SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೀಗಿರಲಿ; ವಿದ್ಯಾರ್ಥಿಗಳಿಗೆ ಇಲ್ಲಿವೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Sslc Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೀಗಿರಲಿ; ವಿದ್ಯಾರ್ಥಿಗಳಿಗೆ ಇಲ್ಲಿವೆ ಟಿಪ್ಸ್

SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೀಗಿರಲಿ; ವಿದ್ಯಾರ್ಥಿಗಳಿಗೆ ಇಲ್ಲಿವೆ ಟಿಪ್ಸ್

SSLC Exam: ಹತ್ತನೇ ತರಗತಿ ಪರೀಕ್ಷೆಗಳು ಆರಂಭವಾಗಿದ್ದು ಇಂದು (ಮಾರ್ಚ್ 24) ಗಣಿತ ಹಾಗೂ ಸಮಾಜಶಾಸ್ತ್ರ ಪರೀಕ್ಷೆ ನಡೆಯಲಿದೆ. ಈ ಸಂದರ್ಭ ಪರೀಕ್ಷೆಯ ಕೊನೆಯ ಹಂತದಲ್ಲಿ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ ಎಂಬ ಟಿಪ್ಸ್ ಇಲ್ಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೀಗಿರಲಿ; ವಿದ್ಯಾರ್ಥಿಗಳಿಗೆ ಟಿಪ್ಸ್‌ (ಸಾಂಕೇತಿಕ ಚಿತ್ರ)
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊನೆಯ ಹಂತದ ತಯಾರಿ ಹೀಗಿರಲಿ; ವಿದ್ಯಾರ್ಥಿಗಳಿಗೆ ಟಿಪ್ಸ್‌ (ಸಾಂಕೇತಿಕ ಚಿತ್ರ)

SSLC Exam: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿ ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಘಟ್ಟ. ಈ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡುತ್ತವೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗಾಗಲೇ ಪಿಯುಸಿ ಪರೀಕ್ಷೆಗಳು ಮುಗಿದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಆರಂಭವಾಗಿವೆ.

ಇಂದು (ಮಾರ್ಚ್ 24) ಎಸ್‌ಎಸ್‌ಎಲ್‌ಸಿ ಗಣಿತ ಹಾಗೂ ಸಮಾಜಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿಕ್ಕಿವೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಕಲ ಸಿದ್ಧತೆಯನ್ನೂ ಮಾಡಿಕೊಂಡು ರೆಡಿ ಆಗಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ನಡೆಸಿ ಇರುತ್ತಾರೆ. ಆದರೆ ಕೊನೆಯ ಕ್ಷಣದಲ್ಲಿ ಗಾಬರಿ ಮಾಡಿಕೊಂಡು, ಗಡಿಬಿಡಿ ಮಾಡಿಕೊಂಡು ಪರೀಕ್ಷೆಯಲ್ಲಿ ತಪ್ಪು ಉತ್ತರ ಬರೆಯುವುದು ಅಥವಾ ಅರ್ಧಂಬರ್ಧ ನೆನಪಿಗೆ ಬಂದಷ್ಟು ಬರೆಯುವುದು ಇವುಗಳನ್ನು ಮಾಡುತ್ತಾರೆ. ಇದರಿಂದ ಅಂಕ ಕಡಿಮೆಯಾಗುತ್ತದೆ, ಇದು ಅವರ ಒಟ್ಟಾರೆ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಆದರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಷ್ಟೇ ಕೊನೆಯ ಹಂತದ ಸಿದ್ಧತೆಯ ಮೇಲೂ ಗಮನ ಹರಿಸಬೇಕು. ಕೊನೆಯ ಹಂತದಲ್ಲಿ ಗಡಿಬಿಡಿ ಮಾಡಿಕೊಂಡರೆ ನಿಮ್ಮ ಅಷ್ಟೂ ದಿನದ ಪ್ರಯತ್ನ ವ್ಯರ್ಥವಾಗಬಹುದು. ಹಾಗಾದರೆ ಪರೀಕ್ಷೆಗೆ ಕೊನೆಯ ಹಂತ ಸಿದ್ಧತೆ ಹೇಗಿರಬೇಕು ಎಂಬುದನ್ನು ನೋಡೋಣ.

ಆದ್ಯತೆ ಮತ್ತು ಗಮನ

ನಿಮಗೆ ಕಷ್ಟ ಎನ್ನಿಸುವ ಪಾಠವನ್ನು ಗುರುತಿಸಿ: ಎಲ್ಲವನ್ನೂ ಕಲಿಯಬೇಕು ಎನ್ನುವ ಹಟ ಬೇಡ, ಆದರೂ ನಿಮಗೆ ಕಷ್ಟ ಎನ್ನಿಸುವ ಪಾಠದ ಮೇಲೆ ಗಮನ ಕೊಡಿ, ಯಾವುದು ಕಷ್ಟವಾಗುತ್ತಿದೆ ಎಂಬುದನ್ನು ಗುರುತಿಸಿ. ತೀರಾ ಕಷ್ಟ ಎನ್ನಿಸುವುದನ್ನು ಪರಿಗಣಿಸಲು ಹೋಗಬೇಡಿ.

ಪ್ರಮುಖ ಪರಿಕಲ್ಪನೆಗಳು: ಪ್ರತಿಯೊಂದು ವಿವರವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುವ ಬದಲು ಪ್ರಮುಖ ಪರಿಕಲ್ಪನೆಗಳನ್ನು ಗುರುತಿಸಿ ನೆನಪು ಮಾಡಿಕೊಳ್ಳಿ.

ಸಮಯ ನಿರ್ವಹಣೆ: ಪರೀಕ್ಷೆ ಬರೆಯಲು ಹೋಗುವ ಮುನ್ನ ಸಮಯ ನಿರ್ವಹಣೆ ಕಲಿಯುವುದು ಬಹಳ ಮುಖ್ಯ, ಯಾವ ಪ್ರಶ್ನೆಗೆ ಎಷ್ಟು ಸಮಯ ಕೊಡಬೇಕು, ಯಾವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದನ್ನು ಮೊದಲೇ ಮನಸ್ಸಿನಲ್ಲೇ ಗುರುತು ಮಾಡಿಕೊಂಡಿರಿ. ಅರ್ಥವೇ ಆಗದ್ದಕ್ಕೆ ತಲೆ ಕೆಡಿಸಿಕೊಂಡು ಸಮಯ ಹಾಳು ಮಾಡುವ ಬದಲು ಅರ್ಥವಾಗುವುದನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸಿ.

ನೆನಪಿಸಿಕೊಂಡು ಮನನ ಮಾಡಿ

ಪ್ಲ್ಯಾಶ್‌ಕಾರ್ಡ್‌: ಕೊನೆಯ ಕ್ಷಣದ ತಯಾರಿಗೆ ಪ್ಲ್ಯಾಶ್‌ಕಾರ್ಡ್‌ಗಳು ತುಂಬಾ ಸಹಾಯವಾಗುತ್ತವೆ. ಮುಖ್ಯವಾದ ಪಾಯಿಂಟ್ಸ್‌ಗಳು, ಸೂತ್ರಗಳು, ಪ್ರಮೇಯಗಳನ್ನು ಪ್ಲ್ಯಾಶ್‌ಕಾರ್ಡ್‌ನಲ್ಲಿ ಬರೆದುಕೊಳ್ಳುವುದರಿಂದ ಅದನ್ನು ಪರೀಕ್ಷೆ ಹೋಗುವಾಗ ನೋಡಿಕೊಂಡು ಹೋದರೆ ನೆನಪಿನಲ್ಲಿ ಉಳಿಯುತ್ತದೆ. ಇದು ಮನದಲ್ಲಿ ರಿಜಿಸ್ಟರ್ ಆಗಿರುತ್ತದೆ.

ಮೈಂಡ್ ಮ್ಯಾಪ್‌: ಇದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ಮೈಂಡ್ ಮ್ಯಾಪ್ ಎಂದರೆ ಮನಸ್ಸಿನಲ್ಲಿ ಎಲ್ಲವನ್ನೂ ತುಂಬಿಸಿಕೊಳ್ಳುವುದು ಎಂದಲ್ಲ. ಬದಲಾಗಿ ಮುಖ್ಯವಾದ ಅಂಶಗಳನ್ನು ಗುರುತಿಸಿ ಮನಸ್ಸಿನಲ್ಲಿ ರಿಜಿಸ್ಟರ್ ಆಗುವಂತೆ ಮಾಡಿದರೆ ಖಂಡಿತ ಪರೀಕ್ಷೆ ಕಷ್ಟ ಎನ್ನಿಸುವುದಿಲ್ಲ.

ಬೇರೆಯವರಿಗೆ ಹೇಳಿ ಕೊಡಿ: ಪರೀಕ್ಷೆ ಸಮಯದಲ್ಲಿ ಇರ್ಷೆ ಒಳ್ಳೆಯದಲ್ಲ. ಅಂದರೆ ಪರೀಕ್ಷೆಯ ಕೊನೆಯ ಹಂತದಲ್ಲಿ ಬೇರೆಯವರಿಗೆ ಹೇಳಿ ಕೊಡುವುದರಿಂದ ಕೂಡ ನೀವು ಕಲಿಯಬಹುದು. ನಿಮ್ಮ ಸ್ನೇಹಿತರು, ಸಹಪಾಠಿಯ ಮುಂದೆ ಅಂದಿನ ಪರೀಕ್ಷಾ ವಿಷಯದ ಮುಖ್ಯ ಪಾಠವನ್ನು ವಿವರಿಸಿ, ಇದರಿಂದ ನೀವು ಕಲಿತಂತಾಗುತ್ತದೆ. ಎದುರಿನವರಿಗೂ ಕಲಿಸಿದಂತಾಗುತ್ತದೆ.

ಜ್ಞಾಪಕಶಾಸ್ತ್ರ: ಪ್ರಮುಖ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಸಂಕ್ಷಿಪ್ತ ರೂಪಗಳು, ಪ್ರಾಸಗಳು ಅಥವಾ ಚಿತ್ರಣವನ್ನು ಬಳಸಿ. ಇವು ನಿಮಗೆ ಕೊನೆಯ ಕ್ಷಣದಲ್ಲಿ ನೆನಪು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಅಭ್ಯಾಸ ಮತ್ತು ಬಲವರ್ಧನೆ

ಹಿಂದಿನ ಪ್ರಶ್ನೆಪತ್ರಿಕೆಗಳ ಮೇಲೆ ಕಣ್ಣಾಡಿಸಿ: ನೀವು ಈ ಮೊದಲೇ ಸಾಕಷ್ಟು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಯನ್ನು ಬಿಡಿಸಿ ಇರುತ್ತೀರಿ. ಆದರೆ ಪರೀಕ್ಷೆಗೆ ತೆರಳುವ ಕೊನೆಯ ಹಂತದಲ್ಲಿ ಈ ಪ್ರಶ್ನೆಪತ್ರಿಕೆಗಳ ಮೇಲೆ ಒಮ್ಮೆ ಕಣ್ಣಾಡಿಸುವುದು ಕೂಡ ನಿಮಗೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ನೆರವಾಗಬಹುದು.

ರಿವ್ಯೂ ನೋಟ್ಸ್‌: ಪಾಯಿಂಟ್ಸ್ ಮಾಡಿಕೊಂಡಿರುವ ರಿವ್ಯೂ ನೋಟ್ ಅನ್ನು ಮಗುಚಿ ಹಾಕಲು ಮರೆಯಬೇಡಿ. ಇದು ಕೊನೆ ಕ್ಷಣದಲ್ಲಿ ಮರೆತು ಹೋಗಿರುವ ವಿಚಾರವನ್ನು ನೆನಪಿಸುತ್ತದೆ.

ಯೋಗಕ್ಷೇಮವೂ ಮುಖ್ಯ

ಇವೆಲ್ಲಕ್ಕಿಂತ ಅತಿ ಮುಖ್ಯ ಇದು. ಪರೀಕ್ಷೆ ಕೊನೆ ಹಂತದಲ್ಲಿ ಯೋಗಕ್ಷೇಮ ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ, ಅತಿಯಾಗಿ ಟೆನ್ಷನ್ ಮಾಡುವುದು ಒಳ್ಳೆಯದಲ್ಲ. ಬೆಲ್ ಹೊಡೆಯುವವರೆಗೂ ಓದುತ್ತಲೇ ಇರುವುದು ಸರಿಯಲ್ಲ. ಕೊಠಡಿ ಒಳಗೆ ಹೋಗಲು 10 ನಿಮಿಷ ಇರುವಾಗಲೇ ಪುಸ್ತಕವನ್ನೆಲ್ಲಾ ಬ್ಯಾಗ್ ಒಳಗೆ ಹಾಕಿ ಹಾಲ್‌ಟಿಕೆಟ್, ಪೆನ್ನು, ಪೌಚ್ ಹಿಡಿದು ಆರಾಮಾಗಿ ಕೂತು ಬಿಡಬೇಕು.

ನೀರು ಕುಡಿಯುವುದು ಆತಂಕ ನಿವಾರಣೆಗೆ ಸಹಾಯ ಮಾಡುತ್ತದೆ. ಮೂತ್ರ ವಿಸರ್ಜನೆ ಹೋಗಬೇಕಾಗಬಹುದು ಎನ್ನುವ ಕಾರಣಕ್ಕೆ ನೀರು ಕುಡಿಯದೇ ಇರಬೇಡಿ. ಕೊನೆಯ ಹತ್ತು ನಿಮಿಷದಲ್ಲಿ ಯಾವುದೇ ಗಾಬರಿ, ಆತಂಕ, ಚಿಂತೆ ಮಾಡದೇ ಮನಸ್ಸನ್ನು ಹರ್ಷದಿಂದ ಇರಿಸಿಕೊಂಡು ಪರೀಕ್ಷೆ ಕೊಠಡಿಗೆ ತೆರಳಿ. ಇದರಿಂದ ಖಂಡಿತ ನಿಮಗೆ ಓದಿರುವುದೆಲ್ಲಾ ನೆನಪಿನಲ್ಲಿ ಉಳಿಯುತ್ತದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner