Hill Stations: ವಸಂತಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೆಬೇಕು; ಈ ಗಿರಿಧಾಮಗಳಿಗೆ ನೀವು ಭೇಟಿ ಕೊಡಲೇಬೇಕು
Hill Stations: ವಸಂತ ಋತು ಆಗಮಿಸಿದೆ. ಟ್ರಾವೆಲ್ ಪ್ರಿಯರು ಈ ಸಮಯದಲ್ಲಿ ಗಿರಿಧಾಮಗಳಿಗೆ ಭೇಟಿ ನೀಡಿದರೆ ಅದೊಂದು ಸುಂದರ ಅನುಭವ ನೀಡುತ್ತದೆ. ಕಾಶ್ಮೀರ, ಕರ್ನಾಟಕದ ಕೊಡಗು, ಪಶ್ಚಿಮ ಬಂಗಾಳದ ಕೊಡಗು ಸೇರಿದಂತೆ ಭಾರತದಲ್ಲಿ ನೀವು ಭೇಟಿ ನೀಡಬಹುದಾದ ಸ್ಥಳಗಳು ಈ ರೀತಿ ಇವೆ.
ಭಾರತದ ಗಿರಿಧಾಮಗಳು: ವಸಂತಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೆಬೇಕು...ಅಣ್ಣಾವ್ರು ಹಾಡಿರುವ ಈ ಹಾಡನ್ನು ನಾವೆಲ್ಲಾ ಕೇಳಿದ್ದೇವೆ. ವಸಂತ ಮಾಸದ ಮಹತ್ವವೇ ಅಂಥಾದ್ದು. ಈ ಸಮಯದಲ್ಲಿ ಮರ, ಗಿಡಗಳನ್ನು ನೋಡುವುದೇ ಚೆಂದ. ಅರಳಿ ನಿಂತ ಸುಂದರ ಹೂಗಳನ್ನು ಕಣ್ತುಂಬಿಕೊಳ್ಳುವುದು ಇನ್ನೂ ಚೆಂದ.
ಹಾಗೆ ವಸಂತ ಕಾಲದಲ್ಲಿ ಟ್ರಿಪ್ ಹೋಗೋದು ಕೂಡಾ ಒಂದು ರೀತಿ ಖುಷಿ ನೀಡುತ್ತದೆ. ಆದರೆ ನಿಮ್ಮ ಖುಷಿ ನೀವು ಆಯ್ಕೆ ಮಾಡಿಕೊಳ್ಳುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಕೆಲವೊಂದು ಸ್ಥಳಗಳು ಟ್ರಿಪ್‌ಗೆ ಹೇಳಿ ಮಾಡಿಸಿದಂತೆ ಇದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಒಮ್ಮೆ ಈ ಸ್ಥಳಗಳಿಗೆ ಭೇಟಿ ನೀಡಿದರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ಮಾತು ಖಂಡಿತ ನಿಮಗೆ ನಿಜ ಎನಿಸುತ್ತದೆ. ವಸಂತ ಋತುವಿನಲ್ಲಿ ಭಾರತದ ಈ 6 ಸ್ಥಳಗಳಿಗೆ ನೀವು ಹೋಗಿ ಬರಬಹುದು.
ಕಾಶ್ಮೀರ
ಕಾಶ್ಮೀರವು ಭೂಮಿ ಮೇಲಿನ ಸ್ವರ್ಗ ಎಂದೇ ಹೆಸರಾಗಿದೆ. ವಸಂತ ಋತುವಿನಲ್ಲಿ ನೀವು ಇಲ್ಲಿಗೆ ಭೇಟಿ ನೀಡಿದರೆ ಈ ಮಾತು ಅಕ್ಷರಶಃ ನಿಜ ಎನಿಸುತ್ತದೆ. ಅದರಲ್ಲೂ ನೀವು ಮಾರ್ಚ್‌ನಿಂದ ಮೇ ಮೊದಲ ವಾರದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ನಿಮಗೆ ಒಂದು ವಿಭಿನ್ನ ಅನುಭವ ಆಗಲಿದೆ. ಆದರೆ ನೀವು ಏಪ್ರಿಲ್‌ನಲ್ಲಿ ಭೇಟಿ ನೀಡಿದರೆ ಅಲ್ಲಿ ನೀವು ಶ್ರೀನಗರದ ಇಂದಿರಾಗಾಂಧಿ ಮೆಮೋರಿಯಲ್ ಟುಲಿಪ್ ಗಾರ್ಡನ್‌ಗೆ ಭೇಟಿ ನೀಡಿ ಸುಂದರ ಟುಲಿಪ್ ಹೂಗಳ ಸೌಂದರ್ಯವನ್ನು ಆಹ್ಲಾದಿಸಬಹುದು.
ಮುನ್ನಾರ್, ಕೇರಳ
ಕೇರಳ ದೇವರನಾಡು ಎಂದೇ ಹೆಸರಾಗಿದೆ. ಕೇರಳದ ಸುಂದರ ಹಸಿರು ಪ್ರಕೃತಿ, ಟೀ ಎಸ್ಟೇಟ್‌ಗಳಂತೂ ನಿಮಗೆ ಅತ್ಯದ್ಭುತ ಅನುಭವ ನೀಡುತ್ತದೆ. ಈ ಸಮಯದಲ್ಲಿ ಇಲ್ಲಿ 19 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನವಿರುತ್ತದೆ. ಚಳಿಗಾಲ, ಮಳೆಗಿಂತ ವಸಂತ ಋತುವಿನಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ.
ಶಿಲ್ಲಾಂಗ್, ಮೇಘಾಲಯ
ಮೇಘಾಲಯ ಪೂರ್ವದ ಸ್ಕಾಟ್ಲೆಂಡ್ ಎಂದೇ ಜನಪ್ರಿಯವಾಗಿದೆ. ವಿಶೇಷವಾಗಿ ವಸಂತಕಾಲದಲ್ಲಿ, ರೋಡೋಡೆಂಡ್ರಾನ್‌ಗಳು ಮತ್ತು ಆರ್ಕಿಡ್‌ಗಳು ಅರಳಿ ನಿಂತು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ, ಸೋಲೋ ಟ್ರಿಪ್ ಮಾಡಲು ಕೂಡಾ ಈ ಸ್ಥಳ ಹೇಳಿ ಮಾಡಿಸಿದಂತಿದೆ.
ಕೊಡಗು, ಕರ್ನಾಟಕ
ಭಾರತದ ಖ್ಯಾತ ಗಿರಿಧಾಮಗಳಲ್ಲಿ ಕೊಡಗು ಕೂಡಾ ಒಂದು. ಇಲ್ಲಿನ ಕಾಫಿತೋಟಗಳಂತೂ ನಿಮ್ಮ ಕಣ್ಣಿಗೆ ಹಬ್ಬ ಎಂದೇ ಹೇಳಬಹುದು. 5 ವರ್ಷಗಳ ಹಿಂದೆ ಕೊಡಗಿನಲ್ಲಿ ಭೂಕುಸಿತ ಉಂಟಾಗಿ ಸಮಸ್ಯೆ ಉಂಟಾಗಿತ್ತು. ಇಷ್ಟಾದರೂ ಈ ಸ್ವರ್ಗಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿಲ್ಲ. ಕಾಫಿ ಹೂಗಳು ಅರಳುವ ಈ ಸಮಯದಲ್ಲಿ ಒಮ್ಮೆ ಕೂರ್ಗ್‌ಗೆ ಹೋಗಿ ಬನ್ನಿ.
ಊಟಿ, ತಮಿಳುನಾಡು
ನೀಲಗಿರಿ ಬೆಟ್ಟಗಳ ನಡುವೆ ಇರುವ ಊಟಿಯುದ್ಧಕ್ಕೂ ನೀವು ಟೀ ಎಸ್ಟೇಟ್ ಅಂದವನ್ನು ಆಸ್ವಾದಿಸಬಹುದು. ಆರ್ಕಿಡ್, ಗುಲಾಬಿ ಹೂಗಳ ತೋಟದಲ್ಲಿ ನೀವು ಒಂದೊಳ್ಳೆ ಫೋಟೋಶೂಟ್ ಮಾಡಿಸಬಹುದು. ಇಲ್ಲಿ ಬಟಾನಿಕಲ್ ಗಾರ್ಡನ್, ಟಾಯ್ ಟ್ರೈನ್, ಮುದಮಲೈ ನ್ಯಾಷನಲ್ ಪಾರ್ಕ್, ಸ್ಟೋನ್ ಹೌಸ್ ಸೇರಿದಂತೆ ಅನೇಕ ಸ್ಥಳಗಳನ್ನು ನೀವು ನೋಡಬಹುದು.
ಡಾರ್ಜಲಿಂಗ್, ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್, ಟೀ ಎಸ್ಟೇಟ್ ಮತ್ತು ಹಿಮಾಲಯದ ವಿಹಂಗಮ ನೋಟಗಳಿಗೆ ಜನಪ್ರಿಯವಾಗಿದೆ. ವಸಂತಕಾಲ ಆಗಮಿಸುತ್ತಿದ್ದಂತೆ ಅದರ ಸೌಂದರ್ಯವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹವಾಮಾನವು ಸೌಮ್ಯವಾಗಿರುತ್ತದೆ. ರೋಡೋಡೆಂಡ್ರಾನ್‌ಗಳು, ಮ್ಯಾಗ್ನೋಲಿಯಾಗಳು ಸೇರಿದಂತೆ ಅನೇಕ ಹೂವುಗಳು ಅರಳುತ್ತವೆ.