ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿಷ್ಣುವಿಗೆ ಪ್ರಿಯವಾದ ತುಳಸಿ ಮಾಲೆ ಧರಿಸುವ ಮುನ್ನ ಈ ನಿಯಮಗಳನ್ನು ತಿಳಿದುಕೊಳ್ಳಿ

ವಿಷ್ಣುವಿಗೆ ಪ್ರಿಯವಾದ ತುಳಸಿ ಮಾಲೆ ಧರಿಸುವ ಮುನ್ನ ಈ ನಿಯಮಗಳನ್ನು ತಿಳಿದುಕೊಳ್ಳಿ

Tulasi mala: ತುಳಸಿಗೆ ಎಷ್ಟು ಮಹತ್ವವಿದೆಯೋ, ಆಧ್ಯಾತ್ಮಿಕವಾಗಿ ತುಳಸಿ ಮಾಲೆಗೂ ಅಷ್ಟೇ ಮಹತ್ವವಿದೆ. ತುಳಸಿ ಮಾಲಾ ಧಾರಣೆಗೆ ಅದರದ್ದೇ ಆದ ಕೆಲವೊಂದು ನಿಯಮಗಳಿವೆ. ಹಾಗಿದ್ದರೆ, ಇದರ ಪ್ರಯೋಜನಗಳೇನು? ಧರಿಸುವಾಗ ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ನೋಡೋಣ.

ವಿಷ್ಣುವಿಗೆ ಪ್ರಿಯವಾದ ತುಳಸಿ ಮಾಲೆ ಧರಿಸುವ ಮುನ್ನ ಅನುಸರಿಸಬೇಕಾದ ನಿಯಮಗಳಿವು
ವಿಷ್ಣುವಿಗೆ ಪ್ರಿಯವಾದ ತುಳಸಿ ಮಾಲೆ ಧರಿಸುವ ಮುನ್ನ ಅನುಸರಿಸಬೇಕಾದ ನಿಯಮಗಳಿವು (pinterest)

ತುಳಸಿಯಲ್ಲಿ ಅಪಾರ ಔಷಧೀಯ ಗುಣಗಳಿದ್ದು, ಆರೋಗ್ಯಕ್ಕೆ ಭಾರಿ ಒಳ್ಳೆಯದು. ಇದೇ ವೇಳೆ ಹಿಂದೂ ಸಂಸ್ಕೃತಿಯಲ್ಲಿ ತುಳಸಿಗೆ ಆಧ್ಯಾತ್ಮಿಕವಾಗಿ ಉನ್ನತ ಮಹತ್ವವಿದೆ. ದೈವಿಕ ಆಚರಣೆಗಳಲ್ಲಿ ಹೆಚ್ಚಾಗಿ ತುಳಸಿಯ ಬಳಕೆ ಆಗುತ್ತಿರುತ್ತದೆ. ಪೂಜೆಗಳಿಗೆ ತುಳಸಿ ಬೇಕೇ ಬೇಕು. ವಿಶೇಷ ಪೂಜೆಗಳಿಗೆ ಯಥೇಚ್ಛವಾಗಿ ತುಳಸಿ ದಳ ಅರ್ಪಿಸಲಾಗುತ್ತದೆ. ಆಧ್ಯಾತ್ಮಿಕವಾಗಿ ಮಹತ್ವ ಹೊಂದಿರುವ ತುಳಸಿ ಮಾಲೆಯನ್ನು ಧರಿಸಿ ಮತ್ತು ಅದರ ಆಚರಣೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ, ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯ. ಧ್ಯಾನ ಮಾಡುವಾಗ ಅಥವಾ ಮಂತ್ರಗಳನ್ನು ಪಠಿಸುವಾಗ ಹಲವರು ಜಪ ಮಾಲೆ, ತುಳಸಿ ಮಾಲೆ, ರುದ್ರಾಕ್ಷಿ ಮಾಲೆಗಳನ್ನು ಬಳಸುತ್ತಾರೆ. ಈ ಮೂರೂ ಮಾಲೆಗಳಿಗೆ ಭಾರಿ ಮಹತ್ವವಿದೆ.

ತುಳಸಿ ಮಾಲೆ ಧರಿಸುವುದರಿಂದ ಆಧ್ಯಾತ್ಮಿಕವಾಗಿ ಹಲವು ಪ್ರಯೋಜನಗಳಿವೆ. ಆತ್ಮ ಮತ್ತು ಪರಮಾತ್ಮನೊಂದಿಗಿನ ಬಂಧ ಗಟ್ಟಿಯಾಗುತ್ತದೆ. ಪರಿಶುದ್ಧತೆಯ ಸಂಕೇತವಾದ ತುಳಸಿ ಮಾಲೆಯನ್ನು ಧರಿಸುವುದು ಆಧ್ಯಾತ್ಮಿಕ ಭಾವನೆ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಭಕ್ತಿಯ ಭಾವವನ್ನು ಹೆಚ್ಚಿಸುವ ಜೊತೆಗೆ ನಂಬಿಕೆ ಮತ್ತು ಆಧ್ಯಾತ್ಮಿಕ ಸಾಮರಸ್ಯ ಉತ್ತೇಜಿಸುತ್ತದೆ.

