ಕನ್ನಡ ಸುದ್ದಿ  /  ಜೀವನಶೈಲಿ  /  Shattila Ekadashi: ಷಟ್ತಿಲ ಏಕಾದಶಿಯ ಮಹತ್ವ, ಪೂಜಾಕ್ರಮದ ವಿವರ ಇಲ್ಲಿದೆ; ಈ ದಿನ ಎಳ್ಳು ದಾನ ಮಾಡುವುದರ ಉದ್ದೇಶ ತಿಳಿಯಿರಿ

Shattila Ekadashi: ಷಟ್ತಿಲ ಏಕಾದಶಿಯ ಮಹತ್ವ, ಪೂಜಾಕ್ರಮದ ವಿವರ ಇಲ್ಲಿದೆ; ಈ ದಿನ ಎಳ್ಳು ದಾನ ಮಾಡುವುದರ ಉದ್ದೇಶ ತಿಳಿಯಿರಿ

February 2024 Ekadashi: ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಯು ಬಹಳ ಪ್ರಮುಖವಾಗಿದೆ. ಪ್ರತಿ ಏಕಾದಶಿಗೂ ಅದರದೇ ಆದ ಮಹತ್ವವಿದೆ. ಷಟ್ತಿಲ ಏಕಾದಶಿಯನ್ನು ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ನಾಳೆ (ಫೆ. 6) ಷಟ್ತಿಲ ಏಕಾದಶಿ ಆಚರಣೆ ಇದೆ.

ಷಟ್ತಿಲ ಏಕಾದಶಿ 2024
ಷಟ್ತಿಲ ಏಕಾದಶಿ 2024 (HT File Photo)

ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ಬಹಳಷ್ಟು ಮಹತ್ವ ಕೊಡಲಾಗಿದೆ. ಅಂದು ಮಹಾ ವಿಷ್ಣುವಿನ ಆರಾಧನೆ ಮಾಡುವುದರಿಂದ ಎಲ್ಲವೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಷಟ್ತಿಲ ಏಕಾದಶಿಯನ್ನು ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಇದನ್ನು ಫೆಬ್ರವರಿ 6ರಂದು ಆಚರಿಸಲಾಗುತ್ತಿದೆ. ಈ ದಿನ ಭಕ್ತರು ಭಗವಾನ್‌ ಮಹಾ ವಿಷ್ಣುವನ್ನು ಆರಾಧಿಸಲಾಗುತ್ತದೆ ಮತ್ತು ಎಳ್ಳನ್ನು ಸಮರ್ಪಿಸಲಾಗುತ್ತದೆ. ಈ ದಿನದಂದು ಭಕ್ತರು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ ಷಟ್ತಿಲ ಏಕಾದಶಿಯಂದು ಎಳ್ಳನ್ನು ದಾನ ಮಾಡುವುದರಿಂದ ಸಾವಿರ ವರ್ಷಗಳವರೆಗೆ ಸ್ವರ್ಗಕ್ಕೆ ಪ್ರವೇಶವನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಈ ದಿನ ಎಷ್ಟು ಹೆಚ್ಚು ಎಳ್ಳನ್ನು ದಾನ ಮಾಡುತ್ತಾರೋ ಅಷ್ಟು ಹೆಚ್ಚು ಕಾಲ ಸ್ವರ್ಗದಲ್ಲಿ ಉಳಿಯುತ್ತಾರೆ ಎಂದು ನಂಬಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಷಟ್ತಿಲ ಏಕಾದಶಿ ಎಂದು?

ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಷಟ್ತಿಲ ಏಕಾದಶಿ ಎಂದು ಆಚರಿಸುತ್ತಾರೆ. ಪಂಚಾಂಗದ ಪ್ರಕಾರ ಷಟ್ತಿಲ ಏಕಾದಶಿಯು ಫೆಬ್ರವರಿ 5, 2024 ರ ಸಂಜೆ 5:04 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಅದು ಮರುದಿನ ಫೆಬ್ರವರಿ 6, 2024ರ ಮಧ್ಯಾಹ್ನ 4:07ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯೋದಯವನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 6 ರಂದು ಉಪವಾಸವನ್ನು ಮಾಡಲು ಹೇಳಲಾಗಿದೆ.

ಪೂಜಾ ಮುಹೂರ್ತ ಮತ್ತು ಪಾರಣ ಸಮಯ

ಭಗವಾನ್‌ ವಿಷ್ಣುವನ್ನು ಫೆಬ್ರವರಿ 6 ರಂದು ಬೆಳಿಗ್ಗೆ 9:51 ಮತ್ತು ಮಧ್ಯಾಹ್ನ 1:57 ರ ನಡುವಿನ ಸಮಯದಲ್ಲಿ ಪೂಜಿಸಲಾಗುವುದು. ಏಕಾದಶಿ ಉಪವಾಸ ವ್ರತ ಆಚರಿಸುವವರು ಪಾರಣವನ್ನು ಫೆಬ್ರವರಿ 7 ರಂದು ಮಾಡಬಹುದು. ಆ ದಿನ ಬೆಳಿಗ್ಗೆ 7:06 ರಿಂದ 9:18 ರ ನಡುವೆ ಉಪವಾಸ ಮುಕ್ತಾಯ ಮಾಡಬಹುದು.

