ನರಕ ಚತುರ್ದಶಿ ಆಚರಿಸೋದ್ಯಾಕೆ ಗೊತ್ತಾ? ನರಕಾಸುರನ ವಿರುದ್ಧ ಶ್ರೀಕೃಷ್ಣನೊಂದಿಗೆ ಸತ್ಯಭಾಮೆಯ ಹೋರಾಟದ ಕಥೆ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ನರಕ ಚತುರ್ದಶಿ ಆಚರಿಸೋದ್ಯಾಕೆ ಗೊತ್ತಾ? ನರಕಾಸುರನ ವಿರುದ್ಧ ಶ್ರೀಕೃಷ್ಣನೊಂದಿಗೆ ಸತ್ಯಭಾಮೆಯ ಹೋರಾಟದ ಕಥೆ ತಿಳಿಯಿರಿ

ನರಕ ಚತುರ್ದಶಿ ಆಚರಿಸೋದ್ಯಾಕೆ ಗೊತ್ತಾ? ನರಕಾಸುರನ ವಿರುದ್ಧ ಶ್ರೀಕೃಷ್ಣನೊಂದಿಗೆ ಸತ್ಯಭಾಮೆಯ ಹೋರಾಟದ ಕಥೆ ತಿಳಿಯಿರಿ

ದುಷ್ಟ ಹೆಣ್ಣುಬಾಕನಾಗಿದ್ದ ನರಕಾಸುರನ ವಿರುದ್ಧ ಸತ್ಯಭಾಮೆ ಹೋರಾಟ ಮಾಡುತ್ತಾಳೆ. ಕೃಷ್ಣ ತೋಳು ತಟ್ಟುತ್ತಿರುವಾಗಲೇ ನರಕಾಸುರನನ್ನು ಹೆಡೆಮುರಿ ಕಟ್ಟಿದವಳು ಸತ್ಯಭಾಮೆ. ಈಕೆಯ ಹೋರಾಟದ ಕಥೆಯನ್ನು ಇಲ್ಲಿ ವಿವರಿಸಲಾಗಿದೆ. (ಬರಹ: ಚೇತನಾ ತೀರ್ಥಹಳ್ಳಿ)

ನರಕಾಸುರನ ವಿರುದ್ಧ ಸತ್ಯಭಾಮೆಯ ಹೋರಾಟದ ಕಥೆಯನ್ನು ಓದಿ.
ನರಕಾಸುರನ ವಿರುದ್ಧ ಸತ್ಯಭಾಮೆಯ ಹೋರಾಟದ ಕಥೆಯನ್ನು ಓದಿ.

ನರಕಾಸುರ ಒಬ್ಬ ದುಷ್ಟ ಹೆಣ್ಣುಬಾಕ. ಊರು ಕೇರಿಯ ಹೆಣ್ಣುಮಕ್ಕಳನ್ನೆಲ್ಲ ಹೊತ್ತು ತಂದು ನೆಲಮಾಳಿಗೆಯಲ್ಲಿ ಕೂಡಿಹಾಕಿದ್ದ. ಕೃಷ್ಣ, ಗೊಲ್ಲರ ಯುವರಾಜ. ಸಮುದಾಯದ ಗಟ್ಟಿ ಜನ. ನರಕಾಸುರನ ಕಾರನಾಮೆ ತಿಳಿಯುತ್ತಲೇ ತನ್ನ ಹೊಸ ಹೆಂಡತಿ ಸತ್ಯಭಾಮೆಯನ್ನು ಕಟ್ಟಿಕೊಂಡು ಹೊರಟ. ಸತ್ಯಭಾಮೆ ಆಯುಧ ಬಳಕೆ ಬಲ್ಲ, ಕುಸ್ತಿ ಕಲಿತ ಹೆಣ್ಣುಮಗಳು. ಹದಿನಾರು ಸಾವಿರ ಹೆಣ್ಣುಮಕ್ಕಳನ್ನು ಕೂಡಿಹಾಕಿದ್ದ ನರಕಾಸುರನನ್ನು ನೋಡುತ್ತಲೇ ಅವಳ ಪಿತ್ತ ನೆತ್ತಿಗೇರಿತು. ಹಲ್ಲು ಬಿಗಿದು ಕಚ್ಚೆ ಕಟ್ಟಿ ಯುದ್ಧಕ್ಕೆ ನಿಂತಳು. ಕೃಷ್ಣ ಇನ್ನೂ ತೋಳು ತಟ್ಟುತ್ತಿರುವಾಗಲೇ ನರಕಾಸುರನನ್ನು ಹೆಡೆಮುರಿ ಕಟ್ಟಿದಳು.