ತುಳಸಿಯನ್ನು ಶುದ್ಧತೆ, ಭಕ್ತಿ ಮತ್ತು ಮಂಗಳಕರ ಸಂಕೇತ ಎಂದು ಪರಿಗಣಿಸಲಾಗಿದೆ. ದೇವಾಲಯಗಳಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ತುಳಸಿಯನ್ನು ನಿತ್ಯ ಪೂಜಿಸಲಾಗುತ್ತದೆ. ಬಹುತೇಕ ಹಿಂದೂಗಳ ಮನೆಗಳಲ್ಲಿ ಈ ತುಳಸಿ ಗಿಡ ಇರುತ್ತದೆ. ತುಳಸಿ ಕಟ್ಟೆಯನ್ನು ನಿರ್ಮಿಸಿ ನಿತ್ಯ ಪೂಜೆ ಮಾಡುವ ಮನೆಗಳಿವೆ. ತುಳಸಿ ಪೂಜೆಯಿಂದ ಮರಣದ ನಂತರ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ.

ತುಳಸಿ ಮಾಲೆ ಎಂದರೇನು?

ಅನಾದಿಕಾಲದಿಂದಲೂ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ತುಳಸಿ ಎಲೆಗಳಿಂದ ಈ ಜಪಮಾಲೆಯನ್ನು ತಯಾರಿಸಲಾಗುತ್ತದೆ. ಇದು ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿಗೆ ಪ್ರಿಯವಾದದ್ದು. ವಿಶೇಷ ಪರಿಮಳ ಹೊಂದಿರುವ ಎಲೆಗಳು ಹಲವು ಔಷಧಿಗಳಿಗೆ ನಿತ್ಯ ಬಳಕೆಯಾಗುವುದನ್ನು ನೀವು ನೋಡಿರುತ್ತೀರಿ.

ತುಳಸಿ ಮಾಲೆ ಏಕೆ ಧರಿಸಬೇಕು?

ತುಳಸಿ ಇಲ್ಲದೆ ವಿಷ್ಣುವಿನ ಪೂಜೆ ಅಪೂರ್ಣವೆಂದು ಪರಿಗಣಿಸಲಾಗಿದೆ. ತುಳಸಿ ವಿಷ್ಣುವಿಗೆ ತುಂಬಾ ಪ್ರಿಯವಾದ ವಸ್ತು. ಹೀಗಾಗಿ ತುಳಸಿ ಮಾಲೆ ಧರಿಸುವುದರಿಂದ ಆಧ್ಯಾತ್ಮಿಕ ಬೆಳವಣಿಗೆ, ಭಕ್ತಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ. ತುಳಸಿ ಹಾರವನ್ನು ಹೆಚ್ಚಾಗಿ ಕುತ್ತಿಗೆ ಅಥವಾ ಮಣಿಕಟ್ಟಿನಲ್ಲಿ ರಕ್ಷಣಾ ಸೂತ್ರವಾಗಿ ಧರಿಸಲಾಗುತ್ತದೆ. ಇದು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ ಎಂಬ ನಂಬಿಕೆ ಇದೆ.

ಆರೋಗ್ಯ ಪ್ರಯೋಜನ

ತುಳಸಿ ಎಲೆಯಲ್ಲಿ ಅಪಾರ ಔಷಧೀಯ ಗುಣಗಳಿವೆ. ತುಳಸಿ ಮಾಲೆ ಧರಿಸುವುದರಿಂದ ಉಸಿರಾಟದ ತೊಂದರೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳು ಗುಣವಾಗುತ್ತವೆ. ನೈಸರ್ಗಿಕ ರೋಗನಿರೋಧಕ ಶಕ್ತಿ ತುಂಬುತ್ತದೆ. ಇದು ಸ್ವಚ್ಛ ಗಾಳಿ ಹರಡಲು ನೆರವಾಗುತ್ತದೆ. ತುಳಸಿ ಪರಿಸರವನ್ನು ಶುದ್ಧೀಕರಿಸುತ್ತದೆ.

ತುಳಸಿ ಮಾಲೆ ಧರಿಸಿದಾಗ ಅನುಸರಿಸಬೇಕಾದ ನಿಯಮಗಳು

ತುಳಸಿ ಮಾಲೆ ಧರಿಸಿ ಮಂತ್ರ ಪಠಿಸಲಾಗುತ್ತದೆ. ಈ ಮಾಲೆ ಧರಿಸುವಾಗ, ಭಕ್ತರು ವಿಷ್ಣು ಸಹಸ್ರನಾಮವನ್ನು ಪಠಿಸಬಹುದು ಅಥವಾ "ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಹರೇ ಹರೇ" ಎಂಬ ಮಂತ್ರವನ್ನು ಪಠಿಸಬಹುದು. ಇದು ಮಾತ್ರವಲ್ಲದೆ ವಿಷ್ಣುವಿಗೆ ಸಮರ್ಪಿತವಾದ ಯಾವುದೇ ಶ್ಲೋಕಗಳನ್ನು ಜಪಿಸಬಹುದು. ಮುಖ್ಯವಾಗಿ ತುಳಸಿ ಮಾಲೆಯನ್ನು ಧರಿಸಲು ಬಯಸುವವರು ಮದ್ಯ ಮತ್ತು ಮಾಂಸವನ್ನು ತ್ಯಜಿಸಬೇಕು. ಈ ಮಾಲಾಧಾರಣೆ ದುಃಸ್ವಪ್ನ ಮತ್ತು ದುಷ್ಟಶಕ್ತಿಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ.