಂಡಕಿ ನದಿಯಾಗಿ ಮಾರ್ಪಟ್ಟಿತು ಎಂಬ ಕಥೆ ಇದೆ. ಅದರಿಂದ ಬಂದದ್ದೇ ಸಾಲಿಗ್ರಾಮ ಎಂಬ ಕಥೆ ಇದೆ.
ಕೆಲ ಸಾಲಿಗ್ರಾಮಗಳನ್ನು ಮನೆಯಲ್ಲಿಟ್ಟು ಪೂಜಿಸಲು ಹಲವರು ಹಿಂಜರಿಯುತ್ತಾರೆ. ಆದ್ದರಿಂದ ಸಾಲಿಗ್ರಾಮವನ್ನು ಪೂಜಿಸಬೇಕು ಎಂದುಕೊಂಡಿರುವವರು ಅದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಪಂಡಿತರ ಬಳಿ ಕೇಳಿ ತಿಳಿದುಕೊಳ್ಳಬೇಕು.
ಸಾಲಿಗ್ರಾಮ ಚಕ್ರಗಳ ಹೆಸರುಗಳು
ಚಕ್ರಗಳು ಹೆಸರು
1 ಸುದರ್ಶನ
2 ಲಕ್ಷ್ಮೀನಾರಾಯಣ
3 ಅಚ್ಯುತ
4 ಜನಾರ್ದನ
5 ವಾಸುದೇವ
6 ಪ್ರದ್ಯುಮ್ನ
7 ಸಂಕರ್ಷಣ
8 ಪುರುಷೋತ್ತಮ
9 ನವ ಯಟ್ಟಂ
10 ದಶಾವತಾರ
11 ಅನಿರುದ್ಧ
12 ದ್ವಾದಶಾತ್ಮ
ಹಾಗೂ12 ಕ್ಕಿಂತ ಹೆಚ್ಚು ಚಕ್ರಗಳು ಇದ್ದರೆ ಅನಂತಮೂರ್ತಿ ಎಂದು ಕರೆಯಲಾಗುತ್ತದೆ.
ಬಣ್ಣಗಳು
ಸಾಲಿಗ್ರಾಮವು ಬಿಳಿಯಾಗಿದ್ದರೆ ಅದು ಎಲ್ಲಾ ಪಾಪಗಳನ್ನು ತೊಡೆದುಹಾಕುತ್ತದೆ. ಹಳದಿ ಬಣ್ಣವು ಸಂತಾನ ಫಲ ನೀಡುವುದು. ನೀಲಿ ಬಣ್ಣದಲ್ಲಿದ್ದರೆ, ಅದು ನಿಮಗೆ ಎಲ್ಲಾ ಸಂಪತ್ತನ್ನು ನೀಡುತ್ತದೆ. ಕೆಂಪು ಬಣ್ಣದ ಸಾಲಿಗ್ರಾಮ ಮನೆಯಲ್ಲಿದ್ದು ನೀವು ಅದಕ್ಕೆ ನಿಯಮಾನುಸಾರ ಪೂಜೆ ಮಾಡದಿದ್ದಲ್ಲಿ ಕಷ್ಟಗಳು ಎದುರಾಗುತ್ತವೆ. ಸಾಲಿಗ್ರಾಮವು ಕಪ್ಪು ಬಣ್ಣದಲ್ಲಿದ್ದು ಅದರ ಚಕ್ರವು ಮಧ್ಯದಲ್ಲಿ ಸ್ವಲ್ಪ ಊದಿಕೊಂಡು ರೇಖಾತ್ಮಕವಾಗಿದ್ದರೆ ಅದನ್ನು ಆದಿನಾರಾಯಣ ಸಾಲಿಗ್ರಾಮ ಎಂದು ಕರೆಯಲಾಗುತ್ತದೆ. ಶ್ವೇತವರ್ಣವಿರುವ ರಂಧ್ರದ ಬದಿಯಲ್ಲಿರುವ ಎರಡು ಚಕ್ರಗಳು ಒಂದಕ್ಕೊಂದು ವಿಲೀನಗೊಂಡಿದ್ದರೆ ಅದನ್ನು ವಾಸುದೇವ ಸಾಲಿಗ್ರಾಮ ಎಂದು ಕರೆಯಲಾಗುತ್ತದೆ ಈ ಸಾಲಿಗ್ರಾಮವು ಅಧ್ಯಾತ್ಮ ಚೈತನ್ಯವನ್ನು ವೃದ್ಧಿಸುತ್ತದೆ.
ಸಾಲಿಗ್ರಾಮಕ್ಕೆ ಅಭಿಷೇಕ ಹೇಗೆ?
ಸಾಲಿಗ್ರಾಮವನ್ನು ಹಸುವಿನ ಹಾಲು ಅಥವಾ ಪಂಚಾಮೃತದಿಂದ ಸ್ವಚ್ಛಗೊಳಿಸಬೇಕು. ಪರ್ವ ಕಾಲದಲ್ಲಿ, ಸಂಕ್ರಮಣ ಕಾಲದಲ್ಲಿ, ಗ್ರಹಣ ಸಮಯದಲ್ಲಿ ಸಾಲಿಗ್ರಾಮಗಳ ಪ್ರಕಾರ 1008 ಬಾರಿ ಜಪ ಮಾಡಿದರೆ ಆ ಸಾಲಿಗ್ರಾಮದ ಶಕ್ತಿ ದ್ವಿಗುಣಗೊಳ್ಳುತ್ತದೆ. ಷೋಡಶೋಪಚಾರ ಪೂಜಾ ವಿಧಾನದ ಮೂಲಕ ಸಾಲಿಗ್ರಾಮವನ್ನು ಪೂಜಿಸುವ ಭಕ್ತರು ವೈಕುಂಠದಲ್ಲಿ ವಾಸಿಸುವ ಭಾಗ್ಯವನ್ನು ಪಡೆಯುತ್ತಾರೆ. ಕನಿಷ್ಠ ಪಕ್ಷ ಸಾಲಿಗ್ರಾಮಕ್ಕೆ ಭಕ್ತಿಯಿಂದ ನಮಿಸಿ ಎಂದಿನಂತೆ ಪೂಜಿಸಿದರೆ ಮರುಜನ್ಮವಿಲ್ಲದೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಸಾಲಿಗ್ರಾಮವನ್ನು ಸ್ಮರಿಸಿ, ದರ್ಶನ ಮಾಡಿ ನಮಸ್ಕರಿಸಿದರೆ ಸಕಲ ಪಾಪಗಳೂ ನಿವಾರಣೆಯಾಗುತ್ತವೆ.