ಇದನ್ನೂ ಓದಿ: Ratha Sapthami 2024: ಈ ವರ್ಷದ ರಥ ಸಪ್ತಮಿ ಯಾವಾಗ; ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ತಿಳಿಯಿರಿ

ಷಟ್ತಿಲ ಏಕಾದಶಿ ವ್ರತಾಚರಣೆ ಹೇಗೆ?

* ಅಂದು ಮಹಾ ವಿಷ್ಣುವನ್ನು ಶ್ರೀಗಂಧ, ಪುಷ್ಪ, ಧೂಪ, ದೀಪಗಳಿಂದ ಪೂಜಿಸಬೇಕು.

* ಎಳ್ಳು ಮತ್ತು ಅಕ್ಕಿ ಸೇರಿಸಿ ತಯಾರಿಸಿದ ಖಿಚಡಿಯನ್ನು ವಿಷ್ಣುವಿಗೆ ಅರ್ಪಿಸಲಾಗುತ್ತದೆ.

* ರಾತ್ರಿ ಹವನದ ಸಮಯದಲ್ಲಿ ಓಂ ನಮೋ ಭಗವತೇ ವಾಸುದೇವಾಯ ಸ್ವಾಹಾ ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು.

* ಉಪವಾಸ ವ್ರತ ಮುಕ್ತಾಯಗೊಳಿಸಿದ ನಂತರ ಎಳ್ಳು ಒಳಗೊಂಡಿರುವ ಊಟವನ್ನು ಸೇವಿಸಬೇಕು.

ಷಟ್ತಿಲ ಏಕಾದಶಿಯ ಮಹತ್ವವೇನು?

ಹಿಂದೂ ಧರ್ಮದ ಪ್ರಕಾರ ಷಟ್ತಿಲ ಏಕಾದಶಿ ವ್ರತವನ್ನು ಆಚರಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಷಟ್ತಿಲ ಏಕಾದಶಿಯಂದು ಎಳ್ಳನ್ನು ಉಪವಾಸದಲ್ಲಿ ಸೇರಿಸಿಕೊಳ್ಳುವುದರಿಂದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಇದರಿಂದ ಭಗವಾನ್‌ ಮಹಾ ವಿಷ್ಣುವಿನ ನಿರಂತರ ಅನುಗ್ರವನ್ನು ಪಡೆದುಕೊಳ್ಳಬಹುದಾಗಿದೆ.

ಷಟ್ತಿಲ ಏಕಾದಶಿಯಂದು ಏನು ಮಾಡಬೇಕು?

* ಪುರಾಣಗಳ ಪ್ರಕಾರ ಈ ದಿನದಂದು ಮಾಡುವ ದಾನಕ್ಕೆ ವಿಶೇಷವಾದ ಮಹತ್ವವಿದೆ. ಈ ದಿನದಂದು ಕಪ್ಪು ಎಳ್ಳನ್ನು ದಾನ ಮಾಡಲಾಗುತ್ತದೆ.

* ಈ ದಿನದಂದು ಉಪವಾಸವನ್ನು ಆಚರಿಸುವುದರ ಜೊತೆಗೆ ಹವನವನ್ನು ನಡೆಸುವುದು ಅತ್ಯಂತ ಮಂಗಳಕರ ಎಂದು ಹೇಳಲಾಗಿದೆ. ಇದು ಸುಖ, ಸಂತೋಷ ಮತ್ತು ಸಂಪತ್ತನ್ನು ತರುತ್ತದೆ ಎಂದು ಹೇಳಲಾಗಿದೆ.

* ಪಿತೃ ದೋಷವನ್ನು ತೊಡೆದುಹಾಕಲು ಪೂರ್ವಜರಿಗೆ ಎಳ್ಳನ್ನು ಅರ್ಪಿಸಬೇಕು

ಷಟ್ತಿಲ ಏಕಾದಶಿಯಂದು ಏನು ಮಾಡಬಾರದು?

* ಷಟ್ತಿಲ ಏಕಾದಶಿಯಂದು ತಾಮಸ ಆಹಾರವನ್ನು ಸೇವಿಸಬೇರಾದು. ಶಾಸ್ತ್ರಗಳ ಪ್ರಕಾರ ನೀವು ಈ ದಿನ ಬದನೆಕಾಯಿಯನ್ನು ತಿನ್ನಬಾರದು.

* ಈ ದಿನ ಅನ್ನವನ್ನು ಸೇವಿಸಬಾರದು.

* ಷಟ್ತಿಲ ಏಕಾದಶಿಯಂದು ಯಾವುದೇ ಮರ ಅಥವಾ ಗಿಡವನ್ನು ಮುಟ್ಟಬಾರದು.

* ಈ ದಿನ ಶಾಂತವಾಗಿರಲು ಪ್ರಯತ್ನಿಸ ಬೇಕು. ಕೋಪ ಮಾಡಿಕೊಳ್ಳಬಾರದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com )