ಆ ಹದಿನಾರು ಸಾವಿರ ಹೆಣ್ಣುಮಕ್ಕಳ ಗತಿ!?

ಸಮುದಾಯದ ಹಿರಿಯನ ಮಗಳು, ಗೊಲ್ಲರ ಯುವರಾಜನ ಹೆಂಡತಿ, ನರಕಾಸುರನನ್ನು ಕೊಂದ ಸತ್ಯಭಾಮೆ, ಅವನ ಸೆರೆಯಲ್ಲಿದ್ದ ಹೆಣ್ಣುಮಕ್ಕಳಿಗಾಗಿ ಮಿಡಿದಳು. ಸಮಾಜ ಆಗಲೂ ಈಗಲೂ ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ ಮುಳ್ಳು ಬಟ್ಟೆಯ ಮೇಲೆ ಬಿದ್ದರೂ ದೂರುವುದು ಬಟ್ಟೆಯನ್ನೇ. ಈ ರೂಪಕದಲ್ಲಿ ಬಟ್ಟೆ ಅಂದರೆ ಹೆಣ್ಣು ಅಂತ ಹೇಳಬೇಕಿಲ್ಲ ತಾನೆ? ಆ ಹೆಣ್ಣು ಮಕ್ಕಳಿಗೆ ಕಾಲೂರಲು ನೆಲೆ ಇಲ್ಲವಾಗಿತ್ತು. ನರಕನ ನೆಲಮಾಳಿಗೆಯಿಂದ ಹೊರಗೆ ಬಂದರೆ ಪರಪುರುಷನ ಸಂಪರ್ಕದಲ್ಲಿದ್ದವರು ಅನ್ನುವ ತಾತ್ಸಾರದ ನೋಟ ಎದುರಿಸಬೇಕು.

ಅವರಲ್ಲಿ ಎಷ್ಟೋ ಜನ ಮದುವೆಯಾಗಿದ್ದವರು, ಮಕ್ಕಳಿದ್ದವರೂ ಇದ್ದರು. ಎಳೆ ಹುಡುಗಿಯರೂ ಇದ್ದರು. ಪ್ರತಿಭಾವಂತೆಯರಿದ್ದರು. ಏನಿದ್ದರೇನು? ಸುಡುಗಾಡು ಸಮಾಜಕ್ಕೆ ಹೆಣ್ಣೊಂದು ಅನ್ನದ ಮಡಿಕೆ. ಅದನ್ನು ನಾಯಿ ಮುಟ್ಟಬಾರದು. ಮುಟ್ಟಿದ್ದು ನಾಯಿಯೇ ಆದರೂ, ಹೊರಗೆಸೆಯುವುದು ಮಡಿಕೆಯನ್ನು! ನಾಯಿಗಳಿಗೇನು? ಮೂಸುತ್ತ, ಮುಟ್ಟುತ್ತಲೇ ಬದುಕಿ ಬೊಗಳಿ ಕೊನೆಗೊಮ್ಮೆ ತಲೆ ಎತ್ತಿಕೊಂಡೇ ಸಾಯುತ್ತವೆ.

ಸತ್ಯಭಾಮೆ ಇದನ್ನೆಲ್ಲ ಬಲ್ಲ ಹೆಣ್ಣು. ಗಂಡನನ್ನು ಮುಂದೆ ನಿಲ್ಲಿಸಿ, ಆ ಹದಿನಾರು ಸಾವಿರ ಹೆಣ್ಣುಗಳೂ ಅವನನ್ನೇ ತನ್ನ ಗಂಡನೆಂದು ಬಗೆಯಬೇಕೆಂದೂ, ಯಾರಾದರೂ ಕೇಳಿದರೆ ತಾನು ಕೃಷ್ಣನ ಹೆಂಡತಿ ಅನ್ನುವ ಗುರುತು ಮುಂಚಾಚಬೇಕೆಂದೂ, ಮನೆ ಬಾಡಿಗೆ ಪಡೆಯಲು, ಕೆಲಸ ಗಿಟ್ಟಿಸಲು, ವ್ಯಾಪಾರ ಮಾಡಲು ಇತ್ಯಾದಿಗೆಲ್ಲ ‘ಶ್ರೀಮತಿ ಕೃಷ್ಣ’ ಅನ್ನುವ ಗುರುತು ಬಳಸಬಹುದೆಂದೂ ಘೋಷಿಸಿದಳು. ಬಾಡಿದ್ದ ಸೆರೆಹೆಣ್ಣುಗಳ ಮುಖ ಅರಳಿತು. ಬದುಕು ಬೆಳಗಿತು; ದೀಪಾವಳಿಯಾಯಿತು! (ಬರಹ: ಚೇತನಾ ತೀರ್ಥಹಳ್ಳಿ)

Whats_app_banner